Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಬಲಿಷ್ಠ ಡಾಲರ್, ಕುಸಿಯಿತು ರೂಪಾಯಿ!

Monday, 15.10.2018, 3:05 AM       No Comments

ಅಟಲ್​ಜಿ ಅಧಿಕಾರ ಬಿಡುವಾಗ ನೂರು ಶತಕೋಟಿ ಡಾಲರ್​ಗಳಷ್ಟು ವಿದೇಶಿ ವಿನಿಮಯ ನಮ್ಮ ಬಳಿ ಇತ್ತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸು ಇದರ ಲಾಭವನ್ನು ಚೆನ್ನಾಗಿಯೇ ಪಡೆದುಕೊಂಡಿತು. ಅವರ ಮೊದಲ 5 ವರ್ಷ ನಿರ್ಭೀತಿಯಿಂದ ಸಾಗಲು ಅಟಲ್​ಜಿ ಕೂಡಿಟ್ಟಿದ್ದ ಈ ವಿದೇಶಿ ವಿನಿಮಯವೇ ಕಾರಣವಾಗಿತ್ತು. ಮುಂದಿನ 5 ವರ್ಷಗಳಲ್ಲಿ ಭಾರತದ ಸಾಲ ಹೆಚ್ಚಾಯಿತು.

ರೂಪಾಯಿಗೆ ಭಾರತ ಆತುಕೊಂಡಿದ್ದೇ 1975ರ ನಂತರ. ಅದಕ್ಕೂ ಮುಂಚೆ ಇಂಗ್ಲೆಂಡಿನ ಕರೆನ್ಸಿಯೊಂದಿಗೆ ನಾವು ಜೋಡಿಸಿಕೊಂಡಿದ್ದೆವು. ಅದು ಸಹಜವೂ ಆಗಿತ್ತು. ಈ ದೇಶದಲ್ಲಿ ಬ್ರಿಟಿಷರ ಆಳ್ವಿಕೆಯಿಂದಾಗಿ ವಿಭಿನ್ನ ರೂಪಗಳನ್ನು ಪಡೆದ ಇಲ್ಲಿನ ಕರೆನ್ಸಿ ಸ್ವಾತಂತ್ರ್ಯಕ್ಕೂ ಕೆಲವು ದಶಕಗಳ ಮುನ್ನ ಪೌಂಡಿನೊಂದಿಗೆ ನೇರ ವಿನಿಮಯಕ್ಕೆ ಒಳಗಾಯಿತು. ಈ ಕಾರಣದಿಂದಾಗಿಯೇ ಡಾಲರ್ ಮತ್ತು ರೂಪಾಯಿಯನ್ನು ಲೆಕ್ಕ ಹಾಕುವಾಗ 1947ರ ವೇಳೆಗೆ ಇವೆರಡೂ ಒಂದೇ ಮೌಲ್ಯವನ್ನು ಹೊಂದಿದ್ದವೆಂದು ಹೇಳಲಾಗುತ್ತದೆ. ಆದರೆ ವಾಸ್ತವವಾಗಿ ಸ್ವಾತಂತ್ರ್ಯದ ಹೊಸ್ತಿಲಲ್ಲಿ ನಮಗೆ ಡಾಲರ್​ನೊಂದಿಗೆ ನೇರ ಸಂಬಂಧವೇ ಇರಲಿಲ್ಲ. ಸಾಲವನ್ನೂ ಮಾಡದಿದ್ದುದರಿಂದ ಆ ವೇಳೆಗೆ ಡಾಲರ್​ನ ಮೌಲ್ಯ ಲೆಕ್ಕ ಹಾಕುವ ಪರಿಸ್ಥಿತಿಯೂ ಇರಲಿಲ್ಲ. ಸ್ವಾತಂತ್ರಾ್ಯನಂತರ ನಾವು ರೂಪಿಸಿದ ಎಲ್ಲ ಯೋಜನೆಗಳೂ ವಿತ್ತೀಯ ಕೊರತೆಯನ್ನೇ ದಾಖಲಿಸಿದವು. ಅಭಿವೃದ್ಧಿಗೆ ನಾವು ಸಾಲದ ಮೊರೆಹೋಗಬೇಕಾಯಿತಲ್ಲದೆ ವಿದೇಶದಿಂದ ಅನೇಕ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕಾಗಿಯೂ ಬಂತು. ಇಷ್ಟಾಗಿಯೂ ನಾವು ಪೌಂಡಿನ ಸೆರಗನ್ನು ಬಿಟ್ಟೇ ಇರಲಿಲ್ಲ. 1958ರ ವೇಳೆಗೆ ಜಗತ್ತಿನ ಬಹುತೇಕ ರಾಷ್ಟ್ರಗಳು ಪೌಂಡನ್ನು ತ್ಯಜಿಸಿ ಡಾಲರ್​ಗೆ ಆತುಕೊಂಡಾಗಿತ್ತು. ಆದರೆ ಭಾರತದ ಭಾವನೆಗಳು ಇಂಗ್ಲೆಂಡಿನೊಂದಿಗೆ ಬಲವಾಗಿದ್ದುದರಿಂದ ಅಷ್ಟು ಬೇಗ ಬಿಡಲೊಪ್ಪಲಿಲ್ಲ. ಹಾಗೆ ನೋಡಿದರೆ ಜಾಗತಿಕ ಕರೆನ್ಸಿಯಾಗಿ ಡಾಲರ್ ರೂಪುಗೊಂಡಿದ್ದು ಎರಡನೇ ವಿಶ್ವಯುದ್ಧದ ನಂತರವೇ. ಯುದ್ಧದಲ್ಲಿ ಭಾಗವಹಿಸಿದ ಮತ್ತು ಸೋತ ಎಲ್ಲ ರಾಷ್ಟ್ರಗಳು ಸಾಕಷ್ಟು ಹಾನಿಗೊಳಗಾಗಿದ್ದರಿಂದ ಅವುಗಳನ್ನು ಮರುನಿರ್ವಿುಸಲು ಸಮರ್ಥ ಶಕ್ತಿಯೊಂದರ ಬೆಂಬಲ ಬೇಕಾಗಿತ್ತು. ಆ ದಿನಗಳಲ್ಲಿ ಯುದ್ಧದಲ್ಲಿ ಭಾಗವಹಿಸಿಯೂ ಹೆಚ್ಚು ಹಾನಿಗೊಳಗಾಗದ ರಾಷ್ಟ್ರ ಅಮೆರಿಕವೇ ಆಗಿತ್ತು. ಅದರ ಕರೆನ್ಸಿಯು ಬಲವಾಗಿದ್ದುದರಿಂದ ವಿಶ್ವ ಒಕ್ಕೂಟ ಅದನ್ನೇ ಜಾಗತಿಕ ಕರೆನ್ಸಿಯಾಗಿ ಒಪ್ಪಿಕೊಂಡಿತ್ತು.

ಆಗಲೇ ಶುರುವಾಗಿದ್ದು ಐಎಂಎಫ್ ಮತ್ತು ವರ್ಲ್ಡ್ ಬ್ಯಾಂಕ್. ಆ ಹೊತ್ತಿನಲ್ಲೇ ಡಾಲರ್​ಗೆ ಪ್ರತಿಯಾಗಿ ಚಿನ್ನದ ವಿನಿಮಯವನ್ನು ಜಗತ್ತು ಒಪ್ಪಿಕೊಂಡಿತು. ಅಂದರೆ ಅಮೆರಿಕಕ್ಕೆ ಚಿನ್ನವನ್ನು ಕೊಟ್ಟು ಡಾಲರ್ ಪಡೆಯಬಹುದಾಗಿತ್ತು. ನಮ್ಮ ಪರಿಸ್ಥಿತಿ ಕೇಳಿ. ನಾವು ನಮ್ಮ ಹಣವನ್ನು ಪೌಂಡಿಗೆ ಬದಲಾಯಿಸಿಕೊಂಡು, ಅದರ ಮೂಲಕ ಡಾಲರ್ ಕೊಂಡುಕೊಳ್ಳಬೇಕಾಗಿತ್ತು. 1971ರ ವೇಳೆಗೆ ಅಮೆರಿಕ ಡಾಲರ್​ಗಳನ್ನು ಅಗತ್ಯಕ್ಕಿಂತ ಹೆಚ್ಚು ಮುದ್ರಿಸಿ ಹಂಚುತ್ತಿದೆ ಎಂಬ ಅನುಮಾನ ಜಾಗತಿಕ ಮಟ್ಟದಲ್ಲಿ ಬಲವಾಗಿ ಹಬ್ಬಿತು. ಆಗ ಕೆಲವು ರಾಷ್ಟ್ರಗಳು ಡಾಲರ್​ಗೆ ಪ್ರತಿಯಾಗಿ ಚಿನ್ನವನ್ನು ಮರಳಿಕೊಡಿರೆಂದು ಕೇಳಿಕೊಂಡಾಗ ಅಧ್ಯಕ್ಷ ರಿಚರ್ಡ್ ನಿಕ್ಸನ್ ನಿರ್ಲಜ್ಜವಾಗಿಯೇ ನಿರಾಕರಿಸಿಬಿಟ್ಟ. ಇದು ಡಾಲರ್​ನ ಕುರಿತಂತೆ ಇದ್ದ ಅನುಮಾನಗಳನ್ನು ಮತ್ತೂ ಹೆಚ್ಚಿಸಿತು. ಇದ್ದಕ್ಕಿದ್ದಂತೆ ಅದರ ಮೌಲ್ಯ ಕುಸಿದುಹೋಯ್ತು. ಅಮೆರಿಕ ಎಲ್ಲವನ್ನೂ ಕಳೆದುಕೊಳ್ಳುವ ಹಂತದಲ್ಲಿದ್ದಾಗ ಅದರ ಬೆಂಬಲಕ್ಕೆ ಬಂದಿದ್ದು ತೈಲರಾಷ್ಟ್ರಗಳು. ಅದಾಗಲೇ ಇಸ್ರೇಲ್​ನಂತಹ ರಾಷ್ಟ್ರಗಳಿಂದ ಸಾಕಷ್ಟು ಬೆದರಿಕೆಗೆ ಒಳಗಾಗಿದ್ದ ಸೌದಿಗೆ ಸಮರ್ಥರೊಬ್ಬರ ರಕ್ಷಣೆ ಬೇಕಿತ್ತು. ಇತ್ತ ಅಮೆರಿಕಕ್ಕೆ ತನ್ನ ಡಾಲರನ್ನು ಉಳಿಸಿಕೊಳ್ಳಬೇಕಿತ್ತು. ಚುರುಕುಮತಿಯಿಂದ ಅಮೆರಿಕ ತೈಲರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಂಡು ತೈಲವನ್ನು ಡಾಲರ್​ನಲ್ಲಿ ಮಾರಾಟ ಮಾಡಿದರೆ ತಾನು ಈ ರಾಷ್ಟ್ರಗಳಿಗೆ ರಕ್ಷಣೆ ಕೊಡುವ ಜವಾಬ್ದಾರಿ ಹೊರುತ್ತೇನೆಂದಿತು. ಜಗತ್ತಿನ ಎಲ್ಲ ರಾಷ್ಟ್ರಗಳು ಯಾವುದಾದರೂ ಒಂದು ವಸ್ತುವಿನ ಆಮದು ಮಾಡಿಕೊಳ್ಳಲೇಬೇಕೆಂದರೆ ಅದು ತೈಲವೊಂದೇ ಆಗಿದ್ದರಿಂದ ಡಾಲರ್ ಮಿಂಚಲಾರಂಭಿಸಿತು. ಕಳೆದುಕೊಂಡಿದ್ದ ಮೌಲ್ಯವನ್ನು ಮರಳಿ ಪಡೆಯಿತಲ್ಲದೆ ಜಗತ್ತೆಲ್ಲವೂ ಅನಿವಾರ್ಯವಾಗಿ ಡಾಲರ್​ನೆದುರು ಕೈಚಾಚಿ ನಿಲ್ಲುವಂತೆ ಮಾಡಿಬಿಟ್ಟಿತು.

ಒಮ್ಮೆ ಅಮೆರಿಕ ಬಲವಾಗಿ ನಿಂತೊಡನೆ ಮತ್ತೆ ತನ್ನದೇ ಚಾಳಿ ಮುಂದುವರಿಸಿತು. ಇಸ್ರೇಲಿಗೆ ತಾನು ನೀಡುವ ಬೆಂಬಲವನ್ನು ಅದು ಎಂದಿಗೂ ಕಡಿಮೆ ಮಾಡಲಿಲ್ಲ. ತೈಲರಾಷ್ಟ್ರಗಳಿಗೆ ಇವೆಲ್ಲವೂ ಅರ್ಥವಾದರೂ ಪ್ರತಿಕ್ರಿಯಿಸುವಷ್ಟು ಅವು ಸಮರ್ಥವಾಗಿರಲಿಲ್ಲ. ಆ ರಾಷ್ಟ್ರಗಳ ಎಲ್ಲ ಪ್ರಮುಖರು ಅಮೆರಿಕದ ಕೈಗೊಂಬೆಗಳಾಗಿಬಿಟ್ಟಿದ್ದರು. ಸ್ವಲ್ಪ ಬುದ್ಧಿವಂತಿಕೆ ಉಪಯೋಗಿಸಿದ ಸದ್ದಾಂ ಹುಸೇನ್ ಅಮೆರಿಕಕ್ಕೆ ಪಾಠ ಕಲಿಸಲು ನಿರ್ಧರಿಸಿ ತೈಲವನ್ನು ತನ್ನದೇ ಕರೆನ್ಸಿಯಲ್ಲಿ ಮಾರುವ ನಿರ್ಣಯ ಕೈಗೊಂಡ. ಆತ ಯಶಸ್ವಿಯಾಗಿದ್ದರೆ ಇಷ್ಟು ಹೊತ್ತಿಗೆ ಅಮೆರಿಕ ಮೂಲೆಗುಂಪಾಗಬೇಕಿತ್ತು. ಆದರೆ ಅಮೆರಿಕ ಸದ್ದಾಂ ಹುಸೇನನ ಮೇಲೆ ಬಗೆ-ಬಗೆಯ ಆರೋಪಗಳನ್ನು ಹೊರಿಸಿ ಇರಾಕಿನ ಮೇಲೆ ದಾಳಿಮಾಡುವ ಮುನ್ಸೂಚನೆ ಕೊಟ್ಟಿತು. ಹಾಗಾದೊಡನೆ ಎಲ್ಲೆಡೆ ಇಂಧನದ ಬೆಲೆ ಗಗನಮುಟ್ಟಿತು. ತನ್ನೆಲ್ಲ ಸಮಸ್ಯೆಗಳಿಂದಲೂ ಚೇತರಿಸಿಕೊಳ್ಳುತ್ತಿದ್ದ ಭಾರತಕ್ಕೆ ಇದು ಬಲವಾದ ಹೊಡೆತವಾಗಿತ್ತು. ಒಂದೆಡೆ ನಮ್ಮ ಆಪ್ತಸಖನಾಗಿದ್ದ ರಷ್ಯಾ ಛಿದ್ರ-ಛಿದ್ರಗೊಂಡಿತು. ಮತ್ತೊಂದೆಡೆ ತೈಲಬೆಲೆ ಏರಿಕೆಯಿಂದಾಗಿ ನಮ್ಮ ವಿದೇಶಿ ವಿನಿಮಯ ಆತಂಕದ ಸ್ಥಿತಿಗೆ ತಲುಪಿತ್ತು. ಇನ್ನು, ಶಾಬಾನು ವಿಚಾರದಲ್ಲಿ ಪ್ರಧಾನಿ ರಾಜೀವ್ ಗಾಂಧಿ ಮೂಗುತೂರಿಸಿ ದೇಶದಾದ್ಯಂತ ಜನರ ಅವಕೃಪೆಗೆ ಒಳಗಾಗಿದ್ದರು. ಸರ್ಕಾರ ಬಿತ್ತೂ ಕೂಡ. ರಾಜಕೀಯ ಅಸ್ಥಿರತೆಯಿಂದಾಗಿ ಆರ್ಥಿಕ ಪ್ರಗತಿಯೂ ಕುಂಠಿತಗೊಂಡಿತ್ತು. ಆ ಹೊತ್ತಿನಲ್ಲಿ ತಾತ್ಕಾಲಿಕವಾಗಿ ಅಧಿಕಾರಕ್ಕೇರಿದ್ದು ಚಂದ್ರಶೇಖರ್. ಅವರು ಐಎಂಎಫ್​ನಿಂದ ಭಾರತಕ್ಕೆ ಸಾಲ ತೆಗೆದುಕೊಳ್ಳುವ ಪ್ರಯತ್ನ ಮಾಡಿದರಾದರೂ ಅಮೆರಿಕದ ಅನುಮತಿಯಿಲ್ಲದೇ ಐಎಂಎಫ್ ಕೊಡುವಂತಿರಲಿಲ್ಲ. ತಕ್ಷಣ ಅಮೆರಿಕದೊಂದಿಗೆ ಸಂಧಾನದ ಜವಾಬ್ದಾರಿ ಹೊತ್ತ ಸುಬ್ರಮಣಿಯನ್ ಸ್ವಾಮಿ ರಾಯಭಾರಿಯೊಂದಿಗೆ ಮಾತನಾಡಿ ಎರಡು ಶತಕೋಟಿ ಡಾಲರ್​ಗಳಷ್ಟು ಹಣಕ್ಕೆ ಬೇಡಿಕೆ ಸಲ್ಲಿಸಿದರು. ಅದಕ್ಕೆ ಪ್ರತಿಯಾಗಿ ಅಮೆರಿಕ, ಇರಾಕ್ ಮೇಲೆ ದಾಳಿಮಾಡಲಿರುವ ತನ್ನ ವಿಮಾನಗಳಿಗೆ ಭಾರತದಲ್ಲಿ ಇಂಧನ ತುಂಬಿಕೊಳ್ಳಲು ಅವಕಾಶ ಕೊಡಬೇಕೆಂದು ಕೇಳಿಕೊಂಡಿತು. ಅತ್ಯಂತ ದೀನಸ್ಥಿತಿಯಲ್ಲಿದ್ದ ಭಾರತ ಇದಕ್ಕೆ ತಲೆಬಾಗಿತು. ಆದರೆ ಐಎಂಎಫ್​ನ ಈ ಹಣವೂ ಸಾಕಾಗುವಂತಿರಲಿಲ್ಲ. ಆಗಲೇ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಳಿಯಿದ್ದ ಚಿನ್ನವನ್ನು ಅಡವಿಡುವ ಐಡಿಯಾ ತೆಗೆದುಕೊಂಡು ಬಂತು. ದೇಶವನ್ನು ಕತ್ತಲಲ್ಲಿಟ್ಟು ಈ ದೇಶದ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್, ಬ್ಯಾಂಕ್ ಆಫ್ ಸ್ವಿಜರ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನಿಗೆ ಸಾಗಿಸಲಾಯ್ತು. ಈ ಸುದ್ದಿ ಪತ್ರಕರ್ತರೊಬ್ಬರ ಮೂಲಕ ಜಗಜ್ಜಾಹೀರಾದಾಗ ಇಡಿಯ ದೇಶದ ಆತ್ಮಾಭಿಮಾನವೇ ಕುಸಿದುಹೋದಂತಾಗಿತ್ತು. ಆಗ ಅಧಿಕಾರಕ್ಕೆ ಬಂದವರು ಪಿ.ವಿ. ನರಸಿಂಹರಾವ್. ಕಠೋರ ನಿರ್ಣಯಗಳನ್ನು ಅವರೀಗ ಕೈಗೊಳ್ಳಲೇಬೇಕಿತ್ತು. ಅಲ್ಲಿಯವರೆಗೂ ತನ್ನದೇ ಆದ ಚೌಕಟ್ಟಿನಲ್ಲಿ ಬೆಳೆಯಲು ಪ್ರಯತ್ನಿಸುತ್ತಿದ್ದ ಭಾರತಕ್ಕೆ ಈಗವರು ಜಾಗತೀಕರಣದ ಹೊಸಲೇಪ ಕೊಡುವ ಸಂಕಲ್ಪ ಮಾಡಿದರು. ನೆಹರು, ರಾಜೀವ್​ರ ಕಾಲದಲ್ಲಿ ರಾರಾಜಿಸುತ್ತಿದ್ದ ಪರ್ವಿುಟ್​ರಾಜ್ ಅನ್ನು ಕಿತ್ತೆಸೆದು ವ್ಯಾಪಾರ ವಹಿವಾಟನ್ನು ಸರಳಗೊಳಿಸಿದರು. ಸಾಲ ನೀಡಲು ಜಗತ್ತು ಹಾಕಿದ ಎಲ್ಲ ಷರತ್ತುಗಳನ್ನು ಒಪ್ಪಿಕೊಂಡರಲ್ಲದೆ ರೂಪಾಯಿಯನ್ನು ಬಲುದೊಡ್ಡ ಪ್ರಮಾಣದಲ್ಲಿ ಅಪಮೌಲ್ಯಗೊಳಿಸಿದರು. ಹೀಗೆ ರೂಪಾಯಿ ಅಪಮೌಲ್ಯಗೊಳಿಸುವುದರಿಂದ ರಫ್ತು ಹೆಚ್ಚುವುದು ಎಂಬುದು ಅವರ ವಾದವಾಗಿತ್ತು. ಆದರೆ ಒಂದಷ್ಟು ಲಾಭವಾಗಿದ್ದಂತೂ ನಿಜ. ಕೆಲವು ಭಾರತೀಯ ಉದ್ಯಮಗಳು ಜಾಗತಿಕ ಮಟ್ಟಕ್ಕೆ ಬೆಳೆದು ನಿಂತವು. ದುರದೃಷ್ಟವಶಾತ್ ಜಾಗತಿಕ ಕಂಪನಿಗಳನೇಕವು ಭಾರತಕ್ಕೆ ದಾಂಗುಡಿಯಿಟ್ಟವು. ಆದರೆ ಜನಸಾಮಾನ್ಯರ ಕೈಯಲ್ಲಿ ಹಣ ಓಡಾಡಲಾರಂಭಿಸಿದ್ದಂತೂ ಅಕ್ಷರಶಃ ಸತ್ಯ.

ನಂತರ ಈ ಪರಿಯ ಮತ್ತೊಂದು ತೊಂದರೆ ನಾವು ಕಂಡಿದ್ದು ಅಟಲ್ ಬಿಹಾರಿ ವಾಜಪೇಯಿಯವರ ಕಾಲಕ್ಕೆ. ಒಂದೆಡೆ ಪಾಕಿಸ್ತಾನದೊಂದಿಗಿನ ಯುದ್ಧ, ಮತ್ತೊಂದೆಡೆ ಪೋಖ್ರಾನ್ ಅಣುಸ್ಪೋಟದಿಂದಾಗಿ ಅಮೆರಿಕ ಹೇರಿದ್ದ ನಿರ್ಬಂಧ. ಇವೆರಡರ ಕಾರಣದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಸತ್ಯ. ಆದರೆ ಡಾಲರ್​ಗಳ ಕೊರತೆಯನ್ನು ಅಟಲ್​ಜಿ ಬಲು ಚಾಣಾಕ್ಷತನದಿಂದ ನಿರ್ವಹಿಸಿದರು. ಅನಿವಾಸಿ ಭಾರತೀಯರಿಗಾಗಿ ಬಾಂಡ್ ಪೇಪರ್​ಗಳನ್ನು ಕೊಟ್ಟು ಅವರಿಂದ ಡಾಲರ್​ಗಳನ್ನು ಸಂಗ್ರಹಿಸಿದರು. ಅಟಲ್​ಜಿ ಅಧಿಕಾರ ಬಿಡುವಾಗ ನೂರು ಶತಕೋಟಿ ಡಾಲರ್​ಗಳಷ್ಟು ವಿದೇಶಿ ವಿನಿಮಯ ನಮ್ಮ ಬಳಿ ಇತ್ತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸು ಈ ವಿದೇಶಿ ವಿನಿಮಯದ ಲಾಭವನ್ನು ಚೆನ್ನಾಗಿಯೇ ಪಡೆದುಕೊಂಡಿತು. ಅವರ ಮೊದಲ ಐದು ವರ್ಷ ನಿರ್ಭೀತಿಯಿಂದ ಸಾಗಲು ಅಟಲ್​ಜಿ ಕೂಡಿಟ್ಟಿದ್ದ ಈ ವಿದೇಶಿ ವಿನಿಮಯವೇ ಕಾರಣವಾಗಿತ್ತು. ಮುಂದಿನ ಐದು ವರ್ಷಗಳಲ್ಲಿ ಭಾರತದ ಸಾಲ ಹೆಚ್ಚಾಯಿತು. ಆಮದು ಹೆಚ್ಚಾಗಿ ರಫ್ತು ಕಡಿಮೆಯಾಯಿತು. ಈ ಕಾರಣಕ್ಕಾಗಿಯೇ ರೂಪಾಯಿ ಓಲಾಡಲಾರಂಭಿಸಿತ್ತು. ಅಟಲ್​ಜಿ ಕಾಲದಲ್ಲಿ ಸ್ಥಿರತೆ ಕಾಯ್ದುಕೊಂಡು ಬಂದಿದ್ದ ರೂಪಾಯಿ ಮುಂದಿನ ಹತ್ತು ವರ್ಷಗಳಲ್ಲಿ ನಮ್ಮದೇ ತಪ್ಪಿನಿಂದಾಗಿ ಹೊಯ್ದಾಡಿತು. ಕಾರ್ತಿ ಚಿದಂಬರಂ ಸಿಂಗಪೂರ್​ನಲ್ಲಿ ಕುಳಿತು ಡಾಲರ್​ಗಳನ್ನು ಪಡೆದು ಭಾರತದಲ್ಲಿ ರೂಪಾಯಿಯ ಮೌಲ್ಯ ಕುಸಿಯುವಂತೆ ಮಾಡಿ ಆ ಡಾಲರ್​ಗಳನ್ನು ರೂಪಾಯಿಯಲ್ಲಿ ಮರಳಿಸಿ ತಾನು ಕುಳಿತಲ್ಲೇ ಸಾವಿರಾರು ಕೋಟಿ ರೂಪಾಯಿ ದಂಧೆ ಮಾಡಿದ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದರು. ಆ ಆರೋಪಕ್ಕೆ ಆಳುವ ವರ್ಗದವರ್ಯಾರೂ ಪ್ರತಿಕ್ರಿಯಿಸಿರಲಿಲ್ಲ, ವಿರೋಧವನ್ನೂ ವ್ಯಕ್ತಪಡಿಸಿರಲಿಲ್ಲ.

ಅದಾದಮೇಲೆಯೇ, ಕುಸಿದುಹೋಗಿರುವ ಈ ಆರ್ಥಿಕತೆಯನ್ನು ಸರಿಪಡಿಸಲು ಬಲವಾದ ನಿರ್ಣಯಗಳನ್ನು ಕೈಗೊಳ್ಳುವ ಅವಶಕ್ಯತೆ ಇದೆ ಎಂದು ಜನರನ್ನು ಒಪ್ಪಿಸಿಯೇ ಅಧಿಕಾರ ಪಡೆದವರು ನರೇಂದ್ರ ಮೋದಿ. ಸರ್ಕಾರದ ಹಣವನ್ನು ಲೂಟಿ ಮಾಡುತ್ತಿದ್ದ ಜನರಿಗೆ ಪಾಠ ಕಲಿಸಲೆಂದೇ ನೋಟು ಅಮಾನ್ಯೀಕರಣದಂಥ ಬಲವಾದ ನಿರ್ಣಯಗಳನ್ನು ಮುಲಾಜಿಲ್ಲದೆ ತೆಗೆದುಕೊಂಡರು. 2014ರ ನಂತರ ಐಎಂಎಫ್​ನಿಂದ ತೆಗೆದುಕೊಳ್ಳುವ ಸಾಲದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿ ಜಗತ್ತು ಅಭಿನಂದಿಸಿತು. ಭಾರತಕ್ಕೆ ವಿದೇಶಿ ಹೂಡಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಆಹ್ವಾನಿಸುವ ಮೋದಿಯವರ ಪ್ರಯತ್ನವೂ ಫಲಕೊಡಲಾರಂಭಿಸಿತು. ನೋಡನೋಡುತ್ತಲೇ ನಮ್ಮ ವಿದೇಶಿ ವಿನಿಮಯ ಉಳಿತಾಯ 400 ಶತಕೋಟಿ ಡಾಲರ್​ಗಳಿಗೇರಿತು. ಭಾರತದ ಅರ್ಥವ್ಯವಸ್ಥೆ ಬಲುಬೇಗ ನಾಶವಾಗಬಲ್ಲ ಸ್ಥಾನದಿಂದ ಜಗತ್ತಿನ 5ನೇ ಅರ್ಥವ್ಯವಸ್ಥೆಯಾಗಿ ಗುರುತಿಸುವ ಮಟ್ಟಕ್ಕೆ ಹೋಯ್ತು. ರಷ್ಯಾ ಮತ್ತು ಅಮೆರಿಕಗಳೊಂದಿಗೆ ತನ್ನ ಸಂಬಂಧವನ್ನು ಸಹಜವೆಂಬಂತೆ ಕಾಪಾಡಿಕೊಂಡ ಮೋದಿ ದೇಶಕ್ಕೆ ಲಾಭವಾಗುವ ಎಲ್ಲ ಸಂಗತಿಗಳಲ್ಲೂ ಬಲವಾಗಿಯೇ ನಿಂತುಕೊಂಡರು.

ಆಗಲೇ ಈ ಹೊಡೆತ ಬಿದ್ದದ್ದು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ದೇಶದ ಬಡ್ಡಿದರವನ್ನು ಹೆಚ್ಚಿಸಿದರು. ಅದರ ಪರಿಣಾಮವಾಗಿ ಡಾಲರ್​ಗಳು ಅತ್ತ ಹರಿಯಲಾರಂಭಿಸಿದವು. ಡಾಲರ್ ಬೇಡಿಕೆ ಹೆಚ್ಚಿದಂತೆ ಅದರ ಎದುರಿಗಿನ ಎಲ್ಲ ಕರೆನ್ಸಿಯ ಮೌಲ್ಯವೂ ಕುಸಿಯಲಾರಂಭಿಸಿತು. ಚೀನಾವನ್ನು ಮಟ್ಟಹಾಕುವ ಭರದಲ್ಲಿ ಅದರೊಂದಿಗಿನ ವಿತ್ತೀಯ ಕೊರತೆಯನ್ನು ಕಡಿಮೆಮಾಡಲು ಆಲೋಚಿಸಿದ ಟ್ರಂಪ್ ವ್ಯಾಪಾರ ಕದನಕ್ಕಿಳಿದರು. ಚೀನಾ ಕೂಡ ಅದಕ್ಕೆ ಬಲವಾಗಿಯೇ ಪ್ರತಿಕ್ರಿಯಿಸಿತು. ಬಲಾಢ್ಯವೆನಿಸಿದ್ದ ತನ್ನ ಕರೆನ್ಸಿಯನ್ನು ನಾಲ್ಕು ಪ್ರತಿಶತದಷ್ಟು ಅಪಮೌಲ್ಯಗೊಳಿಸಿ ಅಮೆರಿಕಕ್ಕೆ ಸೆಡ್ಡುಹೊಡೆಯಿತು. ಮೊದಲೇ ಚೀನಾದ ವಸ್ತುಗಳು ಕಡಿಮೆ ಬೆಲೆಯದ್ದು. ಈಗ ಕರೆನ್ಸಿಯ ಮೌಲ್ಯ ಕುಸಿದಿದ್ದರಿಂದ ಅಮೆರಿಕದ ವಸ್ತುಗಳೇನು ಭಾರತದ ವಸ್ತುಗಳೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ತೊಡಕಾಯ್ತು. ಅದಕ್ಕೆ ಪ್ರತಿಯಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳು ತಮ್ಮ ಕರೆನ್ಸಿಯನ್ನು ಅಪಮೌಲ್ಯಗೊಳಿಸಬೇಕಾಯ್ತು.

ಸಾಕಷ್ಟು ಪ್ರಯತ್ನಗಳ ನಂತರ ಇರಾನಿನೊಂದಿಗೆ ರೂಪಾಯಿಯಲ್ಲೇ ತೈಲ ಕೊಂಡುಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದ ಮೋದಿಯವರಿಗೆ ಇರಾನ್ ಮೇಲೆ ಹೇರಿದ ನಿರ್ಬಂಧವೂ ಸಾಕಷ್ಟು ಕಿರಿಕಿರಿ ಉಂಟುಮಾಡಿತು. ಈ ಒಪ್ಪಂದದಿಂದಾಗಿ ನಮಗೆ ಡಾಲರ್​ನ ಖರೀದಿಯ ಅವಶ್ಯಕತೆಯೂ ತಪ್ಪುತ್ತಿತ್ತು. ಮತ್ತು ತೈಲ ಮಾರುಕಟ್ಟೆಯಲ್ಲಿ ರೂಪಾಯಿಯನ್ನು ಬಲಗೊಳಿಸುವ ಅವಕಾಶವೂ ದೊರೆಯುತ್ತಿತ್ತು. ಆದರೆ ಈ ಒಪ್ಪಂದವನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವ ಪ್ರಯತ್ನಕ್ಕೆ ಅಡ್ಡಗಾಲಾದ ಅಮೆರಿಕ, ರೂಪಾಯಿಯ ಓಟಕ್ಕೆ ತಡೆಯೊಡ್ಡಿತು. ಅತ್ತ ಟರ್ಕಿಯ ಲಿರಾ ಅತಿಕೆಟ್ಟ ಪರಿಸ್ಥಿತಿಯಲ್ಲಿರುವುದು, ಬ್ರೆಜಿಲ್, ರಷ್ಯಾದಂತಹ ರಾಷ್ಟ್ರಗಳೂ ಪತರಗುಟ್ಟಿರುವುದು ನೋಡಿದರೆ ಭಾರತ ಬಲವಾಗಿಯೇ ಇದೆ. ಈಗ ಆಗಿರುವ ರೂಪಾಯಿ ಅಪಮೌಲ್ಯ ನಮಗೆ ಅನೇಕ ಸಮಸ್ಯೆಗಳನ್ನು ತಂದೊಡ್ಡಿರುವುದು ನಿಜವಾದರೂ ಇದು ಜಾಗತಿಕ ಸಮಸ್ಯೆಯಾಗಿರುವುದರಿಂದ ಇದಕ್ಕೊಂದು ಪರಿಹಾರ ಬಲುಬೇಗ ದೊರಕಬಹುದೆಂಬ ವಿಶ್ವಾಸ ಖಂಡಿತ ಇದೆ. ಅದಾಗಲೇ ಮೋದಿ ರಷ್ಯಾದೊಂದಿಗೆ ದ್ವಿಪಕ್ಷೀಯ ಕರೆನ್ಸಿ ವಿನಿಮಯದ ಒಪ್ಪಂದ ಮಾಡಿಕೊಂಡಿದ್ದಾರೆ. ಬರಲಿರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರಾಷ್ಟ್ರಗಳು ಈ ದಿಕ್ಕಿನತ್ತ ಒಲವು ತೋರಬಹುದು. ಈ ಎಲ್ಲ ಕಾರಣಗಳಿಂದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಇದು ಆತಂಕಪಡುವ ಸಂಗತಿಯೇನಲ್ಲ ಎಂದು ಉದ್ಗರಿಸಿದ್ದಾರೆ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *

Back To Top