Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಅಟಲ್​ಜಿ ಮತ್ತು ಮೋದಿ ನಡುವಿನ ತುಲನೆ ಸರಿಯಾ?

Monday, 20.08.2018, 3:05 AM       No Comments

ಬಹುಶಃ ದೇಶದ ಕೋಟ್ಯಂತರ ಜನರು ಮೋದಿಯವರ ಕುರಿತಂತೆಯೇ ಭಗವಂತನಲ್ಲಿ ಪ್ರಾರ್ಥಿಸುತ್ತಿರುತ್ತಾರೆ. ಕೆಲವರು ಒಳಿತಾಗಲಿ ಎಂದು ಕೇಳಿಕೊಂಡರೆ ಇನ್ನೂ ಕೆಲವರು ಕೆಡುಕಾಗಲಿ ಅಂತ. ಮನಸ್ಸಿಲ್ಲದೆ ಹೋದಾಗಲೂ ಹೀಗೆ ನಾಯಕನೊಬ್ಬನ ಕುರಿತಂತೆ ಆಲೋಚನೆ ಮಾಡಲೇಬೇಕಾದ ಪರಿಸ್ಥಿತಿಯನ್ನು ಮೋದಿ ನಿರ್ಮಾಣ ಮಾಡಿಬಿಟ್ಟಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿಯವರು ಬದುಕಿದ್ದಾಗ ಅವರನ್ನು ಕಂಠಮಟ್ಟ ವಿರೋಧಿಸಿದ್ದ ಕೆಲವು ಪತ್ರಕರ್ತರಿಗೆ, ತೀರಿಕೊಂಡಾಕ್ಷಣ ಅವರು ‘ಹೀರೊ’ ಎನಿಸಲಾರಂಭಿಸಿದ್ದು ಕಾಲದ ಮಹಿಮೆ ಎಂದೇ ಹೇಳಬೇಕೇನೊ! ಅಟಲ್​ಜಿಯನ್ನು ಗದ್ದಾರ್ (ದೇಶದ್ರೋಹಿ) ಎಂದು ಕರೆದಿದ್ದ ಸೋನಿಯಾ, ಅವರು ತೀರಿಕೊಂಡಾಗ ಬೇರೆ ಬಗೆಯ ಮಾತುಗಳನ್ನೇ ಆಡಿದ್ದು ರಾಜಕೀಯದ ಬೇರೆಯದ್ದೇ ರೀತಿನೀತಿ ಇರಬೇಕು. ಇದ್ದಕ್ಕಿದ್ದಂತೆ ವಾಜಪೇಯಿ ಮಹಾನಾಯಕ ಎಂದು ಸಂಘವಿರೋಧಿಗಳಿಗೂ ಎನಿಸಿದ್ದರ ಹಿಂದಿನ ಮುಖ್ಯಕಾರಣ ಏನಿರಬಹುದು ಗೊತ್ತೇ? ನಿಸ್ಸಂಶಯವಾಗಿ ಅದು ನರೇಂದ್ರ ಮೋದಿಯೇ. ಅಟಲ್​ಜಿಯವರ ಸಾವಿನ ನಂತರ ಅನೇಕ ಸಂಘವಿರೋಧಿ ಲೇಖಕರು ಮೋದಿಗಿಂತ ವಾಜಪೇಯಿಯವರೇ ಶ್ರೇಷ್ಠನಾಯಕ ಎಂಬುದನ್ನು ಪ್ರತಿಬಿಂಬಿಸಲು ಹೆಣಗಾಡಿದ್ದನ್ನು ಕಂಡಾಗ ಮೋದಿ ಬೆಳೆದು ನಿಂತಿರುವ ಪರಿ ಕಂಡು ಎಂಥವನಿಗೂ ಅಸೂಯೆಯಾಗುವುದು ಖಚಿತ. ಅದು ಯಾವಾಗಲೂ ಹಾಗೆಯೇ. ಆಡ್ವಾಣಿ ರಾಮಮಂದಿರದ ರಥಯಾತ್ರೆ ಶುರುಮಾಡಿದ ನಂತರ ಈ ಲೇಖಕರುಗಳಿಗೆಲ್ಲ ಅವರಿಗಿಂತ ಅಟಲ್​ಜಿ ಪರವಾಗಿಲ್ಲ ಎನಿಸಿತ್ತು. ಗುಜರಾತ್​ನಲ್ಲಿ ಮುಖ್ಯಮಂತ್ರಿಯಾದ ನಂತರ ಮೋದಿ ಅತ್ಯಂತ ಕಠೋರ ಎನಿಸಿದ್ದಲ್ಲದೆ, ಅವರೊಂದಿಗೆ ತುಲನೆ ಮಾಡಿ ಅಟಲ್​ಜಿಯನ್ನು ದೇವರೆಂದು ಭಾವಿಸಲಾರಂಭಿಸಿದ್ದರು ಇವರು. ಮೋದಿ ಪ್ರಧಾನಿಯಾದ ಮೇಲಂತೂ ಈ ಎಡಪಂಥೀಯ ಬುದ್ಧಿಜೀವಿಗಳ ಗುಂಪು ನೂರೆಂಟು ಟೀಕೆಗಳನ್ನು ಮಾಡಿತು. ಈ ಚಿಂತಕರೆನಿಸಿಕೊಳ್ಳುವವರಿಗೆ ಮೋದಿ ಒಳ್ಳೆಯವರಾಗಿ ಕಂಡಿದ್ದು ಯಾವಾಗ ಗೊತ್ತೇ? ಯೋಗಿ ಮುಖ್ಯಮಂತ್ರಿಯಾದ ಮೇಲೇ! ಈಗಲೂ ಹಾಗೆಯೇ. ಅಟಲ್​ಜಿ ಮೋದಿಗಿಂತ ಸಾವಿರಪಾಲು ಒಳಿತಾಗಿದ್ದರು ಎಂದು ಸಾಬೀತುಪಡಿಸುವಲ್ಲಿ ಇವರೆಲ್ಲ ಹೆಣಗಾಡುತ್ತಿರುವ ಪರಿ ಅಷ್ಟಿಷ್ಟಲ್ಲ.

ಇಷ್ಟಕ್ಕೂ ಮೋದಿ ಪ್ರಧಾನಿಯಾಗಲು ಅಟಲ್​ಜಿಯವರೇ ಕಾರಣ. ಗುಜರಾತಿನಲ್ಲಿ ಪಕ್ಷದ ಜವಾಬ್ದಾರಿ ಹೊತ್ತಿದ್ದ ಮೋದಿ, ಕೇಶುಬಾಯಿ ಪಟೇಲರ ಆತ್ಮೀಯರಾಗಿ ಗುರುತಿಸಿಕೊಂಡವರು. ಇದೇ ಕೇಶುಭಾಯಿ ಮುಂದೆ ಮೋದಿ ತನ್ನ ಬೆಳವಣಿಗೆಗೆ ಅಡ್ಡಗಾಲಾಗುವರೆಂದು ಭಾವಿಸಿ ಅವರನ್ನು ಗುಜರಾತಿನಿಂದ ಆಚೆಗಟ್ಟಿ ದೆಹಲಿಗೆ ತಳ್ಳಿದ್ದರು. ಇದೇ ವೇಳೆಯಲ್ಲಿ ರಾಜಕಾರಣದಿಂದ ಅಜ್ಞಾತವಾಸಕ್ಕೆ ತೆರಳಿದ ಮೋದಿ ಅಮೆರಿಕದಲ್ಲಿ ಕೆಲಕಾಲ ಅಧ್ಯಯನಶೀಲರಾಗಿದ್ದರಂತೆ. ಆಗ ವಿದೇಶ ಪ್ರವಾಸಕ್ಕೆ ತೆರಳಿದ್ದ ಅಟಲ್​ಜಿ ಪಕ್ಷದ ನೊಗ ಹೊರಬೇಕು ಎಂಬ ಜವಾಬ್ದಾರಿಯನ್ನು ಕೊಟ್ಟು ಅವರನ್ನು ಮರಳಿ ಕರೆತಂದರು. ಮುಂದೆ ಗುಜರಾತಿನಲ್ಲಿ ಭೂಕಂಪವಾಗಿ ಪರಿಹಾರ ಕಾರ್ಯದಲ್ಲಿ ಭಾಜಪಕ್ಕೆ ಕೆಟ್ಟಹೆಸರು ಬಂದಾಗ ಇದೇ ಅಟಲ್​ಜಿ ಮೋದಿಯವರನ್ನು ಕಚೇರಿಗೆ ಕರೆಸಿಕೊಂಡಿದ್ದರಂತೆ. ಆಗ ಮಿತ್ರನೊಬ್ಬನ ಸಾವಿನ ದುಃಖದಲ್ಲಿದ್ದ ಮೋದಿಗೆ ಗುಜರಾತಿನ ಜವಾಬ್ದಾರಿಯನ್ನು ಹೆಗಲಿಗೇರಿಸಿದ ಅಟಲ್​ಜಿ ಆಶೀರ್ವಾದ ಮಾಡಿಯೂ ಕಳಿಸಿದ್ದರು. ಹಾಗೆ ನೋಡಿದರೆ ಮೋದಿ ಆಡ್ವಾಣಿ ಪಾಳಯದವರು. ಆಡ್ವಾಣಿ ಮತ್ತು ಅಟಲ್​ಜಿ ಮೇಲ್ನೋಟಕ್ಕೆ ಒಳ್ಳೆಯ ಗೆಳೆತನ ಹೊಂದಿದ್ದರೂ ಆಂತರಿಕವಾಗಿ ಭಿನ್ನಾಭಿಪ್ರಾಯಗಳು ಇದ್ದೇ ಇದ್ದವು. ಹೀಗಾಗಿ ಮೋದಿಯನ್ನು ಮುಖ್ಯಮಂತ್ರಿಯಾಗಿಸುವ ಮೂಲಕ ಅಟಲ್​ಜಿ ಆಡ್ವಾಣಿಯವರನ್ನೂ ಸಮಾಧಾನಪಡಿಸಲೆತ್ನಿಸಿದ್ದರು. ಆದರೆ ಗೋಧ್ರಾ ಹತ್ಯಾಕಾಂಡದ ನಂತರ ಮುನಿಸಿಕೊಂಡ ಅಟಲ್​ಜಿ, ಮೋದಿಯವರನ್ನು ಕೆಳಗಿಳಿಸಲು ಬಯಸಿದ್ದರೆಂದು ಅರುಣ್ ಶೌರಿಯವರ ಕೃತಿ ಹೇಳುತ್ತದೆ.

2002ರ ಏಪ್ರಿಲ್​ನಲ್ಲಿ ಗೋವಾದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲೆಂದು ಹೊರಟ ಅಟಲ್, ಆಡ್ವಾಣಿ, ಜಸ್ವಂತ್ ಸಿಂಗ್​ರೊಂದಿಗೆ ಅಟಲ್​ರ ಅಳಿಯ ರಂಜನ್​ರ ಅಪೇಕ್ಷೆಯ ಮೇರೆಗೆ ಶೌರಿಯೂ ಹೋಗಿದ್ದರು. ತಮ್ಮ ಶಿಷ್ಯನನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಲು ಒಪ್ಪದ ಆಡ್ವಾಣಿಯವರೊಂದಿಗೆ ಅಟಲ್​ಜಿಯವರ ಮಾತುಕತೆಯೇ ನಿಂತುಹೋಗಿತ್ತು. ಇಬ್ಬರೂ ತಂತಮ್ಮ ಪಾಡಿಗೆ ಪತ್ರಿಕೆ ಹಿಡಿದು ಓದುತ್ತ ಕುಳಿತುಬಿಟ್ಟರಂತೆ. ಶೌರಿ ಇಬ್ಬರನ್ನೂ ಮಾತಿಗೆಳೆಯುವಂತೆ ಮಾಡಿದಾಗ ಅಟಲ್​ಜಿ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದರಂತೆ. ಆದರೆ ಕಾರ್ಯಕಾರಿಣಿಯಲ್ಲಿ ನಡೆದದ್ದೇ ಬೇರೆ. ಇವರಿಬ್ಬರೂ ಕೇಳಿಕೊಳ್ಳುವ ಮುನ್ನವೇ ಮೋದಿ ಅಧಿಕಾರ ಬಿಡುವ ಬಯಕೆಯನ್ನು ತಾವೇ ವ್ಯಕ್ತಪಡಿಸಿದರು. ತಕ್ಷಣವೇ ಸಭೆಯಲ್ಲಿ ಹಾಹಾಕಾರವೆದ್ದು ಮೋದಿ ಅಧಿಕಾರ ತ್ಯಾಗ ಮಾಡುವ ಅಗತ್ಯವಿಲ್ಲವೆಂದು ಕೂಗಿದರು ಜನ. ಅದು ಮೋದಿಯವರ ಬದುಕಿನ ಬಲು ದೊಡ್ಡ ಟರ್ನಿಂಗ್ ಪಾಯಿಂಟ್. ಅಟಲ್​ಜಿ ಮೆತ್ತಗಾಗಲೇಬೇಕಾಗಿ ಬಂತು. ಮುಂದೆ ಅಟಲ್​ಜಿ ಗುಜರಾತಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕುಳಿತಾಗ ಗೋಧ್ರಾಕಾಂಡದ ಚರ್ಚೆ ಬಂದಾಗ ರಾಜಧರ್ಮವನ್ನು ಪ್ರತಿಯೊಬ್ಬ ನಾಯಕನೂ ಪಾಲಿಸಬೇಕು ಎಂದಿದ್ದರು. ಮರುಕ್ಷಣವೇ ಮೋದಿಯವರ ಹೆಗಲ ಮೇಲೆ ಕೈ ಹಾಕಿ ‘ಈತ ಅದನ್ನೇ ಮಾಡುತ್ತಿದ್ದಾನೆ’ ಎಂದು ಸಮರ್ಥಿಸಿಯೂಕೊಂಡರು. ಆಂತರಿಕ ಘರ್ಷಣೆಗಳೇನೇ ಇರಲಿ ಹೊರಗಿನವರ ಮುಂದೆ ಮಾತೃಸಂಘಟನೆಯನ್ನು ಬಿಟ್ಟುಕೊಡದಿರುವ ಶ್ರೇಷ್ಠಗುಣ ಇಬ್ಬರಿಗೂ ಇದೆ. ಸಂಘಟನೆಯನ್ನು ಬಲಗೊಳಿಸುವ ವಿಚಾರದಲ್ಲಿ ಸೈದ್ಧಾಂತಿಕ ಅಡಿಪಾಯ ಹಾಕಿ ಭವ್ಯಸೌಧವನ್ನು ನಿರ್ವಿುಸುವಲ್ಲಿ ಇಬ್ಬರಿಗೂ ಬಲವಾದ ನಂಬಿಕೆ. ಹೀಗಾಗಿಯೇ ಮುಖ್ಯಮಂತ್ರಿಯಾಗಬೇಕೆಂದು ತಾಕೀತು ಮಾಡಿದ ವ್ಯಕ್ತಿಯೇ ಆ ಪದವಿಯಿಂದ ಕೆಳಗಿಳಿಯಬೇಕೆಂದು ಒತ್ತಾಯಿಸಿದಾಗ ಮೋದಿ ಗಲಿಬಿಲಿಗೊಳ್ಳಲಿಲ್ಲ. ಹಾಗೆಯೇ ತನ್ನ ನಿರ್ಣಯಕ್ಕೆ ವಿರುದ್ಧವಾಗಿ ಪಕ್ಷದೊಳಗೆ ಕೂಗು ಕೇಳಿಬಂದೀತು ಎಂಬುದರ ಅರಿವಿದ್ದಾಗಲೂ ಅದಕ್ಕೆ ಕಾರಣನಾದವನನ್ನು ಬಿಟ್ಟುಕೊಡಲು ಅಟಲ್​ಜಿ ಸಿದ್ಧರಿರಲಿಲ್ಲ. ಇಬ್ಬರಲ್ಲೂ ಇದ್ದ ಸಾಮ್ಯತೆ ಇಲ್ಲಿಗೇ ಕೊನೆಯಾಗುತ್ತದೆ. ಇನ್ನೇನಿದ್ದರೂ ಇವರಿಬ್ಬರ ನಡುವಿನ ವೈರುಧ್ಯಗಳನ್ನು ಮಾತ್ರ ಗುರುತಿಸಬಹುದು.

ಇಬ್ಬರೂ ಮಾತಿನ ಮಲ್ಲರೇ. ಎದುರಾಳಿಗಳ ತಲೆದೂಗಿಸಬಲ್ಲಂಥ ವಕ್ತ ೃ್ವವನ್ನು ಇಬ್ಬರೂ ಪಡೆದುಕೊಂಡಿದ್ದಾರೆ. ಆದರೆ ಅಟಲ್​ಜಿ ತಮ್ಮ ಕವನಗಳ ಮೂಲಕ ಎಲ್ಲರ ಮನಸೂರೆಗೊಂಡವರು. ಮೋದಿಯವರಿಗೆ ಆ ಭಾಗ್ಯವಿಲ್ಲ. ವಾಜಪೇಯಿ ನಿಮ್ಮನ್ನು ಅಳುವಂತೆ ಮಾಡಬಲ್ಲರು. ಆದರೆ ನರೇಂದ್ರ ಮೋದಿ ನಿಮ್ಮನ್ನು ಆಲೋಚನೆಗೆ ಹಚ್ಚಬಲ್ಲರು. ಅನೇಕರು ವಾಜಪೇಯಿಯವರಿಗೆ ಪೂರ್ಣಬಹುಮತದ ಸರ್ಕಾರ ನಡೆಸುವ ಅವಕಾಶ ದಕ್ಕಿರಲಿಲ್ಲವೆಂದು ಕೊರಗುತ್ತಾರೆ, ಮೋದಿ ಆ ವಿಚಾರದಲ್ಲಿ ಭಾಗ್ಯವಂತರು ಎನ್ನುತ್ತಾರೆ. ಆದರೆ ಅವರಿಗೆ ಗೊತ್ತಿರದ ಸಂಗತಿ ಎಂದರೆ ಮೋದಿ 2014ರ ಚುನಾವಣೆಗೂ ಮುನ್ನ 8 ತಿಂಗಳ ಕಾಲ 3 ಲಕ್ಷ ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಿ, 450ಕ್ಕೂ ಹೆಚ್ಚು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದರು. ಅದರೊಟ್ಟಿಗೆ ‘ಚಾಯ್ ಪೇ ಚರ್ಚಾ’ಗಳು, 3-ಡಿ ರ್ಯಾಲಿಗಳು ಬೇರೆ. ತನಗೆ ಬೇಕಾದ ಸಂಖ್ಯೆಯನ್ನು ಪಡೆದುಕೊಳ್ಳಲು ಮೋದಿ ಮುಲಾಜಿಲ್ಲದೆ ಶ್ರಮಹಾಕಿದ್ದಾರೆ. ಈಗಲೂ ಅಷ್ಟೇ. ಲೋಕಸಭೆ ಚುನಾವಣೆಯಿಂದ ಹಿಡಿದು ಗ್ರಾಮ ಪಂಚಾಯತ್ ಚುನಾವಣೆಯವರೆಗೂ ಮೋದಿಯೇ ಸ್ಟಾರ್ ಭಾಷಣಕಾರ. ಬೇಕಿದ್ದರೆ ಅವರೊಬ್ಬರೇ ಭಾಷಣಕಾರರು ಎಂದರೂ ತಪ್ಪಿಲ್ಲ. ಅಟಲ್​ಜಿ ಉತ್ತಮ ವಾಗ್ಮಿಯಾಗಿದ್ದರೂ ಚುನಾವಣಾ ರ್ಯಾಲಿಗಳಲ್ಲಿ ಅನೇಕ ನಾಯಕರೊಂದಿಗೆ ಅವರೂ ಒಬ್ಬರಾಗಿದ್ದರು. ಆದರೆ ಮೋದಿ ಹಾಗಲ್ಲ. ನೂರೆಂಟು ನಾಯಕರಿದ್ದರೂ ಮೋದಿಯೇ ಎಲ್ಲರಿಗೂ ಬೇಕು. ಹೀಗಾಗಿ ಲೋಕಸಭೆಯನ್ನಷ್ಟೇ ಅಲ್ಲದೆ ಮಹಾರಾಷ್ಟ್ರ, ಗುಜರಾತ್, ಹರಿಯಾಣ ಇಲ್ಲೆಲ್ಲ ಅಧಿಕಾರ ಪಡೆದಿರುವುದರಲ್ಲಿ ನಿಸ್ಸಂಶಯವಾಗಿ ಅವರದ್ದೇ ಸಾಮರ್ಥ್ಯ ಇದೆ. ಈ ಕಾರಣದಿಂದಾಗಿಯೇ ಭಾಜಪದಲ್ಲಿ ಅವರೊಬ್ಬ ಎದುರಾಳಿಯಿಲ್ಲದ ನಾಯಕರಾಗಿಬಿಟ್ಟಿದ್ದಾರೆ. ಯಾವ ನಿರ್ಣಯ ತೆಗೆದುಕೊಳ್ಳಬೇಕಿದ್ದರೂ ತಾವೇ ನಿಶ್ಚಯಿಸುತ್ತಾರೆ. ಪ್ರಧಾನಮಂತ್ರಿ ಕಚೇರಿ ಮೋದಿಯವರ ಪರಿವಾರದ ಒಬ್ಬ ಸದಸ್ಯನೂ ಇಲ್ಲದೆ ಸಮರ್ಥ ಅಧಿಕಾರಿಗಳ ತಾಣವಾಗಿದ್ದು ಪ್ರತಿಯೊಂದು ಮಂತ್ರಿಯ ನಿರ್ಣಯವೂ ಈ ಕಚೇರಿಯ ಮೂಲಕವೇ ಹಾದುಹೋಗಬೇಕಾಗಿದೆ. ರಕ್ಷಣಾ ಸಚಿವರೇ ಇರಲಿ ವಿದೇಶಾಂಗ ಸಚಿವರೇ ಇರಲಿ, ಪ್ರಮುಖ ನೀತಿನಿರ್ಣಯಗಳಿಗೆ ಪ್ರತಿಯೊಬ್ಬರೂ ಪ್ರಧಾನಮಂತ್ರಿ ಕಚೇರಿಯನ್ನೇ ದಾಟಿಹೋಗಬೇಕು. ಅಟಲ್​ಜಿ ಹಾಗಿರಲಿಲ್ಲ. ಅವರು ಪ್ರತಿಯೊಂದು ನಿರ್ಣಯ ತೆಗೆದುಕೊಳ್ಳುವ ಮೊದಲು ಕ್ಯಾಬಿನೆಟ್ಟಿನ ಪ್ರಮುಖರನ್ನು ಮಾತನಾಡಿಸಿಯೇ ನಿಶ್ಚಯಿಸುತ್ತಿದ್ದರು. ಅಟಲ್​ಜಿ ಎಲ್ಲರನ್ನೂ ನಂಬುವ ಗುಣ ಹೊಂದಿದ್ದವರು. ಆಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಬ್ರಿಜೇಶ್ ಮಿಶ್ರಾ ಬಹುತೇಕ ನಿರ್ಣಯಗಳನ್ನು ತಾವೇ ತೆಗೆದುಕೊಳ್ಳುತ್ತಿದ್ದರು. ಮೋದಿ ಹಾಗಲ್ಲ. ಅವರ ಕೈಕೆಳಗಿನ ಅನೇಕ ಅಧಿಕಾರಿಗಳು ತಮ್ಮ ಡ್ರೈವರ್​ಗಳ ಫೋನಿನಿಂದ ಮಾತನಾಡುತ್ತಾರೆ. ಮೋದಿಯ ಹದ್ದುಗಣ್ಣಿನಿಂದ ಬಚಾವಾಗಲು ಮಂತ್ರಿ- ಮಹೋದಯರೂ ಕಸರತ್ತು ನಡೆಸುತ್ತಿರುತ್ತಾರೆ. 12 ವರ್ಷಗಳ ಕಾಲ ಗುಜರಾತಿನಲ್ಲಿ ಅಧಿಕಾರಿಗಳ ಕಾರ್ಯವೈಖರಿಯನ್ನು ಹತ್ತಿರದಿಂದ ಗಮನಿಸಿದ ಮೋದಿ ಪ್ರಧಾನಿಯಾದೊಡನೆ ಎಲ್ಲೆಲ್ಲಿ ಹಿಂಡಬೇಕೊ ಅಲ್ಲಲ್ಲಿಯೇ ಸರಿಯಾಗಿ ಹಿಂಡಿದ್ದಾರೆ.

ಅಭಿವೃದ್ಧಿಯ ವಿಚಾರದಲ್ಲೂ ಮೋದಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದ್ದಾರೆ. ಅಟಲ್​ಜಿಯ ತೆಕ್ಕೆಗೆ ಸುವರ್ಣ ಚತುಷ್ಪಥ, ಪ್ರಧಾನಮಂತ್ರಿ ಗ್ರಾಮ ಸಡಕ್, ಅಣುಪರೀಕ್ಷೆಯಂತಹ ಒಂದಷ್ಟು ಹೆಮ್ಮೆಯ ಸಾಧನೆಗಳು ಬಿದ್ದಿದ್ದರೆ ಮೋದಿ ಅತ್ಯಂತ ಹೆಚ್ಚಿನ ವಿದ್ಯುತ್ ಉತ್ಪಾದನೆ, ಕಲ್ಲಿದ್ದಲು ಉತ್ಪಾದನೆಗಳ ಮೂಲಕ ವಿಕ್ರಮ ಮೆರೆದಿದ್ದಾರೆ. ಅತ್ಯಂತ ಹೆಚ್ಚು ರಸ್ತೆಗಳ ನಿರ್ವಣದ ಕಿರೀಟ ಅವರ ತಲೆ ಮೇಲೆಯೇ ಇದೆ. ಜನ್​ಧನ್ ಅಕೌಂಟಿನ ಮೂಲಕ ಅತ್ಯಂತ ಹೆಚ್ಚು ಖಾತೆ ಹೊಂದಿರುವವರನ್ನು ನಿರ್ವಿುಸಿದ ಸಾಧನೆಯೂ ಅವರದ್ದೇ. ಫಸಲ್ ಬಿಮಾ, ಕೃಷಿ ಸಿಂಚಾಯಿ ಯೋಜನೆಗಳ ಮೂಲಕ ರೈತರ ಮನಮುಟ್ಟಿದ್ದರೆ ಕೌಶಲವರ್ಧನೆ, ಡಿಜಿಟಲ್ ಇಂಡಿಯಾದ ಕಲ್ಪನೆಯ ಮೂಲಕ ಹಳ್ಳಿಗರ ಜೀವನವನ್ನು ಸುಧಾರಿಸುವ ಪ್ರಯತ್ನ ಮಾಡಿದ್ದಾರೆ. ಕಳೆದ 70 ವರ್ಷಗಳಲ್ಲಿ ವಿಕಾಸದ ಓಟಕ್ಕೆ ಈ ಪರಿಯ ವೇಗವನ್ನು ತಂದುಕೊಟ್ಟ ಮತ್ತೊಬ್ಬ ನಾಯಕನಿರಲಿಲ್ಲ!

ಅಟಲ್​ಜಿ ಮೃದುಹೃದಯದ ವ್ಯಕ್ತಿ. ಪ್ರತಿಪಕ್ಷದವರು ಮಾಡಿದ ತಪ್ಪನ್ನೂ ಕ್ಷಮಿಸಿಬಿಡಬಲ್ಲ ವಿಶಾಲಹೃದಯ ಅವರದ್ದು. ಮೋದಿ ಹಾಗಲ್ಲ. ರಾಷ್ಟ್ರಕ್ಕೆ, ತನ್ನ ಸಂಘಟನೆಗೆ ಸೂಕ್ತವೆನಿಸಿದ್ದನ್ನು ಎಷ್ಟೇ ಚೌಕಾಶಿಯಾದರೂ ಸರಿ, ಪಡೆದೇ ತೀರುತ್ತಾರೆ. ಬಿಹಾರದಲ್ಲಿ ಬಿಜೆಪಿಗೆ 65 ಸ್ಥಾನಗಳು ಬಂದಿದ್ದು ಜನತಾ ದಳಕ್ಕೆ 35 ಸ್ಥಾನ ಬಂದಾಗಲೂ ವಾಜಪೇಯಿಯವರು ನಿತೀಶರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಆ ಸ್ಥಾನದಲ್ಲಿ ಮೋದಿ ಇದ್ದಿದ್ದರೆ ಅದು ಖಂಡಿತ ಸಾಧ್ಯವಾಗುತ್ತಿರಲಿಲ್ಲ. ಎರಡನೇ ದೊಡ್ಡ ಪಕ್ಷವಾಗಿ ಪಿಡಿಪಿಯೊಂದಿಗೆ ಸೇರಿ ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚಿಸಿದಾಗ ಮೋದಿ ಉಪಮುಖ್ಯಮಂತ್ರಿ ಹುದ್ದೆಯನ್ನು ಪಕ್ಷಕ್ಕೆ ಪಡೆದುಕೊಂಡರು. ಅದೇ ವೇಳೆ ಮಹಾರಾಷ್ಟ್ರದಲ್ಲಿ ಶಿವಸೇನೆಗೇನೂ ಉಪಮುಖ್ಯಮಂತ್ರಿ ಹುದ್ದೆಯನ್ನು ಕೊಡಲಿಲ್ಲ.

ಅಟಲ್​ಜಿಯನ್ನು ಕಂಡರೆ ಪತ್ರಕರ್ತರಿಗೆ ಬಲುವಾದ ಪ್ರೀತಿ. ಅಟಲ್​ಜಿಯೂ ಅವರೊಂದಿಗೆ ನಯವಾಗಿಯೇ ನಡೆದುಕೊಳ್ಳುತ್ತಿದ್ದರು. ಅಧಿಕಾರಕ್ಕೇರಿದ ಕೆಲವೇ ದಿನಗಳಲ್ಲಿ ಅಧಿಕೃತ ನಿವಾಸದಲ್ಲಿ ಹಿರಿಯ ಪತ್ರಕರ್ತರಿಗೆ ಅಟಲ್​ಜಿ ಔತಣಕೂಟ ಆಯೋಜಿಸಿದ್ದರು. ಪತ್ರಕರ್ತರು ಕೇಳಿದ ಎಲ್ಲ ಪ್ರಶ್ನೆಗಳಿಗೂ ತಮ್ಮ ಕವಿಭಾಷೆಯಲ್ಲಿಯೇ ಸಹಜವಾಗಿ ಉತ್ತರಿಸಿದ್ದರು. ಮೋದಿ ಅಧಿಕಾರಕ್ಕೇರಿದಾಕ್ಷಣ ಬಿಜೆಪಿ ಮುಖ್ಯಕಚೇರಿಯಲ್ಲೇ ಪತ್ರಕರ್ತರೊಂದಿಗೆ ಮಾತನಾಡಿದರು. ಅವರಿಗೆಲ್ಲ ಸೆಲ್ಪಿ ತೆಗೆದುಕೊಳ್ಳಲಿಕ್ಕೆ ಮಾತ್ರ ಅವಕಾಶವಿತ್ತು. ಯಾರೂ ಪ್ರಶ್ನೆ ಕೇಳುವ ಗೋಜಿಗೆ ಹೋಗಲಿಲ್ಲ. ಮೋದಿಯನ್ನು ಕಂಡರೆ ಬಹುತೇಕ ಪತ್ರಕರ್ತರಿಗೆ ಅಷ್ಟಕ್ಕಷ್ಟೆ. ಏಕೆಂದರೆ ಮೋದಿ ಇವರನ್ನು ತಮ್ಮೊಂದಿಗೆ ವಿದೇಶ ಪ್ರವಾಸಕ್ಕೊಯ್ಯುವುದಿಲ್ಲ, ಅನವಶ್ಯಕ ಪ್ರಶಸ್ತಿಗಳನ್ನು ಕೊಡುವುದಿಲ್ಲ, ಸರ್ಕಾರಿ ಹುದ್ದೆಗಳನ್ನು ಅಲಂಕರಿಸುವ ಅವಕಾಶವನ್ನೂ ನೀಡುವುದಿಲ್ಲ. ಇಷ್ಟಾದರೂ ತಮ್ಮ ಎಲ್ಲ ಭಾಷಣಗಳು ಟಿವಿಯಲ್ಲಿ ಪ್ರಸಾರವಾಗುವಂತೆ ಮೋದಿ ನೋಡಿಕೊಳ್ಳುತ್ತಾರೆ ಮತ್ತು ಸದ್ಯದಲ್ಲಿ ಅವರ ಭಾಷಣಕ್ಕೆ ಅತಿಹೆಚ್ಚು ಬೇಡಿಕೆ ಇರುವುದರಿಂದ ಮಾಧ್ಯಮಗಳು ಅನಿವಾರ್ಯವಾಗಿ ಅವರ ಹಿಂದೆ ಬೀಳುತ್ತವೆ.

ಎದುರಾಳಿಗಳಲ್ಲಿ ಮೋದಿ ಎಂತಹ ಅಸಹನೆಯನ್ನು ಹುಟ್ಟುಹಾಕಬಲ್ಲ ರೆಂಬುದಕ್ಕೆ ಪತ್ರಕರ್ತ ರಾಜ್​ದೀಪ್ ಸರ್​ದೇಸಾಯಿಯೇ ಸಾಕ್ಷಿ. ಆತ ವಿಸ್ತಾರವಾದ ಲೇಖನವೊಂದನ್ನು ಬರೆದು ಅಟಲ್-ಆಡ್ವಾಣಿ ಜೋಡಿಯ ಮುಂದೆ ಮೋದಿ-ಷಾ ಜೋಡಿ ಯಾವ ಲೆಕ್ಕಕ್ಕೂ ಇಲ್ಲ ಎಂದಿದ್ದಾರೆ. ಹಳಬರಿಬ್ಬರೂ ರಾಜಧರ್ಮವನ್ನು ಅನುಸರಿಸುತ್ತಿದ್ದರೆ ಈಗಿನವರು ಚಾಣಕ್ಯನೀತಿಯ ಮಾತನಾಡುತ್ತಾರೆ ಎಂದು ಹೊಟ್ಟೆ ಉರಿಸಿಕೊಂಡಿದ್ದಾರೆ. ಈ ಬಗೆಯ ಆಕ್ರೋಶದ ನಡುವೆಯೂ ಮೋದಿ ಭಾಜಪವನ್ನು ಬ್ರಾಹ್ಮಣ ಪಕ್ಷವೆಂಬ ಹಣೆಪಟ್ಟಿಯಿಂದ ದೂರಗೊಳಿಸಿ ಅದನ್ನು ಸರ್ವರ್ಸ³ಯಾಗಿ ಮಾಡಿಬಿಟ್ಟಿದ್ದಾರೆಂದು ಹೇಳುವುದನ್ನು ಮರೆಯುವುದಿಲ್ಲ. ಅದೇ ವೇಳೆ ಹವಾಲಾ ಹಗರಣದ ಕಾರಣ ಕ್ಯಾಬಿನೆಟ್ಟಿನಿಂದ ಹೊರಬಂದ ಆಡ್ವಾಣಿ ಯವರಿಗೂ ಕರ್ನಾಟಕದಲ್ಲಿ ಅನೈತಿಕವಾಗಿ ಸರ್ಕಾರ ರಚಿಸಹೊರಟಿದ್ದ ಮೋದಿ-ಷಾ ಅವರಿಗೂ ಅಜಗಜಾಂತರವಿದೆಯೆಂದು ತಮ್ಮದೇ ಆದ ತೀರ್ಪು ಕೊಟ್ಟಿದ್ದಾರೆ.

ಬಹುಶಃ ದೇಶದ ಕೋಟ್ಯಂತರ ಜನರು ಮೋದಿಯವರ ಕುರಿತಂತೆಯೇ ಭಗವಂತನಲ್ಲಿ ಪ್ರಾರ್ಥಿಸುತ್ತಿರುತ್ತಾರೆ. ಕೆಲವರು ಒಳಿತಾಗಲಿ ಎಂದು ಕೇಳಿಕೊಂಡರೆ ಇನ್ನೂ ಕೆಲವರು ಕೆಡುಕಾಗಲಿ ಅಂತ. ಮನಸ್ಸಿಲ್ಲದೆ ಹೋದಾಗಲೂ ಹೀಗೆ ನಾಯಕನೊಬ್ಬನ ಕುರಿತಂತೆ ಆಲೋಚನೆ ಮಾಡಲೇಬೇಕಾದ ಪರಿಸ್ಥಿತಿಯನ್ನು ಮೋದಿ ನಿರ್ಮಾಣ ಮಾಡಿಬಿಟ್ಟಿದ್ದಾರೆ. ಅಟಲ್​ಜಿಯೊಂದಿಗೆ ತುಲನೆ ಮಾಡಿ ಮೋದಿಯವರನ್ನು ಕಡಿಮೆಯೆಂದು ಬಿಂಬಿಸುವ ಪ್ರಯತ್ನವೇನೂ ಬೇಕಾಗಿಲ್ಲ. ಏಕೆಂದರೆ ಇಬ್ಬರೂ ಒಂದೇ ಸಿದ್ಧಾಂತದ ಬೇರನ್ನು ಹೊಂದಿರುವ, ರಾಷ್ಟ್ರಧ್ವಜವನ್ನು ಹಿಡಿದು ನಿಲ್ಲಲೆಂದೇ ಎತ್ತರಕ್ಕೆ ಬೆಳೆದಿರುವ ಮಹಾವೃಕ್ಷಗಳು!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *

Back To Top