ಕೈಲಾಗದೆಂದು ಕಣ್ಣೀರಿಟ್ಟವ ಎಂದಿಗೂ ನಾಯಕನಲ್ಲ!

ಮಾರ್ಚ್ ಮೊದಲ ವಾರದವರೆಗೂ ಕುಂಭಮೇಳ ನಡೆಯಲಿದೆ. ಇನ್ನು ಬಲುದೊಡ್ಡ ಶಾಹಿಸ್ನಾನಗಳೇನು ಇಲ್ಲವಾದರೂ ಜನರಂತೂ ಬರುತ್ತಲೇ ಇರುತ್ತಾರೆ. ಅವಕಾಶ ಸಿಕ್ಕರೆ ಹೋಗಿಬನ್ನಿ. ಅಲ್ಲಿಂದ 100 ಕಿ.ಮೀ. ಅಂತರದಲ್ಲಿರುವ ವಾರಾಣಸಿಗೆ ಹೋಗಿ ಶಿವನ ದರ್ಶನ ಪಡೆದುಕೊಳ್ಳಿ. ಶಿವನ ದರ್ಶನ ನೆಪಮಾತ್ರ. ಆದರೆ ಎರಡು ನಗರಗಳನ್ನು ಬೆಸೆಯುವ ರಸ್ತೆಯನ್ನು ಕಣ್ತುಂಬಿಸಿಕೊಳ್ಳಿ.

ಇದು ನಾನು ಭಾಗವಹಿಸುತ್ತಿರುವ ಮೂರನೇ ಕುಂಭಮೇಳ. ಹರಿದ್ವಾರದಲ್ಲಿ ಬಿಟ್ಟರೆ ಪ್ರಯಾಗದಲ್ಲಿಯೇ ಎರಡನೆಯದು. ಹರಿದ್ವಾರದ ಕುಂಭಮೇಳಕ್ಕೆ ಬಲು ಮಹತ್ವವಿದೆ. ಹಿಮಾಲಯವನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲವೆಂದು ಸಂನ್ಯಾಸ ತೆಗೆದುಕೊಂಡವರು ಅಲ್ಲಿನ ಕುಂಭಕ್ಕೆ ಧಾವಿಸಿ ಬರುತ್ತಾರೆ. ಪ್ರಯಾಗ ತ್ರಿವೇಣಿ ಸಂಗಮವಾದ್ದರಿಂದ ಇದಕ್ಕೆ ಮಹತ್ವ ಹೆಚ್ಚಾದರೂ 12 ವರ್ಷಗಳಿಗೊಮ್ಮೆ ಬರುವ ಪೂರ್ಣಕುಂಭಕ್ಕೆ ಆಸ್ಥೆಯಿಂದ ಬರುವಷ್ಟು ಜನ ಅರ್ಧಕುಂಭಕ್ಕೇನೂ ಬರುವುದಿಲ್ಲ. ಆದರೆ ಈ ವರ್ಷದ ಅರ್ಧಕುಂಭ ಈ ಹಿಂದಿನ ಪೂರ್ಣಕುಂಭಗಳನ್ನೂ ಮೀರಿ ದಾಖಲೆ ಬರೆದಿದೆ. ಒಟ್ಟಾರೆ ಇದುವರೆಗೂ 15 ಕೋಟಿಯಷ್ಟು ಜನರಾದರೂ ಪ್ರಯಾಗಕ್ಕೆ ಭೇಟಿ ಕೊಟ್ಟಾಗಿದೆ. ಹಿಂದೂ ಸಂಸ್ಕೃತಿಯ ಪುನರುಜ್ಜೀವನದ ಮಹತ್ವದ ದರ್ಶನವೆಂಬಂತೆ ಈ ಬಾರಿಯ ಕುಂಭಮೇಳ ನಿಂತಿದೆಯೆಂದರೆ ಅಚ್ಚರಿಯೇನಲ್ಲ.

ಮೋದಿ ಪ್ರಧಾನಿಯಾದಾಗಿನಿಂದಲೂ ಹಿಂದೂ ಸಂಸ್ಕೃತಿಯ, ವಿಚಾರಧಾರೆಗಳ ಕುರಿತ ಆಸ್ಥೆ ಹೆಚ್ಚುತ್ತಲೇ ಬಂದಿದೆ. ಅವರೊಂದಿಗೆ ಯೋಗಿ ಆದಿತ್ಯನಾಥರು ಜತೆಯಾದ ಮೇಲಂತೂ ಇನ್ನೂ ಹೆಚ್ಚಿನ ಪುಷ್ಟಿ ದೊರೆತಿದೆ. ಉತ್ತರಪ್ರದೇಶವನ್ನು ಯೋಗಿಜಿ ತಮ್ಮ ಕೈಗೆತ್ತಿಕೊಂಡಾಗಿನಿಂದಲೂ ಇಲ್ಲಿ ಕಂಡುಬಂದಿರುವ ಬದಲಾವಣೆ ಅಭೂತಪೂರ್ವ. ಒಂದು ಕಾಲದಲ್ಲಿ ದೇಶದ ಜನತೆ ಅದರಲ್ಲೂ ವಿಶೇಷವಾಗಿ ದೆಹಲಿ ಮತ್ತು ಬಂಗಾಳಿಗರು ಉತ್ತರಪ್ರದೇಶ ಮತ್ತು ಬಿಹಾರಗಳಲ್ಲಿರುವ ಮುಲಾಯಂ-ಲಾಲೂ ಸರ್ಕಾರಗಳನ್ನು ಮತ್ತು ಅವರನ್ನು ಆಯ್ಕೆ ಮಾಡಿರುವ ಇಲ್ಲಿನ ಜನರನ್ನು ಆಡಿಕೊಳ್ಳುತ್ತಿದ್ದರು. ಈ ಪ್ರದೇಶಗಳು ಜೀವಮಾನದಲ್ಲೇ ಎಂದೂ ಸುಧಾರಿಸಲಾರವೆಂದು ನಾವೂ ಭಾವಿಸಿಬಿಟ್ಟಿದ್ದೆವು. ಕರ್ಮಸಿದ್ಧಾಂತ ಅದೆಷ್ಟು ಸತ್ಯವೆಂದರೆ ಇಂದು ದೆಹಲಿಗೆ ಕೇಜ್ರಿವಾಲ್, ಬಂಗಾಳಕ್ಕೆ ಮಮತಾ ಮುಖ್ಯಮಂತ್ರಿಗಳಾಗಿ ಇಡಿಯ ದೇಶ ಅವರನ್ನು ಆಯ್ಕೆ ಮಾಡಿದ ಆ ಜನರನ್ನು ಅನುಕಂಪದಿಂದ ನೋಡುವಂತಾಗಿದೆ. ಬಹುಶಃ ನಮಗೂ ಇಲ್ಲಿನ ಸರ್ಕಾರ ಅದರದ್ದೇ ಕೊಡುಗೆ ಇರಬಹುದೇನೋ!

ಕಳೆದ ಕುಂಭ ಮತ್ತು ಈ ಕುಂಭದ ನಡುವೆ ಗಂಗೆಯಲ್ಲಿ ಎಷ್ಟು ನೀರು ಹರಿದಿದೆಯೋ ಉತ್ತರಪ್ರದೇಶದಲ್ಲಿ ಬದಲಾವಣೆಯ ಪ್ರವಾಹವೂ ಅಷ್ಟೇ ಜೋರಾಗಿ ಕಂಡುಬಂದಿದೆ. ಅಲಹಾಬಾದ್ ‘ಪ್ರಯಾಗ್​ರಾಜ್’ ಆಗಿದ್ದಷ್ಟೇ ಬದಲಾವಣೆಯಲ್ಲ. ಇಲ್ಲಿನ ಎಲ್ಲ ಪ್ರಮುಖ ರಸ್ತೆಗಳೂ ಈಗ ಅಗಲಗೊಂಡಿವೆ. ನಾಲ್ಕು ರಸ್ತೆಗಳು ಕೂಡುವ ಜಾಗದಲ್ಲೆಲ್ಲ ವಿಸ್ತಾರವಾದ ವೃತ್ತಗಳು ನಿರ್ವಣಗೊಂಡಿವೆ. ಆ ವೃತ್ತಗಳಲ್ಲೆಲ್ಲ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ವಿಶೇಷವಾದ ಮೂರ್ತಿಗಳನ್ನು ನಿರ್ವಿುಸಲಾಗಿದೆ. ಪ್ರಯಾಗ್​ರಾಜ್​ನಲ್ಲೀಗ ದೆಹಲಿ, ಕೋಲ್ಕತ, ಮುಂಬೈ ನಗರಗಳಿಗೆ ಸರಿಸಮಾನವಾದ ಮೇಲುರಸ್ತೆಗಳು ನಿರ್ವಣಗೊಂಡಿವೆ. ಗಾಬರಿಯಾಗುವ ಸಂಗತಿಯೆಂದರೆ ಬೆಂಗಳೂರಿನ ರಸ್ತೆಗಳಿಗಿಂತಲೂ ಇಲ್ಲಿನ ರಸ್ತೆಗಳು ಹೊಂಡರಹಿತವೂ ಮತ್ತು ಸ್ವಚ್ಛವೂ ಆಗಿವೆ. ಕುಂಭಕ್ಕಾಗಿ ಸರ್ಕಾರದ ತಯಾರಿ ಅದೆಷ್ಟು ಜೋರಾಗಿತ್ತೆಂದರೆ ಇಡಿಯ ಪ್ರಯಾಗ ತನ್ನ ಚಹರೆಯನ್ನು ಬದಲಿಸಿಕೊಂಡು ದಾರಿಯುದ್ದಕ್ಕೂ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಗೋಡೆಗಳ ಮೇಲೆ ಬಳಿದುಕೊಂಡು ಸಿಂಗಾರಗೊಂಡಿದೆ. ಟ್ರಾಫಿಕ್ ವ್ಯವಸ್ಥೆ ಹಿಂದೆಂದಿಗಿಂತಲೂ ನೀಟಾಗಿ ನಿರ್ವಹಿಸಲ್ಪಡುತ್ತಿದೆ. ಮೋದಿಯವರ ಪ್ರಯಾಸದಿಂದಾಗಿಯೇ ಉಡಾನಿನ ವಿಮಾನಗಳು ಇಲ್ಲಿ ಹಾರಾಡುತಲಿದ್ದು, ಚಿಕ್ಕದಾದರೂ ಚೊಕ್ಕದಾಗಿರುವ ವಿಮಾನ ನಿಲ್ದಾಣ ನಿರ್ವಣಗೊಂಡಿದೆ. ನಿಲ್ದಾಣದಲ್ಲಿ ಇಳಿದೊಡನೆ ಟ್ಯಾಕ್ಸಿ ಹತ್ತಿದಾಗ ಚಾಲಕನನ್ನು ಸುಮ್ಮನೆ ಮಾತಿಗೆಳೆದಿದ್ದೆವು. ಯೋಗಿ ಆಡಳಿತ ವೈಖರಿಯನ್ನು ಮನಸಾರೆ ಹೊಗಳಿದ ಆತ ದಾರಿಯುದ್ದಕ್ಕೂ ನಾಲ್ಕಾರು ಜಾಗಗಳನ್ನು ತೋರಿಸಿ ಈ ಜಾಗಗಳಲ್ಲೆಲ್ಲ ಕೆಲವು ಗೂಂಡಾಗಳು ತಮ್ಮ ಗಾಡಿಗಳನ್ನು ನಿಲ್ಲಿಸಿಕೊಂಡು ಇಡಿಯ ಊರಿನ ಟ್ರಾಫಿಕ್ ವ್ಯವಸ್ಥೆ ಹದಗೆಡಿಸಿಟ್ಟಿರುತ್ತಿದ್ದರು. ಯೋಗಿ ಅದಕ್ಕೆಲ್ಲ ಕಡಿವಾಣ ಹಾಕಿ ದುಡಿದು ತಿನ್ನುವವರಿಗೆ ಶಕ್ತಿ ತುಂಬಿದ್ದಾರೆ ಎಂದ. ಆತನ ಮುಖದಲ್ಲಿ ಯೋಗಿ ಮತ್ತು ಮೋದಿಯವರ ಹೆಸರು ಹೇಳುವಾಗಲೆಲ್ಲ ಆನಂದ ಉಕ್ಕುತ್ತಿತ್ತು.

ಇನ್ನು ಕುಂಭಮೇಳದ ಕತೆ ತುಲನಾತ್ಮಕವಾಗಿ ಅಧ್ಯಯನ ಮಾಡುವವರಿಗೇ ಅರ್ಥವಾಗುವಂಥದ್ದು. ಗಂಗೆ ಹಿಂದೆಂದಿಗಿಂತಲೂ ಶುದ್ಧವಾಗಿರುವುದು ಈಗ ಕಣ್ಣಿಗೆ ರಾಚುತ್ತಿದೆ. ಅದನ್ನು ಯಾವುದೋ ಪಕ್ಷದವರು ಹೇಳಬೇಕಾಗಿಲ್ಲ, ಅಥವಾ ಆಮ್ ಆದ್ಮಿ ಪಾರ್ಟಿಯಂಥವರೂ ಸುಳ್ಳೆಂದು ಸಾಬೀತುಪಡಿಸುವುದೂ ಬೇಕಿಲ್ಲ. 32 ವರ್ಷಗಳ ನಂತರ ಅಲ್ಲಿ ಕಂಡುಬಂದಿರುವ, ‘ಮೀನುಗಳ ರಾಣಿ’ ಎಂದೇ ಕರೆಯಲ್ಪಡುವ ಹಿಲ್ಸಾ ಮೀನುಗಳ ದಂಡು ಅದನ್ನು ಸಾರಿಸಾರಿ ಹೇಳುತ್ತಿದೆ. ಸ್ನಾನಘಟ್ಟಗಳು ಎಷ್ಟು ವ್ಯವಸ್ಥಿತವಾಗಿ ನಿರ್ಮಾಣ ಮಾಡಲ್ಪಟ್ಟಿವೆ ಎಂದರೆ ದೂರದೂರಿನಿಂದ ಬರುವ ಯಾವೊಬ್ಬ ಭಕ್ತನಿಗೂ ಒಂದಿನಿತೂ ತೊಂದರೆಯಾಗುವುದು ಅಸಾಧ್ಯವೇ ಸರಿ. ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ತಾತ್ಕಾಲಿಕ ನಗರವೆಂದು ಹೆಸರು ಪಡೆದ ಈ ಕುಂಭನಗರಿಯಲ್ಲಿ ಬೆಳಕು, ನೀರು ಇವುಗಳಿಗೆ ಒಂದಿನಿತೂ ಕೊರತೆಯಿಲ್ಲ. ರಾತ್ರಿ ಕುಟೀರದಿಂದ ಹೊರಬಂದರೆ ಝುಗ್ಗೆನ್ನುವ ದೀಪಗಳು ಬೆಳಗಾಗಿಬಿಟ್ಟಿರುವ ಭ್ರಮೆಯನ್ನು ನಿಮ್ಮಲ್ಲಿ ಹುಟ್ಟಿಸಿದರೆ ಅಚ್ಚರಿ ಪಡಬೇಕಿಲ್ಲ. ಅಖಾಡಗಳು ನಿರ್ವಿುಸಿಕೊಂಡಿರುವ ಪೆಂಡಾಲುಗಳಿಗೆ ಹೋಗುವ ರಸ್ತೆಗಳು ವಿಶಾಲವಷ್ಟೇ ಅಲ್ಲದೆ ಅದೆಷ್ಟು ಸ್ವಚ್ಛವೆನ್ನುವುದನ್ನು ಬಹುಶಃ ನಾನು ಬರೆದು ಮುಗಿಸುವುದು ಸಾಧ್ಯವಿಲ್ಲ. ಪ್ರತಿ ನಾಲ್ಕಾರು ಗಂಟೆಗಳಿಗೆ ರಸ್ತೆಯನ್ನು ಸ್ವಚ್ಛಗೊಳಿಸಿ, ಬಿದ್ದಿರುವ ಕಸವನ್ನು ತೆಗೆದುಹಾಕಲೆಂದೇ ಕೆಲಸಗಾರರಿದ್ದಾರೆ. ಸ್ಥಳೀಯ ಬೆಸ್ತ ತರುಣರಿಗೆ ಐಡಿ ಕಾರ್ಡಗಳನ್ನು ಕೊಟ್ಟು ಜನ ನೀರಿಗಿಳಿದು ಅರ್ಪಿಸಿದ ಹೂವು, ತೆಂಗಿನಕಾಯಿ, ದೀಪ ಇತ್ಯಾದಿಗಳನ್ನು ಕ್ಷಣಮಾತ್ರದಲ್ಲೇ ಸ್ವಚ್ಛಗೊಳಿಸುವ ಜವಾಬ್ದಾರಿ ಕೊಟ್ಟಿರುವುದರಿಂದ ಕುಂಭದ ಒಂದಿನಿತು ಕೊಳಕು ಗಂಗೆಯನ್ನು ಮಲಿನಗೈಯುವುದಿಲ್ಲ. ನೆನಪಿಡಿ, 15 ಕೋಟಿ ಜನ ಮುಳುಗೆದ್ದ ನಂತರವೂ ಈ ಬಾರಿ ಗಂಗೆಯ ಬಣ್ಣ ಬದಲಾಗಿಲ್ಲ. ಯಾವ ತಾತ್ಕಾಲಿಕ ವಸತಿಯ ಕೊಳಕೂ ಗಂಗೆಗೆ ನೇರವಾಗಿ ಸೇರದೆ ಅದನ್ನು ಶುದ್ಧಗೊಳಿಸಿಯೇ ಬಿಡುವ ವ್ಯವಸ್ಥೆ ಮಾಡಲಾಗಿದೆ. ನಮ್ಮೂರುಗಳಲ್ಲಿ ಒಳಚರಂಡಿ ವ್ಯವಸ್ಥೆಗೆ ನಾವು ಹೆಣಗಾಡುತ್ತಿದ್ದೇವಲ್ಲ, ಇಲ್ಲಿ ನೂರಾರು ಎಕರೆಗಳಿಗೆ ಹಬ್ಬಿಕೊಂಡಿರುವ ತಾತ್ಕಾಲಿಕ ನಗರಕ್ಕೆ ಅತ್ಯುತ್ಕೃಷ್ಟವಾದ ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ಶುದ್ಧನೀರಿನ ವ್ಯವಸ್ಥೆಯಂತೂ ಬಿಡಿ, ದಾರಿಯುದ್ದಕ್ಕೂ ಅಲ್ಲಲ್ಲಿ ಅಗ್ನಿಶಾಮಕ ದಳದವರಿಗೆ ಬೇಕಾಗಿರುವ ನೀರಿನ ವ್ಯವಸ್ಥೆಯನ್ನು ಮಾಡಿಕೊಟ್ಟಿರುವುದೂ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿ!

ಈ ಬಾರಿ ಪೊಲೀಸ್ ವ್ಯವಸ್ಥೆಯೂ ಅತಿವಿಶಿಷ್ಟ. ಯಾರು ಯಾರೊಂದಿಗೂ ದನಿಯೇರಿಸಿ ಮಾತನಾಡಲಾರರು. ದಾರಿ ಕೇಳಿ ಬಂದ ಪ್ರತಿಯೊಬ್ಬನಿಗೂ ಸೌಜನ್ಯದಿಂದಲೇ ದಾರಿ ತೋರಿಸುವ ಪೊಲೀಸರು ಸಂತರೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ಕುಂಭಮೇಳದ ಅತ್ಯಂತ ವಿಶಿಷ್ಟ ಪರ್ವವಾಗಿರುವ ಶಾಹಿ ಸ್ನಾನಗಳಂದು ತ್ರಿವೇಣಿ ಸಂಗಮದತ್ತ ಬರುವ ಎಲ್ಲ ರಸ್ತೆಗಳನ್ನು ವಿಶೇಷ ಪಹರೆಯೊಂದಿಗೆ ಕಾಯಲಾಗುತ್ತದೆ. ಅಂದಿನ ದಿನಗಳಲ್ಲಿ ಈ ರಸ್ತೆಗಳನ್ನು ಶ್ರದ್ಧಾಮಾರ್ಗ ಎಂದು ಕರೆಯಲಾಗುತ್ತದೆ. ಅದರರ್ಥ ತ್ರಿವೇಣಿಯ ಮೇಲೆ ಶ್ರದ್ಧೆಯಿದ್ದವರು ಹೋಗಬಹುದಾದ ದಾರಿ ಅಂತ. ಕೇಳಲಿಕ್ಕೆ ಅದೆಷ್ಟು ಸುಂದರವಾಗಿದೆಯಲ್ಲವೇ? ಸ್ವತಃ ಮುಖ್ಯಮಂತ್ರಿ ಇಲ್ಲಿಗೆ ಅನೇಕ ಬಾರಿ ಬಂದು ಕಾಮಗಾರಿ ವೀಕ್ಷಿಸಿದ್ದಲ್ಲದೆ ಕ್ಯಾಬಿನೆಟ್ ಸಭೆಯನ್ನೂ ನಡೆಸಿ ಎಲ್ಲರ ಹುಬ್ಬೂ ಮೇಲೇರುವಂತೆ ಮಾಡಿದ್ದಾರೆ. ಸುದ್ದಿ ಖಚಿತವಾಗಿದ್ದರೆ ಮೋದಿಯವರೂ ಸದ್ಯದಲ್ಲೇ ಕೇಂದ್ರಸಚಿವ ಸಭೆಯನ್ನೂ ಇದೇ ಆವರಣದಲ್ಲಿ ನಡೆಸಲಿದ್ದಾರೆ. ಇದು ಪ್ರಯಾಗದ ಕುಂಭಕ್ಕೆ ಮತ್ತೂ ಹೆಚ್ಚಿನ ಗೌರವ ತಂದುಕೊಡಲಿದೆ. ಯಾವ ಅಖಿಲೇಶ್ ಮತ್ತು ಕಾಂಗ್ರೆಸ್ಸಿನ ಧುರೀಣರು ಕುಂಭಮೇಳದ ಕಡೆ ತಲೆಯೂ ಹಾಕಿ ಮಲಗುತ್ತಿರಲಿಲ್ಲವೋ ಅವರೆಲ್ಲರೂ ಈಗ ಪವಿತ್ರಸ್ನಾನ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿರುವುದು ಮೆಚ್ಚಲೇಬೇಕಾದ ಸಂಗತಿ. ಅನೇಕ ಕಟ್ಟರ್ ಬಲಪಂಥೀಯರು ಮೋದಿ ಹಿಂದುತ್ವಕ್ಕೇನು ಮಾಡಿದರು ಎಂದು ಪ್ರಶ್ನಿಸುತ್ತಾರೆ. ಹಿಂದುತ್ವವೆಂದರೆ ಬಲವಾದ ಮಂದಿರವನ್ನು ಕಟ್ಟಿಸಿಬಿಡುವುದಲ್ಲ, ಹಿಂದುತ್ವವೆಂದರೆ ಊರುತುಂಬ ಕೇಸರಿ ಪತಾಕೆಗಳನ್ನು ಮೆರೆಸಿಬಿಡುವುದಲ್ಲ. ಬದಲಿಗೆ, ಹಿಂದುತ್ವದ ಕುರಿತ ಆಸ್ಥೆಯನ್ನು ಹೆಚ್ಚು-ಹೆಚ್ಚು ಜನರಲ್ಲಿ ಬೇರೂರುವಂತೆ ಮಾಡುವುದು. ಒಮ್ಮೆ ಶ್ರದ್ಧೆಯನ್ನು ಬಲಗೊಳಿಸಿದರೆ ಮಂದಿರವನ್ನು ನಿರ್ವಣಮಾಡಿಕೊಳ್ಳುವುದು ಬಲು ಕಷ್ಟದ ಕೆಲಸವಲ್ಲ. ಮೋದಿ ಕುಂಭಮೇಳವೊಂದರಿಂದಲೇ ಜಗತ್ತು ನಿಬ್ಬೆರಗಾಗುವಂತಹ ಕೆಲಸ ಮಾಡಿ ಹಿಂದುತ್ವವನ್ನು ಆಳಕ್ಕಿಳಿಸಿದ್ದಾರೆ. 550 ವರ್ಷಗಳ ಹಿಂದೆ ಅಕ್ಬರನ ಕಾಲದಲ್ಲಿ ನಿಷೇಧಿಸಲ್ಪಟ್ಟ ಪಂಚಕೋಶಿ ಪರಿಕ್ರಮವನ್ನು ಕುಂಭಮೇಳದ ಹೊತ್ತಲ್ಲಿ ಪುನರುಜ್ಜೀವನಗೊಳಿಸಿದ್ದಾರೆ. ಹೀಗಾಗಿ ತೀರ್ಥರಾಜ ಪ್ರಯಾಗದ ಕುರಿತಂತಹ ಆಸ್ಥೆ ಮತ್ತೆ ಬಲಗೊಳ್ಳಲಿದೆ. ಬರಲಿರುವ ದಿನಗಳಲ್ಲಿ ಈ ಪ್ರಯತ್ನದಿಂದಾಗಿಯೇ ಪ್ರಯಾಗ ಹಿಂದೂಧರ್ಮವನ್ನು ಬಲಗೊಳಿಸುವ ಶಕ್ತಿಕೇಂದ್ರವಾಗಿ ಮಾರ್ಪಟ್ಟರೆ ಅಚ್ಚರಿಯಿಲ್ಲ!

ಕುಂಭಮೇಳದ ಆರಂಭದ ದಿನಗಳಲ್ಲಿಯೇ ರಾಷ್ಟ್ರಪತಿ ಕೋವಿಂದರು ಬಂದು ಶ್ರದ್ಧೆಯ ನಮನಗಳನ್ನು ಸಮರ್ಪಿಸಿದ್ದು ಇದರದ್ದೇ ಸಂಕೇತ. ಬಾಬು ರಾಜೇಂದ್ರ ಪ್ರಸಾದರ ನಂತರ ಇದುವರೆಗೂ ಯಾವ ರಾಷ್ಟ್ರಪತಿಗಳೂ ಕುಂಭಮೇಳಕ್ಕೆ ಬಂದಿಲ್ಲವೆಂಬುದನ್ನು ನೆನಪಿಟ್ಟುಕೊಳ್ಳಿ. ಕಳೆದ ಕುಂಭದಲ್ಲಿ ಮೇಳಕ್ಕೆ ಬಂದ ಜನತೆ ರೈಲು ನಿಲ್ದಾಣಕ್ಕೆ ಹೋದಾಗ ಅಲ್ಲಿ ಸೇತುವೆ ಕುಸಿದುಬಿದ್ದದ್ದನ್ನು ಮರೆಯಲಾದೀತೇನು?! ಈ ಬಾರಿ ಹಾಗಿಲ್ಲ. ಇಲ್ಲಿಗೆ ಬಂದವರೆಲ್ಲ ರಾಷ್ಟ್ರದ ಮತ್ತು ಧರ್ಮದ ಕುರಿತಂತೆ ಹೆಮ್ಮೆ ತಾಳಿಕೊಂಡೇ ಹೋಗುತ್ತಾರೆ. ಅದು ಮೋದಿ ಮತ್ತು ಯೋಗಿ ಇಬ್ಬರ ಸಾಧನೆ!

ಅಂದಹಾಗೆ ಹೇಳುವುದು ಮರೆತಿದ್ದೆ. ಇದೇ ಪ್ರಯಾಗರಾಜ್​ನಲ್ಲಿ ಬ್ರಿಟಿಷರೊಂದಿಗೆ ಕಾದಾಡುತ್ತ ಚಂದ್ರಶೇಖರ್ ಆಜಾದ್ ಕೊನೆಯುಸಿರೆಳೆದಿದ್ದ. ಆತನ ಹೆಸರಿನ ಉದ್ಯಾನವನ್ನು ಕಂಡೊಡನೆ ಆಜಾದರು ತೀರಿಕೊಂಡ ಆ ಪವಿತ್ರ ಭೂಮಿಯನ್ನು ರ್ಸ³ಸುವ ಮನಸ್ಸಾಯ್ತು. 5 ರೂ. ಟಿಕೆಟ್ ಪಡೆದು ಒಳಹೊಕ್ಕ ನಮಗೆ ನಂಬಲಾಗದ ದೃಶ್ಯಗಳು ಕಂಡವು. ಆಜಾದರ ಸ್ಮೃತಿಯ ಪಿಸ್ತೂಲನ್ನು ಹೊಂದಿರುವ ಸಂಗ್ರಹಾಲಯ, ಆಜಾದರು ತೀರಿಕೊಂಡ ಸ್ಥಳದಲ್ಲಿರುವ 10-12 ಅಡಿ ಎತ್ತರದ ಮೂರ್ತಿ ಇವೆಲ್ಲವೂ ಕಣ್ಮನ ಸೆಳೆದವು. ಎಲ್ಲಕ್ಕೂ ಹೆಚ್ಚು ಉದ್ಯಾನದ ಸ್ವಚ್ಛತೆ ನಮ್ಮೆಲ್ಲರನ್ನೂ ನಾಚುವಂತೆ ಮಾಡಿತು. ಲಾಲ್​ಬಾಗ್​ಗೆ ವಿದೇಶಿ ಯಾತ್ರಿಕರೂ ಭೇಟಿಕೊಡುತ್ತಾರೆ. ಸಹಜವಾಗಿಯೇ ಸುಂದರವಾಗಿರುವ ಈ ಉದ್ಯಾನವನ್ನು ಸ್ವಲ್ಪ ಪ್ರಯಾಸಪಟ್ಟರೆ ಅಂತಾರಾಷ್ಟ್ರೀಯ ಮಟ್ಟದ ಉದ್ಯಾನವಾಗಿ ಮಾರ್ಪಡಿಸಬಹುದು. ಆದರೆ, ಅದಕ್ಕೂ ಯೋಗಿಯೇ ಬರಬೇಕೇನೋ! ಏಕೆ ಗೊತ್ತೇನು? ಈ ಉದ್ಯಾನದಲ್ಲಿ ಅಚಾನಕ್ಕಾಗಿ ಸಿಕ್ಕ ಅಲೋಕ್ ತ್ರಿಪಾಟಿ ಎಂಬ ವ್ಯಕ್ತಿಯೊಬ್ಬ ಧಾವಂತದಲ್ಲಿದ್ದ ನಮಗೆ ಅಲ್ಲಿನ ಎಲ್ಲ ಸ್ಥಳಗಳನ್ನು ಪರಿಚಯ ಮಾಡಿಸಿಕೊಟ್ಟಿದ್ದಲ್ಲದೆ ಯೋಗಿಯವರನ್ನು ಮನಸಾರೆ ಹೊಗಳಿದ. ಪುಂಡಾಟಿಕೆಯ ಗೂಡಾಗಿದ್ದ ಆಜಾದ್ ಪಾರ್ಕನ್ನು ಯೋಗಿ ಪವಿತ್ರ ಸ್ಥಳವಾಗಿ ಮಾರ್ಪಡಿಸಿದ್ದನ್ನು ಎದೆಯುಬ್ಬಿಸಿ ವಿವರಿಸಿದ. ಅವನೊಡನೆ ಮಾತನಾಡುತ್ತಿರುವಾಗಲೇ ವಿಷಯ ಚುನಾವಣೆಯತ್ತ ಹೊರಳಿತು. ಮಹಾಘಟಬಂಧನದ ಪರಿಣಾಮ ಏನಾಗಬಹುದೆಂದು ಪ್ರಶ್ನಿಸಿದ್ದಕ್ಕೆ ಆತ ನಕ್ಕುಬಿಟ್ಟ. ಬದಲಾವಣೆಯನ್ನು ಕಂಡಮೇಲೆ ಮತ್ತೆ ಹಳೆಯದರತ್ತ ಹೊರಳುವುದು ಸಾಧ್ಯವೇ ಇಲ್ಲವೆಂದ. ಮೋದಿ ಮತ್ತು ಯೋಗಿಯವರ ಜೋಡಿ ಮತ್ತೊಮ್ಮೆ ಗೆಲ್ಲುವುದು ಶತಸ್ಸಿದ್ಧವೆಂದ. ಎಲ್ಲ ಚುನಾವಣಾಪೂರ್ವ ಸಮೀಕ್ಷೆಗಳೂ 25ಕ್ಕೂ ಹೆಚ್ಚು ಸೀಟು ತೋರುತ್ತಿಲ್ಲವಲ್ಲ ಎಂದಿದ್ದಕ್ಕೆ ಮತ್ತೊಮ್ಮೆ ನಕ್ಕ ಆತ 50ಕ್ಕಿಂತಲೂ ಕಡಿಮೆಯಾಗಲಾರದು ಎಂದು ಹೆಮ್ಮೆಯಿಂದ ಹೇಳಿದ. ಏರ್​ಪೋರ್ಟ್​ನಿಂದ ನಮ್ಮನ್ನು ಕುಂಭದತ್ತ ಒಯ್ದ ಟ್ಯಾಕ್ಸಿ ಚಾಲಕನೂ ಅದೇ ಸಂಖ್ಯೆಯನ್ನು ಹೇಳಿದ್ದರಿಂದ ಯಾಕೋ ಆಸೆ ಚಿಗುರೊಡೆದಿತ್ತು. ಸಮಾಜ ಸಮರ್ಥ ಕೆಲಸಗಾರನನ್ನು ಎಂದಿಗೂ ಕೈಬಿಡುವುದಿಲ್ಲವೆಂಬ ವಿಶ್ವಾಸ ಬಲವಾಯ್ತು.

ಮಾರ್ಚ್ ಮೊದಲ ವಾರದವರೆಗೂ ಕುಂಭಮೇಳ ನಡೆಯಲಿದೆ. ಇನ್ನು ಬಲುದೊಡ್ಡ ಶಾಹಿಸ್ನಾನಗಳೇನು ಇಲ್ಲವಾದರೂ ಜನರಂತೂ ಬರುತ್ತಲೇ ಇರುತ್ತಾರೆ. ಅವಕಾಶ ಸಿಕ್ಕರೆ ಹೋಗಿಬನ್ನಿ. ಅಲ್ಲಿಂದ 100 ಕಿ.ಮೀ. ಅಂತರದಲ್ಲಿರುವ ವಾರಾಣಸಿಗೆ ಹೋಗಿ ಶಿವನ ದರ್ಶನ ಪಡೆದುಕೊಳ್ಳಿ. ಶಿವನ ದರ್ಶನ ನೆಪಮಾತ್ರ. ಆದರೆ ಎರಡು ನಗರಗಳನ್ನು ಬೆಸೆಯುವ ರಸ್ತೆಯನ್ನು ಕಣ್ತುಂಬಿಸಿಕೊಳ್ಳಿ. ಸಮರ್ಥ ನಾಯಕ ಬಂದರೆ ಆತ ಕೈಲಾಗದೆಂದು ಕಣ್ಣೀರಿಡುತ್ತ ಕೂರುವುದಿಲ್ಲ. ಬದಲಿಗೆ ತಳಮಟ್ಟಕ್ಕಿಳಿದು ಜನರ ಕಷ್ಟಕ್ಕೆ ಸ್ಪಂದಿಸುತ್ತ ಮಹಾನಾಯಕನಾಗಿ ನಿಲ್ಲುತ್ತಾನೆ. ಕುಂಭಯಾತ್ರೆಯ ನಂತರ ನಿಜಕ್ಕೂ ಯೋಗಿಯವರ ಮೇಲಿನ ಗೌರವ ನೂರು ಪಟ್ಟು ಹೆಚ್ಚಾಗಿದೆ. ಸಂನ್ಯಾಸಿಯೊಬ್ಬ ಮುಖ್ಯಮಂತ್ರಿಯಾದರೆ ಏನೆಲ್ಲ ಸಾಧನೆ ಮಾಡಬಹುದೆಂಬುದನ್ನು ಯೋಗಿ ನಮ್ಮ ಮುಂದಿರಿಸಿದ್ದಾರೆ!!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)