More

    ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಕಾಸದ ಆತುರ!

    ಕಾಶ್ಮೀರದ ವಿಷಯವನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಡುವೆ ಚರ್ಚೆಗೆಂದು ಪಾಕಿಸ್ತಾನ ತಂದಾಗ ಭಾರತ ಆತ್ಮವಿಶ್ವಾಸದಿಂದ ಬೀಗುತ್ತಿತ್ತು. ಏಕೆಂದರೆ ಪಾಕಿಸ್ತಾನದ ಪರವಾಗಿ ಅಲ್ಲಿ ಮಾತನಾಡಿದ್ದು ಚೀನಾ ಮಾತ್ರ. ಉಳಿದೆಲ್ಲ ರಾಷ್ಟ್ರಗಳೂ ಭಾರತದ ಪರವಾಗಿ ನಿಂತು ಆಂತರಿಕ ವಿಷಯದ ಕುರಿತಂತೆ ರ್ಚಚಿಸುವುದು ಒಳಿತಲ್ಲ ಎಂದುಬಿಟ್ಟವು.

    ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಕಾಸದ ಆತುರ!ಐದು ವರ್ಷ ನರೇಂದ್ರ ಮೋದಿ ವಿದೇಶ ಪ್ರವಾಸ ಮಾಡುವಾಗ ಎಲ್ಲರೂ ಆಡಿಕೊಳ್ಳುತ್ತಿದ್ದರು. ಆದರೆ ಅವರ ಆ ಜಾಗತಿಕ ಚರಿಷ್ಮಾ ಈಗ ಫಲಕೊಡಲಾರಂಭಿಸಿದೆ. ಜವಾಹರ್​ಲಾಲ್ ನೆಹರೂ ನಂತರ ಹೀಗೆ ಜಾಗತಿಕ ಮಟ್ಟದಲ್ಲಿ ಮೋದಿಯವರಷ್ಟು ಹೆಸರು ಮಾಡಿದವರು ಹೆಚ್ಚು-ಕಡಿಮೆ ಇಲ್ಲವೇ ಇಲ್ಲ. ನೆಹರೂ ಹೆಸರು ಗಳಿಸಿದ್ದು ನಿಜವಾದರೂ, ಅದನ್ನವರು ಭಾರತದ ಪರವಾದ ಜಾಗತಿಕ ವಾದವಾಗಿ ರೂಪಿಸುವಲ್ಲಿ ಸೋತುಹೋದರು. ವಿಶ್ವಸಂಸ್ಥೆ ಎದುರು ಕಾಶ್ಮೀರದ ಸಮಸ್ಯೆಯನ್ನು ಧಾವಂತಕ್ಕೆ ಬಿದ್ದು ಒಯ್ದಾಗ ಪಾಕಿಸ್ತಾನದ ನಾಯಕರ ಪ್ರಭಾವ ಜಾಗತಿಕ ಮಟ್ಟದಲ್ಲಿ ಏನೂ ಇರಲೇ ಇಲ್ಲ. ಆದರೂ ವಿಶ್ವಸಂಸ್ಥೆಯ ನಿರ್ಣಯ ನಮಗೆ ಪೂರಕವಾಗಿ ಬರಲಿಲ್ಲ. ಅಮೆರಿಕ ಮುಲಾಜಿಲ್ಲದೆ ಪಾಕಿಸ್ತಾನದ ಪರವಾಗಿ ನಿಂತಿತ್ತು. ರಷ್ಯಾ ನಮ್ಮೊಂದಿಗೆ ಇದ್ದಿದ್ದು ನಿಜವಾದರೂ ಈ ಸಂಬಂಧದಲ್ಲಿ ನಾವು ಬಾಗಿದ್ದೇ ಹೆಚ್ಚು. ಚೀನಾ ಯಾವ ಪರಿ ಸಂಬಂಧವನ್ನು ನಮ್ಮೊಂದಿಗೆ ಇಟ್ಟುಕೊಂಡಿತ್ತೆಂದರೆ ಕೈಲಾಗದ ದೇಶವೆಂಬಂತೆ ನಮ್ಮನ್ನು ನೋಡುತ್ತಿತ್ತು. ಇನ್ನು ಇಂಗ್ಲೆಂಡು, ಫ್ರಾನ್ಸ್, ಜರ್ಮನಿ ಮೊದಲಾದ ರಾಷ್ಟ್ರಗಳು ನಮ್ಮ ಬಗ್ಗೆ ಎಂದಿಗೂ ತಲೆಕೆಡಿಸಿಕೊಳ್ಳುತ್ತಲೇ ಇರಲಿಲ್ಲ. ಪಾಕಿಸ್ತಾನದ ಬಗ್ಗೆ ಅವರಿಗೆಲ್ಲ ವಿಶೇಷವಾದ ಒಲವಿತ್ತು. ಅದಕ್ಕೆ ಒಂದು ಕಾರಣ ಅಮೆರಿಕವೂ ಆಗಿದ್ದಿರಬಹುದು. ರಷ್ಯಾವನ್ನು ಮಟ್ಟಹಾಕಲು ಅಮೆರಿಕಕ್ಕೆ ಪಾಕಿಸ್ತಾನದ ಬೆಂಬಲ ಬೇಕಿತ್ತು, ಮತ್ತು ಆರ್ಥಿಕ ಶಕ್ತಿಯಾಗಿದ್ದ ಅಮೆರಿಕದ ಬೆಂಬಲ ಜಗತ್ತಿಗೆ!

    ಭಾರತದ ವಿದೇಶಾಂಗ ನೀತಿ ಅದೆಷ್ಟು ವಿಚಿತ್ರವಾಗಿತ್ತೆಂದರೆ ರಷ್ಯಾದೊಂದಿಗೆ ಸ್ನೇಹವನ್ನು ಉಳಿಸಿಕೊಳ್ಳಲಿಕ್ಕಾಗಿ ಜಗತ್ತಿನೊಂದಿಗೇ ವಿರೋಧ ಕಟ್ಟಿಕೊಳ್ಳಲು ತಯಾರಾಗಿತ್ತು. ಕಾಲ ಕಳೆದಂತೆ ವಿದೇಶಾಂಗ ನೀತಿಯಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದದ್ದು ನಿಜವಾದರೂ ಅದಕ್ಕೊಂದು ಸ್ವರೂಪ ಕೊಡಲೆತ್ನಿಸಿದ್ದು ಅಟಲ್​ಜೀಯವರೇ. ಆದರೆ ಅವರ ಕಾಲದಲ್ಲೂ ನಮ್ಮ ಮೇಲಾಗುವ ಭಯೋತ್ಪಾದಕ ದಾಳಿಗಳಿಗೆ, ಹೈಜಾಕ್ ಪ್ರಕರಣಗಳಿಗೆ ಜಗತ್ತಿನ ಅನುಕಂಪವನ್ನು ಗಿಟ್ಟಿಸುವಲ್ಲಿ ಅವರು ಸೋತರು. ಪಾಕಿಸ್ತಾನಕ್ಕೆ ವಿಶ್ವದ ವೇದಿಕೆಯಲ್ಲಿ ಎಂದಿಗೂ ಯಾರೂ ಛೀಮಾರಿ ಹಾಕುವ ಕೆಲಸ ಮಾಡಲೇ ಇಲ್ಲ. ಛಿದ್ರಗೊಂಡಿದ್ದ ರಷ್ಯಾ ನಮ್ಮ ಸಹಕಾರಕ್ಕೆ ಬರುವುದೂ ಅಷ್ಟರಲ್ಲೇ ಇತ್ತು. ಮನಮೋಹನ್ ಸಿಂಗರ ಅವಧಿಯಲ್ಲಂತೂ ಭಾರತವೆಂದರೆ ಭ್ರಷ್ಟತೆಯ ಆಗರವಾಗಿ ಎಲ್ಲರೆದುರು ಆಡಿಕೊಳ್ಳುವ ರಾಷ್ಟ್ರವಾಗಿ ಮಾರ್ಪಟ್ಟಿದ್ದೆವು. ನಮಗೆ ಗೊತ್ತಿಲ್ಲದಿರಬಹುದು ಆದರೆ ಜಗತ್ತಿನ ಗೂಢಚಾರ ಸಂಸ್ಥೆಗಳಿಗೆ ಇಲ್ಲಿನ ಭ್ರಷ್ಟ ರಾಜಕಾರಣಿಗಳೇ ಭಯೋತ್ಪಾದನೆಗೂ ಕುಮ್ಮಕ್ಕು ಕೊಡುತ್ತಿರುವುದು ಎನ್ನುವುದು ಗೊತ್ತಿರದ ಸಂಗತಿಯೇನಲ್ಲ.

    ಇತ್ತೀಚೆಗೆ ತಾನೇ ಕಾಶ್ಮೀರದಲ್ಲಿ ಪೊಲೀಸ್ ಅಧಿಕಾರಿಯಾಗಿರುವ ದೇವೀಂದರ್ ಸಿಂಗ್ ಭಯೋತ್ಪಾದಕರನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುವಾಗ ಸಿಕ್ಕುಬಿದ್ದ. ಹಾಗಂತ ಇದೇನು ಹೊಸ ಸಂಗತಿಯಾಗಿರಲಿಲ್ಲ. ಅನೇಕ ಬಾರಿ ಆತನ ವಿರುದ್ಧ ದೂರುಗಳು ದಾಖಲಾಗಿದ್ದರೂ ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಂಡಿರಲಿಲ್ಲ. ಉಗ್ರ ಅಫ್ಜಲ್​ನೊಂದಿಗೆ ಆತನಿಗೆ ನೇರಸಂಪರ್ಕ ಇದ್ದದ್ದು ಈಗ ಸಾಬೀತಾಗಿದೆ! ಇಷ್ಟೆಲ್ಲ ಭಯೋತ್ಪಾದಕ ಕೃತ್ಯಗಳಿಗೆ ಪೊಲೀಸ್ ಅಧಿಕಾರಿಯೊಬ್ಬ ಬೆಂಬಲವಾಗಿ ನಿಂತಿದ್ದನೆಂದರೆ ಆತನ ರಕ್ಷಣೆಗೆ ನಿಂತ ಆ ರಾಜಕಾರಣಿ ಯಾರೆಂಬುದು ತನಿಖೆಯಾಗಬೇಕಲ್ಲವೇ? ಇದನ್ನೆಲ್ಲ ಹತ್ತಿರದಿಂದ ಗಮನಿಸುತ್ತಿದ್ದ ಜಗತ್ತಿನ ರಾಷ್ಟ್ರಗಳು ಮುಸಿ-ಮುಸಿ ನಗುತ್ತಿರಲು ಸಾಕು. ಪಕ್ಕದಲ್ಲೇ ಇದ್ದ ಚೀನಾ ಅಂತೂ ಯುದ್ಧವನ್ನೇ ಮಾಡದೆ ಭಾರತದ ಮೇಲೆ ಜಯ ಸಾಧಿಸಿಬಿಟ್ಟಿತ್ತು. ಪಾಕಿಸ್ತಾನವನ್ನು ಬಳಸಿಕೊಂಡು ಛದ್ಮಯುದ್ಧದ ಮೂಲಕ ಭಾರತದ ರಾಜಕಾರಣಿಗಳ ಸಹಕಾರದೊಂದಿಗೆ ಭಾರತವನ್ನೇ ಹೈರಾಣುಗೊಳಿಸುತ್ತಿತ್ತು ಚೀನಾ. ಬಲವಾದ ಚೀನಾದೆದುರಿಗೆ ಸೆಡ್ಡು ಹೊಡೆಯುವ ತಾಕತ್ತು ಭಾರತಕ್ಕಿಲ್ಲವಾದ್ದರಿಂದ ಏಷ್ಯಾದ ಇತರೆ ರಾಷ್ಟ್ರಗಳು ಭಾರತದ ಬೆಂಬಲಕ್ಕೆ ನಿಲ್ಲಲು ಹಿಂದೆ ಮುಂದೆ ನೋಡುತ್ತಿದ್ದವು. ಆಗ ಬಂದವರು ನರೇಂದ್ರ ಮೋದಿ!

    ವಿದೇಶಾಂಗ ನೀತಿಯಲ್ಲಿ ಬದಲಾವಣೆ ತರುವುದಿರಲಿ ಈ ನೀತಿಯ ನಿರೂಪಣೆಯನ್ನೂ ಕೂಡ ಹಿಂದಿನ ಸರ್ಕಾರಗಳು ಸಮರ್ಪಕವಾಗಿ ಮಾಡಿರಲಿಲ್ಲ. ರಾಷ್ಟ್ರವೊಂದಕ್ಕೆ ಶಾಶ್ವತ ಶತ್ರುವಾಗಲೀ ಮಿತ್ರನಾಗಲೀ ಇರುವುದಿಲ್ಲ. ರಾಷ್ಟ್ರಹಿತಕ್ಕೆ ಒಳಿತಾದ್ದನ್ನು ಮಾಡುತ್ತ ಹೋಗುವುದಷ್ಟೇ ಕೆಲಸ. ನರೇಂದ್ರ ಮೋದಿ ಈ ನೀತಿಯನ್ನೇ ಮುಂದಿರಿಸಿಕೊಂಡು ಎಲ್ಲ ರಾಷ್ಟ್ರಗಳೊಂದಿಗೆ ಸಂಪರ್ಕವನ್ನು ಬೆಸೆದುಕೊಂಡರು. ಆ ರಾಷ್ಟ್ರಗಳ ಪ್ರಮುಖರೊಂದಿಗೆ ವೈಯಕ್ತಿಕವಾದ ಸ್ನೇಹವನ್ನು ಗಟ್ಟಿಗೊಳಿಸಿಕೊಂಡರು. ಅದರ ಪರಿಣಾಮ ಭಾರತದ ಪರವಾದ ನಿಲುವು ಜಗತ್ತಿನ ಎಲ್ಲೆಡೆ ಕಂಡುಬರಲಾರಂಭಿಸಿತು. ನಿಧಾನವಾಗಿ ಎಲ್ಲ ಜಾಗತಿಕ ವೇದಿಕೆಗಳಲ್ಲೂ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಸಾಬೀತುಪಡಿಸಿದ ಕೇಂದ್ರ ಸರ್ಕಾರ ಪಾಕಿಸ್ತಾನದ ನೆಲದಿಂದ ಭಯೋತ್ಪಾದನೆ ನಡೆಯುವುದನ್ನು ಕಳೆದ ಐದು ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ತಡೆದಿದೆ. ಇದರ ನೇರ ಪರಿಣಾಮ ಚೀನಾದ ಮೇಲೆ. ಭಾರತವನ್ನು ನಿಯಂತ್ರಿಸಲು ಪಾಕಿಸ್ತಾನವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದ ಚೀನಾ ವಿಲಿವಿಲಿ ಒದ್ದಾಡಿತು.

    ಭಯೋತ್ಪಾದಕ ಕೃತ್ಯಗಳಿಂದ ಭಾರತ ನರಳದೆ ಹೋದರೆ ಅಭಿವೃದ್ಧಿಯ ಪಥದಲ್ಲಿ ಭಾರತ ಸಾಗುವುದನ್ನು ತಡೆಯುವುದು ಸಾಧ್ಯವೇ ಇಲ್ಲವೆಂದು ಅದಕ್ಕೆ ಗೊತ್ತಿರದ ಸಂಗತಿಯೇನಲ್ಲ. ಮತ್ತು ಈ ಹಾದಿಯಲ್ಲಿ ಚೀನಾವನ್ನು ಹಿಂದಿಕ್ಕಿ ಮುನ್ನಡೆಯುವ ಸಾಮರ್ಥ್ಯ ಇರುವುದು ಭಾರತಕ್ಕೆ ಮಾತ್ರ ಎಂಬುದು ಅದಕ್ಕೆ ಗೊತ್ತಿರುವ ಸಂಗತಿಯೇ! ಇದಕ್ಕೆ ಪೂರಕವಾಗಿ ಮೋದಿ ಭಾರತದ ಸೇನೆಯನ್ನು ಬಲಗೊಳಿಸಿದರು. ಆಧುನಿಕ ಶಸ್ತ್ರಾಸ್ತ್ರಗಳನ್ನು ತರಿಸುವ ಒಪ್ಪಂದ ಮಾಡಿಕೊಂಡರು. ವಿಶ್ವಸಂಸ್ಥೆಯಲ್ಲಿ ಚೀನಾದ ದನಿ ಹೆಚ್ಚಾಗದಂತೆ ಭಿನ್ನ ಭಿನ್ನ ಮಾರ್ಗಗಳ ಮೂಲಕ ಪ್ರಯತ್ನಿಸಿದರು. ಹೀಗಾಗಿಯೇ ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆರವುಗೊಳಿಸಿದ್ದನ್ನು ಮೊನ್ನೆ ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಪ್ರಶ್ನಿಸಿ ಮುಖಭಂಗಕ್ಕೀಡಾಗಿದ್ದು.

    ಹೌದು. ಕಾಶ್ಮೀರದ ವಿಷಯವನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಡುವೆ ಚರ್ಚೆಗೆಂದು ಪಾಕಿಸ್ತಾನ ತಂದಾಗ ಭಾರತ ಆತ್ಮವಿಶ್ವಾಸದಿಂದ ಬೀಗುತ್ತಿತ್ತು. ಏಕೆಂದರೆ ಪಾಕಿಸ್ತಾನದ ಪರವಾಗಿ ಅಲ್ಲಿ ಮಾತನಾಡಿದ್ದು ಚೀನಾ ಮಾತ್ರ. ಉಳಿದೆಲ್ಲ ರಾಷ್ಟ್ರಗಳೂ ಭಾರತದ ಪರವಾಗಿ ನಿಂತು ಆಂತರಿಕ ವಿಷಯದ ಕುರಿತಂತೆ ರ್ಚಚಿಸುವುದು ಒಳಿತಲ್ಲ ಎಂದುಬಿಟ್ಟವು. ಸಭೆ ಮುಗಿಸಿ ಹೊರಬಂದ ವಿದೇಶಾಂಗ ಕಾರ್ಯದರ್ಶಿ ಸಯ್ಯದ್ ಅಕ್ಬರುದ್ದೀನ್ ವಿಶ್ವಸಂಸ್ಥೆಯ ಹೊರಗೆ ಪಟಪಟಿಸಿ ಹಾರಾಡುತ್ತಿದ್ದ ಭಾರತದ ಬಾವುಟದ ಚಿತ್ರವನ್ನು ಟ್ವೀಟ್ ಮಾಡಿ ಜೊತೆ ನಿಂತ ಗೆಳೆಯರಿಗೆ ಧನ್ಯವಾದವನ್ನು ಸಮರ್ಪಿಸಿ ‘ಸುಳ್ಳು ಹೇಳುವವರಿಗೆ ಮುಖಭಂಗ’ ಎಂದು ಬರೆದುಕೊಂಡಿದ್ದರು. ಇದು ವೈಶ್ವಿಕ ಮಟ್ಟದಲ್ಲಿ ಗಟ್ಟಿಯಾಗುತ್ತಿರುವ ಭಾರತದ ಶಕ್ತಿಯ ದ್ಯೋತಕವೇ ಸರಿ! ಅದರರ್ಥ ಚೀನಾ ಬರಲಿರುವ ದಿನಗಳಲ್ಲಿ ಮನಮೋಹನ್ ಸಿಂಗರ ಕಾಲದಲ್ಲಿದ್ದಷ್ಟು ನೆಮ್ಮದಿಯಿಂದ ನಿದ್ದೆ ಮಾಡಲಾರದು ಅಂತ. ಹೀಗಾಗಿಯೇ ಸಿಎಎ ವಿರುದ್ಧ ಭಾರತದಾದ್ಯಂತ ಪ್ರತಿಭಟನೆಗಳು ನಡೆದಾಗ ಎಡಪಂಥೀಯರು ಅದರಲ್ಲಿ ಧಾವಿಸಿ ಜಿಗಿದದ್ದು. ಮುಸಲ್ಮಾನರ ಆರಂಭದ ಪ್ರತಿಭಟನೆಗಳು ಹಿಂಸಾತ್ಮಕವಾಗಿದ್ದು ಬರಬರುತ್ತ ಶಾಂತಿಯುತವಾಯ್ತಲ್ಲದೇ ಕೈಲಿ ತಿರಂಗಾಗಳು ರಾರಾಜಿಸಲಾರಂಭಿಸಿದವು. ಭಾರತವನ್ನು ತುಂಡರಿಸಬೇಕೆಂದು ಕಾತರಿಸುತ್ತಿರುವ ತುಕ್ಡೇ ಗ್ಯಾಂಗಿಗೆ ಇದು ಸಹಿಸಲಾಗದ ಸಂಗತಿ. ಹಾಗೆಂದೇ ಅವರು ದೆಹಲಿಯಲ್ಲಾದರೂ ಈ ಹೋರಾಟ ಜೀವಂತವಾಗಿರಬೇಕೆಂಬ ದೃಷ್ಟಿಯಿಂದ ತಮ್ಮ ಹಿಡಿತವಿರುವ ಜವಾಹರ್​ಲಾಲ್ ನೆಹರೂ ಯುನಿವರ್ಸಿಟಿಯನ್ನೇ ಅಖಾಡಾಕ್ಕಿಳಿಸಿದರು. ಈಗ ಅದೂ ಕೈತಪ್ಪುತ್ತಿರುವ ಲಕ್ಷಣಗಳು ಗೋಚರವಾಗುತ್ತಿವೆ!

    ಈ ಮಧ್ಯೆ ಪಾಕಿಸ್ತಾನದ ಕಥೆ ಇನ್ನೂ ಮುಗಿಯಲಿಲ್ಲ. ಭಾರತದಲ್ಲಿ ದಂಗೆಗಳನ್ನು ನಿಯಂತ್ರಿಸುವಲ್ಲಿ ಹೈರಾಣಾಗುವ ಮೋದಿ ಸರ್ಕಾರ ನಮ್ಮ ಬಗ್ಗೆ ಚಿಂತಿಸುವುದನ್ನೇ ಬಿಟ್ಟುಬಿಡುತ್ತದೆ ಎಂದು ಭಾವಿಸಿಕೊಂಡು ಕುಳಿತಿತ್ತು ಅದು. ಹಾಗಾಗಲಿಲ್ಲ. ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿಗೈದು ಒಳನುಸುಳಲೆತ್ನಿಸಿದ್ದ ಭಯೋತ್ಪಾದಕರ ಲಾಂಚ್​ಪ್ಯಾಡ್​ಗಳನ್ನು ಧ್ವಂಸಗೊಳಿಸಿದ್ದೂ ಈ ಹೊತ್ತಿನಲ್ಲೇ. ಅಷ್ಟೇ ಅಲ್ಲ, ಇಂಗ್ಲೆಂಡಿನಲ್ಲಿ ಅಧಿಕಾರಕ್ಕೆ ಬಂದ ಮೋದಿಯ ಮಿತ್ರ ಬೊರಿಸ್ ಜಾನ್ಸನ್ ಪಾಕಿಸ್ತಾನದ ವಿರುದ್ಧದ ನಿಲುವನ್ನು ಪದೇಪದೆ ಸ್ಪಷ್ಟಪಡಿಸುತ್ತಿದ್ದಾರೆ. ಅಲ್ಲಿನ ದಕ್ಷಿಣ ಏಷ್ಯಾಕ್ಕೆ ಸಂಬಂಧಪಟ್ಟ ವಿಚಾರಗಳ ಜವಾಬ್ದಾರಿ ಹೊತ್ತಿರುವ ಗ್ಯಾರೆ ಬೇಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಡುತ್ತ, ‘ಭಯೋತ್ಪಾದಕ ಕೃತ್ಯಗಳಿಗೆ ಭೂಮಿಕೆ ಒದಗಿಸಿಕೊಡುತ್ತಿರುವುದೇ ಪಾಕಿಸ್ತಾನ; ಅದರಿಂದಾಗಿ ಏಷ್ಯಾ ಆತಂಕದ ಸ್ಥಿತಿಗೆ ದೂಡಲ್ಪಟ್ಟಿದೆ. ಇದನ್ನು ತಿದ್ದುಕೊಳ್ಳುವ ಪ್ರಯತ್ನ ಮಾಡಲಿಲ್ಲವೆಂದರೆ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್​ಫೋರ್ಸ್​ನಲ್ಲಿ ಅದನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ’ ಎಂದಿದ್ದಾರೆ. ಒಮ್ಮೆ ಹಾಗಾದರೆ ಪಾಕಿಸ್ತಾನಕ್ಕೆ ಜಗತ್ತಿನ ಯಾವ ರಾಷ್ಟ್ರಗಳೂ ಸಾಲ ಕೊಡಲಾರವು. ಈಗಲೇ ಎರಡು ಹೊತ್ತಿನ ತುತ್ತಿಗೆ ಬಡಿದಾಡುತ್ತಿರುವ ಪಾಕಿಸ್ತಾನದ ಕಥೆ ಮುಂದೆ ಮತ್ತೂ ಹೈರಾಣಾಗಲಿದೆ.

    ಭಾರತದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ ಕೆಲಸವನ್ನು ಮೋದಿ ಸದ್ದಿಲ್ಲದೆ ಮಾಡುತ್ತಿದ್ದಾರೆ. ಅಮೆರಿಕ-ಚೀನಾ ವ್ಯಾಪಾರ ಸಮರ, ಬ್ರೆಕ್ಸಿಟ್, ಅಮೆರಿಕ ಚುನಾವಣೆ ಇವುಗಳ ಕಾರಣದಿಂದಾಗಿ ಹಿನ್ನಡೆ ಅನುಭವಿಸುತ್ತಿರುವ ಜಾಗತಿಕ ಆರ್ಥಿಕ ಸ್ಥಿತಿಯ ಪ್ರಭಾವದಿಂದಾಗಿ ಭಾರತದಲ್ಲೂ ಕೂಡ ಉದ್ಯೋಗ ನಷ್ಟವಾಗಿದೆ, ಬೆಳವಣಿಗೆಯ ದರ ಕುಸಿಯುತ್ತಿದೆ. ಇದನ್ನು ಸರಿದೂಗಿಸದಿದ್ದರೆ ಬರುವ ದಿನಗಳು ಬಲು ಕಷ್ಟವೆಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಸ್ವತಃ ಚೀನಾ 290 ಬಿಲಿಯನ್ ಡಾಲರ್​ಗಳಷ್ಟು ತೆರಿಗೆ ಮತ್ತಿತರ ಶುಲ್ಕಗಳನ್ನು ಕಡಿತಗೊಳಿಸುವ ಮೂಲಕ ತನ್ನ ಇತಿಹಾಸದಲ್ಲೇ ಅತ್ಯಂತ ದೊಡ್ಡ ತೆರಿಗೆ ಕಡಿತ ಘೊಷಿಸಿತು. ಇದು ಅಲ್ಲಿನ ಆರ್ಥಿಕತೆ ಅಭಿವೃದ್ಧಿಗೆ ಒಂದಷ್ಟು ಸಹಾಯ ಮಾಡಿತು. ಭಾರತ ಈ ಹಿಂದೆಯೂ ಇಂಥದ್ದೊಂದು ಪ್ರಯೋಗವನ್ನು ಮಾಡಿದ್ದು ನಿಜವಾದರೂ ಬಲುದೊಡ್ಡ ಬದಲಾವಣೆ ಕಂಡುಬಂದಂತೇನೂ ಇರಲಿಲ್ಲ.

    ಈ ಬಾರಿ ಬಜೆಟ್​ನಲ್ಲಿ ಭಾರತವನ್ನು ಸ್ಮಾರ್ಟ್​ಫೋನ್​ಗಳ ಕೇಂದ್ರವಾಗಿ ಮಾರ್ಪಡಿಸುವ ಕುರಿತಂತೆ ಗಂಭೀರವಾಗಿ ಆಲೋಚಿಸಲಾಗುತ್ತಿದೆ. ಆಪಲ್, ಸ್ಯಾಮ್ಂಗ್ ಮುಂತಾದ ಕಂಪನಿಗಳ ಉತ್ಪಾದನಾ ಘಟಕವನ್ನು ಚೀನಾ, ವಿಯೆಟ್ನಾಂಗಳಿಂದ ಭಾರತಕ್ಕೆ ವರ್ಗಾಯಿಸಲು ಬೇಕಾಗಿರುವ ಸವಲತ್ತುಗಳನ್ನು ಕೊಡಲಾಗುತ್ತಿದೆ. ಲಾವಾದಂತಹ ಭಾರತೀಯ ಮೊಬೈಲ್ ನಿರ್ಮಾತೃಗಳಿಗೆ ಸಾಕಷ್ಟು ಶಕ್ತಿ ತುಂಬಿ ಜಾಗತಿಕ ಮಾರುಕಟ್ಟೆಯಲ್ಲಿ ಬಲಾಢ್ಯವಾಗುವಂತೆ ಮಾಡುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಸದ್ಯದ ಮೂರು ಬಿಲಿಯನ್ ಡಾಲರ್​ಗಳಷ್ಟು ರಫ್ತಿನಿಂದ 2025ರ ವೇಳೆಗೆ 110 ಬಿಲಿಯನ್ ಡಾಲರ್​ಗಳಷ್ಟು ರಫ್ತು ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದರೊಟ್ಟಿಗೆ ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗೆ ಕೈಹಾಕಲಾಗಿದೆ. ಇಲ್ಲಿ ಸ್ಟಾರ್ಟ್​ಅಪ್​ಗಳ ಅಭಿವೃದ್ಧಿಗೆ ಬೆಂಬಲ ಕೊಡಲಾಗುತ್ತಿದೆಯಲ್ಲದೆ ಬೇಕಾದ 5000 ಬಿಡಿಭಾಗಗಳನ್ನು ಆಮದು ಮಾಡುವುದನ್ನು ನಿಲ್ಲಿಸಿ ಸ್ಥಳೀಯರೇ ಉತ್ಪಾದಿಸಿಕೊಡುವಂತಹ ಆಲೋಚನೆಗಳಿಗೆ ನೀರೆರೆಯಲಾಗುತ್ತಿದೆ. ಹೊಸ ಕಾರ್ಖಾನೆಗಳನ್ನು ಆರಂಭಿಸುವುದಕ್ಕೆ ಪರವಾನಗಿ ಪಡೆಯುವ ಮಾರ್ಗವನ್ನು ಸರಳೀಕರಣಗೊಳಿಸಲಾಗಿದೆ. ಜೊತೆಗೆ ವಿದೇಶೀ ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಇವೆಲ್ಲವುಗಳ ಪರಿಣಾಮದಿಂದ ಆರ್ಥಿಕ ಸ್ಥಿತಿ ಮತ್ತೆ ಹಳಿಗೆ ಮರಳುವುದು ನಿಶ್ಚಿತ. ಆದರೆ ಹಾಗೆ ಆರ್ಥಿಕತೆಯ ಕುರಿತಂತೆ ವಿರೋಧ ತೋರುತ್ತ, ಸಿಎಎ ವಿರುದ್ಧ ಪ್ರತಿಭಟನೆಗಳನ್ನು ಮಾಡುತ್ತ ಕಾಂಗ್ರೆಸ್ಸು ಬೀದಿಯಲ್ಲಿ ರಂಪಾಟ ಮಾಡುತ್ತಿರುವಾಗಲೇ ರಷ್ಯಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡಬೇಕೆಂದು ಆಗ್ರಹಿಸುತ್ತಿರುವುದು ಅಪರೂಪದ ಬೆಳವಣಿಗೆ. ಯಾವುದನ್ನು ಏಳು ದಶಕಗಳಲ್ಲಿ ಕಾಂಗ್ರೆಸ್ ಮಾಡಲಾಗಿರಲಿಲ್ಲವೋ ಮೋದಿ ತನ್ನ ಅವಧಿಯ ಆರು ವರ್ಷಗಳಿಗಿಂತಲೂ ಮುಂಚೆಯೇ ಅದನ್ನು ಮಾಡುತ್ತಿದ್ದಾರೆ!

    ಎರಡನೇ ಅವಧಿಯಲ್ಲಿ ಅವರ ಧಾವಂತ ನೋಡಿದರೆ ಎಂಥವನಿಗೂ ಅಚ್ಚರಿಯಾದೀತು. ಭಾರತೀಯರಿಗೆ ಕೊಟ್ಟ ಎಲ್ಲ ಮಾತುಗಳನ್ನು ಬೇಗ-ಬೇಗನೇ ಈಡೇರಿಸುತ್ತಿದ್ದಾರಲ್ಲದೆ ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಹಿಂದೆಂದೂ ಇಲ್ಲದಷ್ಟು ಎತ್ತರದಲ್ಲಿರಬೇಕೆಂಬ ಆತುರವನ್ನೂ ತೋರುತ್ತಿದ್ದಾರೆ. ಇತ್ತ ಕಾಂಗ್ರೆಸ್ಸು ಎಂದಿನಂತೆ ಮುಸಲ್ಮಾನರನ್ನು ಓಲೈಸುತ್ತ ಅವರ ವೋಟಿನೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬಂದುಬಿಡುತ್ತೇನೆಂಬ ಕನಸು ಕಾಣುತ್ತ ಕುಳಿತಿದೆ!

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts