Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಸರ್ಕಾರವನ್ನು ಪ್ರಶ್ನಿಸುವ ಅಧಿಕಾರ ನವೀಕರಣವಾಯ್ತು…

Monday, 14.05.2018, 3:03 AM       No Comments

| ಚಕ್ರವರ್ತಿ ಸೂಲಿಬೆಲೆ

ಚುನಾವಣೆಗಳು ಮುಗಿದಿವೆ. ಯಾವ ಪಕ್ಷವೇ ಅಧಿಕಾರಕ್ಕೆ ಬಂದರೂ, ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಅನುಷ್ಠಾನಕ್ಕೆ ತರುವಂತೆ ನಾವು ಪಟ್ಟುಹಿಡಿಯಬೇಕಾದ ಅಗತ್ಯವಿದೆ. ಜನಪ್ರತಿನಿಧಿಗಳು ವಿಕಾಸದ ಹಾದಿಯಲ್ಲಿ ಹೆಜ್ಜೆಯಿಡುವಂತೆ ಯುವಸಮುದಾಯ ಕೈಯಲ್ಲಿ ಪ್ರಜಾಪ್ರಭುತ್ವದ ದಂಡ ಹಿಡಿದು ಕೂತರೆ, ಪ್ರಗತಿ ಶತಸ್ಸಿದ್ಧ.

ಅಂತೂ ಚುನಾವಣೆ ಮುಗಿದೇಹೋಯ್ತು! ಸುಮಾರು 40 ದಿನಗಳ ಕಾಲ ಅಭ್ಯರ್ಥಿಯ ಘೊಷಣೆಯಿಂದ ಹಿಡಿದು ಎಕ್ಸಿಟ್ ಪೋಲ್​ಗಾಗಿ ಕಾಯುವವರೆಗೂ ಅದೊಂದು ವಿಚಿತ್ರವಾದ ಬೇನೆ. ಇನ್ನೆರಡು ದಿನಗಳಂತೂ ಅಭ್ಯರ್ಥಿಗಳಿಗಷ್ಟೇ ಅಲ್ಲ, ಅವರ ಬೆಂಬಲಿಗರ ಪಾಲಿಗೂ ಹೆರಿಗೆಯ ನೋವೇ. ಗೆದ್ದವರು ಮೆರೆಯೋದು, ಸೋತವರು ಕೊರಗೋದು ಫಲಿತಾಂಶ ಬಂದ ಒಂದು ವಾರದ ನಂತರವೂ ಇರುತ್ತದೆ. ಆದರೆ ಏನೇ ಹೇಳಿ, ಪ್ರಜಾಪ್ರಭುತ್ವವೆಂಬುದೊಂದು ಸುಂದರವಾದ ಅಸ್ತ್ರ; ಇದು ಘಾತಕವೂ ಹೌದು. ಅಪ್ಪ ಆಳಿದ ಮಾತ್ರಕ್ಕೆ ಮಗನೂ ಆಳಲೇಬೇಕೆಂಬ ನಿಯಮ ಇಲ್ಲಿಲ್ಲ. ಟೀ ಮಾರುವ ಸಾಮಾನ್ಯನೂ ದೇಶದ ಚುಕ್ಕಾಣಿ ಹಿಡಿಯಬಲ್ಲನೆಂಬುದು ಪ್ರಜಾಪ್ರಭುತ್ವ ಕೊಟ್ಟಿರುವ ಬಲುದೊಡ್ಡ ಕೊಡುಗೆಯೇ. ನರೇಂದ್ರ ಮೋದಿ ಸಂಸತ್ತಿನ ದ್ವಾರದೆದುರು ನಿಂತು ಹೊಸ್ತಿಲಿಗೆ ಪ್ರಣಾಮ ಮಾಡಿದರಲ್ಲ ಅದರ ನಿಜವಾದ ಮೌಲ್ಯ ಅರ್ಥವಾಗೋದೇ ಈಗ. ಈ ಪ್ರಜಾಪ್ರಭುತ್ವ ಸ್ಥಾಪಿತವಾಗಿರುವಂತಹ ಎಲ್ಲ ಹಳೆಯ ಆಲೋಚನೆಗಳನ್ನು ಕಿತ್ತೊಗೆಯಬಲ್ಲದು ಮತ್ತು ಹೊಸದಾದ ಧನಾತ್ಮಕ ಆಲೋಚನೆಗಳಿಗೆ ನೀರೆರೆದು ಪೋಷಿಸಬಲ್ಲದು. ತಾನೇ ನೀರೆರೆದು ಬೆಳೆಸಿದ ಗಿಡ ವಿಷದ ಗಾಳಿಯುಗುಳುತ್ತಿದೆ ಎಂದೆನಿಸಿದಾಗ ಮುಲಾಜಿಲ್ಲದೆ ಅದನ್ನು ಕಡಿದು ಬಿಸಾಡಲೂಬಲ್ಲದು. ಮೋದಿಯಂತಹ, ಯಾರಿಂದಲೂ ಸೋಲಿಸಲಾಗದ ವ್ಯಕ್ತಿಯ ಎದುರೇ ದೆಹಲಿಯಲ್ಲಿ ಕೇಜ್ರಿವಾಲ್ ಗೆದ್ದು ಬೀಗಿದ್ದು ಇದೇ ಪ್ರಜಾಪ್ರಭುತ್ವದ ಶಕ್ತಿ. ಹಾರ್ದಿಕ್ ಪಟೇಲ್ ಹತ್ತಾರು ಸಾವಿರ ಜನರ ಮಹಾಸಭೆಗಳನ್ನು ನಡೆಸಿಯೂ ಸೋತು ಸುಣ್ಣವಾಗಿದ್ದು ಪ್ರಜಾಪ್ರಭುತ್ವದ ವೈಭವವೇ!

ಹಾಗೆ ನೋಡಿದರೆ ಭಾರತ ಈಗೀಗ ಈ ಪ್ರಭುತ್ವದ ಮಹತ್ವವನ್ನು ಅರಿಯಲಾರಂಭಿಸಿದೆ. ಮತದಾನದ ಮೌಲ್ಯ ಅದೇನೆಂಬುದು ಪ್ರತಿಯೊಬ್ಬನಿಗೂ ಅರ್ಥವಾಗುತ್ತಿದೆ. ಇಂದಿರಾ ಗಾಂಧಿಯ ಫೋಟೊ ನೋಡಿಯೇ ವೋಟು ಹಾಕುವ ಕಾಲವಿತ್ತು. ಹಸ್ತವನ್ನು ಕಂಡು ಭವಿಷ್ಯವನ್ನು ಸರಿಯಾಗಿ ಹೇಳುತ್ತಿದ್ದರೋ ಇಲ್ಲವೋ, ಆದರೆ ಮತಗಟ್ಟೆಯಲ್ಲಿ ಸೀಲನ್ನಂತೂ ಭದ್ರವಾಗಿಯೇ ಒತ್ತುತ್ತಿದ್ದರು. ಅಲ್ಲಿ ಬೇರೆ ಯಾವುದಕ್ಕೂ ಅವಕಾಶವೇ ಇರಲಿಲ್ಲ. ಅದು ಬ್ರಿಟಿಷರ ಆಳ್ವಿಕೆಯ ಕಾಲದ ಏಕಚಕ್ರಾಧಿಪತ್ಯದ ಹ್ಯಾಂಗೋವರ್. ನಿಶೆ ಈಗೀಗ ಸ್ವಲ್ಪ ಇಳಿಯುತ್ತಿದೆ. ಹಾಗಂತ ಅದು ಪೂರ್ತಿಯಾಗೇನೂ ಇಳಿದಿಲ್ಲ; ಇನ್ನೂ ಬಾಕಿ ಇದೆ.

ಕರ್ನಾಟಕದ ಚುನಾವಣೆಯನ್ನು ಹತ್ತಿರದಿಂದ ಗಮನಿಸಿದಾಗ ನಾವು ಸಾಗಬೇಕಾದ ದಾರಿ ಬಹಳ ದೂರವಿದೆ ಎಂಬುದು ಖಾತ್ರಿ. ಪ್ರಾಮಾಣಿಕನೊಬ್ಬ, ಸಭ್ಯನೊಬ್ಬ ರಾಜಕಾರಣ ಮಾಡುವುದು ಈಗಲೂ ಕಷ್ಟವೇ. ತನ್ನ ಬಳಿ ಖರ್ಚುಮಾಡಲು ದುಡ್ಡೇ ಇಲ್ಲವೆಂದು ಹೇಳಿಯೇ ಪಕ್ಷವೊಂದರ ಟಿಕೆಟ್ ಪಡೆಯಬಲ್ಲ ಸಾಮರ್ಥ್ಯ ಸದ್ಯಕ್ಕಂತೂ ಯಾರಿಗೂ ಇಲ್ಲ. ಅಥವಾ ಯಾವ ಪಕ್ಷಗಳೂ ಅಂಥವರನ್ನು ಗುರುತಿಸಲಾರದೆಂದರೆ ಸರಿಯಾಗಬಹುದೇನೋ. ಮಂಡ್ಯದಲ್ಲಿ ಶಿವಣ್ಣ ಎಂಬುವವರಿಗೆ ಬಿಜೆಪಿಯವರು ಟಿಕೆಟ್ ಕೊಟ್ಟಿದ್ದೊಂದೇ ಬಲು ವಿಶಿಷ್ಟವಾದ ಆಯ್ಕೆ. ಊರಿಗೆ ಊರೇ ಅವರ ಸಜ್ಜನಿಕೆಯನ್ನು ಕೊಂಡಾಡುವುದನ್ನು ಕೇಳಿದಾಗ ಅಚ್ಚರಿಯಾಗಿದ್ದು ನಿಜ. ಮುರಿದ ಮನೆ, ಬೆಟ್ಟದಷ್ಟು ಸಾಲ, ಹಳೆಯದೊಂದು ಬುಲೆಟ್ಟು ಇವಿಷ್ಟಲ್ಲದೆ ಅವರ ಬಳಿ ಇದ್ದ ಆಸ್ತಿ ಜನರ ಪ್ರೀತಿಯೊಂದೇ. ಅವರು ಪ್ರಚಾರಕ್ಕೆ ಹೋಗುವಾಗ ಒಂದಷ್ಟು ಜನ ಅವರಿಗೇ ದುಡ್ಡು ಕೊಟ್ಟು ಇದನ್ನು ಬಳಸಿಕೊಳ್ಳಿ ಎಂದದ್ದನ್ನೂ ಕಂಡವರಿದ್ದಾರೆ! ಪ್ರಜಾಪ್ರಭುತ್ವದ ಈ ಒರೆಗಲ್ಲಿನಲ್ಲಿ ಅವರು ಅದೆಷ್ಟರಮಟ್ಟಿಗೆ ಸಫಲರಾಗುತ್ತಾರೋ ದೇವರೇ ಬಲ್ಲ. ಆದರೆ ಅಂಥವರೊಬ್ಬರಿದ್ದಾರೆ ಎಂಬುದೇ ಸಮಾಧಾನದ ಸಂಗತಿ. ಉಳಿದಂತೆ ಯಾವ ಪಕ್ಷಗಳಿಗೂ ಭ್ರಷ್ಟಾಚಾರದ ಬೇಲಿಯಿಲ್ಲ, ಮಾನಾವಮಾನಗಳ ಪ್ರಶ್ನೆಯಿಲ್ಲ; ಅಪ್ಪ-ಮಕ್ಕಳೆಂಬ ನೋವಿಲ್ಲ್ಲ ಎಲ್ಲವನ್ನೂ ಗಾಳಿಗೆ ತೂರಿಯೇ ಟಿಕೆಟ್ ಹಂಚಲಾಗಿದೆ. ಇದು ಮತದಾರನ ಪಾಲಿನ ದುರ್ದೈವ. ‘ಘಣಖಅ’ಕ್ಕೆ ಒತ್ತಬೇಕೆನಿಸಿದರೂ ಅದಕ್ಕೆ ಯಾವ ಮೌಲ್ಯವೂ ಇಲ್ಲದಿರುವುದರಿಂದ ಸುಸ್ಥಿರ ಸರ್ಕಾರವನ್ನು ದೃಷ್ಟಿಯಲ್ಲಿರಿಸಿಕೊಂಡು ಅಯೋಗ್ಯನಾದರೂ ಸರಿ, ಮತ ಹಾಕಬೇಕಾದ ಅನಿವಾರ್ಯತೆ ಇದ್ದೇ ಇದೆ. ಯಾವ ಪಕ್ಷ ಗೆದ್ದು ಅಧಿಕಾರ ಹಿಡಿದರೂ ಈ ಕುರಿತಂತೆ ಗಮನ ಹರಿಸಿ ಒಂದಷ್ಟು ಚೌಕಟ್ಟನ್ನು ತಮಗೆ ತಾವೇ ಹಾಕಿಕೊಳ್ಳದಿದ್ದರೆ ರಾಜಕೀಯವೆಂದರೆ ಅಸಹ್ಯವೆಂಬುವ ವಾತಾವರಣ ಇನ್ನಷ್ಟು ಕಾಲ ಮುಂದುವರಿಯುವುದು ಖಾತ್ರಿಯೇ.

ಹಾಗೆಂದ ಮಾತ್ರಕ್ಕೆ ಬದಲಾವಣೆ ತರಲು ಸಾಧ್ಯವೇ ಇಲ್ಲವೆಂದಲ್ಲ. ಕಳೆದ ಒಂದು ವರ್ಷದಿಂದ ‘ನನ್ನ ಕನಸಿನ ಕರ್ನಾಟಕ’ವೆಂಬ ಕಲ್ಪನೆಯನ್ನು ಹೊತ್ತು ವಿಕಾಸದ ವಿಭಿನ್ನ ಆಯಾಮಗಳನ್ನು ನಾವೊಂದಷ್ಟು ಜನ ಬಿತ್ತುತ್ತಲೇ ಸಾಗಿದ್ದೇವೆ. ಭಾರಿ ಜನಸಭೆಗಳಲ್ಲಿ ವಿಕಾಸದ ಪ್ರಶ್ನೆಗಳನ್ನು ಎತ್ತುವಂತೆ ಜನರನ್ನು ಭಡಕಾಯಿಸಿದ್ದೇವೆ. ಹಾಗಂತ ಇದು ಜಿಗ್ನೇಶ್, ಪ್ರಕಾಶ್, ಅಲ್ಪೇಶ್, ಹಾರ್ದಿಕ್​ರಂತೆ ಜಾತಿ-ಜಾತಿಗಳ ನಡುವೆ ಕದನ ಹುಟ್ಟಿಸುವ, ಊರಿಗೆಲ್ಲ ಬೆಂಕಿ ಹಚ್ಚುವ ರೀತಿಯ ಭಡಕಾಯಿಸುವಿಕೆಯಲ್ಲ. ಬದಲಿಗೆ ವಿಕಾಸದ ಕುರಿತಂತೆ ತನ್ನ ಪ್ರತಿನಿಧಿಯನ್ನು ಪ್ರಶ್ನಿಸುವ ಆತ್ಮಸ್ಥೈರ್ಯವನ್ನು ತುಂಬುವ ಪ್ರಯತ್ನ. ಪ್ರಜಾಪ್ರಭುತ್ವದಲ್ಲಿ ವಿಕಾಸದ ಅಂಶವಿಲ್ಲದಿದ್ದರೆ ಅದು ರಾಜಪ್ರಭುತ್ವವೇ ಆಗಿಬಿಡುತ್ತದೆ. ಆಗಲೇ ಒಬ್ಬೊಬ್ಬರ ಘೊಷಿಸಬಹುದಾದ ಆಸ್ತಿಯೂ 5 ವರ್ಷದಲ್ಲೇ 100ರಿಂದ 300 ಪಟ್ಟು ಹೆಚ್ಚಾಗೋದು. ನಮ್ಮ ಪ್ರಯತ್ನ ಖಂಡಿತವಾಗಿಯೂ ಕೆಲಸ ಮಾಡಿದೆ. ಚುನಾವಣೆಗೆ 6 ತಿಂಗಳ ಮುನ್ನ ರಾಜ್ಯದ ಮುಖ್ಯಮಂತ್ರಿ ಕನಸುಗಳ ಮಾತನಾಡಲಾರಂಭಿಸಿದ್ದರು. ನವಕರ್ನಾಟಕದ ಕಲ್ಪನೆಯನ್ನು ಹೊತ್ತು ಅಧಿಕಾರಿಗಳು ಜಿಲ್ಲಾಮಟ್ಟದ ಸಭೆಯನ್ನು ಕರೆಯಲಾರಂಭಿಸಿದ್ದರು. ಪ್ರಜ್ಞಾವಂತರು, ಅಧಿಕಾರಿಗಳು ಜತೆಗೆ ಕುಳಿತು ಕರ್ನಾಟಕದ ಭವಿಷ್ಯದ ರೂಪು-ರೇಷೆಗಳನ್ನು ತಯಾರಿಸುವಾಗ ಒಮ್ಮೆ ಅಚ್ಚರಿಗೊಳಗಾಗಿದ್ದು ನಿಜ. ಅದಾದ ಕೆಲವೇ ದಿನಗಳಲ್ಲಿ ಭಾಜಪ ಜಿಲ್ಲಾ ಮಟ್ಟದಲ್ಲಿ ಜನರ ಆಶೋತ್ತರಗಳನ್ನು ಸಂಗ್ರಹಿಸಿ ಪ್ರಣಾಳಿಕೆಯನ್ನು ರಚಿಸುವ ಮಾತನಾಡಿತು. ಜನತಾದಳ ಕೂಡ ಈ ಧಾಟಿಯಲ್ಲಿ ಮಾತನಾಡಿದ್ದು ಖಂಡಿತವಾಗಿಯೂ ಆಶಾದಾಯಕ ಬೆಳವಣಿಗೆಯೇ ಆಗಿತ್ತು. ಕಾಂಗ್ರೆಸ್ಸಂತೂ ಒಂದು ಹೆಜ್ಜೆ ಮುಂದಿಟ್ಟು ಚುನಾವಣೆಗೆ 2 ತಿಂಗಳಿರುವಾಗ ಬೆಂಗಳೂರಿನಲ್ಲಿದ್ದ ಮಂತ್ರಿಗಳನ್ನು ಬೇರೆ-ಬೇರೆ ಜಿಲ್ಲಾ ಕೇಂದ್ರಗಳಿಗೆ ಕಳಿಸಿ ತರುಣರೊಂದಿಗೆ ಮಾತನಾಡಿಸುವ ಕನಸು ಕಟ್ಟಿಕೊಟ್ಟಿತು. ಒಂದೆರಡು ಕಡೆ ಈ ಟೌನ್​ಹಾಲ್ ಸಭೆಗಳೂ ನಡೆದವು. ಆದರೆ ಜಾಗೃತ ಜನತೆಯ ಪ್ರಶ್ನೆಗೆ ಉತ್ತರಿಸಲಾರದೆ ತಡಬಡಾಯಿಸಿದ ಮಂತ್ರಿ, ಮುಖ್ಯಮಂತ್ರಿಗಳು ಆ ಯೋಜನೆಯನ್ನೇ ಕೈಬಿಟ್ಟರು. ಇಷ್ಟೆಲ್ಲ ಆದ ನಂತರವೂ ಪ್ರಣಾಳಿಕೆಗಳು ಹೊರಬಂದಿದ್ದು ಮಾತ್ರ ಮತದಾನಕ್ಕೆ 8-10 ದಿನಗಳಿರುವಾಗಷ್ಟೇ. ವಾಸ್ತವವಾಗಿ ಚುನಾವಣೆ ನಡೆಯಬೇಕಿರೋದೇ ಹಳೆಯ ಸಾಧನೆ ಮತ್ತು ಹೊಸ ಕನಸುಗಳ ಆಧಾರದ ಮೇಲೆ. ನುಡಿದಂತೆ ನಡೆದಿದ್ದೇವೆ ಎಂಬ ಕಾಂಗ್ರೆಸ್ಸಿನ ಹೇಳಿಕೆಗಳಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ಪ್ರತಿಪಕ್ಷಗಳು ಒರೆಗೆ ಹಚ್ಚಬೇಕಿತ್ತು. ಮೂರೂ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಸಮಾಜದ ಮುಂದೆ ಮೂರು ತಿಂಗಳ ಮುಂಚೆಯಾದರೂ ಇಟ್ಟು ಆ ಕುರಿತಂತೆ ಸುದೀರ್ಘ ಚರ್ಚೆಯಾಗುವಂತೆ ನೋಡಿಕೊಳ್ಳಬೇಕಿತ್ತು. ಹಾಗಾಗಿದ್ದರೆ ಒಂದು ಪಾಸಿಟಿವ್ ಪ್ರಜಾಪ್ರಭುತ್ವದ ಕಲ್ಪನೆ ನಿರ್ವಣಗೊಂಡಿರುತ್ತಿತ್ತು. ಮುಂದಿನ ಪೀಳಿಗೆಯಾದರೂ ಸರಿಯಾದ ದಿಸೆಯಲ್ಲಿ ಹೆಜ್ಜೆಯಿಟ್ಟಿರುತ್ತಿತ್ತು.

ಈ ಬಾರಿ ಮೂರೂ ಪಕ್ಷಗಳು ಪ್ರಣಾಳಿಕೆಯನ್ನು ಸಿದ್ಧಪಡಿಸುವಲ್ಲಿ ವ್ಯಯಿಸಿರುವ ಶ್ರಮವನ್ನು ಕಂಡರೆ ಅಚ್ಚರಿಯಾದೀತು. ಕಾಂಗ್ರೆಸ್ಸಿನ ಪ್ರಣಾಳಿಕೆಯನ್ನು ಐಎಎಸ್ ಅಧಿಕಾರಿಗಳೇ ನಿರ್ವಿುಸಿರುವಂತೆ ಕಾಣುತ್ತದೆ. ನಿಯಮಗಳ ಪುಸ್ತಕದಿಂದ ಹೆಕ್ಕಿ ತೆಗೆದ ಸಾಲುಗಳನ್ನು ಜೋಡಿಸಿ ನಿರ್ವಿುಸಿರುವ ಮ್ಯಾನಿಫೆಸ್ಟೊ ಅದು. ಈ ನಿಟ್ಟಿನಲ್ಲಿ ಬಿಜೆಪಿ ಮತ್ತು ಜೆಡಿಎಸ್​ಗಳು ಸಾಕಷ್ಟು ಪ್ರಯತ್ನ ಹಾಕಿವೆ. ಅಧಿಕಾರಕ್ಕೆ ಯಾರಾದರೂ ಬರಲಿ. ಆದರೆ ಮೂರೂ ಪಕ್ಷಗಳ ಪ್ರಣಾಳಿಕೆಯನ್ನು ಪ್ರಜ್ಞಾವಂತರೆನಿಸಿಕೊಂಡವರು ಒಮ್ಮೆ ಓದಲೇಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮಗೆ ಕೇಳಲು ಬಹಳ ಪ್ರಶ್ನೆಗಳಿಲ್ಲ. ಅಲ್ಪಸಂಖ್ಯಾತರ ಕುರಿತಂತೆ ದೃಢವಾದ ಕೆಲವು ಸಾಲುಗಳ ಹೊರತು ಸಾಧನೆಗೈಯುವ ಯಾವ ಭರವಸೆಯನ್ನೂ ಅವರು ಪ್ರಣಾಳಿಕೆಯಲ್ಲಿ ಕೊಟ್ಟಿಲ್ಲ. ಭಾಜಪ ಲೋಡುಗಟ್ಟಲೆ ಭರವಸೆಯನ್ನು ಕೊಟ್ಟಿದೆ. ದೂರದೃಷ್ಟಿಯ ನಾಯಕನೊಬ್ಬ ಹಠ ಹಿಡಿದು ಅಷ್ಟನ್ನೂ ಸಾಧಿಸಿಬಿಟ್ಟನೆಂದರೆ ಆತ ಕರ್ನಾಟಕದ ಮೋದಿಯೇ ಆಗಿಬಿಡುತ್ತಾನೆ. ಈ ಪ್ರಣಾಳಿಕೆ ಸಾಮಾನ್ಯ ತಿರುಕನಿಂದು ಹಿಡಿದು ಸಾಫ್ಟ್​ವೇರ್ ಇಂಜಿನಿಯರ್​ವರೆಗೆ ಮಕ್ಕಳು, ಮಹಿಳೆ, ಆದಿವಾಸಿಗಳು, ಬೀಡಿ ಕಟ್ಟುವವರು, ವೃದ್ಧರು, ಕೈಲಾಗದವರು ಎಲ್ಲರನ್ನೂ ತನ್ನೊಳಗೆ ಸೇರಿಸಿಕೊಂಡುಬಿಟ್ಟಿದೆ. ಈ ಬಾರಿ ಭಾಜಪ ಅಧಿಕಾರಕ್ಕೆ ಬಂದು 5 ವರ್ಷಗಳ ನಂತರದ ಚುನಾವಣೆಯಲ್ಲಿ ಅದನ್ನು ಮತ್ತೆ ಗೆಲ್ಲಿಸಲು ಅಥವಾ ಸೋಲಿಸಲು ಈ ಪ್ರಣಾಳಿಕೆಯೊಂದೇ ಸಾಕು.

ಅಚ್ಚರಿಯಾಗುವಂತೆ ಆಸ್ಥೆ ವಹಿಸಿ ಕಾಂಗ್ರೆಸ್ಸಿಗಿಂತ ಸುಂದರವಾದ ಪ್ರಣಾಳಿಕೆಯನ್ನು ಕನ್ನಡಿಗರಿಗೆ ಕೊಟ್ಟಿರುವುದು ದಳ! ಕುಮಾರಸ್ವಾಮಿಯವರು ತಮ್ಮ ಇಸ್ರೇಲಿನ ಅನುಭವವನ್ನು, ಚೀನಾದಲ್ಲಿ ಕಂಡ ದೃಶ್ಯಗಳನ್ನು ಬಸಿದು ಪ್ರಣಾಳಿಕೆ ರಚಿಸಿದ್ದಾರೆ. ಕಾಂಗ್ರೆಸ್ಸು ಮುಸಲ್ಮಾನರಿಗೆ ಮತ್ತೆ ಉಚಿತ ಕೊಡುಗೆಗಳ ಮಾತನಾಡಿದ್ದರೆ, ಜೆಡಿಎಸ್ ‘ಝುಕಾತ್ ಫಂಡ್’ನ ಕಲ್ಪನೆಯನ್ನು ಕಟ್ಟಿಕೊಟ್ಟು ಮುಸಲ್ಮಾನ್ ತರುಣರ ಕೈಗೆ ಕೆಲಸ ಕೊಡುವ ಮಾತನಾಡಿದೆ. ಹಾಗಂತ ಪ್ರಣಾಳಿಕೆಯಲ್ಲಿ ಹೇಳಿರುವುದನ್ನೆಲ್ಲ ಮಾಡುವುದು ದಳಕ್ಕೂ ಸುಲಭದ ಸಂಗತಿಯಲ್ಲ. ಅದಕ್ಕೂ ಸಾಹಸೀ ನೇತೃತ್ವವೇ ಬೇಕು. ಅಧಿಕಾರಕ್ಕೆ ಬಂದರೆ ತಮಗಿರುವ ಎಲ್ಲ ಮಿತಿಗಳನ್ನು ಮೀರಿ ಕುಮಾರಸ್ವಾಮಿಯವರು ಈ ಪ್ರಣಾಳಿಕೆಗಾಗಿ ಕಂಠಮಟ್ಟ ದುಡಿದರೆ ಕರ್ನಾಟಕದ ಪಾಲಿಗೆ ಅದೂ ಆನಂದಮಯವೇ. ಒಂದಂತೂ ಹೌದು. ದೇಶದಲ್ಲಿ ಯುವಕರು ತುಂಬಿ ತುಳುಕಾಡುತ್ತಿದ್ದಾರೆ. ಕರ್ನಾಟಕದಲ್ಲೂ ಅಷ್ಟೇ. ಕನಸನ್ನು ಕಟ್ಟುವ ಪ್ರಯತ್ನದಲ್ಲಿ ತರುಣರೆಲ್ಲ ಜತೆಯಾಗಿದ್ದಕ್ಕೆ ಪಕ್ಷಗಳ ಪ್ರಣಾಳಿಕೆಯಲ್ಲಿ ಇಷ್ಟೊಂದು ಬದಲಾವಣೆ ಬಂದಿದೆ. ಇನ್ನು ಯಾರೇ ಅಧಿಕಾರಕ್ಕೆ ಬಂದರೂ ಇದನ್ನೇ ಮುಂದಿಟ್ಟುಕೊಂಡು ವಿಕಾಸದ ಹಾದಿಯಲ್ಲಿ ಪ್ರತಿನಿಧಿಗಳು ಹೆಜ್ಜೆಯಿಡುವಂತೆ ತರುಣರೆಲ್ಲ ಕೈಯಲ್ಲಿ ಪ್ರಜಾಪ್ರಭುತ್ವದ ದಂಡ ಹಿಡಿದು ಕೂತರೆ, ಪ್ರತಿನಿಧಿ ಯಾರಾದರೂ ವಿಕಾಸ ಶತ ಪ್ರತಿಶತ ಖಚಿತ.

ಈ ಚುನಾವಣೆಯಲ್ಲಿ ಅನೇಕ ತರುಣರು ತಮ್ಮೂರಿಗೆ ಬಂದ ಶಾಸಕರನ್ನು ಪ್ರಶ್ನಿಸಿ ನಿಂತೇಹೋಗಿರುವ ವಿಕಾಸದ ರೈಲಿನ ಕುರಿತಂತೆ ಗಮನ ಸೆಳೆದದ್ದು ಬಲು ವಿಶೇಷವಾಗಿತ್ತು. ಉತ್ತರಿಸಲಾಗದ ಪ್ರತಿನಿಧಿಗಳು ರೇಗಾಡಿ, ಕೂಗಾಡಿ ಓಡಿಹೋದದ್ದೂ ಭವಿಷ್ಯದ ದೃಷ್ಟಿಯಿಂದ ಆಶಾದಾಯಕವೇ. ಆದರೆ ತೃಪ್ತಿ ಖಂಡಿತ ಇಲ್ಲ. ಅಗಾಧ ಪ್ರಯತ್ನಗಳ ನಂತರವೂ ಈ ಚುನಾವಣೆಯಲ್ಲಿ ಹಣ ಹಂಚುವಿಕೆ ನಿಲ್ಲಲಿಲ್ಲ. ದೇಶ, ಧರ್ಮ, ಸಂಘಟನೆ, ವೈಯಕ್ತಿಕ ಪ್ರೀತಿ ಇವೆಲ್ಲವೂ ಬದಿಗೇ. ಚುನಾವಣೆಗೂ ಮುಂಚಿನ ಎರಡು ದಿನಗಳ ಕಾಲ ಹಣ, ಕುಕ್ಕರು, ಕಿವಿ ಓಲೆ, ಕಾಲ್​ಚೈನು, ಸ್ಟೀಲ್ ಪಾತ್ರೆ, ಕ್ರಿಕೆಟ್ ಬ್ಯಾಟು ಇವೆಲ್ಲವುಗಳನ್ನು ಅನಾಮತ್ತಾಗಿ ಹಂಚಿದ್ದಾರೆ. ಎಲ್ಲ ಪಾರ್ಟಿಗಳ ಬಳಿ ಹಣವನ್ನು ತೆಗೆದುಕೊಂಡೇ ಮತ ಹಾಕುವ ಭರವಸೆ ನೀಡಲಾಗಿದೆ. ಕೆಲವೆಡೆಗಳಲ್ಲಿ ಇವಿಎಂನಲ್ಲಿ ಬಟನ್ ಒತ್ತಿದ ನಂತರ ಫೋಟೊ ತೆಗೆದು ಹಣ ಪಡೆಯಬೇಕೆಂಬ ನಿಯಮವನ್ನೂ ಹಾಕಿದ್ದರೆಂಬುದು ಬೆಳಕಿಗೆ ಬಂದಾಗ ಅಸಹ್ಯವೆನಿಸಿತು. ದೇಶಾದ್ಯಂತ ಇಷ್ಟೆಲ್ಲ ಚುನಾವಣೆಗಳು ನಡೆದರೂ ಕರ್ನಾಟಕದ ಚುನಾವಣೆಯಲ್ಲಿಯೇ ಅತಿಹೆಚ್ಚು ಅಕ್ರಮಗಳು ಬಯಲಿಗೆ ಬಂದಿದ್ದು ದುರಂತವೇ ಸರಿ. ಐಟಿ ಅಧಿಕಾರಿಗಳು ಸುಮಾರು 150 ಕೋಟಿ ರೂಪಾಯಿಯಷ್ಟು ಹಣವನ್ನು ಜಪ್ತು ಮಾಡಿ ವಿಕ್ರಮ ಮೆರೆದರೇನೋ ನಿಜ. ಆದರೆ ಕರ್ನಾಟಕ ಪ್ರಜಾಪ್ರಭುತ್ವದ ಹಾದಿಯಲ್ಲಿ ಸೊರಗಿತ್ತು. ಎಚ್ಚೆತ್ತುಕೊಳ್ಳಬೇಕಾದ ಸಮಯ ಖಂಡಿತ ಬಂದಿದೆ.

ನಮಗಿರಬೇಕಾದ್ದು ವಿಕಾಸದ ಗುರಿ ಮಾತ್ರ. ನಮ್ಮ ತಲಾ ಆದಾಯ ಹೆಚ್ಚಾದರೆ ಬದುಕು ಬಲು ಸುಂದರವಾಗುತ್ತದೆ. ಪ್ರತಿಯೊಬ್ಬರೂ ಆ ಕುರಿತಂತೆ ಆಲೋಚಿಸಬೇಕಾಗಿದೆಯೇ ಹೊರತು ಉಚಿತವಾದ ಕೊಡುಗೆಗಳೆಷ್ಟು ಸಿಕ್ಕವೆಂಬುದಕ್ಕಲ್ಲ. ನಾವು ಪಡೆದ ಪ್ರತಿಯೊಂದು ಉಚಿತ ಕೊಡುಗೆಗೂ ಮುಂದೊಂದು ದಿನ ನಾವೇ ಬೆಲೆ ತೆರಬೇಕೆಂಬುದನ್ನು ಮರೆಯಬೇಡಿ. ಇನ್ನು ಕೆಲವೇ ದಿನಗಳಲ್ಲಿ ಪದವೀಧರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಪದವಿ ಪಡೆದಿದ್ದಾರೆಂದರೆ ಪ್ರಜ್ಞಾವಂತರೆಂದೇ ಅರ್ಥ. ಹಾಗಂತ ಅಲ್ಲಿ ಹಣದ ಹೊಳೆ ಹರಿಯುವುದಿಲ್ಲವೆಂದು ಭಾವಿಸಿದರೆ ಅದು ಮಹಾ ತಪ್ಪುಕಲ್ಪನೆ.

ಪ್ರಜಾಪ್ರಭುತ್ವದ ಮೊದಲ ಅರ್ಹತೆಯೇ ಸ್ವಾಭಿಮಾನ. ಆರಿಸಿದವ ನಾನೆಂಬ ಸಾತ್ವಿಕ ಅಹಂಕಾರ. ಅದನ್ನು ಕಳೆದುಕೊಂಡೊಡನೆ ಅದು ಮತ್ತೆ ರಾಜಪ್ರಭುತ್ವವೋ, ಸರ್ವಾಧಿಕಾರವೋ ಆಗಿಹೋಗುತ್ತದೆ. ನಾಳೆ ಫಲಿತಾಂಶ ಹೊರಬರಲಿದೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಸರಿ. ಅವರು ಕೊಟ್ಟಿರುವ ಭರವಸೆಗಳನ್ನೇ ಮುಂದಿಟ್ಟುಕೊಂಡು ಅವರನ್ನು ಪ್ರಶ್ನಿಸುವ, ಎಡವಿದರೆ ಕಾಡುವ ಅಧಿಕಾರವನ್ನು ನಾವಂತೂ ಕಳೆದುಕೊಳ್ಳದಿರೋಣ. ಇನ್ನೈದು ವರ್ಷಗಳ ಕಾಲ ಪ್ರತಿಪಕ್ಷ ಇರುವುದೋ ಇಲ್ಲವೋ ಗೊತ್ತಿಲ್ಲ; ವಿಕಾಸದ ಹಾದಿಯಲ್ಲಿ ನಮ್ಮ ಕಣ್ಣುಗಳನ್ನು ಅಗಲಿಸಿಕೊಂಡು ಜಾಗೃತರಾಗಿದ್ದು ಸದೃಢ ಸುಂದರ ಕರ್ನಾಟಕಕ್ಕೆ ಪಣತೊಡೋಣ. ನಮ್ಮ ಕನಸಿನ ಕರ್ನಾಟಕವನ್ನು ನಾವೇ ನಿರ್ವಿುಸೋಣ.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *

Back To Top