Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಕಾವೇರಿಗಾಗಿ ರಕ್ತ ಬೇಡ, ಸಮಯ ಕೊಡಿ ಸಾಕು!

Monday, 23.04.2018, 3:05 AM       No Comments

ಜನರ ಆಸ್ಥೆಗೂ ಭಂಗ ಬರದಂತೆ ಕಾವೇರಿಯೂ ಮಲಿನಗೊಳ್ಳದಂತೆ ನದಿಯ ತೀರದಲ್ಲೇ ಒಂದಷ್ಟು ಹೊಂಡಗಳನ್ನು ಮಾಡಿ ಅಲ್ಲಿಯೇ ಧಾರ್ವಿುಕ ಚಟುವಟಿಕೆಗಳನ್ನು ನಡೆಸುವಂತೆ ಮಾಡಿದರೆ ಉತ್ತಮ. ಅದಾಗಲೇ 46 ಪ್ರತಿಶತ ಕಾವೇರಿಯ ಹರಿವು ಕಡಿಮೆಯಾಗಿದೆ. ಎಲ್ಲರೂ ಒಟ್ಟಾದರಷ್ಟೇ ಕಾವೇರಿಯನ್ನು ಉಳಿಸಬಹುದು.

ಬುದ್ಧ ಬಸವರೆಲ್ಲ ನಿರ್ವಣವಾದದ್ದೇಕೆಂಬುದನ್ನು ಅರಿಯಲು ಕಾವೇರಿ ಸ್ವಚ್ಛತೆ ಮಾಡಬೇಕಾಯ್ತು. ಕಾವೇರಿಯನ್ನು ಹಾಳುಗೆಡವಿರುವುದು ಕಾವೇರಿಯನ್ನು ದೇವರೆಂದು ನಂಬದ ರೋಹಿಂಗ್ಯಾಗಳೋ ಬಾಂಗ್ಲಾದೇಶಿಯರೋ ಅಲ್ಲ. ನಮ್ಮ ನಡುವಿನ ಮುಸಲ್ಮಾನರೋ ಕ್ರಿಶ್ಚಿಯನ್ನರೋ ಅಲ್ಲ. ನಾವು, ಅಕ್ಷರಶಃ ನಾವುಗಳೇ. ಕಾವೇರಿಯ ನೀರನ್ನು ತಮಿಳುನಾಡಿಗೆ ಬಿಡಬಾರದೆಂಬ ಹೋರಾಟಕ್ಕಾಗಿ ಬೆಂಗಳೂರಿನಲ್ಲಿ ಬೀದಿಗಿಳಿಯುವ ನಾವು, ರಸ್ತೆಗಳಲ್ಲಿ ಬೆಂಕಿ ಹಚ್ಚಿ ಆನಂದಿಸುವ ನಾವು, ವರ್ಷಕ್ಕೊಂದು ನಾಲ್ಕು ಗಂಟೆಗಳಷ್ಟಾದರೂ ಕಾವೇರಿಯ ಬಗ್ಗೆ ತಲೆಕೆಡಿಸಿಕೊಂಡಿದ್ದರೆ ಈ ಸ್ಥಿತಿ ಖಂಡಿತವಾಗಿಯೂ ಇರುತ್ತಿರಲಿಲ್ಲ. ಐದು ದಿನಗಳ ಸ್ವಚ್ಛತಾ ಕಾರ್ಯದಲ್ಲಿ 250 ಟನ್ನಿಗೂ ಹೆಚ್ಚು ಕಸವನ್ನು ನದಿಯಿಂದ ಹೊರತೆಗೆದು ಅದನ್ನು ವಿಲೇವಾರಿ ಮಾಡುವ ವೇಳೆಗೆ ಸಾಕು ಸಾಕಾಗಿತ್ತು. ಕಾವೇರಿ ಗಂಗೆ, ಯಮುನೆ, ಸಿಂಧು, ಸರಸ್ವತಿಯರ ಸಾಲಿಗೆ ಸೇರುವ ದೇವನದಿಯೆಂದು ನಾವು ಪ್ರಾರ್ಥನೆ ಮಾಡಿದ್ದಷ್ಟೇ ಬಂತು. ಆದರೆ ಆ ದೇವನದಿಯನ್ನು ಕೈಯಿಂದ ಮುಟ್ಟಲೂ ಅಸಹ್ಯವಾಗುವಷ್ಟು ಕೊಳಕು ಮಾಡಿಟ್ಟಿದ್ದೇ ನಮ್ಮ ಸಾಧನೆ.

ಇಡಿಯ ಸ್ವಚ್ಛತಾ ಕಾರ್ಯದಲ್ಲಿ ನಮಗೆ ಬಹುಪಾಲು ದಕ್ಕಿದ್ದು ನದಿಗೆ ಬಾಗಿನ ಕೊಟ್ಟ ಸೀರೆ, ಅಂತ್ಯಸಂಸ್ಕಾರದ ನಂತರ ಎಸೆದ ಮಡಕೆ, ಸತ್ತವರ ವಸ್ತ್ರಗಳು, ದೇವರ ಪೂಜೆಯ ನಂತರ ತೆಗೆದೆಸೆದ ನಿರ್ವಲ್ಯ, ಅಯ್ಯಪ್ಪ ಯಾತ್ರೆಯವರು ಎಸೆದುಹೋದ ಪಂಚೆಗಳು, ಮನೆಯಲ್ಲಿ ಬೇಡವಾದ ದೇವರ ಫೋಟೊಗಳು, ಸ್ನಾನ ಮುಗಿಸಿ ನದಿಗೆ ಅರ್ಪಣೆ ಮಾಡಿದ್ದ ಚಡ್ಡಿ, ಬನಿಯನ್ನುಗಳು, ಮಕ್ಕಳ ಮಲವನ್ನು ತುಂಬಿ ಎಸೆದ ಡೈಪರ್​ಗಳು, ಹಳೆಯ ಡಬ್ಬಿ, ಪಾತ್ರೆ, ಕೊನೆಗೆ ರಾಶಿ ರಾಶಿ ಪ್ಲಾಸ್ಟಿಕ್ ಕೈಚೀಲಗಳು. ಈ ಪೈಕಿ ಕೆಲವನ್ನು ಅಲ್ಲಿ ಸುರಿದದ್ದೇಕೆ ಗೊತ್ತೇನು? ಪುರೋಹಿತರ, ಜ್ಯೋತಿಷಿಗಳ ಸಲಹೆಯಿಂದಾಗಿ. ಯಾವ ಪಾಪದ ಪರಿಹಾರಕ್ಕೂ ಕಾವೇರಿಗೆ ಭೇಟಿ ನೀಡಿ, ಅದಕ್ಕೆ ಮನೆಯೊಳಗಿನ ಬಟ್ಟೆಯನ್ನು ಅರ್ಪಣೆ ಮಾಡಿಬಿಟ್ಟರೆ ಸಾಕೆಂದು ಬೋಧಿಸುವ ಜ್ಯೋತಿಷಿಗಳು, ನದಿ ತೀರದಲ್ಲೇ ಪೂಜೆ ಮಾಡಿಸಿ ಅಳಿದುಳಿದ ಹಳೆಯದ್ದನ್ನೆಲ್ಲ ಕಾವೇರಿಗೆಸೆಯುವ ಪುರೋಹಿತರು, ಕೊನೆಗೆ ಮನೆಯಲ್ಲಿನ ಫೋಟೊಗಳನ್ನು ಪುಸ್ತಕಗಳನ್ನು, ಜಪಮಾಲೆಗಳನ್ನು ನದಿಗೆಸೆದುಬಿಡಿರೆಂದು ಹೇಳುವ ಟಿವಿ ಪಂಡಿತರು. ಇವರೆಲ್ಲರೂ ಸೇರಿ ಕಾವೇರಿಯ ಬದುಕನ್ನು ಅಸಹನೀಯಗೊಳಿಸಿಬಿಟ್ಟಿದ್ದಾರೆ. ಹಿಂದುಗಳೇನೊ ಕಾವೇರಿ ದೇವರೆಂಬ ಆಸ್ಥೆಯಿಂದ ಹೀಗೆ ಮಾಡುತ್ತಾರೆಂದುಕೊಂಡರೆ ಕಾವೇರಿ ನದಿಯಲ್ಲಿ ಅರಾಬಿಕ್ ಅಕ್ಷರದಿಂದ ಬರೆದ ಫೋಟೊಗಳು ಮತ್ತು ಶಿಲುಬೆಯಿರುವ ಜಪಮಾಲೆಗಳೂ ಸಿಕ್ಕವೆಂಬುದು ಅಚ್ಚರಿಯ ಸಂಗತಿಯೇ.

ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಸ್ವಚ್ಛತಾ ಕೈಂಕರ್ಯವನ್ನು ನಡೆಸುತ್ತಿರುವಾಗಲೇ ಅಲ್ಲಿಯೇ ದಂಡೆಯೊಂದರ ಮೇಲೆ ತರುಣ ಪುರೋಹಿತನೊಬ್ಬ ಕುಳಿತಿದ್ದ. ಆತನನ್ನು ನೋಡಿದರೆ ಲೌಕಿಕ ಅಧ್ಯಯನ ವಾಗಿರುವುದಿರಲಿ ವೇದಾಧ್ಯಯನವಾಗಿರುವುದೂ ಅನುಮಾನವೆನಿಸುತ್ತಿತ್ತು. ಸಂಸ್ಕಾರ ಕಾರ್ಯಕ್ಕೆಂದು ದೂರದಿಂದ ಬಂದಿದ್ದ ಕುಟುಂಬವೊಂದಕ್ಕೆ ಆತ ತನ್ನದೇ ಆದ ದನಿಯಲ್ಲಿ ‘ಕೋರ್ಟಿನಲ್ಲಿ ಇತರರ ಮಧ್ಯಸ್ಥಿಕೆಯಿಂದ ಪರಿಹಾರ ಕಾಣದ ಸಮಸ್ಯೆಗಳಿಗೂ ನಾನಿಲ್ಲಿ ಕುಳಿತೇ ಪರಿಹಾರ ಹುಡುಕಿ ಕೊಡುತ್ತೇನೆ’ ಎನ್ನುತ್ತಿದ್ದ. ಅವನ ಮಾತಿನ ಚಾಣಾಕ್ಷತೆಗೆ ತಲೆದೂಗಬೇಕೊ ಅಥವಾ ಅದನ್ನು ನಂಬಿ ತಲೆತಗ್ಗಿಸಿ ಕುಳಿತವರ ಮೌಢ್ಯಕ್ಕೆ ನೊಂದುಕೊಳ್ಳಬೇಕೋ ತಿಳಿಯದಾಯ್ತು. ಪುಂಖಾನುಪುಂಖವಾಗಿ ಆತ ಸುಳ್ಳುಗಳನ್ನು ಹೇಳುತ್ತಿದ್ದರೆ ಅದು ವೃತ್ತಿಯೆಂದು ನಾವೆಲ್ಲ ಸುಮ್ಮನಿದ್ದೆವು. ದುಃಖವಾಗಿದ್ದು ಯಾವಾಗೆಂದರೆ ನೀರಿನಿಂದ ಕಸ ತೆಗೆದು ಹೊರಹಾಕುತ್ತಿದ್ದ ತರುಣ ಮಿತ್ರರೆದುರು ಆತ, ‘ನೀವೆಷ್ಟು ಕಸ ತೆಗೆಯುವಿರೋ ಅಷ್ಟೇ ಮತ್ತೆ ಹಾಕಿಸುತ್ತೇನೆ’ ಎಂದಾಗ. ಅಲ್ಲೊಂದು ಪುಟ್ಟ ಜಟಾಪಟಿಯೇ ನಡೆದುಹೋಯ್ತು. ಅವನಿಂದ ಅನತಿ ದೂರದಲ್ಲಿದ್ದ ಮಂತ್ರವಾದಿಯೊಬ್ಬರು ನಿಂಬೆಹಣ್ಣು ಹಿಡಿದುಕೊಂಡು ನದಿಯೆದುರು ಕುಳಿತು ಒಂದಷ್ಟು ಮಂತ್ರ ಗುಣುಗುಣಿಸುತ್ತಿದ್ದರು. ಆ

ಕ್ಷಣದಲ್ಲಿ ಬುದ್ಧ ಬಸವರು ಏಕೆ ನಿರ್ವಣವಾಗಿರಬಹುದೆಂದು ಖಂಡಿತ ಅರಿವಾಯ್ತು. ಹಾಗಂತ ಪುರೋಹಿತರೆಲ್ಲ ಹೀಗಲ್ಲ. ಅಲ್ಲಿಂದ ಸರಿಯಾಗಿ 100 ಕಿ.ಮೀ ದೂರದ ರಾಮನಾಥಪುರದಲ್ಲಿ ಪುರೋಹಿತರಾದಿಯಾಗಿ ಇಡಿಯ ಬ್ರಾಹ್ಮಣ ಸಮಾಜ ನಮ್ಮೊಂದಿಗೆ ಬೆಂಬಲವಾಗಿ ನಿಂತಿದ್ದಲ್ಲದೇ ನೀರಿಗಿಳಿದು ಕಸ ಹೆಕ್ಕಲು ಸಹಕಾರವನ್ನೂ ಕೊಟ್ಟಿತು. ದೋಷವಿರುವುದು ವ್ಯಕ್ತಿಗಳಲ್ಲಿಯೇ ಹೊರತು ಪರಂಪರೆಯಲ್ಲಿ, ಧರ್ಮದ ಮೂಲಸತ್ವ್ತದಲ್ಲಿ ಖಂಡಿತವಾಗಿಯೂ ಅಲ್ಲ. ಹೀಗಾಗಿ ಆಚರಣೆಗಳಲ್ಲಿ ಕಾಲಕ್ಕೆ ತಕ್ಕಂಥ ಬದಲಾವಣೆಯನ್ನು ತಂದು ಅದನ್ನು ಪರಿಸರ ಪೂರಕಗೊಳಿಸುವುದು ಅಗತ್ಯವಾದ್ದೇ.

ಇಷ್ಟಕ್ಕೂ ಸನಾತನ ಧರ್ಮದಷ್ಟು ಪರಿಸರ ಸಂರಕ್ಷಕ ಚಿಂತನೆಯುಳ್ಳ ಮತ್ತೊಂದು ಮತ-ಪಂಥವಿರಲಾರದು. ಪ್ರಕೃತಿ ಭಗವಂತನ ವ್ಯಕ್ತರೂಪ ಎಂದೇ ನಾವು ಭಾವಿಸುತ್ತೇವೆ. ವನವಾಸದ ಸಂದರ್ಭದಲ್ಲಿ ರಾಮ ಕಾಡಿನ ತರುಲತೆಗಳೊಂದಿಗೂ ಮಾತನಾಡುತ್ತಾನೆ. ಕೃಷ್ಣ ಇಂದ್ರನ ಪೂಜೆಯನ್ನು ಧಿಕ್ಕರಿಸಿ, ಪರ್ವತಕ್ಕೆ, ಅಲ್ಲಿರುವ ಗಿಡ-ಮರಗಳಿಗೆ, ಪ್ರಾಣಿ ಪಕ್ಷಿಗಳಿಗೆ ಪೂಜೆ ಮಾಡಿಸುತ್ತಾನೆ. ಯಮುನೆ ವಿಷಯುಕ್ತವಾಗಿದೆ ಎಂದು ಅರಿವಾದಾಗ ಆತ ಕಾಳೀಯನನ್ನು ಮರ್ದಿಸಿ ಸ್ವಚ್ಛ ಯಮುನೆಯ ಕೆಲಸವನ್ನು ಕೈಗೆತ್ತಿಕೊಳ್ಳುತ್ತಾನೆ. ಅಷ್ಟೇ ಅಲ್ಲ, ಅಥರ್ವ ವೇದದ ಪೃಥಿವೀ ಸೂಕ್ತ ‘ಮಾತಾ ಭೂಮಿಃ, ಪುತ್ರೋಹಂ ಪೃಥಿವ್ಯಾಃ’ ಎಂದೇ ಉದ್ಘೋಷಿಸುತ್ತದೆ. ವರಾಹ ಪುರಾಣವು ಒಂದು ಬೇವು, ಒಂದು ಅರಳಿ, ಒಂದು ಆಲ, ಐದು ಮಾವು ಇವುಗಳನ್ನು ನೆಡುವವ ಎಂದಿಗೂ ನರಕಕ್ಕೆ ಹೋಗಲಾರ ಎಂದುಬಿಡುತ್ತದೆ. ಜೀವಜಂತುಗಳನ್ನು ಕೊಲ್ಲುವವ, ಬಾವಿ, ಕೊಳ, ಕೆರೆ, ನದಿ ಇವುಗಳನ್ನು ಮಲಿನಗೊಳಿಸುವವ ನರಕಕ್ಕೆ ಹೋಗುವುದು ಖಾತ್ರಿ ಎಂದು ಪದ್ಮಪುರಾಣ ಹೇಳುತ್ತದೆ. ಇಷ್ಟೆಲ್ಲಾ ಇದ್ದಾಗ್ಯೂ ಶಾಸ್ತ್ರ-ಪುರಾಣಗಳನ್ನು ಅರಿತವರೇ ಇವೆಲ್ಲವನ್ನೂ ಮಾಡಿಸುತ್ತಿದ್ದಾರೆಂದರೆ ಶಾಸ್ತ್ರ ಪುರಾಣಗಳ ಅಧ್ಯಯನ ಅವರು ನಡೆಸಿರುವುದೇ ಸುಳ್ಳು ಎಂದು ಅನಿಸುವುದಿಲ್ಲವೇನು? ಹೀಗಾದಾಗಲೇ ಈ ಇಡೀ ಆಚರಣೆಯ ಕುರಿತಂತೆ ಧಿಕ್ಕಾರದ ಮನೋಭಾವ ಹುಟ್ಟೋದು. ಇಂಥ ಕೆಲವು ಜನರ ಕಾರಣದಿಂದಾಗಿ ಹಿಂದೂ ಧರ್ಮ ಇಂದು ಅನೇಕರಿಗೆ ಆಹಾರವಾಗಿಬಿಟ್ಟಿದೆ. ನದಿ ತೀರದಲ್ಲಿ ನಿಂತು ಕಸದ ರಾಶಿಯನ್ನು ನೋಡುವಾಗ ಒಂದು ಕ್ಷಣ ದೇವರ ಪೂಜೆ, ಶ್ರಾದ್ಧ ಕರ್ಮ ಇತ್ಯಾದಿಗಳಿಂದ ನನ್ನ ನಂಬಿಕೆಯೂ ಹಾರಿ ಹೋಗಿದ್ದು ಸುಳ್ಳಲ್ಲ. ರಾಮನಾಥಪುರದ ನದಿಯಿಂದ ನಾವೆಲ್ಲರೂ ಟನ್ನುಗಟ್ಟಲೇ ಕಸವನ್ನು ಹೊರತೆಗೆಯುವಾಗ ಅಲ್ಲೆ ಪಕ್ಕದಲ್ಲಿದ್ದ ಗೋಮುಖವೆಂಬ ಬಂಡೆಯ ಕೆಳಗಿಂದ ಹಾದು ಬರುತ್ತಿದ್ದ ತರುಣರು ನೀರಿನಲ್ಲಿ ಈಜಾಟವಾಡಿದರೇ ಹೊರತು ಒಮ್ಮೆಯಾದರೂ ಕಸವನ್ನು ಹೆಕ್ಕಲು ಬರಲಿಲ್ಲ. ಈ ಬಂಡೆಯಿರುವುದರಿಂದಾಗಿ ಇವರೆಲ್ಲರೂ ನದಿಯನ್ನು ಕೊಳಕು ಮಾಡುತ್ತಿದ್ದಾರೆನ್ನುವುದಾದರೆ ಈ ಬಂಡೆಯನ್ನೇ ದಬ್ಬಿಬಿಟ್ಟರೊಳಿತಲ್ಲವೇ ಎಂದು ಒಂದು ಕ್ಷಣ ಭಾವಿಸಿದ್ದೂ ಸುಳ್ಳಲ್ಲ. ಹಾಗಂತ ಇದು ಹಿಂದೂಧರ್ಮವನ್ನು ಬುಡದಿಂದ ವಿರೋಧಿಸುವ ಕಮ್ಯೂನಿಸ್ಟರ ಮಾರ್ಗದಂತಲ್ಲ. ಬದಲಿಗೆ ಆಂತರಿಕ ಸುಧಾರಣೆಯ ಒಂದು ಪುಟ್ಟ ಪ್ರಯತ್ನ. ಹಾಗೆ ನಮ್ಮೊಳಗೆ ನಾವು ಭಾವಿಸುವಾಗಲೇ ಬುದ್ಧ ಬಸವರ ಆಕ್ರೋಶದ ದನಿ ಸ್ಪಷ್ಟವಾಗಿ ಅರಿವಾಗಲಾರಂಭಿಸಿತು.

ಒಂದು ನದಿಯ ವಿಚಾರದಲ್ಲೇ ನಮ್ಮ ಮನಸ್ಸುಗಳು ಇಷ್ಟು ವ್ಯಗ್ರವಾಗಿರುವಾಗ ಒಂದಿಡೀ ಜನಸಮೂಹವನ್ನು ಮುಟ್ಟಬಾರದು, ಹತ್ತಿರಕ್ಕೆ ಬಿಟ್ಟುಕೊಳ್ಳಬಾರದು, ಪಂಕ್ತಿಯಲ್ಲಿ ಊಟ ಮಾಡಬಾರದು ಎಂದೆಲ್ಲ ದೂರವಿಡುವಂತಹ ಆಚರಣೆಗಳನ್ನು ಕಂಡಾಗ ಎಷ್ಟು ಕೋಪ ಬಂದಿರಬೇಡ. ಹಾಗಂತ ಆಗಲೂ ಅದು ಎಲ್ಲರೂ ಮಾಡುವ ಆಚರಣೆಯಾಗಿರಲಿಲ್ಲ. ಕೆಲವು ಅಯೋಗ್ಯರ ನಡೆಯಾಗಿತ್ತಷ್ಟೇ. ಹೀಗಾಗಿಯೇ ಬುದ್ಧ ಇಂಥವರನ್ನು ತಳಮಟ್ಟ ಟೀಕಿಸಿದನಾದರೂ ಬ್ರಾಹ್ಮಣ ವಗ್ಗದಲ್ಲಿ ನಿಜವಾದ ಬ್ರಾಹ್ಮಣರ ಲಕ್ಷಣಗಳನ್ನೂ ವಿವರಿಸಿದ. ಇಂದು ಮತ್ತೊಮ್ಮೆ ಧರ್ಮ ಜಾಗೃತಿಯಾಗಬೇಕಿದೆ. ಹಿಂದೂ ಧರ್ಮ ಈ ಆಚರಣೆಗಳ ಭಾರದಿಂದ ನಲುಗಿಹೋಗಿದೆ. ಕಂಡಕಂಡಲ್ಲಿ ತಲೆ ಎತ್ತುವ ದೇವಸ್ಥಾನಗಳು, ಅರೆಬೆಂದ ಅರ್ಚಕರು ಹಿಂದೂಧರ್ಮಕ್ಕೆ ಆಸರೆಯಾಗುವುದು ಬಿಟ್ಟು ಭಾರವೇ ಆಗಿಬಿಡುತ್ತಿದ್ದಾರೆ. ಇದು ಹೇಗೆಂದರೆ ಕಾವೇರಿಯನ್ನು ದೇವಿಯೆಂದು ಕರೆದು ಪೂಜಿಸುವ ಪರಿಪಾಠವೇ ಹೇಗೆ ಅದಕ್ಕೆ ಹೊರೆಯಾಗಿದೆಯೋ ಹಾಗೆಯೇ. ಆದರೆ ಕಾವೇರಿಗೊಂದು ಶಕ್ತಿಯಿದೆ. ಆಕೆಯ ಶಾಂತಿಯನ್ನು ಕೆಡಿಸದೇ ಒಂದೆರಡು ದಿನಗಳ ಕಾಲ ಆಕೆಯನ್ನು ಹಾಗೆಯೇ ಬಿಟ್ಟುಬಿಟ್ಟರೆ ತನ್ನ ತಾನು ಶುಚಿಗೊಳಿಸಿಕೊಳ್ಳುವುದು ಆಕೆಗೆ ಗೊತ್ತಿದೆ. ಹಿಂದೂಧರ್ಮವೂ ಹಾಗೆಯೇ. ಅದೀಗ ಕೊಳಕು ರಾಡಿಯಿಂದ ತುಂಬಿಹೋಗಿದೆ. ಒಂದು ಸ್ವಚ್ಛತಾ ಆಂದೋಲನ ನಡೆಯಬೇಕಿದೆ. ಹಾಗಲ್ಲದೇ ಅದನ್ನು ಅದರ ಪಾಡಿಗೆ ಬಿಟ್ಟುಬಿಟ್ಟರೆ ತನ್ನ ತಾನು ಶುದ್ಧಗೊಳಿಸಿಕೊಳ್ಳುವ ಸಾಮರ್ಥ್ಯವುಳ್ಳ ಈ ಧರ್ಮ ಮತ್ತೊಮ್ಮೆ ಪರಿಶುದ್ಧವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.

ಕಾವೇರಿಯ ಕೊಳಕು ಮಾಡುವುದರಲ್ಲಿ ಆಚರಣೆಗಳ ಪಾತ್ರ ಶೇಕಡ 10ರಷ್ಟಾದರೆ ಉಳಿದ ಶೇಕಡ 90ರಷ್ಟು ಸರ್ಕಾರದ್ದೇ ಸಮಸ್ಯೆ. ಕಾವೇರಿ ತೀರದುದ್ದಕ್ಕೂ ಬರುವ ಹಳ್ಳಿಗಳ ಎಲ್ಲ ಕೊಳಕು ಕಾವೇರಿಗೇ ಸೇರುತ್ತದೆ. ನಿಮಿಷಾಂಬಾ ಮಂದಿರದ ಪಕ್ಕದಲ್ಲಿಯೇ ಇಡಿಯ ಊರಿನ ಗಟಾರದ ಅಷ್ಟೂ ನೀರು ಕಾವೇರಿಯೊಳಕ್ಕೆ ತೆರೆದುಕೊಳ್ಳುತ್ತದೆ. ನಿಮಿಷಾಂಬಾ ಉದಾಹರಣೆಯಷ್ಟೇ. ಭಾಗಮಂಡಲದಿಂದ ಶುರುಮಾಡಿ ಪೂಂಪುಹಾರ್​ನವರೆಗೆ ಕಾವೇರಿ ಹರಿಯುವ ಜಾಗದಲ್ಲೆಲ್ಲಾ ಆಕೆಗೆ ಸಾವಿರಾರು ಚರಂಡಿಗಳು ಉಪನದಿಗಳಾಗಿ ಸೇರಿಕೊಳ್ಳುತ್ತವೆ. ಅನೇಕ ಕಡೆಗಳಲ್ಲಿ ಗ್ರಾಮಪಂಚಾಯಿತಿಗಳು ಮನೆ-ಮನೆಗಳಿಂದ ಸಂಗ್ರಹಿಸಿದ ಕಸವನ್ನು ಕಾವೇರಿಗೆ ಅಡ್ಡಲಾಗಿ ಕಟ್ಟಿದ ಸೇತುವೆಯ ಮೇಲೆ ನಿಂತು ಕಾವೇರಿಗೇ ಸುರಿದುಬಿಡುತ್ತವೆ. ಜನರೇನೂ ಕಡಿಮೆಯಿಲ್ಲ. ಕಚೇರಿಗೆ ಹೋಗುವಾಗ ಕಾರು ನಿಲ್ಲಿಸಿ ಮನೆಯಿಂದ ತಂದ ಕಸವನ್ನು ಕಾವೇರಿಗೆ ಅರ್ಪಿಸಿ ಹೋಗಿಬಿಡುತ್ತಾರೆ. ಹೀಗಾಗಿಯೇ ಇಂದು ಕಾವೇರಿ ಕೊಳಕು ರಾಡಿಯ ಆಗರವಾಗಿರೋದು. ಆದಷ್ಟು ತೀವ್ರವಾಗಿ ಕಸದ ವಿಲೇವಾರಿಗೆ ನಾವು ಮುನ್ನೆಚ್ಚರಿಕೆ ವಹಿಸಲಿಲ್ಲವೆಂದರೆ ಬಲು ಬೇಗ ಕಾವೇರಿ ಮತ್ತೊಂದು ವೃಷಭಾವತಿಯಾಗುವುದರಲ್ಲಿ ಅನುಮಾನವೇ ಇಲ್ಲ. ಕೊಡಗಿನ 2 ಶಾಸಕರು, ಒಬ್ಬ ಸಂಸದರು, ಇಡಿಯ ಕರ್ನಾಟಕವನ್ನು 5 ವರ್ಷಗಳ ಕಾಲ ಪ್ರತಿನಿಧಿಸಿದ ಮುಖ್ಯಮಂತ್ರಿ ಇವರೆಲ್ಲರೂ ತಮ್ಮ ಅಧಿಕಾರಾವಧಿಯಲ್ಲಿ ಕಾವೇರಿಯ ಬಗ್ಗೆ ರೊಚ್ಚಿಗೆದ್ದು ಕೂಗಾಡಿದ್ದಾರೆಯೇ ಹೊರತು ಅದರ ಕುರಿತಂತೆ ಶ್ರಮವಹಿಸಿ ದುಡಿದಿದ್ದು ಸೊನ್ನೆಯೇ ಸರಿ. ಕನ್ನಡ ನಾಡಿಗೆ ಪ್ರತ್ಯೇಕ ಬಾವುಟವೊಂದನ್ನು ತಂದು ತಾನು ಕನ್ನಡಿಗರ ಹಿತರಕ್ಷಣೆಯ ದೇವದೂತನೆಂಬಂತೆ ಬಿಂಬಿಸಿಕೊಂಡ ಸಿದ್ದರಾಮಯ್ಯನವರು ತಲಕಾವೇರಿಯಲ್ಲಿ ಬಾಗಿನ ಕೊಟ್ಟಿದ್ದು ಬಿಟ್ಟರೆ ಕಾವೇರಿಯ ಕುರಿತಂತೆ ತೀವ್ರವಾಗಿ ಆಲೋಚಿಸಿದ್ದು ನನಗಂತೂ ಅನುಮಾನ. ಒಬ್ಬ ಮುಖ್ಯಮಂತ್ರಿಯಾಗಿ ಕಾವೇರಿ ಜಲಾನಯನದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ಮಾಫಿಯಾವನ್ನು ಮಟ್ಟಹಾಕಲಿಕ್ಕಾಗಲಿಲ್ಲವೆಂದರೆ ಯಾವ ಪುರುಷಾರ್ಥಕ್ಕಾಗಿ ಆ ಪದವಿ? ದೊಡ್ಡ-ದೊಡ್ಡ ಯೋಜನೆಗಳನ್ನು ಘೊಷಿಸಿ ಕಿಕ್​ಬ್ಯಾಕ್ ಪಡೆಯುವಂಥ ಮಂತ್ರಿ ಮಾಗಧರಿಗೆ ಕಾವೇರಿಯನ್ನು ಶುದ್ಧವಾಗುಳಿಸಿದರೆ ಅಲ್ಲಿನ ನೀರಿನ ಹರಿವನ್ನು ಹೆಚ್ಚಿಸುವಂತೆ ಮಾಡಿದರೆ ಅರ್ಧ ಭಾಗ ಕರ್ನಾಟಕದ ನೀರಿನ ಸಮಸ್ಯೆಯನ್ನು ಇಂಗಿಸಬಹುದೆಂಬ ಸಣ್ಣ ಅರಿವೂ ಇಲ್ಲದಿರುವುದು ದುರಂತಕಾರಿ.

ಇವರನ್ನು ನಂಬಿಕೊಂಡು ಕಾಲ ಸವೆಸಿಬಿಟ್ಟರೆ ಕಾವೇರಿ ತಾಯಿಯನ್ನು ಕಳೆದುಕೊಂಡ ಅನಾಥರು ನಾವಾಗಿಬಿಡುತ್ತೇವೆ. ಇದು ಎಚ್ಚೆತ್ತುಕೊಳ್ಳಬೇಕಾದ ಸಮಯ. ಮೈಸೂರಿನ ಇಂಜಿನಿಯರಿಂಗ್ ಕಾಲೇಜಿನ ಹುಡುಗರು ಕಾವೇರಿಯ ಸ್ವಚ್ಛತೆಯ ಕುರಿತಂತೆ ಒಂದಷ್ಟು ಪ್ರಾಜೆಕ್ಟುಗಳನ್ನು ಯೋಜಿಸಿದರೆ ಒಳಿತಾಗಬಹುದು. ಥೇಮ್್ಸ ನದಿಯನ್ನು ಸ್ವಚ್ಛಗೊಳಿಸುವಲ್ಲಿ ಇಂಗ್ಲೆಂಡಿಗರ ಪಾತ್ರ, ಕೊಳಕು ರಾಡಿಯಾಗಿದ್ದ ಸಾಬರಮತಿ ನದಿಯನ್ನು ಅತ್ಯಂತ ಸುಂದರಗೊಳಿಸುವಲ್ಲಿ ನರೇಂದ್ರ ಮೋದಿಯವರ ಪಾತ್ರವನ್ನು ನಾವೀಗ ಅಧ್ಯಯನ ಮಾಡಿ ಕಾವೇರಿಯನ್ನು ಹಾಗೆಯೇ ರೂಪಿಸಬೇಕಿದೆ. ಜನರಿಗೆ ಮಾರ್ಗದರ್ಶನ ಮಾಡುವ ಜ್ಯೋತಿಷಿಗಳು ಕಾವೇರಿಯಷ್ಟೇ ಅಲ್ಲದೇ ನಾಡಿನ ಬೇರೆ ಬೇರೆ ನದಿಗಳನ್ನು ಬಲು ಶ್ರದ್ಧೆಯಿಂದಲೇ ರಾಡಿ ಮಾಡುತ್ತಿರುವ ಆಸ್ತಿಕರಿಗೆ ಬುದ್ಧಿ ಹೇಳಬೇಕಿದೆ. ಕಾವೇರಿ ಉಳಿದರೆ ಮಾತ್ರ ಕನ್ನಡದ ಸಂಸ್ಕೃತಿ ಮತ್ತು ದಡದುದ್ದಕ್ಕೂ ಹರಡಿಕೊಂಡಿರುವ ತೀರ್ಥಕ್ಷೇತ್ರಗಳಿಂದಾಗಿ ಹಿಂದೂ ಸಂಸ್ಕೃತಿ ಉಳಿದಿದೆ ಎಂಬುದನ್ನು ನಾವ್ಯಾರೂ ಮರೆಯುವಂತಿಲ್ಲ. ಜನರ ಆಸ್ಥೆಗೂ ಭಂಗ ಬರದಂತೆ ಕಾವೇರಿಯೂ ಮಲಿನಗೊಳ್ಳದಂತೆ ನದಿಯ ತೀರದಲ್ಲೇ ಒಂದಷ್ಟು ಹೊಂಡಗಳನ್ನು ಮಾಡಿ ಅಲ್ಲಿಯೇ ಧಾರ್ವಿುಕ ಚಟುವಟಿಕೆಗಳನ್ನು ನಡೆಸುವಂತೆ ಮಾಡಿಬಿಟ್ಟರೆ ಜನರ ಭಕ್ತಿಗೂ ತಡೆಯಾಗಲಾರದು ಕಾವೇರಿಯ ಹರಿವಿಗೂ ತೊಂದರೆ ಇರಲಾರದು. ಸ್ಥಳೀಯ ಆಡಳಿತಗಳು ಕಠಿಣ ನಿಯಮಗಳನ್ನು ಹೇರಿ ಜನರಿಂದ ರಕ್ಷಿಸುವಂತೆ ಮಾಡಿಬಿಟ್ಟರೆ ಮುಂದಿನ ಪೀಳಿಗೆಗೆ ಕಾವೇರಿ ಉಳಿಯುತ್ತದೆ. ಇಲ್ಲವಾದಲ್ಲಿ ಅದಾಗಲೇ 46 ಪ್ರತಿಶತ ಕಾವೇರಿಯ ಹರಿವು ಕಡಿಮೆಯಾಗಿದೆ. ಜಲಾನಯನದಲ್ಲಿ ದಶಕದಿಂದೀಚೆಗೆ ಅರ್ಧಭಾಗದಷ್ಟು ಮಳೆ ಕಡಿಮೆಯಾಗಿ ಹೋಗಿದೆ. ಮರಳು ಮಾಫಿಯಾದ ಕಾರಣದಿಂದಾಗಿ ಜಲಾನಯನದುದ್ದಕ್ಕೂ ಅನೇಕ ಕಡೆ ಕಾವೇರಿಯ ಹರಿವು ನಿಂತೇ ಹೋಗಿದೆ. ಮುಂದೇನು ಎಂಬ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ. ಎಲ್ಲರೂ ಒಟ್ಟಾದರಷ್ಟೇ ಕಾವೇರಿಯನ್ನು ಉಳಿಸಬಹುದು, ಮುಂದಿನ ಪೀಳಿಗೆಗೆ ಸಂಸ್ಕೃತಿ ಪರಂಪರೆಯನ್ನು ಧಾರೆಯಾಗಿಸಿಕೊಡಬಹುದು.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *

Back To Top