More

    ಇದು ಕೊನೆಯ ಬೌದ್ಧಿಕ ಯುದ್ಧ, ಸಿದ್ಧರಾಗಿ!

    ಇದು ಕೊನೆಯ ಬೌದ್ಧಿಕ ಯುದ್ಧ, ಸಿದ್ಧರಾಗಿ!ನರೇಂದ್ರ ಮೋದಿಯವರ ಆಡಳಿತದ ಮೊದಲ ಐದು ವರ್ಷ ಇಡೀ ದೇಶ ಶಾಂತಸ್ಥಿತಿಯಲ್ಲಿತ್ತು. ಅವರು ಮತ್ತೆ ಅಧಿಕಾರ ಪಡೆಯಬಲ್ಲರು ಎಂದು ಪ್ರತಿಭಟನಾಕಾರರು ಊಹಿಸಿರಲಿಲ್ಲವೆನಿಸುತ್ತದೆ. ಮೋದಿ ಮೊದಲಿಗಿಂತಲೂ ಹೆಚ್ಚು ಸೀಟುಗಳೊಂದಿಗೆ ಅಧಿಕಾರಕ್ಕೆ ಬಂದನಂತರ ಇವರಿಗೆಲ್ಲ ಮಾಡು-ಮಡಿ ಪರಿಸ್ಥಿತಿ ಎದುರಾಗಿಬಿಟ್ಟಿತು. ಆಗ ಶುರುವಾದ ಪ್ರತಿಭಟನೆಯ ಸರಮಾಲೆಗಳು ಈಗಲೂ ನಿಂತಿಲ್ಲ. ಸಿಎಎ ಪ್ರತಿಭಟನೆಯ ರಸ್ತೆ ತಡೆಯಿಂದ ಹಿಡಿದು ರೈತರ ಪ್ರತಿಭಟನೆಯವರೆಗೂ ಅದು ವಿಸ್ತಾರವಾದ ರೀತಿ, ಟ್ರಂಪ್ ಬಂದಾಗಿನ ದೆಹಲಿ ದಂಗೆಯಿಂದ ಹಿಡಿದು ಪ್ರತಿ ಶುಕ್ರವಾರ ನಮಾಜು ಮುಗಿಸಿ ಬೀದಿಗಿಳಿವವರೆಗೆ ಇದು ನಡೆಯುತ್ತಲೇ ಬಂದಿದೆ. ಇತ್ತೀಚಿಗಿನ ಹೊಸ ಸೇರ್ಪಡೆ ಅಗ್ನಿಪಥಕ್ಕೆ ಸಂಬಂಧಪಟ್ಟಂತೆ. ಗ್ಲೋಬಲ್ ಪೀಸ್ ಇಂಡೆಕ್ಸ್ ವರದಿಯ ಪ್ರಕಾರ ಈ ರೀತಿಯ ಪ್ರತಿಭಟನೆಗಳಿಂದಾಗಿಯೇ ಜಗತ್ತಿನಲ್ಲಿ ಹದಿನಾರೂವರೆ ಟ್ರಿಲಿಯನ್ ಡಾಲರ್​ಗಳಷ್ಟು ನಷ್ಟವುಂಟಾಗಿದೆ. ಭಾರತ 72ನೇ ಸ್ಥಾನದಲ್ಲಿದ್ದು 646 ಬಿಲಿಯನ್ ಡಾಲರ್​ಗಳಷ್ಟು ನಷ್ಟ ಕಂಡಿದೆ. ಸಿರಿಯಾ, ದಕ್ಷಿಣ ಸುಡಾನ್ ಮತ್ತು ಮಧ್ಯ ಆಫ್ರಿಕಾದ ರಾಷ್ಟ್ರಗಳು ಪ್ರತಿಭಟನೆಗಳಿಗೆ ಹೆಚ್ಚು ನಲುಗಿದ ರಾಷ್ಟ್ರಗಳಾದರೆ ಅದರ ನಂತರದ ಸ್ಥಾನ ದಕ್ಷಿಣ ಏಷ್ಯಾದ್ದೇ. 2020ರಲ್ಲಿ ಭಾರತ ವ್ಯಕ್ತಿಯೊಬ್ಬನ ಮೇಲೆ 841 ಡಾಲರ್​ಗಳಷ್ಟು ಹಣವನ್ನು ಪ್ರತಿಭಟನೆಗಳಲ್ಲಿ ಕಳೆದುಕೊಂಡಿದ್ದರೆ, ಚೀನಾ ಹೆಚ್ಚು-ಕಡಿಮೆ ನಮ್ಮ ಎರಡರಷ್ಟು ನಷ್ಟ ಮಾಡಿಕೊಂಡಿದೆ. ಪಾಕಿಸ್ತಾನವೇನು ಕಡಿಮೆ ಇಲ್ಲ. ಅಲ್ಲಿನ ತಲಾ ನಷ್ಟ ಸುಮಾರು 700 ಡಾಲರ್​ಗಳಷ್ಟು. ಕಳೆದುಕೊಳ್ಳಲು ಬೇಕಾದಷ್ಟು ಸಂಪತ್ತು ಇದ್ದಿದ್ದರೆ ಪಾಕಿಸ್ತಾನ ಎಲ್ಲರನ್ನೂ ಮೀರಿಸಿರುತ್ತಿತ್ತೇನೋ! ಹಿಂಸೆ ಎಷ್ಟು ವೇಗವಾಗಿ ಹಬ್ಬುತ್ತಿದೆ ಎಂದರೆ 2021ರಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನೂ ಮೀರಿಬಿಟ್ಟಿತು. ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಅಗ್ರಣಿಯಾಗಿರುವ ಹತ್ತು ರಾಷ್ಟ್ರಗಳ ಒಟ್ಟೂ ನಷ್ಟ ಜಾಗತಿಕ ಜಿಡಿಪಿಯ ಮೂರನೇ ಒಂದು ಭಾಗದಷ್ಟು. ಅತಿ ಹೆಚ್ಚು ಹಿಂಸಾತ್ಮಕ ಪ್ರತಿಭಟನೆಗಳನ್ನು ಕಾಣುವ ರಾಷ್ಟ್ರಗಳ ಸಂಖ್ಯೆ ಕಳೆದ ವರ್ಷ 29ರಿಂದ 38ಕ್ಕೇರಿದೆ. ಆದರೆ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಅದರರ್ಥ ಪ್ರತಿಭಟನಾಕಾರರು ವ್ಯಕ್ತಿಗಳನ್ನು ಕೊಲ್ಲುವುದಕ್ಕಿಂತ ರಾಷ್ಟ್ರಕ್ಕೆ ಆರ್ಥಿಕ ನಷ್ಟ ಉಂಟು ಮಾಡುವುದರಲ್ಲಿ ಲಾಭ ಕಾಣುತ್ತಿದ್ದಾರೆ ಎಂದಾಯ್ತು. ಅಚ್ಚರಿ ಎಂದರೆ ಜಗತ್ತಿನ ಎಲ್ಲ ರಾಷ್ಟ್ರಗಳೂ ಈ ರೀತಿ ಏಕಾಕಿ ಮಗ್ಗುಲನ್ನು ಬದಲಾಯಿಸುವುದಾದರೂ ಏಕೆ? ಅಮೆರಿಕಾದ ಪ್ರತಿಭಟನೆಯಲ್ಲಿ ಆಸ್ತಿ-ಪಾಸ್ತಿಗಳ ನಾಶವಾಗುತ್ತದೆ. ಆಫ್ರಿಕಾದಲ್ಲಿ ಅಂಗಡಿಗಳನ್ನು ಲೂಟಿ ಮಾಡುತ್ತಾರೆ. ಭಾರತದಲ್ಲೂ ಜನ ಕಲ್ಲೆಸೆದು ಅಂಗಡಿಗಳನ್ನು ಧ್ವಂಸ ಮಾಡುತ್ತಾರೆ, ಕೊನೆಗೆ ಹುಡು-ಹುಡುಕಿ ರೈಲು ಇಂಜಿನ್ನುಗಳಿಗೆ, ಬೋಗಿಗಳಿಗೆ ಬೆಂಕಿ ಇಡುತ್ತಾರೆ. ಅದರರ್ಥ ಸರ್ಕಾರಕ್ಕೆ ಹೊರೆಯಾಗುವಂತೆ ನೋಡಿಕೊಳ್ಳಬೇಕು ಎಂಬುದೇ ಅಲ್ಲವೇನು? ಈ ಎಲ್ಲ ಪ್ರತಿಭಟನೆಗಳ ಹಿಂದೆ ಅದನ್ನು ನಿಯಂತ್ರಿಸುವ ಕಾಣದ ಕೈಯ್ಯೊಂದಿದೆ ಎಂದೆನಿಸುವುದಿಲ್ಲವೇ?

    ಅಮೆರಿಕಾ, ಯೂರೋಪ್​ಗಳು ಜಾಗತಿಕ ಪ್ರಭಾವವನ್ನು ಹೇಗೆ ಉಳಿಸಿಕೊಂಡಿವೆಯೆಂದರೆ ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ತಮಗೆ ಬೇಕಾದ ಯಾವುದೇ ನಾಯಕನನ್ನು ಪ್ರತಿಷ್ಠಾಪಿಸಲೂ ಅವರು ಸಮರ್ಥರಾಗಿದ್ದಾರೆ. ಇದು ಅಲ್ಲಿನ ಸರ್ಕಾರದ ಕೆಲಸವಲ್ಲ, ಬದಲಿಗೆ ಒಂದಷ್ಟು ಉದ್ಯಮಿಗಳು ತಮ್ಮ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲೋಸುಗ ಮಾಡುವ ವ್ಯವಸ್ಥಿತವಾದ ಪ್ರಯತ್ನ. ಟ್ರಂಪ್ ತಮ್ಮ ಹಿಡಿತಕ್ಕೆ ಸಿಕ್ಕುತ್ತಿಲ್ಲ, ತಾಳಕ್ಕೆ ನರ್ತಿಸುತ್ತಿಲ್ಲ ಎಂದರಿವಾದೊಡನೆ ಪದಚ್ಯುತಿ ಪ್ರಯತ್ನ ಆರಂಭಿಸಲಾಯ್ತು. ‘ಬ್ಲಾ್ಯಕ್ ಲೈವ್ಸ್ ಮ್ಯಾಟರ್’ ಎಂಬ ಪ್ರತಿಭಟನೆಗೆ ರೆಕ್ಕೆ-ಪುಕ್ಕಗಳು ಬಂದುಬಿಟ್ಟವು. ಈ ಇಡೀ ಹೋರಾಟವನ್ನು ಸಂಘಟಿಸಿ ಅದಕ್ಕೆ ಬೇಕಾದ ವೇದಿಕೆಯನ್ನು ರೂಪಿಸಿಕೊಟ್ಟ ಸರ್ಕಾರೇತರ ಸಂಸ್ಥೆಗಳಲ್ಲಿ ಬಹುತೇಕ ಜಾರ್ಜ್ ಸೊರೋಸ್​ನಿಂದ ಹಣ ಪಡೆದಂಥವು. ಇವರೆಲ್ಲ ಸೇರಿ ದಂಗೆಗಳನ್ನು ಯಾವ ಮಟ್ಟಕ್ಕೇರಿಸಿದರೆಂದರೆ ಟ್ರಂಪ್​ರನ್ನು ಸೋಲಿಸಿಯೇ ನೆಮ್ಮದಿಯ ನಿದ್ದೆ ಮಾಡಿದ್ದು. ಇದಕ್ಕಾಗಿ ಅವರು ಬೀದಿಗಿಳಿಯುವ ಮಾರ್ಗದಿಂದ ಹಿಡಿದು ಚುನಾವಣೆಯ ಫಲಿತಾಂಶವನ್ನೇ ತಿರುಗು-ಮುರುಗಾಗಿಸುವವರೆಗೂ ಎಲ್ಲ ಪ್ರಯತ್ನವನ್ನೂ ಮಾಡಿದರು. ಕೊನೆಗೆ ಟ್ರಂಪ್ ಇದರ ಆಳಕ್ಕೆ ಹೋಗಿಬಿಡುತ್ತಾರೆಂದು ಭಾವಿಸಿ ಸಂಸತ್ತಿನ ಮೇಲೆ ದಾಳಿಯನ್ನೂ ನಡೆಸಿ ಟ್ರಂಪ್​ರ ಮಾನ-ಮರ್ಯಾದೆ ಹರಾಜು ಹಾಕಿ ಓಡಿಸಿಯೂಬಿಟ್ಟರು. ಈ ಪ್ರಯತ್ನವನ್ನು ಅವರೀಗ ಭಾರತದಲ್ಲಿ ಹ್ಯೂಮನ್ ರೈಟ್ಸ್ ಲಾ ನೆಟ್ವರ್ಕ್ ಮೂಲಕ ಮಾಡುತ್ತಿದ್ದಾರೆ. ಇದು ನೇರವಾಗಿ ಅಥವಾ ಪರೋಕ್ಷವಾಗಿ ಸೊರೋಸ್​ನ ಕೃಪಾಪೋಷಿತವೇ. ಅಚ್ಚರಿ ಎಂದರೆ ಇದರ ಲೀಗಲ್ ಅಡ್ವೈಸರ್ ಆಗಿರುವ ಕವಲ್​ಪ್ರೀತ್ ಕೌರ್ ಎಡಪಂಥೀಯರ ವಿದ್ಯಾರ್ಥಿ ಸಂಘಟನೆಯಾದ ಆಲ್ ಇಂಡಿಯಾ ಸ್ಟೂಟೆಂಡ್ಸ್ ಅಸೋಸಿಯೇಷನ್​ನ ಉಪಾಧ್ಯಕ್ಷೆಯೂ ಹೌದು. ಎಡಪಂಥೀಯರ ಮುಖವಾಣಿಯಾದ ‘ಕ್ಯಾರ್​ವಾನ್’ ಪತ್ರಿಕೆಯ ಸಂಪಾದಕರು ಮತ್ತು ಈಕೆ ಎಡಪಂಥೀಯ ಚಿಂತಕರೊಂದಿಗೆ ಸೇರಿ ಸೆಮಿನಾರ್ ನಡೆಸುವುದು ಗುಟ್ಟಾದ ಸಂಗತಿಯಲ್ಲ. ಅಂದರೆ ನೇರವಾಗಿ ಈ ಎಡಪಂಥೀಯ ಸಂಘಟನೆಗಳು ಸೊರೋಸ್​ನಿಂದ ಕೃಪೆಗೊಳಗಾಗಿವೆ. ಅಗ್ನಿಪಥ ಚಿಂತನೆ ನಡೆಯುತ್ತಿದ್ದಾಗ, ಈ ಯೋಜನೆ ಜಾರಿಗೆ ತಂದರೆ ಎಲ್ಲೆಡೆ ದಂಗೆಗಳಾಗುವ ಸಾಧ್ಯತೆ ಇದೆ ಎಂದು ಇದೇ ‘ಕ್ಯಾರ್​ವಾನ್’ ಪತ್ರಿಕೆ ಏಪ್ರಿಲ್ ಕೊನೆಯ ವಾರದಲ್ಲೇ ಹೇಳಿತ್ತು. ಆಗಿನ್ನೂ ಇದಕ್ಕೆ ‘ಅಗ್ನಿಪಥ’ ಎಂಬ ನಾಮಕರಣವೂ ಆಗಿರಲಿಲ್ಲ. ಮೊನ್ನೆ 14ಕ್ಕೆ ರಕ್ಷಣಾ ಸಚಿವ ರಾಜ್​ನಾಥ್ ಸಿಂಗರು ಯೋಜನೆಯನ್ನು ಪ್ರಸ್ತುತಪಡಿಸುತ್ತಿದ್ದಂತೆ ಇವರೆಲ್ಲರ ಚಟುವಟಿಕೆಗಳೂ ಗರಿಗೆದರಿದವು. ಮರುದಿನವೇ ಬಿಹಾರದಲ್ಲಿ ಪ್ರತಿಭಟನೆ ಆರಂಭವಾಯ್ತು. ಅಷ್ಟೇ ಅಲ್ಲ, ಪ್ರತಿಭಟನೆಯ ಹೊತ್ತಲ್ಲಿ ತಮ್ಮ ಗುರುತು ಸಿಗದಂತೆ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ರೈತರ ಪ್ರತಿಭಟನೆಯ ಕಾಲಕ್ಕೆ ಹೊರಡಿಸಿದ್ದ ಸೂಚನೆಗಳನ್ನು ಎಡಪಂಥೀಯ ಸಂಘಟನೆಗಳು ಪ್ರತಿಭಟನಾಕಾರರೊಂದಿಗೆ ಹಂಚಿಕೊಂಡವು. ಮುಖ, ಮೈಮೇಲಿನ ಟ್ಯಾಟು ಕಾಣದಂತೆ ಬಟ್ಟೆಯಿಂದ ಮುಚ್ಚಿಕೊಳ್ಳಿ, ಪೆಪ್ಪರ್ ಸ್ಪ್ರೇ ಮತ್ತು ಟಿಯರ್ ಗ್ಯಾಸ್​ನಿಂದ ರಕ್ಷಣೆ ಪಡೆದುಕೊಳ್ಳಲು ಕಣ್ಣು-ಮುಖ, ಮೂಗು ಮುಚ್ಚಿಕೊಳ್ಳಿ. ಆದಷ್ಟೂ ಸುಲಭಕ್ಕೆ ಗುರುತಿಸಲಾಗದ ಕಪ್ಪು ಪ್ಯಾಂಟು, ಕಪ್ಪು ಟೊಪ್ಪಿಗೆ ಇರುವ ಟೀ-ಶರ್ಟ್ ಗಳನ್ನು ಹಾಕಿಕೊಳ್ಳಿ ಎಂಬೆಲ್ಲ ಸಂದೇಶ ಹರಡಿಸಲಾಯ್ತು. ಆನ್​ಲೈನ್​ನಲ್ಲಿ ಹೋರಾಟ ಮಾಡುವುದಾದರೆ ಗುರುತು ಕಾಣದಂತೆ ಮುಚ್ಚಿಟ್ಟುಕೊಳ್ಳುವುದು ಹೇಗೆ ಎಂಬುದಕ್ಕೂ ವಿವರಣೆ ಕೊಡಲಾಯ್ತು.

    ಉದ್ದಕ್ಕೂ ಪ್ರತಿಭಟನಾಕಾರರು ಇದೇ ಮಾರ್ಗ ಅನುಸರಿಸಿದ್ದಾರೆ; ಗುರುತು ಸಿಗದಷ್ಟು ಮುಖ ಮುಚ್ಚಿಕೊಂಡು ಬಂದು ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚಿದ್ದಾರೆ. ಎರಡು ದಿನದ ಪ್ರತಿಭಟನೆಗೆ ರೈಲ್ವೆ ಇಲಾಖೆಗೆ 200 ಕೋಟಿ ರೂಪಾಯಿ ನಷ್ಟವಾಗಿದೆ. ಹಾಗಂತ ಇದು ಇಲ್ಲಿಗೇ ನಿಲ್ಲಲಿಲ್ಲ. ಇವೆಲ್ಲವುಗಳ ಹಿಂದೆ ಆಂಟಿಫಾ ಎನ್ನುವ ಸಂಸ್ಥೆ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆಂಟಿಫಾ, ಆಂಟಿ ಫ್ಯಾಸಿಸ್ಟ್ ಎಂಬುದರ ಹ್ರಸ್ವ ರೂಪ. ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಮೇಲೆ ಅಮೆರಿಕಾದಲ್ಲಿ ಚುರುಕುಗೊಂಡ ಸಂಸ್ಥೆ ಇದು. ಇದರ ಒಳ-ಹೊರಗನ್ನು ಅರಿತಿದ್ದ ಟ್ರಂಪ್ ಇವರ ಹಿಂಸಾತ್ಮಕ ಮಾರ್ಗವನ್ನು ಖಂಡಿಸಿ ಭಯೋತ್ಪಾದಕ ಸಂಘಟನೆ ಎಂದು ಘೊಷಿಸುವ ನಿರ್ಣಯ ಮಾಡಿದ್ದರು. ಟ್ರಂಪ್​ರನ್ನು ಉರುಳಿಸುವುದು ತಮ್ಮ ಧ್ಯೇಯವೆಂದು ಅವರು ಸ್ಪಷ್ಟವಾಗಿ ಹೇಳಿಕೊಂಡಿದ್ದರು. ಈಗ ಇದೇ ಆಂಟಿಫಾದ ಭಾರತದಲ್ಲಿರುವಂತಹ ಅಂಗಸಂಸ್ಥೆ ವ್ಯಾಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. 2020ರಲ್ಲಿಯೇ ಟ್ರಂಪ್​ರನ್ನು ಉರುಳಿಸುತ್ತಿರುವ ಚಿತ್ರ ಹಾಕಿಕೊಂಡು ಮುಂದೆ ಯಾರೆಂದು ಗೊತ್ತಲ್ಲ, ಎಂದು ತನ್ನ ಅಧಿಕೃತ ಟ್ವಿಟರ್ ಪೋಸ್ಟ್​ನಲ್ಲಿ ಹಾಕಿಕೊಂಡಿತ್ತು. ನಿಸ್ಸಂಶಯವಾಗಿ ಅದು ಮೋದಿಯೇ ಎಂದು ಪ್ರತ್ಯೇಕವಾಗಿ ಹೇಳಬೇಕಿರಲಿಲ್ಲ. ‘ಬ್ಲಾ್ಯಕ್ ಲೈವ್ಸ್ ಮ್ಯಾಟರ್’ ಅನ್ನು ಸಮರ್ಥಿಸಿದವರೆಲ್ಲ ಭಾರತದಲ್ಲಿ ನಡೆಯುತ್ತಿರುವ ನಕ್ಸಲರ ಹೋರಾಟವನ್ನು ಸಮರ್ಥಿಸಬೇಕು ಎಂದು ಅವರು ಫರ್ವನು ಹೊರಡಿಸಿದ್ದರು. ಅಲ್ಲಿಗೆ ಎಡಪಂಥೀಯರೊಂದಿಗಿನ ತನ್ನ ಸಂಬಂಧವನ್ನು ಆಂಟಿಫಾ ಬಲವಾಗಿ ತೋರ್ಪಡಿಸಿಕೊಂಡಿತ್ತು. ಈ ಎಲ್ಲ ದಂಗೆಗಳ ಹಿಂದೆ ಇವರೆಲ್ಲರ ಪಾತ್ರವಿದೆ.

    ಹಿಂದೊಮ್ಮೆ ಇದೇ ಅಂಕಣದಲ್ಲಿ ಜಿಹಾದಿಗಳು, ಇವ್ಯಾಂಜಲಿಸ್ಟ್​ಗಳು, ಕಮ್ಯುನಿಸ್ಟರು ಜಗತ್ತಿನಲ್ಲೆಲ್ಲ ಬಡಿದಾಡಿದರೂ ಭಾರತದಲ್ಲಿ ಮಾತ್ರ ಒಂದಾಗಿದ್ದಾರೆ ಎಂದು ಹೇಳಿದ್ದೆ. ಇದು ಈಗ ಇನ್ನೂ ಹೆಚ್ಚು ನಿಚ್ಚಳವಾಗಿ ಬೆಳಕಿಗೆ ಬರುತ್ತಿದೆ. ಇಲ್ಲಿ ನಡೆಯುವ ಎಲ್ಲ ದಂಗೆಗಳ ಕುರಿತಂತೆಯೂ ಈ ಮೂವರೂ ಹತ್ತಿರದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ನೂಪುರ್ ಶರ್ಮಾ ಕಾರಣಕ್ಕಾಗಿ ಬೀದಿಗೆ ಬಂದು ಕಲ್ಲೆಸೆದಿದ್ದ ಮುಸಲ್ಮಾನರು ಅಗ್ನಿಪಥ ಕಾರಣಕ್ಕೆ ಗಲಾಟೆಯಾಗುವ ಒಂದು ದಿನ ಮುನ್ನ ಈ ಶುಕ್ರವಾರ ಯಾರೂ ಬೀದಿಗೆ ಬರಬಾರದೆಂದು ಮೌಲ್ವಿಗಳು ಎಚ್ಚರಿಕೆಯ ಫತ್ವಾ ಹೊರಡಿಸಿದ್ದರು. ಏಕೆಂದರೆ ಮರುದಿನ ಗಲಾಟೆ ನಡೆಸುವ ಹೊಣೆ ಬೇರೆಯವರದ್ದಿದೆ ಎಂಬುದು ಅವರಿಗೆ ಗೊತ್ತಿತ್ತು. ಹಾಗೆಯೇ ಆಯ್ತು. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶಗಳಲ್ಲಿ ನಡೆದ ದಂಗೆಗಳಲ್ಲಿ ಪ್ರತಿಪಕ್ಷದವರ ಕೈವಾಡವಂತೂ ಇದ್ದೇ ಇತ್ತು. ಜೊತೆಗೆ ಈ ಸಂಘಟನೆಗಳದ್ದೂ ಕೂಡ. ಎಲ್ಲ ಗೊತ್ತಿದ್ದರೂ ಇವುಗಳ ವಿರುದ್ಧ ಏನೂ ಮಾಡಲಾಗದ ಸ್ಥಿತಿ ಇದೆ. ಏಕೆಂದರೆ ಈ ಸಂಘಟನೆಗಳಿಗೆ ಅಂತಾರಾಷ್ಟ್ರೀಯ ಬೆಂಬಲವಿದೆ. ಮುಸಲ್ಮಾನರ ಹಿತರಕ್ಷಣೆಗೆ ಐವತ್ತಕ್ಕೂ ಹೆಚ್ಚು ರಾಷ್ಟ್ರಗಳಿವೆ. ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಅನಿವಾರ್ಯತೆ ನರೇಂದ್ರ ಮೋದಿ ಮತ್ತವರ ತಂಡಕ್ಕಿದೆ.

    ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಪಾಕಿಸ್ತಾನದಲ್ಲಿ ಚೀನಾದ ಹೂಡಿಕೆ ಶೇಕಡಾ 50ರಷ್ಟು ಕಡಿಮೆಯಾದರೆ ಅಮೆರಿಕಾದ ಹೂಡಿಕೆ ಅಷ್ಟೇ ಹೆಚ್ಚಾಗಿದೆ. ಪಾಕಿಸ್ತಾನದ ನೆಲವನ್ನು ಭಾರತವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಪ್ರಯತ್ನವಿದಿರಬಹುದೇ? ಹೇಳಲಾಗದು! ಪಾಕಿಸ್ತಾನವನ್ನು ಐಎಂಎಫ್​ನ ಕಂದುಪಟ್ಟಿಯಿಂದ ಹೊರತೆಗೆಯುವಲ್ಲಿ ಅಮೆರಿಕಾ ಪಡುತ್ತಿರುವ ಪ್ರಯಾಸ ನೋಡಿದರೆ ಈ ಕುರಿತಂತೆ ಅನುಮಾನವೂ ಹುಟ್ಟುವುದಿಲ್ಲ. ಇಷ್ಟಕ್ಕೂ ಅಗ್ನಿಪಥ ಮೋದಿಯ ಯೋಜನೆಯೇ ಅಲ್ಲ. ಇದರ ಕನಸು ಕಂಡವರು ಜನರಲ್ ಬಿಪಿನ್ ರಾವತ್. ಮೂರೂ ಸೇನೆಯ ಪ್ರಮುಖರು ಕುಳಿತು ಈ ಯೋಜನೆಯನ್ನು ರೂಪಿಸಿದ್ದಾರೆ ಮತ್ತು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಏಕೆಂದರೆ ಈ ಯೋಜನೆ ಚೀನಾ, ರಷ್ಯಾ, ಫ್ರಾನ್ಸ್, ಅಮೆರಿಕಾಗಳಲ್ಲೂ ಇದೆ. ಐಎಎಸ್ ಆಗಬೇಕೆಂದರೆ ಭಿನ್ನ-ಭಿನ್ನ ಸ್ತರಗಳನ್ನು ದಾಟಿ ಹೋಗಬೇಕೆಂಬ ನಿಯಮವಿದ್ದರೆ, ಸೈನ್ಯಕ್ಕೆ ಸೇರುವಾಗಲೂ ಈ ರೀತಿಯ ಸ್ತರಗಳು ಏಕಿರಬಾರದು? ಈ ಯೋಜನೆ ಒಳಹೊಕ್ಕ ವ್ಯಕ್ತಿ ಆರಂಭದಲ್ಲೇ ತಿಂಗಳಿಗೆ ಮೂವತ್ತು ಸಾವಿರ ರೂಪಾಯಿಯಷ್ಟು ಸಂಬಳ ಪಡೆಯುತ್ತಾನೆ. ಆತ ಉಳಿಸಿರುವ ಮತ್ತು ಸರ್ಕಾರ ಅದಕ್ಕೆ ಸೇರಿಸಿರುವ ಹಣವನ್ನು ನಾಲ್ಕು ವರ್ಷಗಳ ನಂತರ ಪಡೆಯುವಾಗ ಅದು ಹೆಚ್ಚು-ಕಡಿಮೆ 10 ಲಕ್ಷ ರೂ. ದಾಟಿರುತ್ತದೆ. ಹೀಗೆ ಆಯ್ಕೆ ಆದವರಲ್ಲಿ ಕಾಲುಭಾಗದಷ್ಟು ಜನರನ್ನು ಸೈನ್ಯ ತನ್ನ ಅಂಗವನ್ನಾಗಿಸಿಕೊಳ್ಳುತ್ತದೆ. ಉಳಿದ ಜನ ಸಮರ್ಥ ತರಬೇತಿ ಪಡೆದ ಶಿಸ್ತುಬದ್ಧ ಯುವಕರಾಗಿ ಸಮಾಜಕ್ಕೆ ಆಸ್ತಿಯಾಗಿ ದಕ್ಕುತ್ತಾರೆ. ಪ್ರತಿವರ್ಷ 20ರಿಂದ 30 ಸಾವಿರ ಮಂದಿ ಸಮರ್ಥ ತರಬೇತಿ ಪಡೆದ ದೇಶಭಕ್ತ ತರುಣರು ಸಮಾಜಕ್ಕೆ ಆಸರೆಯಾಗಿ ನಿಲ್ಲುತ್ತಾರೆಂದರೆ ಬೇಡವೆಂದೇಕೆ ಹೇಳಬೇಕು ಹೇಳಿ? ಎಂಟ್ಹತ್ತು ವರ್ಷ ವ್ಯಯಿಸಿ, ಆಡಳಿತಾತ್ಮಕ ಸೇವೆಯ ಪರೀಕ್ಷೆಗಳನ್ನು ಪಾಸು ಮಾಡಿಕೊಳ್ಳಲು ಹೆಣಗಾಡುವ ಮಂದಿ, ಪಾಸಾಗಿ ಅಧಿಕಾರಿಗಳಾದರೆ ಅನೇಕ ಬಾರಿ ದೇಶಕಂಟಕರಾಗುತ್ತಾರೆ; ನಪಾಸಾದರೆ ತಮಗೆ ತಾವೇ ಕಂಟಕವಾಗುತ್ತಾರೆ. ಆದರೆ ಇಲ್ಲಿ ಹಾಗಲ್ಲ, ಸೈನ್ಯ ಹೊಕ್ಕರೆ ಮುಂದಿನ ಹದಿನೈದಿಪ್ಪತ್ತು ವರ್ಷಗಳ ಕಾಲ ತನ್ನ ಸಾಮರ್ಥ್ಯದಿಂದ ದೇಶ ರಕ್ಷಣೆ ಮಾಡುತ್ತಾನೆ, ನಾಲ್ಕು ವರ್ಷಗಳಲ್ಲೇ ಮರಳಿ ಬಂದರೆ ಈ ಅವಧಿಯಲ್ಲಿ ಪಡೆದಿರುವ ಡಿಗ್ರಿಯ ಆಧಾರದ ಮೇಲೆ ಭಿನ್ನ-ಭಿನ್ನ ಕೆಲಸಗಳಿಗೆ ಪ್ರಮುಖ ಅರ್ಹತೆ ಪಡೆಯುತ್ತಾನೆ. ಮತ್ತೆ ಇವರೆಲ್ಲ ಗಲಾಟೆ ಮಾಡುತ್ತಿರುವುದಾದರೂ ಏಕೆ? ಮೋದಿಯ ಯೋಜನೆಗಳನ್ನೆಲ್ಲ ವಿರೋಧಿಸಬೇಕು ಎಂಬ ಒಂದೇ ಕಾರಣಕ್ಕೆ.

    ಇದು ಇಲ್ಲಿಗೇ ನಿಲ್ಲುವುದಿಲ್ಲ. ಇನ್ನು ಎರಡು ವರ್ಷಗಳಲ್ಲಿ ಈ ಬಗೆಯ ಅನೇಕ ದಂಗೆಗಳನ್ನು ನಾವು ನೋಡಲಿದ್ದೇವೆ. ಒಮ್ಮೆ ಮೋದಿ ತಪ್ಪು ಮಾಡಬೇಕೆಂದು ಅವರೆಲ್ಲರೂ ಕಾಯುತ್ತಿದ್ದಾರೆ. ಬಿಜೆಪಿ ಸರ್ಕಾರಗಳಿರುವ ಪೊಲೀಸರ ಕೈಲಿ ಗೋಲಿಬಾರು ಮಾಡಿಸಿ, ಕೆಲವು ರೈತರನ್ನೋ ಸೈನಿಕರನ್ನೋ ಮಹಿಳೆಯರನ್ನೋ ದಲಿತರನ್ನೋ ಆದಿವಾಸಿಗಳನ್ನೋ ಕೊಲ್ಲಿಸಿಬಿಟ್ಟರೆ ಇಡೀ ದೇಶಕ್ಕೆ ಬೆಂಕಿ ಹಚ್ಚುವುದು ಸುಲಭವೆಂಬುದು ಅವರಿಗೆ ಗೊತ್ತಿದೆ. ಟ್ರಂಪರನ್ನು ಹೇಗೆ ಹೊರದಬ್ಬಿದರೋ ಹಾಗೆಯೇ ಮೋದಿಗೂ ಮಾಡಬೇಕೆಂಬ ಅವರ ಇರಾದೆ ಜೋರಾಗಿದೆ. ಈ ಸವಾಲು ಮೋದಿಗಲ್ಲ, ನನಗೆ-ನಿಮಗೆ. ದೇಶ ಉಳಿಯಬೇಕೆಂದರೆ ಇದೊಂದು ಕೊನೆಯ ಬೌದ್ಧಿಕ ಯುದ್ಧ ನಡೆಯಲೇಬೇಕು. ಸಿದ್ಧರಾಗಿ!

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts