Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಅನಾಥವಾಗಿ ಉಳಿದ ನಿಜವಾದ ರತ್ನ!

Monday, 02.07.2018, 3:05 AM       No Comments

ಗೊರ್ಖಾಗಳನ್ನು ಕಂಡರೆ ಮಾಣಿಕಾ ಷಾ ಅವರಿಗೆ ವಿಶೇಷವಾದ ಪ್ರೀತಿ. ಗೊರ್ಖಾಗಳಿಗೂ ಅವರನ್ನು ಕಂಡರೆ ಅಪಾರವಾದ ಪ್ರೀತಿ. ಇಂದಿಗೂ ಅವರ ಮನೆಗಳಲ್ಲಿ ಸ್ಯಾಮ್ ಕುರಿತಂಥ ದಂತಕಥೆಗಳು ಕೇಳಿ ಬರುತ್ತವೆ. ಅವರನ್ನು ಸ್ಯಾಮ್ ಬಹದ್ದೂರ್ ಎಂದು ಗೌರವದಿಂದ ಕರೆದು ತಮ್ಮವರಾಗಿಸಿಕೊಂಡಿದ್ದು ಗೊರ್ಖಾಗಳೇ.

ಕೊಲ್ಕತ್ತಾದ ಸಾರ್ವಜನಿಕ ಸಭೆ. ವ್ಯಕ್ತಿಯೊಬ್ಬರು ವೇದಿಕೆಯಲ್ಲಿ ಮಾತನಾಡುತ್ತಿದ್ದರು. ಎದುರಿಗೆ ಕುಳಿತಿದ್ದ ತರುಣನೊಬ್ಬ ಎದ್ದುನಿಂತು ಕಾರ್ಯಕ್ರಮಕ್ಕೆ ಅಡ್ಡಿಪಡಿಸಲಾರಂಭಿಸಿದ. ಘೊಷಣೆಗಳನ್ನು ಕೂಗಲಾ ರಂಭಿಸಿದ. ಭಾಷಣಕಾರ ಕೆಳಗಿಳಿದು ಬಂದು ಗಲಾಟೆ ಮಾಡುತ್ತಿದ್ದ ಹುಡುಗನೆದುರಿಗೆ ನಿಂತು ಹಿಂದಿಮಿಶ್ರಿತ ಇಂಗ್ಲಿಷಿನಲ್ಲಿ ಬೈಯ್ಯುತ್ತ ಕೆನ್ನೆಗೆ ಬಾರಿಸಿದರು. ಹುಡುಗ ಅವಾಕ್ಕಾಗಿ ‘ನನಗೆ ನಿಮ್ಮ ಆಟೋಗ್ರಾಫ್ ಬೇಕಿತ್ತು. ಅದಕ್ಕೋಸ್ಕರ ಹೀಗೆ ಮಾಡಿದೆ’ ಎಂದ. ಈ ವ್ಯಕ್ತಿಯೂ ಸುಮ್ಮನಾಗದೇ ‘ನನ್ನ ಆಟೋಗ್ರಾಫ್​ನಿಂದೇನು ನನ್ನ ಹೆಂಡತಿಯ ಬಳಿ ತೆಗೆದುಕೊ. ಒಂದು ಫೋಟೋನೂ ತೆಗೆಸಿಕೊ’ ಎಂದು ನಗುತ್ತ ಮತ್ತೆ ವೇದಿಕೆ ಏರಿಬಿಟ್ಟರು. ಅವರ ಹೆಂಡತಿಗೆ ಈ ವಿಚಾರ ಗೊತ್ತಾದಾಗ ‘ಸ್ಯಾಮ್ ಒಬ್ಬ ಹುಚ್ಚ’ ಎಂದು ನಕ್ಕು ಸುಮ್ಮನಾಗಿಬಿಟ್ಟಳು. ಇಷ್ಟಕ್ಕೂ ತನ್ನ ಮೇಲೆ ತಾನೇ ತಮಾಷೆ ಮಾಡಿಕೊಳ್ಳುತ್ತಿದ್ದ, ಅತ್ಯಂತ ಕಠಿಣ ಪರಿಸ್ಥಿತಿಯನ್ನೂ ನಗುವಿನ ಮೂಲಕವೇ ನಿಭಾಯಿಸುತ್ತಿದ್ದ ಆ ವ್ಯಕ್ತಿ ಯಾರು ಗೊತ್ತೇನು? ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಷಾ!

ದೇಶದ ಜನ ಮರೆತೇ ಹೋಗಿರುವ, ಸೈನಿಕರು ಸ್ಯಾಮ್ ಎಂದು ನೆನಪಿಸಿಕೊಳ್ಳುವ, ಗೊರ್ಖಾಗಳು ಸ್ಯಾಮ್ ಬಹದ್ದೂರ್ ಎಂದು ಗೌರವಿಸುವ ಭಾರತ ಕಂಡ ಶ್ರೇಷ್ಠ ಸೇನಾನಿ ಆತ. ಮುಲಾಜಿಲ್ಲದ ನಡೆಯಿಂದಲೇ ಅನೇಕ ಬಾರಿ ಕಠಿಣ ಪರಿಸ್ಥಿತಿಗೆ ಒಳಗಾಗುತ್ತಿದ್ದ ಸ್ಯಾಮ್ ಭಾರತದ ಪಾಲಿಗೆ ಶ್ರೇಷ್ಠರತ್ನ. ದ್ವಿತೀಯ ಮಹಾಯುದ್ಧದಿಂದ ಹಿಡಿದು 1971ರ ಬಾಂಗ್ಲಾ ವಿಮೋಚನೆ ವೇಳೆಗೆ ಐದು ಯುದ್ಧಗಳಲ್ಲಿ ಭಾಗವಹಿಸಿದ ಸ್ಯಾಮ್ ಯುದ್ಧ ಇತಿಹಾಸದಲ್ಲಿ ಭಾರತದ ಕೀರ್ತಿಪತಾಕೆಯನ್ನು ಹಿಮಾಲಯದೆತ್ತರಕ್ಕೆ ಹಾರಿಸಿದ ವ್ಯಕ್ತಿ.

ಬೆಚ್ಚಗೆ ಕಾಫಿ ಹೀರುತ್ತ ಈ ಲೇಖನವನ್ನು ಓದುತ್ತಿರುವ ನಮಗೆ ಸ್ಯಾಮ್ ಗಡಸು ವ್ಯಕ್ತಿತ್ವ, ತನ್ನವರನ್ನು ಪ್ರೀತಿಸುತ್ತಿದ್ದ ಮೃದುಹೃದಯ ಎರಡನ್ನೂ ಜೀರ್ಣಿಸಿಕೊಳ್ಳುವುದು ಬಲುಕಷ್ಟ. ಸ್ಯಾಮ್ ವ್ಯಕ್ತಿಯಾಗಿ ಅಪರೂಪವಷ್ಟೇ ಅಲ್ಲ. ಸೈನಿಕನಾಗಿಯೂ ಹುಡುಕಿದರೂ ಸಿಗದ ಮುತ್ತು. ಒಮ್ಮೆ ಅವರನ್ನು ವಿಭಜನೆಯ ಸಂದರ್ಭದಲ್ಲಿ ‘ನೀವು ಪಾಕಿಸ್ತಾನಕ್ಕೆ ಸೇರಿಬಿಟ್ಟಿದ್ದರೆ ಏನಾಗುತ್ತಿತ್ತು’ ಎಂದು ಯಾರೋ ಕೇಳಿದರಂತೆ. ಸ್ಯಾಮ್ ಉತ್ತರವೇನಿರಬಹುದು ಗೊತ್ತೇ? ‘ಪಾಕಿಸ್ತಾನ ಒಂದು ಯುದ್ಧವನ್ನೂ ಸೋಲುತ್ತಿರಲಿಲ್ಲ’ ಅಂತ. ಸ್ಯಾಮ್ ಸಾಮರ್ಥ್ಯಕ್ಕೆ ಈ ಉತ್ತರವೇ ಕೈಗನ್ನಡಿ.

ಅಮೃತ್​ಸರದ ಪಂಜಾಬ್​ನಲ್ಲಿ ಪಾರ್ಸಿಗಳಾಗಿದ್ದ ಹೊಮೂಸ್​ಜಿ ಮಾಣಿಕ್ ಷಾ ಮತ್ತು ಹಿಲ್ಲಾರಿಗೆ ಜನಿಸಿದ ಸ್ಯಾಮ್ ನೈನಿತಾಲ್​ನಲ್ಲಿ ಕಾಲೇಜು ಅಧ್ಯಯನ ಮುಗಿಸಿ ಡಿಸ್ಟಿಂಕ್ಷನ್ ಸರ್ಟಿಫಿಕೇಟನ್ನು ಪಡೆದುಕೊಂಡರು. ಲಂಡನಿನಲ್ಲಿ ವೈದ್ಯಕೀಯ ವಿಷಯದ ಅಧ್ಯಯನ ಮಾಡಬೇಕೆಂದು ಮನಸ್ಸಿಟ್ಟುಕೊಂಡಿದ್ದ ಸ್ಯಾಮ್ೆ ತಂದೆ ನಿರಾಸೆ ಮಾಡಿಸಿದರು. ಅಷ್ಟು ದೂರ ಒಬ್ಬನೇ ಕಳಿಸಲು ಒಪ್ಪದ ತಂದೆಯ ನಿರ್ಧಾರದಿಂದಾಗಿ ಕುಪಿತನಾಗಿದ್ದ ಸ್ಯಾಮ್ ಪ್ರತೀಕಾರವೆಂದೇ ಇಂಡಿಯನ್ ಮಿಲಿಟರಿ ಅಕಾಡೆಮಿಯ ಪರೀಕ್ಷೆ ಬರೆದರು. ಮಗನ ಫಲಿತಾಂಶವನ್ನು ಕಂಡು ಖುಷಿಪಡುವ ಬದಲು ಮತ್ತೆ ಬೇಸರಿಸಿಕೊಂಡ ತಂದೆ ಸೈನ್ಯಕ್ಕೆ ಕಳಿಸುವುದಿಲ್ಲವೆಂದರು. ಹಠಕ್ಕೆ ಬಿದ್ದ ಹುಡುಗ ಸೈನ್ಯವನ್ನೇ ಆಯ್ಕೆ ಮಾಡಿಕೊಂಡು ತನ್ನ ಭವಿಷ್ಯವನ್ನು ದೃಢವಾಗಿಸಿಕೊಂಡ. ಅಂದಿನ ನಿಯಮಾವಳಿಗಳಂತೆ ಭಾರತೀಯ ತುಕಡಿಗೆ ಸೇರುವ ಮುನ್ನ ಬ್ರಿಟಿಷ್ ರೆಜಿಮೆಂಟುಗಳಲ್ಲಿ ಕೆಲಸ ಮಾಡಬೇಕಿತ್ತು. ಮಾಣಿಕ್ ಷಾ ಲಾಹೋರಿನಲ್ಲಿರುವ ರಾಯಲ್ ಸ್ಕಾಟ್ಸ್​ಗೆ ಸೇರಿಕೊಂಡರು. ಆನಂತರ ನಾಲ್ಕನೇ ಬಟಾಲಿಯನ್​ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಮುಂದೆ ಲೆಫ್ಟಿನೆಂಟ್ ಆಗಿ ಬಡ್ತಿ ಪಡೆದ ಸ್ಯಾಮ್ 1942ರ ದ್ವಿತೀಯ ಮಹಾಯುದ್ಧದಲ್ಲಿ ಕ್ಯಾಪ್ಟನ್ ಆಗಿ ಕಾದಾಡಿದರು. ಪಗೋಡಾಹಿಲ್​ನಲ್ಲಿ ಮುಂದೆ ನಿಂತು ಕಾದಾಡುತ್ತಿರುವಾಗ ಶತ್ರುಗಳ ಲೈಟ್​ವೆುಷಿನ್ ಗನ್ನಿನಿಂದ ಹೊರಟ ಗುಂಡಿನ ಗುಚ್ಛ ಅವರ ಹೊಟ್ಟೆಯನ್ನು ಸೀಳಿಬಿಟ್ಟಿತು. ಮೇಜರ್ ಜನರಲ್ ಡೇವಿಡ್ ಕೋವಾನ್ ಪ್ರಾಣವುಳಿಸಿಕೊಳ್ಳಲು ಹೆಣಗಾಡುತ್ತಿದ್ದ ಮಾಣಿಕ್ ಷಾರನ್ನು ನೋಡಿ ಇಂಥ ಕದನಕಲಿಯನ್ನು ಕಳೆದುಕೊಳ್ಳಲೊಪ್ಪದೆ ಧಾವಿಸಿ ಬಂದರು. ಗಂಭೀರ ಸ್ಥಿತಿಯಲ್ಲಿದ್ದ ಸ್ಯಾಮ್ನ್ನು ನೋಡಿ ಅವರ ಸಾವನ್ನು ಊಹಿಸಿದ ಡೇವಿಡ್ ಕೋವಾನ್ ತನ್ನ ಎದೆಯ ಮೇಲಿದ್ದ ಮಿಲಿಟರಿ ಕ್ರಾಸ್ ರಿಬ್ಬನ್ ಅನ್ನು ಸ್ಯಾಮ್ ಎದೆಗೆ ಚುಚ್ಚಿ ‘ಸತ್ತವನಿಗೆ ಈ ಗೌರವ ಕೊಡಲಾಗುವುದಿಲ್ಲ’ ಎಂದುಬಿಟ್ಟರು. ಮುಂದೆ ಸ್ಯಾಮ್ೆ ಈ ಗೌರವ ಕಾಯಂ ಆಯ್ತು. ರಣಭೂಮಿಯಿಂದ ಅವರನ್ನು ಆಸ್ಪತ್ರೆಗೆ ಕರೆತಂದು ಆಸ್ಟ್ರೇಲಿಯನ್ ಚಿಕಿತ್ಸಕನೊಬ್ಬನ ಬಳಿ ಬಿಡಲಾಯ್ತು. ಆ ವೈದ್ಯರು ಈತ ಸಾಯುವುದು ಖಾತ್ರಿ ಚಿಕಿತ್ಸೆ ಮಾಡಿ ಉಪಯೋಗವಿಲ್ಲ ಎಂದುಬಿಟ್ಟರು. ಒತ್ತಾಯಕ್ಕೆ ಕಟ್ಟುಬಿದ್ದು ಚಿಕಿತ್ಸೆ ಮಾಡಲೇಬೇಕಾಗಿ ಬಂದಾಗ ವೈದ್ಯರು ಸ್ಯಾಮ್ ಬಳಿ ಬಂದು ಸಹಜವಾಗಿಯೇ ‘ಏನಾಯ್ತು’ ಎಂದರಂತೆ. ಸ್ಯಾಮ್ ಆ ನೋವಿನಲ್ಲೂ ಕಣ್ಣು ಮಿಟುಕಿಸುತ್ತ ‘ಕತ್ತೆ ಒದ್ದುಬಿಟ್ಟಿತು’ ಎಂದರಂತೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ ಸ್ಯಾಮ್ ಹೃದಯದಲ್ಲಿದ್ದ ಹಾಸ್ಯಪ್ರಜ್ಞೆಯನ್ನು ಗೌರವಿಸಿದ ವೈದ್ಯರು ಆತನನ್ನು ಉಳಿಸಿಕೊಳ್ಳಲೇಬೇಕೆಂದು ನಿರ್ಧರಿಸಿ, ಏಳು ಬುಲೆಟ್​ಗಳನ್ನು ಹೊರತೆಗೆದರು. ಏನೂ ಆಗಿಲ್ಲವೆಂಬಂತೆ ಸ್ಯಾಮ್ ಮತ್ತೆ ಸೈನ್ಯದ ಚಟುವಟಿಕೆಗೆ ತೊಡಗಿಕೊಂಡರು. 1971ರ ಯುದ್ಧದ ವೇಳೆಗೆ ಗಾಯಾಳುವಾಗಿ ಮಲಗಿದ್ದ ಸೈನಿಕನೊಬ್ಬನನ್ನು ನೋಡಿ ‘ನಿನ್ನ ವಯಸ್ಸಿನಲ್ಲಿದ್ದಾಗ ನಾನು 9 ಗುಂಡು ತಿಂದಿದ್ದೆ. ನೀನು ಮೂರು ಗುಂಡು ಬಡಿಸಿಕೊಂಡಿದ್ದೀಯ. ನಾನಿಂದು ಭಾರತೀಯ ಸೇನೆಯ ಸವೋಚ್ಚ ನಾಯಕ. ನೀನೇನಾಗಬಲ್ಲೆ ಎಂದು ಊಹಿಸು’ ಎಂದು ಧೈರ್ಯ ತುಂಬಿದ್ದರು!

ಸ್ವಾತಂತ್ರಾ್ಯನಂತರ ಪಾಕಿಸ್ತಾನದೊಂದಿಗಿನ ಮೊದಲನೇ ಯುದ್ಧದಲ್ಲಿಯೇ ಸ್ಯಾಮ್ೆ ಮಹತ್ವದ ಜವಾಬ್ದಾರಿ ವಹಿಸಲಾಗಿತ್ತು. ಪ್ರತಿಯೊಂದು ಹಂತದಲ್ಲೂ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಲ್ಲದೆ ಸೇನೆಯ ಗೌರವವನ್ನು ಒಂದಿನಿತೂ ಕಡಿಮೆ ಮಾಡಲು ಸ್ಯಾಮ್ ಒಪ್ಪುತ್ತಿರಲಿಲ್ಲ. ಅದೊಮ್ಮೆ ರಕ್ಷಣಾ ಸಚಿವ ಕೃಷ್ಣ ಮೆನನ್ ಜನರಲ್ ಕೆ.ಎಸ್ ತಿಮ್ಮಯ್ಯನವರ ಕುರಿತಂತೆ ಅಭಿಪ್ರಾಯ ಕೇಳಿದಾಗ ಖಡಕ್ಕಾಗಿ ಉತ್ತರಿಸಿದ ಸ್ಯಾಮ್ ‘ಮಂತ್ರಿಗಳೇ, ಅವರ ಬಗ್ಗೆ ನಾನ್ಯಾಕೆ ಆಲೋಚನೆ ಮಾಡಬೇಕು. ಆತ ನನ್ನ ನಾಯಕ. ನಾಳೆ ನೀವು ನನ್ನ ಕೆಳಗಿನ ಬ್ರಿಗೇಡಿಯರ್ಸ್ ಮತ್ತು ಕರ್ನಲ್​ಗಳಲ್ಲಿ ನನ್ನ ಬಗ್ಗೆ ಅಭಿಪ್ರಾಯ ಕೇಳುತ್ತೀರಿ. ನೀವು ಸೇನೆಯೊಳಗಿನ ಶಿಸ್ತನ್ನು ನಾಶ ಮಾಡುತ್ತಿದ್ದೀರಿ. ಮುಂದೆಂದೂ ಹೀಗೆ ಮಾಡಬೇಡಿ’ ಎಂದಿದ್ದರು. 1969 ರಲ್ಲಿ ಜನರಲ್ ಪಿ.ಪಿ ಕುಮಾರ ಮಂಗಲಂ ನಿವೃತ್ತರಾದ ನಂತರ ಚೀಫ್ ಆಫ್ ಆರ್ವಿು ಸ್ಟಾಫ್ ಸ್ಥಾನಕ್ಕೆ ಸ್ಯಾಮ್ ಸೂಕ್ತವಾದ ಆಯ್ಕೆಯಾದರು. ಆದರೆ ಅವರ ಗಡಸು ವ್ಯಕ್ತಿತ್ವದಿಂದಾಗಿಯೇ ಅಲ್ಲಿಂದ ಮುಂದೆ ಹೋಗುವುದಕ್ಕೆ ಅವರಿಗೆ ಬಹಳ ಸಮಯ ಹಿಡಿಯಿತು.

ಮಾಣಿಕ್ ಷಾ ನಿಜವಾದ ವ್ಯಕ್ತಿತ್ವ ಅನಾವರಣಗೊಂಡಿದ್ದು 1959ರ ಆಸುಪಾಸಿನಲ್ಲಿ. ಆಗವರು ವೆಲ್ಲಿಂಗ್​ಟನ್​ನ ಡಿಫೆನ್ಸ್ ಸರ್ವೀಸ್ ಸ್ಟಾಫ್ ಕಾಲೇಜಿನ ಮುಖ್ಯಸ್ಥರಾಗಿದ್ದರು. ಈ ಹೊತ್ತಲ್ಲಿ ರಕ್ಷಣಾ ಸಚಿವರಾದಿಯಾಗಿ ಪ್ರಧಾನಮಂತ್ರಿಗಳು ಸೇರಿದಂತೆ ಸೈನ್ಯದಲ್ಲಿ ಎಲ್ಲರೂ ಮೂಗು ತೂರಿಸುವುದು ಹೆಚ್ಚಾಗಿತ್ತು. ಮೇಜರ್ ಜನರಲ್ ಬ್ರಿಜ್ ಮೋಹನ್ ಕೌಲ್ ಮಂತ್ರಿ ಮೆನನ್​ರ ಪ್ರಭಾವದಿಂದಾಗಿಯೇ ಲೆಫ್ಟಿನೆಂಟ್ ಜನರಲ್​ನಿಂದ ಕ್ವಾರ್ಟರ್ ಮಾಸ್ಟರ್ ಜನರಲ್ ಹುದ್ದೆಗೆ ಏರಿಸಲ್ಪಟ್ಟಿದ್ದರು. ಪ್ರಧಾನಮಂತಿ ಮತ್ತು ರಕ್ಷಣಾ ಸಚಿವರ ಬೆಂಬಲವಿದೆ ಎಂಬ ಕಾರಣಕ್ಕೆ ಈತ ಚೀಫ್ ಆಫ್ ಆರ್ವಿು ಸ್ಟಾಫ್​ಗಿಂತಲೂ ಪ್ರಭಾವಿಯಾಗಿಬಿಟ್ಟಿದ್ದರು. ಈ ಕಿರಿಕಿರಿಯನ್ನು ತಾಳಲಾಗದೆ ಜನರಲ್ ತಿಮ್ಮಯ್ಯ ರಾಜೀನಾಮೆ ಎಸೆದರು ಕೂಡ. ಯಾವುದಕ್ಕೂ ಮುಲಾಜಿಟ್ಟುಕೊಳ್ಳದ ಮಾಣಿಕ್ ಷಾ ಮಂತ್ರಿಗಳೇನು ಪ್ರಧಾನಮಂತ್ರಿಗಳನ್ನು ಬಿಡದೇ ಬಲವಾಗಿಯೇ ಟೀಕಿಸಿದರು. ‘ರಕ್ಷಣಾ ಇಲಾಖೆ ಜವಾಬ್ದಾರಿ ಕೊಟ್ಟಿರುವಂಥ ನಮ್ಮ ನಾಯಕರುಗಳಿಗೆ ಮೋರ್ಟಾರಿಗೂ ಮೋಟಾರಿಗೂ, ಗನ್​ಗೂ ಹೋವಿಟ್ಜರ್​ಗೂ, ಗೆರಿಲ್ಲಾಕ್ಕೂ ಗೊರಿಲ್ಲಾಕ್ಕೂ ವ್ಯತ್ಯಾಸವೇ ಗೊತ್ತಿಲ್ಲ. ಬಹುತೇಕರು ಗೊರಿಲ್ಲಾಗಳಂತೆಯೇ ಇರುತ್ತಾರೆ’ ಎಂದುಬಿಟ್ಟಿದ್ದರು. 1971ರ ವೇಳೆಗೆ ಇವರ ಕಾರ್ಯಶೈಲಿಯನ್ನು ಗಮನಿಸಿ ಗಾಬರಿಗೊಂಡಿದ್ದ ಇಂದಿರಾ ‘ಸೈನ್ಯ ಪ್ರಭುತ್ವದ ವಿರುದ್ಧ ದಂಗೆಯೇಳುತ್ತದೆ ಎಂಬ ವದಂತಿ ನಿಜವೇ?’ ಎಂದು ಸ್ಯಾಮ್ನ್ನು ಕೇಳಿದ್ದರು. ಆಗ ಸ್ಯಾಮ್ ‘ನಿಮ್ಮ ಕೆಲಸ ನೀವು ಮಾಡಿ. ನನ್ನ ಕೆಲಸ ನನಗೆ ಮಾಡಲು ಬಿಡಿ. ನನ್ನ ಸೇನೆಯೊಳಗೆ ಯಾರೂ ತಲೆಹಾಕದಿರುವವರೆಗೆ ನಾನು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲಾರೆ’ ಎಂದಿದ್ದರು. ಸರ್ವಾಧಿಕಾರಿ ಇಂದಿರಾಳಿಗೆ ಆಕೆಯ ತಂದೆಯ ವಯಸ್ಸಿನವರೂ ಹೆದರಿಕೊಂಡು ಕೈಕಟ್ಟಿಕೊಂಡು ನಿಲ್ಲುವಂಥ ಸ್ಥಿತಿಯಿದ್ದಾಗ ಸ್ಯಾಮ್ ಮಾತ್ರ ಸೈನ್ಯದ ಘನತೆಯನ್ನು ಒಂದಿನಿತೂ ಮುಕ್ಕಾಗಲು ಬಿಡುತ್ತಿರಲಿಲ್ಲ.

ಸ್ಯಾಮ್ ನಿಜವಾಗಿಯೂ ಏನೆಂಬುದು 1971 ರಲ್ಲಿ ರಾಷ್ಟ್ರಕ್ಕೆ, ಶತ್ರುರಾಷ್ಟ್ರಕ್ಕೆ, ಆಳುವವರ್ಗಕ್ಕೆ ಸ್ಪಷ್ಟವಾಗಿ ಅರಿವಾಯ್ತು. ಆ ವರ್ಷದ ಏಪ್ರಿಲ್​ನಲ್ಲಿ ಇದ್ದಕ್ಕಿದ್ದಂತೆ ಒಂದು ದಿನ ಇಂದಿರಾ ಸ್ಯಾಮ್ನ್ನು ತಮ್ಮ ಕಚೇರಿಯ ಸಭೆಗೆ ಆಹ್ವಾನಿಸಿದರು. ಪೂರ್ವ ಪಾಕಿಸ್ತಾನದಿಂದ ಅಪಾರ ಸಂಖ್ಯೆಯಲ್ಲಿ ನಿರಾಶ್ರಿತರು ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾಕ್ಕೆ ಧಾವಿಸಿ ಬರುವುದರಿಂದ ಆಕೆ ಗಾಬರಿಗೊಳಗಾಗಿದ್ದರು. ಮಂತ್ರಿಗಳು, ಅಧಿಕಾರಿಗಳು ಮತ್ತು ಸ್ಯಾಮ್ ಆ ಸಭೆಯಲ್ಲಿದ್ದರು. ಸೈನ್ಯದ ಮೇಲೆ ಅಧಿಕಾರ ಹೊಂದಿದ್ದೇವೆಂಬ ಧಿಮಾಕಿನಿಂದ ಮಾತನಾಡಿದ ಇಂದಿರಾ ಸ್ಯಾಮ್ತ್ತ ತಿರುಗಿ-‘ನಿರಾ್ರ್ರಶಿತರು ಒಳನುಗ್ಗುತ್ತಿರುವುದಕ್ಕೆ ನೀವೇನು ಮಾಡುತ್ತಿದ್ದೀರಿ?’ ಎಂದು ಕೇಳಿದರು. ಅಷ್ಟೇ ವೇಗವಾಗಿ ಉತ್ತರಿಸಿದ ಸ್ಯಾಮ್ ‘ಬಿಎಸ್​ಎಫ್ ಸಿಆರ್​ಪಿ ಮತ್ತು ರಾ ಗಳ ಮೂಲಕ ಪೂರ್ವ ಪಾಕಿಸ್ತಾನಿಯರಿಗೆ ದಂಗೆಯೇಳಲು ಪ್ರಚೋದಿಸುವಾಗ ನನ್ನನ್ನು ಕೇಳಿಕೊಂಡಿದ್ದಿರೇನು’ ಎಂದು ಪ್ರಶ್ನಿಸಿದರು. ಅಲ್ಲದೆ, ಸ್ಯಾಮ್ ‘ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದ್ದೀರಿ ಸರಿಪಡಿಸಿಕೊಳ್ಳಿ’ ಎಂದರು. ಆದಷ್ಟು ಬೇಗ ಪೂರ್ವ ಪಾಕಿಸ್ತಾನದೊಳಕ್ಕೆ ನುಗ್ಗಬೇಕು ಎಂದು ಯುದ್ಧದ ಆದೇಶವನ್ನು ಆಕೆ ಕೊಡುವಾಗ ಮಾಣಿಕ್ ಷಾ ‘ನೀವು ಸಿದ್ಧವಾಗಿರಬಹುದು ನಾನಲ್ಲ’ ಎಂದರು. ‘ಏಪ್ರಿಲ್ ತಿಂಗಳ ಕೊನೆಯಲ್ಲಿ ಹಿಮಾಲಯದ ದಾರಿಗಳು ಮುಕ್ತವಾಗಿಬಿಡುತ್ತವೆ. ಚೀನಾ ಕೂಡ ದಾಳಿ ಮಾಡಬಹುದು. ಪೂರ್ವ ಪಾಕಿಸ್ತಾನದಲ್ಲೂ ಮಳೆ ಸುರಿಯುತ್ತಿರುವುದರಿಂದ ಕದನ ಬಲು ಕಷ್ಟ. ನಮ್ಮ ಬಳಿ ಸಾಕಷ್ಟು ಶಸ್ತ್ರಾಸ್ತ್ರ ಸಂಗ್ರಹಣೆಯೂ ಇಲ್ಲ’ ಎಂದು ಮುಖಕ್ಕೆ ಹೊಡೆದಂತೆ ಹೇಳಿಬಿಟ್ಟರು. ಮರುಮಾತನಾಡದ ಇಂದಿರಾ ಸಭೆಯನ್ನು ಬರ್ಖಾಸ್ತುಗೊಳಿಸಿ, ಮಾಣಿಕ್ ಷಾರನ್ನು ಮಾತ್ರ ಕೋಣೆಯೊಳಗೆ ಉಳಿಯುವಂತೆ ಕೇಳಿಕೊಂಡರು. ತತ್​ಕ್ಷಣ ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಸ್ಯಾಮ್ ‘ಪ್ರಧಾನಮಂತ್ರಿಗಳೇ, ನೀವು ಇನ್ನೊಂದು ಮಾತನಾಡುವ ಮುನ್ನ ನಾನು ರಾಜೀನಾಮೆ ಪತ್ರ ಬರೆದುಕೊಡಲೇ. ನನ್ನ ದೈಹಿಕ ಅಥವಾ ಮಾನಸಿಕ ಆರೋಗ್ಯ, ಯಾವುದು ಚೆನ್ನಾಗಿಲ್ಲ ಎಂದು ಬರೆಯಬೇಕು ಹೇಳಿ’ ಎಂದು ಕೇಳಿಬಿಟ್ಟರು. ಇಂದಿರಾ ಸರ್ವಾಧಿಕಾರಕ್ಕೆ ಇದಕ್ಕಿಂತಲೂ ಸೂಕ್ತ ಮದ್ದಿರಲಿಲ್ಲ. ಮೆತ್ತಗಾದ ಆಕೆ ನೀವು ಹೇಳಿದಂತೆ ಯುದ್ಧ ನಡೆಯಲಿ ಎಂದು ಪೂರ್ಣ ಅನುಮತಿ ಕೊಟ್ಟರು. ಆನಂತರ ನಡೆದದ್ದು ಇತಿಹಾಸ. ಏಳು ತಿಂಗಳ ನಂತರ ಎಲ್ಲ ತಯಾರಿಯೊಂದಿಗೆ ಯುದ್ಧಸನ್ನದ್ಧರಾಗಿ ಬಂದ ಸ್ಯಾಮ್ನ್ನು ಇಂದಿರಾ ‘ಎಲ್ಲ ತಯಾರಾಗಿದೆಯೇ’ ಎಂದು ಕೇಳಿದಾಗ ‘ಐ ಆಮ್ ಆಲ್ವೇಸ್ ರೆಡಿ’ ಎಂದಿದ್ದರು ಸ್ಯಾಮ್ ಅಮೆರಿಕನ್ನರು ಈ ಯುದ್ಧ ಒಂದೂವರೆ ತಿಂಗಳಾದರೂ ನಡೆಯಬಹುದೆಂದು ಲೆಕ್ಕ ಹಾಕಿ ಕುಳಿತಿದ್ದಾಗ ಮಾಣಿಕ್ ಷಾ ತಂತ್ರಗಾರಿಕೆ ಇದನ್ನು 13 ದಿನಗಳಲ್ಲೇ ಮುಗಿಸಿಬಿಟ್ಟಿತು. 93,000 ಜನ ಯುದ್ಧಕೈದಿಗಳಾಗಿ ಸಿಕ್ಕು ಬಿದ್ದಿದ್ದರು. ಶರಣಾಗತರನ್ನು ಒಪ್ಪಿಸಿಕೊಳ್ಳುವ ಅವಕಾಶ ಸಿಕ್ಕಾಗ ನಿರಾಕರಿಸಿದ ಮಾಣಿಕ್ ಷಾ ‘ಅದು ಆ ಡಿವಿಷನ್​ನ ಮುಖ್ಯಸ್ಥರ ಹೊಣೆಗಾರಿಕೆ. ಅವರೇ ಈ ಗೌರವವನ್ನು ಪಡೆಯಲಿ’ ಎಂದು ದೊಡ್ಡತನ ಮೆರೆದುಬಿಟ್ಟರು. ಸ್ವಾತಂತ್ರ್ಯಕ್ಕೂ ಮುನ್ನ ಪಾಕಿಸ್ತಾನದ ಸೇನಾನಿ ಯಾಹ್ಯಾ ಮಾಣಿಕ್ ಷಾರ ಬೈಕೊಂದನ್ನು ಕೊಂಡು ಕೊಂಡಿದ್ದ. ಒಂದು ಸಾವಿರ ರೂಪಾಯಿ ಹಣವನ್ನು ಕೊಟ್ಟಿರಲಿಲ್ಲ. ಮುಂದೆ ಇದೇ ಯಾಹ್ಯಾ ಪಾಕಿಸ್ತಾನದ ಅಧ್ಯಕ್ಷರಾದಾಗಲೇ 1971ರ ಯುದ್ಧ ನಡೆದದ್ದು. ಮಾಣಿಕ್ ಷಾ ನಗುನಗುತ್ತಲೇ ‘ನನ್ನ ಸಾವಿರ ರೂಪಾಯಿ ಸಾಲ ಉಳಿಸಿಕೊಂಡಿದ್ದ ಯಾಹ್ಯಾ ಈಗ ಅವನ ಅರ್ಧರಾಷ್ಟ್ರವನ್ನು ನನಗೆ ಕೊಟ್ಟುಬಿಟ್ಟಿದ್ದಾನೆ’ ಎಂದಿದ್ದರು.

ಮಾಣಿಕ್ ಷಾ ತಮಿಳುನಾಡಿನ ವೆಲ್ಲಿಂಗ್​ಟನ್ ಆಸ್ಪತ್ರೆಯಲ್ಲಿ ನ್ಯುಮೋನಿಯಾದಿಂದ ತೀರಿಕೊಂಡಾಗ ದೇಶ ಅವರನ್ನು ಗುರುತಿಸಲು ಮರೆತೇ ಹೋಗಿತ್ತು. 1971ರ ಯುದ್ಧದ ನಿಜವಾದ ಹೀರೋ ಮಾಣಿಕ್ ಷಾ ಎಂಬುದನ್ನು ಕಾಂಗ್ರೆಸ್ಸು ಸಹಿಸಲಿಲ್ಲ. ಹೀಗಾಗಿ ಇಂತಹ ಅದ್ಭುತ ಸೇನಾನಿಯೊಬ್ಬ ತೀರಿಕೊಂಡಾಗ ಗಣ್ಯರಾರೂ ಅಂತಿಮ ದರ್ಶನಕ್ಕೆ ಬರಲೇ ಇಲ್ಲ. ಅವರ ಸಾವನ್ನು ರಾಷ್ಟ್ರೀಯ ಶೋಕವೆಂದು ಆಚರಿಸಲಿಲ್ಲ. ನೆಹರು-ಇಂದಿರಾ ಭಾರತ ರತ್ನವನ್ನು ತಮ್ಮ ಮುಡಿಗೇರಿಸಿಕೊಂಡುಬಿಟ್ಟರು. ನಿಜವಾದ ಇಂತಹ ರತ್ನಗಳು ಅನಾಥವಾಗಿ ಉಳಿದುಬಿಟ್ಟವು. ಅಹಮದಾಬಾದ್​ನಲ್ಲಿ ಒಂದು ಫ್ಲೈಓವರ್​ಗೆ

ಮಾಣಿಕ್ ಷಾ ಹೆಸರಿಡಲು ಮುಖ್ಯಮಂತ್ರಿ ನರೇಂದ್ರ ಮೋದಿಯವರೇ ಬೇಕಾಯ್ತು! ಹುತಾತ್ಮರನ್ನು, ಮಹಾತ್ಮರನ್ನು ಸ್ಮರಿಸದ ದೇಶಕ್ಕೆ ಭವಿಷ್ಯವಿಲ್ಲ ಅಂತಾರೆ. 70 ವರ್ಷಗಳ ಕಾಲ ಪ್ರಗತಿ ಕಾಣದೇ ತೊಳಲಾಡಿದ್ದು ಬಹುಶಃ ಇದೇ ಕಾರಣಕ್ಕಿರಬಹುದು!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *

Back To Top