More

    ವಿಷವರ್ತುಲದಲ್ಲಿ ಸಿಲುಕಿ ನರಳುತಿದೆ ಪಾಕಿಸ್ತಾನ

    ವಿಷವರ್ತುಲದಲ್ಲಿ ಸಿಲುಕಿ ನರಳುತಿದೆ ಪಾಕಿಸ್ತಾನಪಾಕಿಸ್ತಾನ ಸುಮಾರು ಒಂದೂವರೆ ಬಿಲಿಯನ್ ಡಾಲರ್​ಗಳಷ್ಟು ಹಣವನ್ನು ಚೀನೀ ಕಂಪನಿಗಳಿಗೆ ಕೊಡಬೇಕಾಗಿದೆ. ಹಣ ಕೊಡುವವರೆಗೆ ಪಾಕಿಸ್ತಾನಕ್ಕೆ ಸಹಕಾರ ನೀಡುವುದಿಲ್ಲ ಎಂದು ಚೀನಾ ಖಡಕ್ಕಾಗಿ ಹೇಳಿದೆ. ಅತ್ತ ಸೌದಿ ಅರೇಬಿಯಾ ಆಗಾಗ ತಾನು ಕೊಟ್ಟ ಸಾಲವನ್ನು ನೆನಪಿಸುತ್ತ ಮರಳಿ ಕೊಡುವಂತೆ ಪಾಕ್ ಮೇಲೆ ಒತ್ತಡ ಹೇರುತ್ತಿದೆ.

    ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅಲ್ಲಿನ ಸರ್ಕಾರಕ್ಕೆ ಕಠೋರವಾದ ಎಚ್ಚರಿಕೆ ಕೊಟ್ಟಿದ್ದಾರೆ. ಆರು ದಿನಗಳೊಳಗೆ ಚುನಾವಣೆ ಘೊಷಿಸದಿದ್ದರೆ ತನ್ನ ಜೊತೆಗಾರರೊಂದಿಗೆೆ ಬೀದಿಗಿಳಿಯುತ್ತೇನೆ ಎಂದಿದ್ದಾರೆ. ಈ ಬಾರಿ ಬೀದಿಗಿಳಿದರೆ ಇದು ಹಿಂಸಾತ್ಮಕ ಹೋರಾಟವಾಗಬಹುದು ಎಂಬ ಹೆದರಿಕೆ ಎಲ್ಲರಲ್ಲಿದೆ. ಪಾಕಿಸ್ತಾನದ ಈಗಿನ ಪ್ರಧಾನಿ ಶೆಹ್ಬಾಜ್ ಷರೀಫ್ ದೇಶದ ಇಂದಿನ ಪರಿಸ್ಥಿತಿಗಳಿಗೆಲ್ಲ ಇಮ್ರಾನ್ ಖಾನ್ ಸರ್ಕಾರವೇ ಕಾರಣ ಎಂದು ಒಪ್ಪಿಸುವ ಹಠಕ್ಕೆ ಬಿದ್ದಿದ್ದಾರೆ. ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಹಫೀಜ್ ಟ್ವೀಟ್ ಮಾಡಿ, ‘ಲಾಹೋರಿನಲ್ಲಿ ಪೆಟ್ರೋಲ್ ಸಿಗುತ್ತಿಲ್ಲ, ಎಟಿಎಂನಲ್ಲಿ ಹಣ ಸಿಗುತ್ತಿಲ್ಲ’ ಎಂದು ಅಲವತ್ತುಕೊಂಡಿದ್ದಾರೆ!

    ಪಾಕಿಸ್ತಾನದ ಸ್ಥಿತಿ ಸದ್ಯದಲ್ಲೇ ಶ್ರೀಲಂಕಾದಂತೆ ಆದರೆ ಅಚ್ಚರಿ ಪಡಬೇಕಿಲ್ಲ. ಅನೇಕರು ಇದರ ಮೂಲವನ್ನು ಭಾರತದ ನೋಟು ರದ್ದತಿಯಲ್ಲಿ ಹುಡುಕುತ್ತಾರೆ. ಅಲ್ಲಿಯವರೆಗೂ ನಕಲಿ ನೋಟುಗಳ ಮುದ್ರಣದಿಂದ ಸಾಕಷ್ಟು ಸಂಪಾದನೆ ಮಾಡುತ್ತಿದ್ದ ಪಾಕಿಸ್ತಾನ ಏಕಾಏಕಿ ಪ್ರಪಾತಕ್ಕೆ ಬಿತ್ತು ಎನ್ನುವುದು ಅಭಿಪ್ರಾಯ. ಅದು ಸತ್ಯವೂ ಇರಬಹುದು. ಏಕೆಂದರೆ ಅಲ್ಲಿಯವರೆಗೂ ಮೆರೆದಾಡುತ್ತಿದ್ದ ಪಾಕಿಸ್ತಾನ ಆನಂತರ ಇದ್ದಕ್ಕಿದ್ದಂತೆ ತುಮುಲಕ್ಕೆ ಬಿತ್ತು. ಮುಂದೆ ಬೀದಿಗಿಳಿದು ಹೋರಾಟ ಮಾಡುತ್ತಲೇ ಅಧಿಕಾರಕ್ಕೆ ಬಂದ ಇಮ್ರಾನ್ ಖಾನ್ ಈ ಪರಿಸ್ಥಿತಿಯನ್ನು ಹಾಳುಗೆಡವಿದರು. ವಾಸ್ತವವಾಗಿ ಇಮ್ರಾನ್ ಅಧಿಕಾರಕ್ಕೆ ಬಂದದ್ದೇ ಸೈನ್ಯದ ಸಹಕಾರದೊಂದಿಗೆ. ಪಾಕಿಸ್ತಾನದ ವಿಚಾರದಲ್ಲಿ ಇದೇನು ಹೊಸ ಸಂಗತಿಯಲ್ಲ. ಸೈನ್ಯದ ಅನುಮತಿಯಿಲ್ಲದೆ ಅಲ್ಲಿ ಯಾವ ರಾಜಕೀಯ ಚಟುವಟಿಕೆಗಳೂ ನಡೆಯುವುದಿಲ್ಲ. ಆದರೆ ತನಗೆ ಬೇಕಾದ ಅಧಿಕಾರಿಯೊಬ್ಬನನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸಿಕೊಳ್ಳಲು ಸೈನ್ಯ ಅನುಮತಿ ನಿರಾಕರಿಸಿದಾಗ ಎಲ್ಲ ಗೊಂದಲ ಆರಂಭವಾದವು. ಐಎಸ್​ಐ ಡೈರೆಕ್ಟರ್ ಜನರಲ್​ರನ್ನು ವರ್ಗಾವಣೆ ಮಾಡುವಂತೆ ಸೈನ್ಯ ಆದೇಶಿಸಿತ್ತು. ತನಗೆ ನಿಷ್ಠನಾಗಿರುವ ಅಧಿಕಾರಿಯನ್ನು ಚುನಾವಣೆಯವರೆಗೂ ಉಳಿಸಿಕೊಳ್ಳಬೇಕಿತ್ತಲ್ಲದೆ ಅಗತ್ಯಬಿದ್ದರೆ ಸೈನ್ಯದ ಮುಖ್ಯಸ್ಥನನ್ನಾಗಿ ಮಾಡಬೇಕೆಂಬುದು ಇಮ್ರಾನ್ ಬಯಕೆಯಾಗಿತ್ತು. ಯಾವಾಗ ಖಾನ್ ಸೈನ್ಯದ ಮಾತನ್ನು ವಿರೋಧಿಸಿದರೋ ಅಂದೇ ಅವರ ಮೇಲಿದ್ದ ಅಭಯಹಸ್ತ ಹೊರಟುಹೋಯ್ತು. ಸರ್ಕಾರದ ಬಹುಮತಕ್ಕೆ ಕಾರಣವಾಗಿದ್ದ ಎರಡು ಚಿಕ್ಕ ಪಕ್ಷಗಳು ದಳ ಬದಲಾಯಿಸಿ ಕಾನೂನಾತ್ಮಕವಾಗಿಯೇ ಸರ್ಕಾರವನ್ನು ಉರುಳಿಸಿದವು. ಇಮ್ರಾನ್ ಸುಮ್ಮನಿರಲಿಲ್ಲ. ಸರ್ಕಾರವನ್ನೇ ಬರ್ಖಾಸ್ತು ಮಾಡುವ ಪ್ರಯತ್ನ ಮಾಡಿದರು. ಆದರದು ನ್ಯಾಯಾಲಯದಲ್ಲಿ ಬಿದ್ದುಹೋಯ್ತು. ಹೀಗಾಗಿ ಅನಿವಾರ್ಯವಾಗಿ ಅಧಿಕಾರದಿಂದ ಇಳಿಯಬೇಕಾಯ್ತು. ಈ ರೀತಿ ಅವಿಶ್ವಾಸ ಗೊತ್ತುವಳಿ ಮಂಡನೆಯಿಂದ ಅಧಿಕಾರ ಕಳೆದುಕೊಂಡ ಪಾಕಿಸ್ತಾನದ ಮೊದಲ ಪ್ರಧಾನಿ ಎನಿಸಿದರು ಇಮ್ರಾನ್! ಹಾಗಂತ ಅವಧಿ ಪೂರೈಸದೆ ಹೋದ ಮೊದಲನೆಯವರೇನೂ ಅಲ್ಲ. ಬಹುತೇಕ ಪಾಕಿಸ್ತಾನದ ಎಲ್ಲ ಪ್ರಧಾನಿಗಳೂ ಅವಧಿಗೆ ಮುನ್ನವೇ ಕೆಳಗಿಳಿಯುತ್ತಾರೆ. ಏಕೆಂದರೆ ಅವರೆಲ್ಲರೂ ಸೈನ್ಯದ ಕೈಗೊಂಬೆಗಳೇ ಆಗಿರುತ್ತಾರೆ.

    ಆದರೆ ಇಮ್ರಾನ್ ಖಾನ್​ಗೆ ಜನಬೆಂಬಲ ಜೋರಾಗಿಯೇ ಇತ್ತು. ಒಮ್ಮೊಮ್ಮೆ ಅವರು ಪಾಕಿಸ್ತಾನದ ಕೇಜ್ರಿವಾಲರಂತೆ ಕಾಣುತ್ತಾರೆ. ಅಗತ್ಯ ಬಿದ್ದಾಗ ಮಾತನ್ನು ಹೊರಳಿಸುತ್ತ, ಜನರನ್ನು ನಂಬಿಸುವುದರಲ್ಲಿ ನಿಸ್ಸೀಮ. ಐಎಂಎಫ್​ನ ಸಾಲಕ್ಕೆ ಸಹಿ ಹಾಕಿ ಬಂದಿದ್ದು ಇಮ್ರಾನೇ. ಆದರೆ ಈ ಸಾಲ ಪಡೆಯಲು ಅವರು ಕೈಗೊಳ್ಳಬೇಕಾಗಿದ್ದ ನಿರ್ಣಯಗಳು ಕಠಿಣವಾಗಿದ್ದವು. ಅದಕ್ಕೂ ಒಪ್ಪಿಕೊಂಡು ಬಂದಿದ್ದರು. ಈಗ ಇಮ್ರಾನ್ ಸರ್ಕಾರ ಉರುಳಿ ಹೊಸ ಸರ್ಕಾರ ಬಂತಲ್ಲ. ಅದು ಈ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಬೇಕಾಯ್ತು. ಐಎಂಎಫ್​ನ ಸಾಲ ತರಲು ಇಮ್ರಾನ್ ಖಾನ್ ಘೊಷಿಸಿದ್ದ ಇಂಧನದ ಮೇಲಿನ ಸಬ್ಸಿಡಿಯನ್ನು ಕಡಿತ ಮಾಡಲೇಬೇಕಿದೆ. ಈ ಹಿನ್ನೆಲೆಯಲ್ಲಿಯೇ ಅನಿವಾರ್ಯವಾಗಿ ಮೊನ್ನೆ ಪಾಕಿಸ್ತಾನದ ಪ್ರಧಾನಿ ಇಂಧನ ಬೆಲೆಯನ್ನು 30 ರೂಪಾಯಿಯಷ್ಟು ಏರಿಸಿದರು.

    ತೈಲ ಬೆಲೆ ಏರಿಕೆಗೆ ತಾನೇ ಮಾಡಿಕೊಂಡಿದ್ದ ಒಪ್ಪಂದಗಳು ಕಾರಣ ಎನ್ನುವುದನ್ನು ಇಮ್ರಾನ್ ಮರೆಮಾಚಿ ಜನರ ದುಃಖದ ಲಾಭವನ್ನು ಪಡೆದುಕೊಂಡು ಸಾವಿರಾರು ಮಂದಿಯನ್ನು ಬೀದಿಗಳಲ್ಲಿ ಸೇರಿಸಿ ಅವರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ! ಹೀಗಾಗಿಯೇ ಪಾಕಿಸ್ತಾನದ ಈಗಿನ ಪ್ರಧಾನಿ ಆಂತರಿಕ ದಂಗೆ ಬಗ್ಗೆ ಮಾತಾಡುತ್ತಿರೋದು. ಇಮ್ರಾನ್ ‘ಸ್ವಾತಂತ್ರ್ಯ ನಡಿಗೆ’ಯನ್ನು ಇಸ್ಲಾಮಾಬಾದ್​ಗೆ ಕೊಂಡೊಯ್ಯುವ ಬಗ್ಗೆ ಮಾತನಾಡಿದ್ದಾರೆ. ಹೊಸ ಸರ್ಕಾರವನ್ನು ಇಮ್ರಾನ್ ಬೆಂಬಲಿಗರು ನಂಬುತ್ತಿಲ್ಲ. ಅವರು ತೆಗೆದುಕೊಂಡ ಪ್ರತಿ ನಿರ್ಣಯವನ್ನೂ ವಿರೋಧಿಸುತ್ತಾರೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಪ್ರಧಾನಿ ಶೆಹ್ಬಾಜ್ ಷರೀಫ್ ನವಾಜ್ ಷರೀಫ್​ನ ಸಹೋದರ. ಭ್ರಷ್ಟಾಚಾರದ ಪ್ರಕರಣಗಳ ಆರೋಪ ಹೊತ್ತಿರುವ ನವಾಜ್ ಈಗ ಪಾಕಿಸ್ತಾನದಲ್ಲಿಲ್ಲ, ಆದರೆ ಪಕ್ಷದ ಮೇಲೆ ಅವರ ಹಿಡಿತ ಈಗಲೂ ಬಲವಾಗಿದೆ. ಹೀಗಾಗಿಯೇ ಶೆಹ್ಬಾಜ್ ಅಧಿಕಾರದಲ್ಲಿ ಕುಳಿತಿದ್ದರೂ ಹಿಂದಿನಿಂದ ನಿಯಂತ್ರಣದಲ್ಲಿಟ್ಟುಕೊಂಡಿರೋದು ನವಾಜ್​ರೇ.

    ಈಗಿನ ಸರ್ಕಾರ ಇಮ್ರಾನ್ ಮೇಲೆ ಭ್ರಷ್ಟಾಚಾರದ ಪ್ರಕರಣಗಳನ್ನು ದಾಖಲಿಸಿ ಒಳತಳ್ಳುವ ಯೋಜನೆಯನ್ನೇನೋ ಹಾಕಿಕೊಂಡಿದೆ. ಆದರೆ, ನವಾಜ್ ಷರೀಫ್ ಮೇಲಿನ ಆರೋಪಗಳಿಗೆ ಉತ್ತರ ಸಿಗುವ ಮುನ್ನವೇ ಇಮ್ರಾನ್​ರನ್ನು ಮುಟ್ಟಿದರೆ ಜನ ಸಿಡಿದೇಳುವುದು ನಿಶ್ಚಿತ. ಈಗಾಗಲೇ ಇಮ್ರಾನ್ ಬೆಂಬಲಿಗರು ಮಾಡಿರುವ ರಾದ್ಧಾಂತ ನಿಭಾಯಿಸುವಲ್ಲಿ ಈಗಿನ ಸರ್ಕಾರ ಸೋತುಹೋಗಿದೆ. ಇತ್ತ ಪಾಕಿಸ್ತಾನದ ಸಾಲ ಏರುತ್ತಲೇ ಇದೆ. ಈಗಾಗಲೇ 90 ಬಿಲಿಯನ್​ಗಳಷ್ಟು ಸಾಲ ಹೊಂದಿರುವ ಪಾಕಿಸ್ತಾನ ತನ್ನೆಲ್ಲ ಕನಸುಗಳನ್ನು ನುಚ್ಚುನೂರು ಮಾಡಿಕೊಂಡಿದೆ. ಪಾಕಿಸ್ತಾನದ ಜಿಡಿಪಿ 315 ಬಿಲಿಯನ್ ಡಾಲರ್​ಗಳಿಂದ 292 ಬಿಲಿಯನ್ ಡಾಲರ್​ಗಳಿಗೆ ಇಳಿದಿದೆ. ವಿದೇಶಿ ವಿನಿಮಯ ಉಳಿಕೆ 20 ಮಿಲಿಯನ್ ಡಾಲರ್​ಗಳಷ್ಟಿದ್ದು ಇನ್ನು ಒಂದೂವರೆ ತಿಂಗಳಿಗಾಗುವಷ್ಟು ಆಮದನ್ನು ಮಾತ್ರ ಮಾಡಿಕೊಳ್ಳಬಹುದಾದ ಭಯಾನಕ ಸ್ಥಿತಿಯಲ್ಲಿದೆ. ಇದನ್ನು ಗಮನಿಸಿಯೇ ತೈಲ ಉತ್ಪನ್ನಗಳಿಗಾಗಿ ವಿದೇಶಿ ಬ್ಯಾಂಕುಗಳು ಕೊಡುವ ಸಾಲದ ಗ್ಯಾರಂಟಿಯನ್ನು ರದ್ದು ಮಾಡಿಬಿಟ್ಟಿವೆ. ಪ್ರತಿರಾಷ್ಟ್ರದ ಬ್ಯಾಂಕುಗಳಿಗೂ ವಿದೇಶಿ ಬ್ಯಾಂಕುಗಳು ಸಾಲಕೊಟ್ಟು ಆಮದಿಗೆ ಅನುಕೂಲ ಮಾಡಿಕೊಡುತ್ತವೆ. ಅಕಸ್ಮಾತ್ ಆಯಾ ರಾಷ್ಟ್ರಗಳು ಹಣ ಪೂರೈಕೆ ಮಾಡುವಲ್ಲಿ ಸೋತರೆ ವಿದೇಶಿ ಬ್ಯಾಂಕುಗಳೇ ಎಲ್ಲ ಹೊಣೆಯನ್ನೂ ಹೊರಬೇಕು. ಇದನ್ನರಿತೆ ಈ ಬ್ಯಾಂಕುಗಳೆಲ್ಲ ಎಚ್ಚರಿಕೆಯ ಹೆಜ್ಜೆಯನ್ನಿರಿಸುತ್ತಿವೆ. ಸಾಲ ಮರಳಿ ಕೊಡುವ ತಾಕತ್ತು ಪಾಕಿಸ್ತಾನಕ್ಕೆ ಈಗ ಇಲ್ಲವೆಂಬುದು ಅವರಿಗೆ ಗೊತ್ತಿಲ್ಲದ ಸಂಗತಿಯೇನೂ ಅಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಪಾಕಿಸ್ತಾನ ವಿಷ ವರ್ತಲದಲ್ಲಿ ಸಿಲುಕಿಕೊಂಡಿದೆ. ಆಂತರಿಕ ದಂಗೆಗಳ ಕಾರಣಕ್ಕೆ ಜಿಡಿಪಿ ಕಡಿಮೆಯಾಗುತ್ತಿದೆ, ಇದು ರಾಷ್ಟ್ರದ ಮೇಲಿನ ವಿಶ್ವಾಸವನ್ನು ಕಡಿಮೆ ಮಾಡುತ್ತಿದೆ. ಇದರಿಂದಾಗಿಯೇ ವಿದೇಶಗಳು ಸಾಲಕೊಡಲು ಮುಂದೆ ಬರುತ್ತಿಲ್ಲ. ಸಾಲವಿಲ್ಲದಿದ್ದುದರಿಂದ ಸರ್ಕಾರ ಧೈರ್ಯವಾಗಿ ಉತ್ಪಾದನೆಗೆ ಮುಂದಡಿ ಇಡಲಾಗುತ್ತಿಲ್ಲ. ಜಿಡಿಪಿ ಮತ್ತಷ್ಟು ಕುಸಿಯಲಿದೆ, ಸಾಲ ಮತ್ತಷ್ಟು ಹೆಚ್ಚಲಿದೆ. ಈ ವರ್ತಲದಿಂದ ಸದ್ಯಕ್ಕೆ ಅವರು ಆಚೆಗೆ ಬರುವುದು ಕಷ್ಟ. ಅವರು ಮೊರೆ ಹೋಗಬೇಕಾಗಿರುವುದು ಸರ್ವಋತು ಮಿತ್ರ ಚೀನಾವನ್ನು ಮಾತ್ರ. ಆದರೆ, ಚೀನಾ ಪಾಕಿಸ್ತಾನವನ್ನು ಕ್ಯಾರೆ ಎನ್ನುತ್ತಿಲ್ಲ. ಪಾಕಿಸ್ತಾನ ತನ್ನ ಸಾಲವನ್ನು ಮರಳಿಸಬೇಕೆಂದು ಒತ್ತಡ ಹೇರುತ್ತಿದೆ ಕೂಡ. ಈ ಕಾರಣಕ್ಕಾಗಿಯೇ ಪಾಕಿಸ್ತಾನದ ಭರವಸೆಯ ‘ಚೀನಾ ಪಾಕ್ ಎಕನಾಮಿಕ್ ಕಾರಿಡಾರ್’ ಮೂಲೆಗುಂಪಾಗಿದೆ. ಪಾಕಿಸ್ತಾನ ಸುಮಾರು ಒಂದೂವರೆ ಬಿಲಿಯನ್ ಡಾಲರ್​ಗಳಷ್ಟು ಹಣವನ್ನು ಚೀನೀ ಕಂಪನಿಗಳಿಗೆ ಕೊಡಬೇಕಾಗಿದೆ. ಹಣ ಕೊಡುವವರೆಗೆ ಪಾಕಿಸ್ತಾನಕ್ಕೆ ಸಹಕಾರ ನೀಡುವುದಿಲ್ಲ ಎಂದು ಚೀನಾ ಖಡಕ್ಕಾಗಿ ಹೇಳಿದೆ.

    ಅತ್ತ ಸೌದಿ ಅರೇಬಿಯಾ ಆಗಾಗ ತಾನು ಕೊಟ್ಟ ಸಾಲವನ್ನು ನೆನಪಿಸುತ್ತ ಮರಳಿ ಕೊಡುವಂತೆ ಒತ್ತಡ ಹೇರುತ್ತಿದೆ. ಈಗ ಐಎಂಎಫ್​ನಿಂದ ಸಾಲತಂದರೂ ಪಾಕಿಸ್ತಾನ ಈ ಸಾಲದ ಬಡ್ಡಿಯನ್ನು ತೀರಿಸಲು ಅದನ್ನು ಬಳಸಬಹುದೇ ವಿನಃ ಹೊಸ ಚಟುವಟಿಕೆಗಳಿಗಲ್ಲ. ಹಾಗೆಂದೇ ಅದೀಗ ಟರ್ಕಿಯತ್ತ ಮುಖಮಾಡಿದೆ. ಟರ್ಕಿಯೂ ಸಹಾಯ ಮಾಡಬಹುದಾದ ಬಲವಾದ ಸ್ಥಿತಿಯಲ್ಲಿದೆ ಎಂದೇನೂ ಭಾವಿಸಬೇಡಿ. ಮತ್ತು ಸಹಾಯ ಮಾಡುವ ಸಾಧ್ಯತೆ ಕಂಡುಬಂದರೆ ಭಾರತ ಅಡ್ಡಗಾಲು ಹಾಕಿ ನಿಲ್ಲುವುದು ನಿಶ್ಚಿತ. ಹೀಗಾಗಿಯೇ ಪಾಕಿಸ್ತಾನದ ಪರಿಸ್ಥಿತಿ ಭಯಾನಕವಾಗಿದೆ. ಇಲ್ಲಿ ಅನೇಕರು ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುತ್ತಾರಲ್ಲ, ಅವರೆಲ್ಲ ಅಲ್ಲಿಗೆ ಹೋಗಿ ಪಾಕಿಸ್ತಾನದ ಶಕ್ತಿಯನ್ನು ವೃದ್ಧಿಸುವುದೊಳಿತು ಎಂದೆನಿಸುತ್ತದೆ.

    ಅತ್ತ ಚೀನಾದ ಸ್ಥಿತಿಯೂ ಚೆನ್ನಾಗಿಲ್ಲ. ಕ್ರಾಂತಿಯ ನಂತರ ಹುಟ್ಟಿಕೊಂಡ ಹೊಸ ಚೀನಾದಲ್ಲಿಯೇ ಮೊದಲ ಬಾರಿಗೆ ಆರ್ಥಿಕ ವೃದ್ಧಿಯ ದರವನ್ನು 5.5ರಷ್ಟು ಕನಿಷ್ಠ ಮಟ್ಟಕ್ಕೆ ನಿಗದಿಪಡಿಸಲಾಗಿದೆ. ಅಧ್ಯಕ್ಷ ಷಿ ಜಿನ್​ಪಿಂಗ್ ಮತ್ತು ಪ್ರಧಾನಿ ಲಿ ಕಿಕಿಯಾಂಗ್ ನಡುವಿನ ಜಗಳಗಳು ಈಗ ಎದ್ದೆದ್ದು ಕಾಣುತ್ತಿವೆ. ತನ್ನ ಶೂನ್ಯ ಕೋವಿಡ್ ಪಾಲಿಸಿಯನ್ನು ಹೆಮ್ಮೆಯಿಂದ ಕೊಂಡಾಡುತ್ತಿದ್ದ ಷಿ ಈಗ ಅದರ ಅಡ್ಡ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಇದರ ವಿರುದ್ಧ ಯಾರೂ ಮಾತನಾಡದಂತೆ ಜಿನ್​ಪಿಂಗ್ ನಿರ್ಬಂಧ ವಿಧಿಸಿದ್ದಾರೇನೋ ನಿಜ. ಸ್ವತಃ ಪ್ರಧಾನಿ ಲಿ ಪರೋಕ್ಷವಾಗಿ ಷಿಯನ್ನು ವಿರೋಧಿಸಲಾರಂಭಿಸಿದ್ದಾರೆ. ಕಂಪನಿಗಳು ಗುಳೆ ಹೋಗುತ್ತಿರುವ, ಜನರು ದಂಗೆಯೇಳುವ ಸ್ಥಿತಿ ನಿರ್ವಣವಾಗಿರುವಂಥ ಈ ಹೊತ್ತಲ್ಲಿ ಚೀನಾ ಎಚ್ಚರಿಕೆಯಿಂದ ಮುಂದಡಿಯಿಡುತ್ತಿದೆ. ಯೂಕ್ರೇನ್-ರಷ್ಯಾ ಯುದ್ಧದಲ್ಲಿ ರಷ್ಯಾದ ಬೆಂಬಲಕ್ಕೆ ಚೀನಾ ಪೂರ್ಣವಾಗಿ ನಿಂತಿರುವುದಂತೂ ಜಗತ್ತಿನ ಜನರ ಕಣ್ಣು ಕೆಂಪಗಾಗಿಸಿದೆ. ಇದರಿಂದಾಗಿಯೇ ಈ ಬಾರಿಯ ಕ್ವಾಡ್ ಸಭೆಯಲ್ಲಿ ಭಾರತಕ್ಕೆ ಬಲ ದೊರೆತದ್ದು. ಚೀನಾ ಯಾವ ಸೈನ್ಯದ ಮೇಲೆ ನಂಬಿಕೆ ಇರಿಸಿಕೊಂಡಿತ್ತೋ ಅದು ಕೂಡ ಕಾಗದದ ಹುಲಿ ಎಂದೇ ಜಗತ್ತು ಮಾತನಾಡಿಕೊಳ್ಳುವುದುನ್ನು ನೋಡಿದರೆ ಚೀನಾಕ್ಕೂ ಬಲವಾದ ಸಮಸ್ಯೆ ಇದೆ!

    ಶ್ರೀಲಂಕಾದ ಬಗ್ಗೆ ಮಾತನಾಡದಿರುವುದೇ ಒಳಿತು. ಚೀನಾದಿಂದ ಸಾಲ ತೆಗೆದುಕೊಂಡವರ ಕಥೆ ಏನಾಗುತ್ತದೆ ಎಂಬುದಕ್ಕೆ ಶ್ರೀಲಂಕಾಕ್ಕಿಂತ ಬಲವಾದ ಉದಾಹರಣೆ ಬೇಕಾಗಿಲ್ಲ. ಸಹಾಯ ಎಲ್ಲಿಂದ ಬರಬಹುದೆಂದು ಕಾತರದ ಕಂಗಳಿಂದ ಕಾಯುತ್ತಿದೆ ಶ್ರೀಲಂಕಾ. ನೇಪಾಳ, ಮ್ಯಾನ್ಮಾರ್, ಮಲೇಷ್ಯಾ, ಇಂಡೋನೇಷ್ಯಾ, ಅತ್ತ ಅಮೆರಿಕ-ಯುರೋಪುಗಳು ಕೂಡ ಕರೊನಾ ನಂತರದ ಆರ್ಥಿಕ ದುಃಸ್ಥಿತಿಯತ್ತ ಹಂತ-ಹಂತವಾಗಿ ಹೆಜ್ಜೆ ಇಡುತ್ತಿವೆ. ಸ್ವಲ್ಪಮಟ್ಟಿಗೆ ಈ ಎಲ್ಲ ಹೊಡೆತಗಳಿಂದಲೂ ಪಾರಾಗಿರುವುದು ನಾವು ಮಾತ್ರ.

    ಪ್ರಧಾನಿ ನರೇಂದ್ರ ಮೋದಿ ಹಿಂದೆಂದಿಗಿಂತಲೂ ಹೆಚ್ಚು ಬಲಶಾಲಿಯಾಗಿದ್ದಾರೆ. ಜಗತ್ತಿನ ವೇದಿಕೆಯ ಮುಖ್ಯ ಭೂಮಿಕೆಯಲ್ಲಿ ಅವರನ್ನೀಗ ಎಲ್ಲರೂ ಗುರುತಿಸುತ್ತಿದ್ದಾರೆ. ರಷ್ಯಾ-ಯೂಕ್ರೇನ್ ಯುದ್ಧ, ಶ್ರೀಲಂಕಾದ ಸಮಸ್ಯೆ, ಜಾಗತಿಕ ವ್ಯಾಪಾರ-ವಹಿವಾಟು, ಅಥವಾ ಭಯೋತ್ಪಾದನೆ, ಪರಿಸರದ ವಿಚಾರಗಳೇ ಇರಲಿ ಮೋದಿಯ ಮಾತಿಗೆ ಜಗತ್ತು ತಲೆದೂಗುತ್ತಿದೆ. ನಾವು ನಿಜಕ್ಕೂ ಸಮರ್ಥ ಕೈಗಳಲ್ಲಿದ್ದೇವೆ. ಕರೊನಾ ನಮ್ಮನ್ನು ವಿಪರೀತವಾಗಿ ಬಾಧಿಸಲಿಲ್ಲ. ಕರೊನಾ ನಂತರದ ಆರ್ಥಿಕ ಮುಗ್ಗಟ್ಟು ನಮ್ಮನ್ನು ಬಾಧಿಸಲಿಲ್ಲ, ಪಕ್ಕದ ಪಾಕಿಸ್ತಾನ ಪೆಟ್ರೋಲಿಗೆ 30 ರೂಪಾಯಿ ಹೆಚ್ಚು ಮಾಡಿದರೆ, ಭಾರತದಲ್ಲಿ 9 ರೂಪಾಯಿ ಕಡಿತಗೊಳಿಸಲಾಗಿತ್ತು. ಹಣದುಬ್ಬರವನ್ನು ಹಿಡಿತಕ್ಕೆ ತಂದುಕೊಳ್ಳಲು ಬಗೆಬಗೆಯ ಸಾಹಸ ಮಾಡುತ್ತಿದೆ ಭಾರತ. ಭಾರತೀಯರಿಗೆ ಕಷ್ಟಕಾಲದಲ್ಲಿ ತೊಂದರೆಯಾಗಬಾರದೆಂದು ಗೋಧಿ ಮತ್ತು ಸಕ್ಕರೆಯ ಮೇಲೆ ರಫ್ತು ನಿಷೇಧ ಹೇರಲಾಗಿದೆ. ಎಲ್ಲವೂ ಒಂದು ಹಂತಕ್ಕೆ ಬಂದು ನಿಲ್ಲುವಾಗ ಭಾರತ ಜಗತ್ತಿನ ಭೂಪಟದಲ್ಲಿ ಉಜ್ವಲವಾಗಿ ಬೆಳಗುತ್ತಿರುತ್ತದೆ. ಈ ವಿಶ್ವಾಸ ಪ್ರತಿ ಭಾರತೀಯನಿಗೂ ಇದೆ.

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts