Tuesday, 11th December 2018  

Vijayavani

Breaking News

ಲಾಲ್ ಬಹಾದುರ್ ಶಾಸ್ತ್ರಿ ಸಾವಿಗೆ ಕಾರಣರಾರು?!

Monday, 08.10.2018, 3:03 AM       No Comments

| ಚಕ್ರವರ್ತಿ ಸೂಲಿಬೆಲೆ

ತಾಷ್ಕೆಂಟ್ ಒಪ್ಪಂದದ ಸಲುವಾಗಿ ರಷ್ಯಾಕ್ಕೆ ತೆರಳಿದ್ದ ಲಾಲ್ ಬಹಾದುರ್ ಶಾಸ್ತ್ರಿ ಸಾವು ಹೇಗಾಯಿತೆಂಬುದು ಇನ್ನೂ ನಿಗೂಢ. ಅಂದಿನ ಸರ್ಕಾರಗಳು ಈ ಕುರಿತ ಚರ್ಚೆಗೆ ಸರಿಯಾದ ಉತ್ತರ ನೀಡಿರಲಿಲ್ಲ ಎಂಬುದು ಬಯಲಾಗಿದೆ. ಸರ್ಕಾರದ ಈ ನಡೆಯೇ ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಇತ್ತೀಚೆಗೆ ಅನುಜ್ ಧರ್ ಬರೆದಿರುವ ‘ಯುವರ್ ಪ್ರೈಮ್ುನಿಸ್ಟರ್ ಈಸ್ ಡೆಡ್’ ಕೃತಿ ಲಾಲ್ ಬಹಾದುರ್ ಶಾಸ್ತ್ರಿಯವರ ಸಾವಿನ ಕುರಿತ ಅನೇಕ ಸತ್ಯಗಳನ್ನು ಬಯಲಿಗೆಳೆಯುತ್ತದೆ. 1965ರ ಪಾಕಿಸ್ತಾನದ ಯುದ್ಧದ ವೇಳೆಗೆ ಭಾರತ ಸೈನಿಕ ಬಲದಲ್ಲಿ ಕ್ಷೀಣವಾಗಿದೆ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವ ಸಮರ್ಥ ನಾಯಕನಿಲ್ಲ ಎಂದೇ ಜಗತ್ತು ಭಾವಿಸಿತ್ತು. ಆದರೆ ಶಾಸ್ತ್ರಿ ತಮ್ಮನ್ನು ತಾವು ಜವಾಹರಲಾಲ್ ನೆಹರುಗಿಂತ ಸಮರ್ಥ ನಾಯಕನಾಗಿ ದೇಶದ ಮುಂದೆ ಸಾಬೀತುಪಡಿಸಿಕೊಂಡಿದ್ದರೆಂಬುದನ್ನು ಅರಿಯುವಲ್ಲಿ ಜಗತ್ತು ಸೋತಿತ್ತು. ಹೀಗಾಗಿ 1965ರ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಸೋಲು ಅನಿರೀಕ್ಷಿತವಾಗಿತ್ತು. ಸಿಯಾಲ್​ಕೋಟ್​ನಿಂದ ನುಗ್ಗಿ ಜಮ್ಮು-ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸುವ ಪಾಕಿಸ್ತಾನದ ಕನಸಿಗೆ ಶಾಸ್ತ್ರೀಜಿ ಲಾಹೋರಿನ ಗಡಿಯೊಳಕ್ಕೆ ನುಗ್ಗಿ ಪಾಕಿಸ್ತಾನವನ್ನೇ ತುಂಡರಿಸಿಬಿಡುವ ಭೀತಿಯನ್ನು ಹೆಚ್ಚಿಸುವ ಮೂಲಕ ತಣ್ಣೀರೆರೆಚಿದ್ದರು. ಅಂತಾರಾಷ್ಟ್ರೀಯ ಗಡಿಯನ್ನು ದಾಟುವ ಆದೇಶ ಕೊಟ್ಟ ಶಾಸ್ತ್ರೀಜಿ ಸೈನಿಕರ ಆತ್ಮಸ್ಥೈರ್ಯಕ್ಕೆ ಬಲವಾದ ಶಕ್ತಿ ತುಂಬಿದ್ದರು. ಸೋತು ಸುಣ್ಣವಾದ ಪಾಕಿಸ್ತಾನ ವಿಶ್ವಸಂಸ್ಥೆಯ ಎದುರು ಬಕೆಟ್ಟುಗಟ್ಟಲೆ ಕಣ್ಣೀರು ಸುರಿಸಿತ್ತು. ಅನಿವಾರ್ಯವಾದ ಯುದ್ಧವಿರಾಮ ಭಾರತದ ಮೇಲೆ ಹೇರಲ್ಪಟ್ಟಿತು. ಅದೇ ವೇಳೆಗೆ ಮಧ್ಯಸ್ಥಿಕೆ ವಹಿಸಲು ಬಂದ ರಷ್ಯಾ ಎರಡೂ ದೇಶದ ಪ್ರಮುಖರನ್ನು ತಾಷ್ಕೆಂಟಿಗೆ ಆಹ್ವಾನಿಸಿತು. ಆರು ದಿನಗಳ ಕಾಲ ಸಂಧಾನದ ಸೂತ್ರಕ್ಕೆ ಒಪ್ಪದ ಶಾಸ್ತ್ರೀಜಿ ಇದ್ದಕ್ಕಿದ್ದಂತೆ ಏಳನೆಯ ದಿನ ಭಾರತದ ಸೈನಿಕರು ಗೆದ್ದಿದ್ದ ಹಾಜಿಪೀರ್ ಪಾಸ್ ಅನ್ನು ಬಿಟ್ಟುಕೊಡಲು ಒಪ್ಪಿದ್ದಷ್ಟೇ ಅಲ್ಲದೇ ಲಾಹೋರ್​ವರೆಗೂ ನುಗ್ಗಿದ್ದ ಭಾರತೀಯ ಸೈನಿಕರು ಮರಳಿ ಬರುವಂತೆ ಮಾಡಿಕೊಂಡ ಒಪ್ಪಂದಕ್ಕೆ ಸಹಿ ಹಾಕಿಬಿಟ್ಟರು. ಅದೇ ರಾತ್ರಿ ದೇಶದಲ್ಲಿ ಇದಕ್ಕೆ ಸಿಕ್ಕ ಮಿಶ್ರ ಪ್ರತಿಕ್ರಿಯೆಯನ್ನು ತಿಳಿದು ಮಲಗುವ ಮುನ್ನ ತಮ್ಮ ಸಹಾಯಕ ರಾಮನಾಥನಿಂದ ಒಂದು ಲೋಟ ಹಾಲನ್ನು ಸ್ವೀಕರಿಸಿ, ಫ್ಲಾಸ್ಕಿನಲ್ಲಿಟ್ಟಿದ್ದ ಬಿಸಿನೀರನ್ನು ಕುಡಿದರು. ಮಧ್ಯರಾತ್ರಿ ಸುಮಾರು ಒಂದೂವರೆಯಷ್ಟರ ಹೊತ್ತಿಗೆ ಎದೆ ಹಿಡಿದು ವೈದ್ಯರ ಬಳಿ ಬಂದ ಶಾಸ್ತ್ರೀಜಿ ವೈದ್ಯರು ಕೊಟ್ಟ ಇಂಜೆಕ್ಷನ್ನಿನಿಂದ ಚೇತರಿಸಿಕೊಳ್ಳದೇ ಅಪಾರ ಪ್ರಯತ್ನದ ನಂತರವೂ ಚಿಕಿತ್ಸೆಗೆ ಪ್ರತಿಕ್ರಿಯಿಸದೇ ತೀರಿಕೊಂಡರು. ಹಾಗಂತ ಸಂಸತ್ತಿನಲ್ಲಿ ಅಂದಿನ ಕಾಂಗ್ರೆಸ್ ನಾಯಕರು ಹೇಳಿಕೆ ಕೊಟ್ಟರು. ಹೃದಯಾಘಾತದಿಂದ ತೀರಿಕೊಂಡ ಶಾಸ್ತ್ರೀಜಿಯವರ ದೇಹವನ್ನು ಮಧ್ಯಾಹ್ನದ ವೇಳೆಗಾಗಲೇ ಭಾರತಕ್ಕೆ ತರಲಾಗಿತ್ತು. ಈ ಸಾವನ್ನು ಕುರಿತ ಮೊದಲ ಅನುಮಾನ ವ್ಯಕ್ತಪಡಿಸಿದ್ದು ಅಟಲ್ ಬಿಹಾರಿ ವಾಜಪೇಯಿ. ಪ್ರಧಾನಮಂತ್ರಿಯವರ ಕೋಣೆಯಲ್ಲಿ ವೈದ್ಯರನ್ನು ತುರ್ತಾಗಿ ಕರೆಸಿಕೊಳ್ಳುವ ಬಜರ್ ಇರಲಿಲ್ಲವೇಕೆ? ಶಾಸ್ತ್ರೀಜಿ ಹೃದ್ರೋಗದಿಂದ ಬಳಲುತ್ತಿದ್ದಾಗ್ಯೂ ಕೋಣೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಇರಲಿಲ್ಲ ಏಕೆ? ಎಂಬ ಪ್ರಶ್ನೆಗಳನ್ನು ಕೇಳಿದ ಅಟಲ್​ಜಿ ‘ಹಾಲು ಕೊಟ್ಟವರು ಯಾರು?’ ಎಂದು ಕೇಳುವ ಮೂಲಕ ಸರ್ಕಾರ ಬಚ್ಚಿಡಲು ಹೊರಟಿದ್ದ ಒಂದು ಸಂಗತಿಯೆಡೆಗೆ ದೇಶದ ಗಮನ ಸೆಳೆದರು. ಶಾಸ್ತ್ರೀಜಿಯವರಿಗೆ ಅಡುಗೆ ಮಾಡಲೆಂದೇ ರಾಯಭಾರಿ ಟಿ.ಎನ್. ಕೌಲರ ಅಡುಗೆಭಟ್ಟ ಮೊಹಮ್ಮದ್ ಜಾನ್​ನನ್ನು ನೇಮಿಸಲಾಗಿತ್ತು. ಇಡಿಯ ಸಾವಿನ ಪ್ರಕರಣ ಈಗೊಂದು ಹೊಸ ದಿಕ್ಕಿನತ್ತ ತನ್ನನ್ನು ತೆರೆದುಕೊಂಡಿತ್ತು. ಭಾರತ ಪಾಕಿಸ್ತಾನವನ್ನು ಸೋಲಿಸಿದ ಸೇಡನ್ನು ಮೊಹಮ್ಮದ್ ಜಾನ್ ತೀರಿಸಿಕೊಂಡುಬಿಟ್ಟಿದ್ದ ಎಂದು ಅನೇಕರು ಮಾತನಾಡಲಾರಂಭಿಸಿಬಿಟ್ಟಿದ್ದರು.

ಇತ್ತ ರಷ್ಯಾ ಬೆಂಬಲಿತ ಮುಂಬೈ ಮೂಲದ ‘ಬ್ಲಿಟ್ಜ್’ ಪತ್ರಿಕೆ ತಾಷ್ಕೆಂಟ್​ಗೆ ಹೋಗುವ ಮುನ್ನ ಶಾಸ್ತ್ರೀಜಿ ಬರೆದ ಪತ್ರವೊಂದನ್ನು ಪ್ರಕಟಿಸಿ ಈ ಒಪ್ಪಂದದ ಕುರಿತಂತೆ ಅವರಿಗಿದ್ದ ಆಸ್ಥೆಯತ್ತ ಜನರ ಗಮನ ಸೆಳೆಯಲು ಪ್ರಯತ್ನಿಸಿತ್ತು. ಅದೇ ವೇಳೆಗೆ ಸಂಸದ ಪೀಲು ಮೋದಿ ನಡೆಸುತ್ತಿದ್ದ ಪತ್ರಿಕೆಯೊಂದು ಶಾಸ್ತ್ರೀಜಿ ಈ ಪತ್ರ ಬರೆದಿದ್ದೇ ಸುಳ್ಳು ಎಂಬುದನ್ನು ದಾಖಲೆ ಸಮೇತ ಜನರ ಮುಂದಿಟ್ಟಿತ್ತು. ಈ ಸತ್ಯಾಸತ್ಯತೆಯನ್ನು ಹುಡುಕುವುದು ಬಹಳ ಕಠಿಣವೇನಾಗಿರಲಿಲ್ಲ. ಪ್ರಧಾನಮಂತ್ರಿಯೊಬ್ಬರು ಪತ್ರಿಕೆಯೊಂದಕ್ಕೆ ಪತ್ರ ಬರೆದರೆ ಅದು ಅಧಿಕೃತ ಪತ್ರವೇ ಆಗಿರುತ್ತದೆ. ಹೀಗಾಗಿ ಅದರ ಮತ್ತೊಂದು ಪ್ರತಿಯೋ ಕ್ರಮಸಂಖ್ಯೆಯೋ ಪ್ರಧಾನಮಂತ್ರಿ ಕಚೇರಿಯಲ್ಲಿ ಇರಬೇಕಾದ್ದು ಅನಿವಾರ್ಯ. ಈ ಕುರಿತಂತೆ ಗಲಾಟೆಗಳೆದ್ದು ಸಂಸದ ಅಬಿದ್ ಅಲಿ ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿದರೆ ಪ್ರಧಾನಮಂತ್ರಿ ಇಂದಿರಾ ಗಾಂಧಿ ಆಗುವುದಿಲ್ಲವೆಂದು ನಿರಾಕರಿಸಿದರಲ್ಲದೇ ಈ ಕುರಿತಂತಹ ಚರ್ಚೆಗೂ ಅವಕಾಶ ಕೊಡಲಿಲ್ಲ. ಅಲ್ಲಿಗೆ ಸರ್ಕಾರ ಇಡಿಯ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವುದು ಕಣ್ಣಿಗೆ ರಾಚುತ್ತಿತ್ತು. ಕಾಂಗ್ರೆಸ್ಸಿಗೆ ಇದು ಹೊಸತೇನಲ್ಲ. ಪ್ರಕರಣಗಳನ್ನು ಮುಚ್ಚಿ ಹಾಕುವುದರಲ್ಲಿ ಅದು ನಿಸ್ಸೀಮ. ಮುಂದಿನ ಮೂರು ವರ್ಷಗಳ ಕಾಲ ಶಾಸ್ತ್ರೀಜಿಯವರನ್ನು ಜನ ಮರೆತೇ ಬಿಟ್ಟರು. 1970ರಲ್ಲಿ ‘ಆರ್ಗನೈಸರ್’ ಮತ್ತು ‘ಇಂಡಿಯನ್ ಮಾನಿಟರ್’ ಪತ್ರಿಕೆಗಳು ಈ ಪ್ರಕರಣದ ಕುರಿತಂತೆ ವಿಸ್ತಾರವಾಗಿ ಬರೆದವು. ಆಗ ರಾಜ್ಯಸಭೆಯಲ್ಲಿ ಇಂದಿರಾರ ಬದ್ಧವೈರಿ ರಾಜನಾರಾಯಣ್, ಟಿಎನ್ ಸಿಂಗ್ ಮತ್ತು ಸರ್ದಾರ್ ವಲ್ಲಭಭಾಯ್ ಪಟೇಲರ ಪುತ್ರ ದಾಹ್ಯಾಭಾಯ್ ಈ ಪ್ರಕರಣದ ಚರ್ಚೆ ಆರಂಭಿಸಿದರು. ಪ್ರಧಾನಮಂತ್ರಿಯೊಬ್ಬರ ಸಾವಿನ ಕುರಿತ ಷಡ್ಯಂತ್ರದ ಚರ್ಚೆಗೆ ಸರ್ಕಾರ ಕೊಟ್ಟಿದ್ದು ಅರ್ಧ ಗಂಟೆ ಮಾತ್ರ. ಈ ಅರ್ಧಗಂಟೆಯೊಳಗೆ ಹೊರ ಬಂದ ಸ್ಪೋಟಕ ಮಾಹಿತಿಗಳು ದೇಶವನ್ನೇ ಬೆಚ್ಚಿ ಬೀಳಿಸಿದ್ದವು. ಶಾಸ್ತ್ರೀಜಿಯವರ ಸಾವಿನ ಹೊತ್ತಿನಲ್ಲಿ ಅವರ ಕೋಣೆಯಲ್ಲಿ ಮೂರು ದೂರವಾಣಿಗಳಿದ್ದು ಅದರಲ್ಲಿ ಒಂದು ಸಹಾಯಕರನ್ನು, ವೈದ್ಯರನ್ನು ತುರ್ತಾಗಿ ಕರೆಯಬಲ್ಲ ಆದೇಶವುಳ್ಳ ಫೋನಾಗಿತ್ತು ಎಂದಿತ್ತು ಸರ್ಕಾರ. ಆದರೆ ಅವರ ಕೋಣೆಯಲ್ಲಿ ಆ ರೀತಿಯ ವ್ಯವಸ್ಥೆಯೇ ಇರಲಿಲ್ಲವೆಂದು ಪ್ರತಿಪಕ್ಷಗಳು ಬೆಳಕಿಗೆ ತಂದವು. ಶಾಸ್ತ್ರೀಜಿ ಸಾವಿನ ವೇಳೆಯಲ್ಲಿ ಅಲ್ಲಿದ್ದ ರಷ್ಯಾದ ವೈದ್ಯೆ ಸಾವಿನ ವರದಿಗೆ ಸಹಿಯನ್ನೇ ಮಾಡಿರಲಿಲ್ಲವೆಂಬ ಮತ್ತೊಂದು ಮಾಹಿತಿ ಬಹಿರಂಗಗೊಳಿಸಲಾಯಿತು. ಇತರ ಭಾರತೀಯರು ಉಳಿದುಕೊಂಡ ಹೋಟೆಲ್ಲಿನಲ್ಲಿ ಶಾಸ್ತ್ರೀಜಿಯವರನ್ನಿಡದೇ ಪ್ರತ್ಯೇಕ ವಿಲ್ಲಾದ ವ್ಯವಸ್ಥೆಯನ್ನು ಅವರಿಗೆ ಮಾಡಲಾಗಿತ್ತು. ಈ ಕುರಿತಂತೆ ಪ್ರತಿಪಕ್ಷಗಳು ಸ್ಪಷ್ಟೀಕರಣ ಬಯಸಿದವಲ್ಲದೇ ಶಾಸ್ತ್ರೀಜಿ ದೇಹ ಭಾರತಕ್ಕೆ ಬರುವ ವೇಳೆಗೆ ನೀಲಿಬಣ್ಣಕ್ಕೆ ತಿರುಗಿದ್ದೇಕೆ? ರಷ್ಯಾ ಪೋಸ್ಟ್​ಮಾರ್ಟಮ್ ಮಾಡುತ್ತೇನೆಂದರೂ ಭಾರತ ಒಪ್ಪದಿರಲು ಕಾರಣವೇನು? ಎಂಬ ಪ್ರಶ್ನೆಗಳೂ ಎದ್ದವು. ತಡಬಡಾಯಿಸಿದ ಸರ್ಕಾರ ಸಮರ್ಥ ಉತ್ತರಗಳನ್ನು ಕೊಡದೇ ಅಲ್ಲಿಯೇ ತೇಪೆ ಹಚ್ಚಿ ಶಾಂತವಾಯ್ತು. ಆದರೆ ಎಲ್ಲ ಮುಗಿಯಿತು ಎನ್ನುವಾಗಲೇ ಹಿಂದಿ ವಾರಪತ್ರಿಕೆ ‘ಧರ್ಮಯುಗ್’ನಲ್ಲಿ ಶಾಸ್ತ್ರಿಯವರ ಧರ್ಮಪತ್ನಿ ಲಲಿತಾ ಶಾಸ್ತ್ರಿಯವರ ಸಂದರ್ಶನ ಪ್ರಕಟವಾಯ್ತು. ಆ ಸಂದರ್ಶನದ ಮೂಲಕ ಇನ್ನೊಂದಷ್ಟು ಸತ್ಯಗಳು ಬೆಳಕಿಗೆ ಬಂದವು. ಹಾಲು ಕುಡಿದ ನಂತರ ಮನೆಗೆ ಕರೆ ಮಾಡಿದ ಶಾಸ್ತ್ರೀಜಿ ಲವಲವಿಕೆಯಿಂದಲೇ ಇದ್ದರು. ಆದರೆ ಫ್ಲಾಸ್ಕಿನಿಂದ ಬಿಸಿನೀರನ್ನು ಕುಡಿದ ನಂತರ ಅವರ ತಲೆ ಭಾರವಾದಂತಾಗಿ ಮಲಗಿಕೊಳ್ಳಬೇಕೆನಿಸಿತ್ತು. ಹೀಗಾಗಿ ನೀರಿನಲ್ಲಿ ಏನೋ ಸಮಸ್ಯೆಯಿತ್ತೆಂಬುದು ಲಲಿತಾರ ಆರೋಪವಾಗಿತ್ತು. ಆ ಆರೋಪಕ್ಕೆ ಪೂರಕವಾಗಿ ಅವರು ಶಾಸ್ತ್ರಿಯವರ ನೀರು ಕುಡಿಯುವ ಫ್ಲಾಸ್ಕ್ ಮತ್ತು ಡೈರಿ ಮತ್ತೆ ಮರಳಿ ಬರಲೇ ಇಲ್ಲವೆಂಬ ಅಚ್ಚರಿಯ ಮಾಹಿತಿ ಹೊರಹಾಕಿದರು. ಅಷ್ಟೇ ಅಲ್ಲ. ಅವರ ದೇಹ ಮರಳಿ ಬಂದಾಗ ಒಂದಷ್ಟು ಅಧಿಕಾರಿಗಳು ಸುತ್ತಲೂ ನಿಂತು ಮನೆಯವರನ್ನೂ ಬಳಿಗೆ ಬಿಡಲಿಲ್ಲ. ಕೊನೆಗೆ ದೇಹದ ಮೇಲೆ ನೀಲಿ ಬಣ್ಣದ ಗುರುತುಗಳಿವೆ ಎಂದು ಆರೋಪಿಸಿದಾಗ ತೇಯ್ದ ಗಂಧವನ್ನು ತಂದು ಅವರ ದೇಹಕ್ಕೆ ಮೆತ್ತುವ ಪ್ರಯತ್ನ ಮಾಡಲಾಗಿತ್ತು ಎಂದರು ಲಲಿತಾಜಿ. ಶಾಸ್ತ್ರಿಯವರ ಕುತ್ತಿಗೆಯ ಹಿಂಭಾಗದಲ್ಲಿ ಮತ್ತು ಹೊಟ್ಟೆಯ ಕೆಳಭಾಗದಲ್ಲಿ ಕತ್ತರಿಸಿದ ಗುರುತುಗಳಿದ್ದದ್ದನ್ನು ಬಹಿರಂಗಪಡಿಸಿದ್ದರು ಅವರು. ಒಟ್ಟಾರೆ ಇವೆಲ್ಲವೂ ದೇಶವನ್ನೇ ಕಂಪಿಸಬಲ್ಲ ಸತ್ಯಗಳಾಗಿದ್ದವು.

ದಾಹ್ಯಾಭಾಯ್ ಪಟೇಲ್ ಈ ಹೊತ್ತಲ್ಲೇ ‘ಶಾಸ್ತ್ರಿ ಕೊಲೆಯಾದರಾ?’ ಎಂಬ ಸಣ್ಣ ಹೊತ್ತಗೆ ಪ್ರಕಟಿಸಿ ಅದುವರೆಗೂ ಹೊರಬರದಿದ್ದ ಒಂದೆರಡು ಸಂಗತಿಗಳನ್ನು ಹಂಚಿಕೊಂಡರು. ರಷ್ಯಾದ ರೇಡಿಯೊ, ಅಲ್ಲಿನ ವೈದ್ಯೆ ಶಾಸ್ತ್ರಿಯವರ ಚಿಕಿತ್ಸೆಗೆ ಹೋಗುವ ಮುನ್ನವೇ ಅವರ ಅಂತ್ಯವಾಗಿತ್ತು ಎಂಬುದನ್ನು ಹೇಳಿದರೆ ಭಾರತ ಸರ್ಕಾರ ಆಕೆ ಮತ್ತು ಅನೇಕ ವೈದ್ಯರು ಅಲ್ಲಿಗೆ ಬಂದು ಪ್ರಯಾಸಪಟ್ಟ ನಂತರವೂ ಶಾಸ್ತ್ರೀಜಿಯನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದಿತ್ತು. ಶಾಸ್ತ್ರಿಯವರ ದೇಹ ಅಗತ್ಯಕ್ಕಿಂತ ಹೆಚ್ಚು ಊದಿಕೊಂಡಿದ್ದು ಅನೇಕರು ಹುಬ್ಬೇರಿಸಲು ಕಾರಣವಾಗಿತ್ತು. ಮೃತವರದಿಯಲ್ಲಿ ರಷ್ಯಾದ ಭಾಷೆಯ ವರದಿಗೂ ಇಂಗ್ಲಿಷ್ ಅನುವಾದಿತ ವರದಿಗೂ ಭಿನ್ನತೆಯಿದ್ದುದಷ್ಟೇ ಅಲ್ಲ ಎರಡಕ್ಕೂ ಸಹಿ ಮಾಡಿದ ವೈದ್ಯರು ಬೇರೆಯವರೇ ಇದ್ದರು. ಶಾಸ್ತ್ರೀಜಿಯನ್ನು ಉಳಿಸುವ ವ್ಯವಸ್ಥೆ ಸೂಕ್ತವಾದುದಲ್ಲವೆಂದೂ ಕೆಲವು ಗುರುತೇ ಇಲ್ಲದ ವ್ಯಕ್ತಿಗಳು ಅಲ್ಲಿ ಅಡ್ಡಾಡುತ್ತಿದ್ದಾರೆಂದೂ ಶಾಸ್ತ್ರಿಯವರ ರಕ್ಷಣಾ ಅಧಿಕಾರಿ ಜಿ.ಸಿ.ದತ್ತ ಕಳಿಸಿದ ತುರ್ತು ಸಂದೇಶವನ್ನು ಅವಗಣನೆ ಮಾಡಲಾಗಿತ್ತು. ಇವೆಲ್ಲದರ ಚರ್ಚೆಗೆ ಸರ್ಕಾರ ಅವಕಾಶವನ್ನೇ ಕೊಡದೆ ಅಧಿವೇಶನವನ್ನೇ ಮುಗಿಸಿಬಿಟ್ಟಿತು.

ಈ ಹೊತ್ತಿನಲ್ಲಿಯೇ ಟಿ.ಎನ್. ಕೌಲ್ ತಮ್ಮ ಕೃತಿಯಲ್ಲಿ ಶಾಸ್ತ್ರಿಯವರದ್ದು ಅಕಾಲಮೃತ್ಯುವೆಂದರೆ, ವಿದೇಶಾಂಗ ಕಾರ್ಯದರ್ಶಿ ಸಿ.ಎಸ್. ಝಾ ತಾಷ್ಕೆಂಟ್ ಒಪ್ಪಂದಕ್ಕೆ ಭಾರತೀಯರು ನೀಡಿದ ಕಠಿಣ ಪ್ರತಿಕ್ರಿಯೆಯಿಂದ ಭಾರವಾದ ಶಾಸ್ತ್ರೀಜಿ ಹೃದಯಾಘಾತಕ್ಕೆ ಒಳಗಾದರು ಎಂದಿದ್ದರು. ಎಲ್.ಪಿ. ಸಿಂಗ್ ಇದು ಸಹಜ ಸಾವು ಎಂಬ ತೀರ್ಪನ್ನು ತಾವೇ ಕೊಟ್ಟುಬಿಟ್ಟರು. ಮುಂದಿನ ಮೂರು ದಶಕಗಳ ಕಾಲ ಈ ವಿಚಾರ ಜನರ ಮನಸ್ಸಿನಲ್ಲಿ ಹಾಗೆಯೇ ಉಳಿದಿತ್ತೇ ಹೊರತು ನಾಯಕರೆನಿಸಿಕೊಂಡವರು ಚರ್ಚೆಯ ಗೋಜಿಗೇ ಹೋಗಲಿಲ್ಲ. 1998 ರಲ್ಲಿ ‘ದ ಟೆಲಿಗ್ರಾಫ್’ ಪತ್ರಿಕೆ ಒಂದು ವರದಿಯನ್ನು ಹೊರಹಾಕಿತು. ಶಾಸ್ತ್ರಿಯವರು ತೀರಿಕೊಂಡಿದ್ದಾಗ ಮೊಹಮ್ಮದ್ ಜಾನ್ ಮತ್ತು ಅಡುಗೆಭಟ್ಟನಾಗಿದ್ದ ಅಹಮದ್ ಸತ್ತಾರೊವ್​ವನ್ನು ರಷ್ಯಾದ ಗೂಢಚಾರ ಇಲಾಖೆ ಬಂಧಿಸಿ ಶಾಸ್ತ್ರಿಯವರಿಗೆ ವಿಷಪ್ರಾಶನ ಮಾಡಿದ್ದುದರ ಕುರಿತಂತೆ ವಿಚಾರಣೆ ನಡೆಸಿದ ಸಂಗತಿಯನ್ನು ರಷ್ಯಾದ ಪತ್ರಿಕೆಯೊಂದು ವಿವರವಾಗಿ ಪ್ರಕಟಿಸಿತ್ತು. ಹಾಗೆ ನೋಡಿದರೆ ಶಾಸ್ತ್ರಿಯವರ ಸಾವಿನ ರಾಜಕಾರಣ ಮರುಹುಟ್ಟು ಪಡೆದಿದ್ದು ಆಗಲೇ.

ಶಾಸ್ತ್ರಿಯವರ ಸಾವಿನಿಂದ ಲಾಭವಿದ್ದುದಾದರೂ ಯಾರಿಗೆ? ಮೊದಲನೆಯದಾಗಿ ಶಾಸ್ತ್ರೀಜಿ ನೆಹರುರಷ್ಟು ಸಮರ್ಥರಲ್ಲವೆಂದು ದೇಶದ ಜನತೆ ಅವರನ್ನು ತಿರಸ್ಕರಿಸಿಬಿಡುತ್ತಾರೆಂದು ಕಾಯುತ್ತ ಕುಳಿತಿದ್ದ ಕಾಂಗ್ರೆಸ್ಸಿನ ಪಟ್ಟಭದ್ರ ಹಿತಾಸಕ್ತಿಗಳಿಗೆ ಪಾಕಿಸ್ತಾನ ಯುದ್ಧದಲ್ಲಿ ಶಾಸ್ತ್ರಿಯವರ ಗೆಲುವು ಆಘಾತ ತಂದಿತ್ತು. ಶಾಸ್ತ್ರಿಯವರೂ ಅಷ್ಟೇ, ನೆಹರು ಮಗಳೆಂಬ ಕಾರಣಕ್ಕೆ ಇಂದಿರಾಗೆ ಯಾವ ವಿಶೇಷ ಸವಲತ್ತುಗಳನ್ನೂ ಕೊಡಲು ಒಪ್ಪಿರಲಿಲ್ಲ. ಪ್ರಮುಖ ಖಾತೆಯನ್ನೂ ಕೂಡ ಕೊಡದೇ ಆಕೆಯನ್ನು ಭಿನ್ನ ಭಿನ್ನ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿ ಸಮಾಧಾನ ಪಡಿಸಿಬಿಡುತ್ತಿದ್ದರು. ಬೇಸತ್ತ ಇಂದಿರಾ ತಾನು ಇಂಗ್ಲೆಂಡಿಗೆ ಹೋಗಿ ನೆಲೆಸಿಬಿಡುವುದಾಗಿ ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದರಂತೆ. ಈ ವೇಳೆಗೆ ನೆಹರು ಆಪ್ತವಲಯದಲ್ಲಿದ್ದು ಹಡಗಿನ ವಹಿವಾಟಿನ ಮೂಲಕ ಅಪಾರ ಹಗರಣಗಳಿಗೆ ಕಾರಣನಾಗಿದ್ದ ಧರ್ಮತೇಜ ಎಂಬ ವ್ಯಾಪಾರಿಯನ್ನು ಶಾಸ್ತ್ರೀಜಿ ಕರೆದು ಛೀಮಾರಿ ಹಾಕಿದ್ದಲ್ಲದೇ ವಿಚಾರಣೆ ನಡೆಸುವುದಾಗಿ ಎಚ್ಚರಿಕೆ ಕೊಟ್ಟಿದ್ದರು. ತಾಷ್ಕೆಂಟ್ ಒಪ್ಪಂದಕ್ಕೆ ಕೆಲವು ದಿನಗಳ ಮುನ್ನ ಆತ ಮುಂಬೈಯಿಂದ ಮಾಸ್ಕೊಗೆ ಓಡಿಹೋಗಿದ್ದ. ಅಲ್ಲಿ ಒಂದು ವಾರ ಕಾಲ ಟಿ.ಎನ್. ಕೌಲರ ಜೊತೆಗಿದ್ದ. ನಂತರ ತಾಷ್ಕೆಂಟ್​ಗೆ ಹೋಗಿ ಅಲ್ಲಿಯೇ ಉಳಿದ. ಶಾಸ್ತ್ರಿ ತೀರಿಕೊಂಡ ನಂತರ ಭಾರತಕ್ಕೆ ಮರಳಿ ಬಂದ. ಸಂಸತ್ತಿನಲ್ಲಿ ಧರ್ಮತೇಜನ ಕುರಿತಂತೆಯೂ ಸಾಕಷ್ಟು ಚರ್ಚೆಗಳಾದವು. 1977 ರಲ್ಲಿ ಎಲ್ಲ ಮಾಹಿತಿಯನ್ನೂ ದೇಶದ ಮುಂದಿಡಬಲ್ಲ ಏಕೈಕ ಕೊಂಡಿಯಾಗಿದ್ದ ಶಾಸ್ತ್ರಿಯವರ ವೈದ್ಯರು ಅಪಘಾತದಲ್ಲಿ ತೀರಿಕೊಂಡರು. ಲಾರಿಯೊಂದು ಅವರ ಕಾರಿಗೆ ಹಿಂದಿನಿಂದ ಬಡಿಯಿತು. ಏನಾಗಿದೆ ಎಂದು ನೋಡಲು ಕೆಳಗಿಳಿದ ವೈದ್ಯರಿಗೆ ಅದೇ ಲಾರಿ ಮತ್ತೊಮ್ಮೆ ಗುದ್ದಿತು. ಅವರು ಸ್ಥಳದಲ್ಲೇ ತೀರಿಕೊಂಡರು. ತನ್ನ ತಲೆಯ ಮೇಲಿರುವ ಭಾರವನ್ನೆಲ್ಲಾ ಕೆಳಗಿಳಿಸಿಬಿಡುತ್ತೇನೆ ಎಂದು ಲಲಿತಾ ಶಾಸ್ತ್ರಿಯವರಿಗೆ ಮಾತುಕೊಟ್ಟು ಅವರ ಮನೆಯಿಂದ ಹೊರಟ ಶಾಸ್ತ್ರಿಯವರ ಆಪ್ತ ಸಹಾಯಕ ರಾಮನಾಥ ಸ್ವಲ್ಪ ದೂರ ಹೋಗುವಷ್ಟರಲ್ಲಿ ಅಪಘಾತಕ್ಕೊಳಗಾದ. ಯಾರ ಕಣ್ಣಿಗೂ ಬೀಳದೇ ಶಾಸ್ತ್ರಿಯವರ ಕನ್ನಡಕದ ಡಬ್ಬಿಯಲ್ಲಿ ಉಳಿದಿದ್ದ ‘ನನಗೆ ಮೋಸವಾಗಿಹೋಯ್ತು’ ಎನ್ನುವ ಚೀಟಿಯನ್ನು ಲಲಿತಾ ಶಾಸ್ತ್ರಿ ಅದೊಮ್ಮೆ ಅಗಿದು ನುಂಗಿಬಿಟ್ಟರಂತೆ. ಅವರನ್ನು ಭೇಟಿ ಮಾಡಲು ಬಂದ ವ್ಯಕ್ತಿಯೊಬ್ಬ ‘ನಿಮ್ಮ ಮನೆಯವರ ಒಳಿತಿಗಾಗಿ ಕೆಲವು ಗುಟ್ಟು ಮುಚ್ಚಿಡುವುದೊಳಿತು’ ಎಂದು ಹೇಳಿ ಹೋದುದರ ಪರಿಣಾಮ ಅದು.

ಶಾಸ್ತ್ರಿಯವರ ಸಾವಿಗೆ ಕಾರಣರಾರೋ ಗೊತ್ತಿಲ್ಲ. ಆದರೆ ಅವರ ನಂತರ ರಷ್ಯಾಕ್ಕೆ ಬಲು ಆಪ್ತವಾಗಿದ್ದ ಇಂದಿರಾ ಅಧಿಕಾರಕ್ಕೇರಿದರು. ನೆಹರು ಪರಿವಾರ ಮತ್ತೆ ಪ್ರಧಾನಿಗಾದಿಯಲ್ಲಿ ಬಲವಾಯ್ತು. ಶಾಸ್ತ್ರಿ ನೇಪಥ್ಯಕ್ಕೆ ಸರಿದುಬಿಟ್ಟರು.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *

Back To Top