More

    ಕುವೆಂಪು ಆಶಯಗಳನ್ನು ಅಳವಡಿಸಿಕೊಂಡು ವಿಶ್ವಮಾನವರಾಗಿ; ಪಿಇಎಸ್ ವಿವಿ ಕುಲಾಧಿಪತಿ ದೊರೆಸ್ವಾಮಿ 

    ಬೆಂಗಳೂರು:  ಜಗತ್ತಿನ ಪ್ರತಿಯೊಬ್ಬರೂ ವಿಶ್ವಮಾನವರಾಗ ಬೇಕು ಎನ್ನುವುದು ರಾಷ್ಟ್ರಕವಿ ಕುವೆಂಪು ಅವರ ಆಶಯವಾಗಿತ್ತು ಎಂದು ಪಿಇಎಸ್ ವಿಶ್ವವಿದ್ಯಾಲಯ ಕುಲಾಧಿಪತಿ ಪ್ರೊ. ಎಂ.ಆರ್. ದೊರೆಸ್ವಾಮಿ ತಿಳಿಸಿದ್ದಾರೆ.

    ಕರ್ನಾಟಕ ವಿಶ್ವ ಮಾನವ ಸಂಸ್ಥೆ ಹನುಮಂತನಗರದ ಪಿಇಎಸ್ ವಿವಿಯಲ್ಲಿ ಗುರುವಾರ ಆಯೋಜಿಸಿದ್ದ ಕುವೆಂಪು ವಿಚಾರಧಾರೆ ಹಾಗೂ ವಿಶ್ವಮಾನವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಹುಟ್ಟುವಾಗಲೇ ನಾವು ವಿಶ್ವಮಾನವರು. ಆದರೆ, ಬೆಳೆಯುತ್ತಾ ಅಲ್ಪಮಾನವರಾಗುತ್ತೇವೆ. ವಿದ್ಯಾರ್ಥಿಗಳಿಗೆ ನಾವೆಲ್ಲರೂ ಭಾರತೀಯರು ಎಂಬ ಮನೋಭಾವ ಬರುವಂತೆ ಮಾಡುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ. ಅಲ್ಲದೆ, ಕುವೆಂಪು ಅವರ ಆಶಯ ಮೈಗೂಡಿಸಿಕೊಂಡು ವಿಶ್ವಮಾನವರಾಗಬೇಕು ಎಂದರು.

    ಸುಪ್ರೀಂಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಮಾತನಾಡಿ, ವಿದ್ಯಾರ್ಥಿಗಳು ಮೊದಲು ಮನೆ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು. ಆಮೇಲೆ ಸಮಾಜಮುಖಿ ಕೆಲಸದ ಕಡೆಗೆ ಒಲವು ತೋರಿಸಬೇಕು ಎಂದರು.

    ಏಸು, ಬುದ್ದ, ರವೀಂದ್ರನಾಥ ಠಾಗೂರ್, ವಿವೇಕಾನಂದ, ಸಂತರು ಹಾಗೂ ಶರಣರು ವಿಶ್ವಮಾನವ ತತ್ವಗಳನ್ನು ಅಳವಡಿಸಿಕೊಂಡು ಒಂದೊಂದು ರೀತಿಯಲ್ಲಿ ದೇಶ ಮತ್ತು ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಇವರೆಲ್ಲರೂ ತೋರಿರುವ ಮಾರ್ಗದಲ್ಲಿ ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದು ಹೇಳಿದರು.

    ಪ್ರಶಸ್ತಿ ಪ್ರದಾನ

    ಸುಪ್ರೀಂಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರಿಗೆ ವಿಶ್ವಮಾನವ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಪೋಲಿಸ್ ಮಹಾನಿರ್ದೇಶಕ ಕೆ.ವಿ.ಆರ್. ಠ್ಯಾಗೋರ್, ಸಂಸ್ಥೆ ಅಧ್ಯಕ್ಷ ಎಚ್.ಎಸ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎನ್.ಬಿ.ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.

    ಮಾನವಸಂಕುಲ ಯಾವ ರೀತಿ ಇರಬೇಕು ಎಂಬ ಹಲವು ವಿಚಾರಗಳನ್ನು ರಾಷ್ಟ್ರಕವಿ ಕುವೆಂಪು ಸಮಾಜದಲ್ಲಿ ಬಿತ್ತಿದ್ದಾರೆ. ಹಾಗಾಗಿ ಕುವೆಂಪು ಸೇರಿ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ಶಿಸ್ತುಬದ್ದ ಜೀವನ ನಡೆಸಲು ಮುಂದಾಗಬೇಕು.

    | ಎಲ್.ಎ. ರವಿಸುಬ್ರಮಣ್ಯ ಶಾಸಕ  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts