Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಮೋದಿ ಹುಡುಕುತ್ತಿರುವ ವಸ್ತು ಅದಾವುದು?

Monday, 04.06.2018, 3:05 AM       No Comments

ಇಂಗ್ಲೆಂಡಿನಲ್ಲಿ ತನ್ನ ಪ್ರಭಾವವನ್ನು ಬೀರುವ ಮುಂಚೆ ನಾರ್ಡಿಕ್ ರಾಷ್ಟ್ರಗಳನ್ನು ಸೆಳೆದುಕೊಳ್ಳುವುದು, ನೇಪಾಳಕ್ಕೆ ಹೋಗುವ ಮುನ್ನ ಚೀನಾದೊಂದಿಗೆ ಮಾತುಕತೆಯಾಡಿ ಭೂಮಿಕೆ ಸಿದ್ಧಪಡಿಸುವುದು, ರಷ್ಯಾದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡ ನಂತರವೂ ಅಮೆರಿಕದೊಂದಿಗಿನ ಬಾಂಧವ್ಯವನ್ನು ಆನಂದಿಸುವುದು… ಇವೆಲ್ಲ ನಡೆಗಳು ಸಾಮಾನ್ಯವಾದವಲ್ಲ.

ಪೆಸಿಫಿಕ್ ಸಾಗರದಲ್ಲಿ ಕಾರ್ಯನಿರ್ವಹಿಸುವ ತನ್ನ ಕಮಾಂಡೊ ಪಡೆಯ ಹೆಸರನ್ನು ಇಂಡೊ-ಪೆಸಿಫಿಕ್ ಕಮಾಂಡೊ ಎಂದು ಬದಲಾಯಿಸಿ ಇತ್ತೀಚೆಗೆ ಅಮೆರಿಕ ನಿರ್ಣಯ ಕೊಟ್ಟಿತು. ಅನೇಕರಿಗೆ ಇದು ಮಹತ್ವದ ಸುದ್ದಿ ಎನಿಸಲೇ ಇಲ್ಲ. ಇಡಿಯ ದಕ್ಷಿಣ ಚೀನಾ ಸಮುದ್ರವನ್ನು ಒಳಗೊಂಡಂತಹ ಈ ಪೆಸಿಫಿಕ್ ಪ್ರದೇಶಕ್ಕೆ ಭಾರತದ ಹೆಸರನ್ನು ಜೋಡಿಸಿರುವುದು ಯುದ್ಧನೀತಿಯ ದೃಷ್ಟಿಯಿಂದಾಗಲೀ ಅಥವಾ ಸೇನಾ ಜಮಾವಣೆಯ ದೃಷ್ಟಿಯಿಂದಾಗಲೀ ಬಲು ದೊಡ್ಡ ಬದಲಾವಣೆಯನ್ನೇನೂ ತರಲಾರದು ನಿಜ. ಆದರೆ ಅಮೆರಿಕ ಈ ಪ್ರದೇಶದಲ್ಲಿ ಭಾರತಕ್ಕೆ ನೀಡುವ ಮಹತ್ವ ಎಷ್ಟೆಂಬುದು ಜಗತ್ತಿಗೆ ಸಂದೇಶವಾದರೆ ಚೀನಾ ಮತ್ತು ಪಾಕಿಸ್ತಾನಗಳಿಗೆ ನಡುಕ ಹುಟ್ಟಿಸಲು ಸಾಕು. ಪಾಕಿಸ್ತಾನ ತಾನು ಒಳಗೊಂಡಿರುವ ಸಮುದ್ರ ಪ್ರದೇಶಕ್ಕೆ ತನಗೆ ಬೇಕಾಗಿರುವ ಹೆಸರನ್ನಿಡಬೇಕೆಂದು ಎಷ್ಟು ಬಾರಿ ಗೋಗರೆದರೂ ಕ್ಯಾರೆ ಎನ್ನದ ಅಮೆರಿಕ, ಭಾರತ ಕೇಳಿಕೊಳ್ಳದೆಯೇ ಇಂತಹದ್ದೊಂದು ಹೆಜ್ಜೆ ಇಟ್ಟಿರುವುದು ನರೇಂದ್ರ ಮೋದಿಯವರ ವಿದೇಶಾಂಗ ನೀತಿಗೆ ಗೆಲುವೇ ಸರಿ. ಜತೆಗೆ ಏಷ್ಯಾದಲ್ಲಿ ಭಾರತ ಪ್ರಬಲವಾಗಿ ಬೆಳೆಯುತ್ತಿರುವ ರಾಷ್ಟ್ರ ಎಂಬುದರ ಸಂಕೇತ. ಪ್ರತಿಪಕ್ಷ ಕಾಂಗ್ರೆಸ್ಸಿಗೆ ಮತ್ತು ಈ ದೇಶದ ಕೆಲವು ಸ್ವಯಂಘೊಷಿತ ಬುದ್ಧಿಜೀವಿಗಳಿಗೆ ಪ್ರಧಾನಮಂತ್ರಿ ಮಾಡುತ್ತಿರುವ ಸಾಹಸಮಯ ಕೆಲಸ ಒಂದೋ ಅರಿವಾಗುತ್ತಿಲ್ಲ ಅಥವಾ ಒಪ್ಪಿಕೊಳ್ಳುವ ಛಾತಿ ಅವರಲ್ಲಿಲ್ಲ!

ಕರ್ನಾಟಕದ ಚುನಾವಣೆ, ಅದರ ಫಲಿತಾಂಶ ಕಣ್ಣೆದುರಿಗೇ ಇದೆ. ಕಾಂಗ್ರೆಸ್ಸು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂಬ ಚುನಾವಣಾಪೂರ್ವ ಸಮೀಕ್ಷೆಯಿಂದ ಶುರುಮಾಡಿ ಕಾಂಗ್ರೆಸ್ಸು ಜೆಡಿಎಸ್​ನ ಎದುರಿಗೆ ಕೈಚಾಚಿ ನಿಲ್ಲಬೇಕಾದ ಪರಿಸ್ಥಿತಿ ನಿರ್ವಣವಾಗುವವರೆಗೂ ನರೇಂದ್ರ ಮೋದಿಯವರ 21 ರ್ಯಾಲಿಗಳ ಪ್ರಭಾವ ಎಂತಹುದು ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಹಾಗಂತ ಮೋದಿ ಬರಿ ಚುನಾವಣಾ ಭಾಷಣಗಳನ್ನಷ್ಟೇ ಮಾಡುತ್ತ ಉಳಿಯಲಿಲ್ಲ. ಕರ್ನಾಟಕದಲ್ಲಿ ಮೊದಲ ಚುನಾವಣಾ ಭಾಷಣ ಮಾಡುವುದಕ್ಕೂ ಮುಂಚೆ ಸ್ವೀಡನ್, ಬ್ರಿಟನ್ ಮತ್ತು ಜರ್ಮನಿಗಳಿಗೆ ಹೋಗಿ ಬಂದಿದ್ದರು. ಡೆನ್ಮಾರ್ಕ್, ಫಿನ್​ಲ್ಯಾಂಡ್, ಐಲ್ಯಾಂಡ್, ನಾರ್ವೆ ಮತ್ತು ಸ್ವೀಡನ್ (ಈ ರಾಷ್ಟ್ರಗಳನ್ನು ನಾರ್ಡಿಕ್ ಗುಂಪು ಎಂದು ಕರೆಯಲಾಗುತ್ತದೆ) ಈ ಐದು ರಾಷ್ಟ್ರಗಳ ಪ್ರಮುಖರನ್ನು ಸ್ವೀಡನ್ನಿನಲ್ಲಿ ಭಾರತ-ನಾರ್ಡಿಕ್ ಶೃಂಗಸಭೆಯ ಮೂಲಕ ಭೇಟಿಯಾದರು. ನೆನಪಿಡಿ. ಈ ಶೃಂಗಸಭೆಯನ್ನು ಸ್ವೀಡನ್ನಿನ ಸಹಯೋಗದೊಂದಿಗೆ ಆಯೋಜಿಸಿದ್ದೇ ಭಾರತ. ಈ ಎಲ್ಲ ರಾಷ್ಟ್ರಗಳೊಂದಿಗೂ ಭಾರತಕ್ಕೆ ಪ್ರತ್ಯೇಕವಾದ ಸಂಬಂಧವಿದೆ. ಆದರೆ ಇವೆಲ್ಲವುಗಳನ್ನು ಒಟ್ಟಿಗೆ ಭೇಟಿ ಮಾಡುವಂಥ ಪ್ರಯತ್ನವನ್ನು ಅಮೆರಿಕ ಬಿಟ್ಟರೆ ಮಾಡಿದ ಮತ್ತೊಂದು ರಾಷ್ಟ್ರ ಭಾರತವೇ.

ಈ ಐದು ರಾಷ್ಟ್ರಗಳು ಅಪಾರ ಸಿರಿವಂತಿಕೆಯನ್ನು ಹೊಂದಿವೆ. ಸುದೀರ್ಘವಾದ ಆಂತರಿಕ ಸಂಬಂಧವನ್ನು ಕೂಡ. ಜತೆಗೆ ಭಾರತದ ಕುರಿತಂತೆ ಈ ರಾಷ್ಟ್ರಗಳಿಗೆ ಸಹಜವಾದ ಪ್ರೀತಿ ಇದೆ. ಪೋಖ್ರಾನ್-2 ನಂತರ ಭಾರತವನ್ನು ನ್ಯೂಕ್ಲಿಯರ್ ಸಪ್ಲೆಯರ್ ಗ್ರೂಪಿನ ಸದಸ್ಯ ರಾಷ್ಟ್ರವಾಗಿ ಪರಿಗಣಿಸಬೇಕೆಂದು ಆಗ್ರಹಿಸುವಲ್ಲಿ ನಾರ್ಡಿಕ್​ನ ಪಾತ್ರವೂ ಇತ್ತು. ನರೇಂದ್ರ ಮೋದಿ ಈ ರಾಷ್ಟ್ರಗಳನ್ನು ವಿಶೇಷವಾಗಿ ಭೇಟಿ ಮಾಡಿ ಅನೇಕ ಬಗೆಯ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ನಾರ್ಡಿಕ್ ಮತ್ತು ಭಾರತದ ನಡುವೆ ಇರುವ ಸಮಾನ ಭೂಮಿಕೆಗಳನ್ನು ರ್ಚಚಿಸಿ ಅದರ ಆಧಾರದ ಮೇಲೆ ಈ ಒಪ್ಪಂದಗಳು ರೂಪುಗೊಂಡಿವೆ. ನಾರ್ಡಿಕ್ ರಾಷ್ಟ್ರಗಳನ್ನು ಪ್ರತ್ಯೇಕವಾಗಿ ಗಣಿಸದೇ ಸಮೂಹವಾಗಿ ಗುರುತಿಸಿ ಅವುಗಳೊಂದಿಗೆ ಇಟ್ಟಿರುವ ಹೆಜ್ಜೆ ನಿಸ್ಸಂಶಯವಾಗಿ ಒಟ್ಟಾರೆ ಬ್ರಿಟನ್ನಿನ ಮೇಲೆ ಪ್ರಭಾವ ಬೀರುವಂಥದ್ದೇ. ಹೀಗಾಗಿಯೇ ಅದಾದೊಡನೆ ಇಂಗ್ಲೆಂಡಿನ ಪ್ರಧಾನಿಯನ್ನು ಭೇಟಿಯಾದರು. ಭಾರತಕ್ಕೆ ಮೋಸ ಮಾಡಿ ಓಡಿ ಬಂದು ಇಂಗ್ಲೆಂಡಿನಲ್ಲಿ ಆಶ್ರಯ ಪಡೆದಿರುವ ಮಲ್ಯ, ಲಲಿತ್​ರನ್ನು ಹಸ್ತಾಂತರಿಸಬೇಕೆಂದು ಮೋದಿ ಕೇಳಿಕೊಂಡರು. ಆದರೆ ಈ ವಿಚಾರಕ್ಕೆ ಇಂಗ್ಲೆಂಡಿನ ಸರ್ಕಾರ ತುಂಬ ಎಚ್ಚರಿಕೆಯಿಂದ ಪ್ರತಿಕ್ರಿಯೆ ಕೊಡುತ್ತ ಭಾರತದ ಜೈಲುಗಳಲ್ಲಿರುವ ವ್ಯವಸ್ಥೆಯನ್ನು ನಾವು ಮೊದಲು ಪರಿಶೀಲಿಸಿ, ಆನಂತರ ಮಾತನಾಡುತ್ತೇವೆಂದಾಗ, ಸ್ವಾಭಿಮಾನದ ಮುದ್ದೆಯಾದ ಮೋದಿ ಕೊಟ್ಟ ಉತ್ತರವೇನಿರಬಹುದು ಗೊತ್ತೇನು? ‘ಇದೇ ಜೈಲುಗಳಲ್ಲಿ ನೀವು ಗಾಂಧಿ-ನೆಹರುರಂತಹ ಮಹಾನಾಯಕರನ್ನು ಇಟ್ಟಿದ್ದಿರೆಂಬುದನ್ನು ಮರೆತುಬಿಡಬೇಡಿ’ ಅಂತ. ಬಹುಶಃ ಇದೇ ಆಕ್ರೋಶ ಅವರನ್ನು ಕಾಡುತ್ತಿದ್ದಿರಬೇಕು. ಅವರು ಇಂಗ್ಲೆಂಡಿನೊಂದಿಗೆ ಕೈ ಚಾಚುವಂತಹ ಯಾವ ಒಪ್ಪಂದಕ್ಕೂ ಸಿದ್ಧರಿರಲಿಲ್ಲ. ಭಾರತ ಮತ್ತು ಇಂಗ್ಲೆಂಡಿನ ನಡುವೆ ಅಕ್ರಮ ವಲಸೆಗಾರರ ಸಮಸ್ಯೆಯನ್ನು ನಿವಾರಿಸಬೇಕೆಂದು ಪ್ರಧಾನಿ ತೆರೆಸಾ ಕೇಳಿಕೊಂಡಿದ್ದರು. ಅದಕ್ಕೆ ಸಿದ್ಧವೆಂದೂ ಆದರೆ ವೀಸಾ ನಿಯಮಗಳ ಸಡಿಲಿಕೆ ಮಾಡಲೇಬೇಕೆಂದೂ ನರೇಂದ್ರ ಮೋದಿ ಹಠ ಹಿಡಿದು ಕುಳಿತರು. ಇಂಗ್ಲೆಂಡ್ ನಿರಾಕರಿಸಿದಾಗ ಮುಲಾಜಿಲ್ಲದೇ ಒಪ್ಪಂದಕ್ಕೆ ಸಹಿ ಮಾಡದೇ ಎದ್ದುಬಂದುಬಿಟ್ಟರು. ಮೋದಿಯವರಿಗೆ ಚೆನ್ನಾಗಿ ಗೊತ್ತು. ಸುತ್ತ-ಮುತ್ತಲಿನ ಎಲ್ಲ ರಾಷ್ಟ್ರಗಳು ಭಾರತವನ್ನು ಬೆಂಬಲಿಸಲು ನಿಂತಿರುವಾಗ ಇಂಗ್ಲೆಂಡು ಭಾರತದ ಮಾತನ್ನು ಕೇಳಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಹೀಗಾಗಿ ಬರಲಿರುವ ದಿನಗಳಲ್ಲಿ ತನ್ನೊಡಲೊಳಗೆ ಅಡಗಿರುವ ಮಲ್ಯ, ಲಲಿತ್ ಮೋದಿಯನ್ನು ಭಾರತಕ್ಕೆ ಒಪ್ಪಿಸಲೇಬೇಕಾದ ಪರಿಸ್ಥಿತಿಗೆ ಇಂಗ್ಲೆಂಡು ಸಿಲುಕುವುದು ಶತ-ಪ್ರತಿಶತ ಖಾತ್ರಿ.

ಅದರ ಹಿಂದುಹಿಂದೆಯೇ ನರೇಂದ್ರ ಮೋದಿ ಎಲ್ಲರೂ ಗಾಬರಿಯಾಗುವಂತೆ ಚೀನಾಕ್ಕೆ ಭೇಟಿ ಕೊಟ್ಟರು. ಇತರ ರಾಷ್ಟ್ರಗಳ ಮುಖ್ಯಸ್ಥರನ್ನು ಅಸಡ್ಡೆಯಿಂದಲೇ ಬರಮಾಡಿಕೊಳ್ಳುವ ಕ್ಸಿ ಜಿನ್​ಪಿಂಗ್ ಮೋದಿಯವರನ್ನು ಮಾತ್ರ ರಾಜಧಾನಿಯಿಂದ ಹೊರಗೆ ಬಂದು ಎರಡನೇ ಬಾರಿಗೆ ಬರಮಾಡಿಕೊಂಡರು. ಮಾತುಕತೆಗಳು ಸಾಕಷ್ಟು ನಡೆದವು. ಭಾರತ ಮತ್ತು ಚೀನಾಗಳ ಬಾಂಧವ್ಯ ವೃದ್ಧಿಯಾದರೆ ಏಷ್ಯಾ ಜಾಗತಿಕವಾಗಿ ಪ್ರಬಲವಾಗುತ್ತದೆಂಬುದು ಎರಡೂ ನಾಯಕರಿಗೆ ಗೊತ್ತಿರದ ಸಂಗತಿಯೇನಲ್ಲ. ಪದೇಪದೆ ಭಾರತಕ್ಕೆ ಕಿರಿಕಿರಿ ಉಂಟುಮಾಡಲೆತ್ನಿಸುವ ಚೀನಾ, ಮೋದಿ ಪ್ರಧಾನಿಯಾದಾಗಿನಿಂದಲೂ ಬಲು ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದೆ. ಈ ಭೇಟಿಯ ಹೊತ್ತಲ್ಲಿ ಅಪ್ಪಿತಪ್ಪಿಯೂ ಭಾರತ ವಿರೋಧಿಸುತ್ತಿರುವ ಒನ್ ಬೆಲ್ಟ್ ಒನ್ ರೋಡಿನ ಕುರಿತಂತೆ ಚಕಾರ ಎತ್ತಲಿಲ್ಲ. ಏಷ್ಯಾದ ಮತ್ತು ಜಗತ್ತಿನ ಅನೇಕ ರಾಷ್ಟ್ರಗಳಿಗೆ ಮೋದಿಯವರ ಈ ಭೇಟಿ ಅಚ್ಚರಿಯೆನಿಸಿದ್ದರಲ್ಲಿ ಯಾವ ಸಂಶಯವೂ ಇಲ್ಲ.

ಈ ಪ್ರವಾಸದ ನಂತರ ಕರ್ನಾಟಕದ ಚುನಾವಣೆಯ ರ್ಯಾಲಿಗಳಲ್ಲಿ ನಿರಂತರವಾಗಿ ಭಾಗವಹಿಸಿದ ಮೋದಿ ಚುನಾವಣೆ ಮುಗಿದೊಡನೆ ನೇಪಾಳಕ್ಕೆ ಧಾವಿಸಿದರು. ಇದು ಕೂಡ ಸಾಮಾನ್ಯವಾದ ಪ್ರಯತ್ನವಲ್ಲ. ತಾವು ಪ್ರಧಾನಿಯಾದೊಡನೆ ನೇಪಾಳಕ್ಕೆ ಭೇಟಿ ಕೊಟ್ಟು ಅಪಾರ ವಿಶ್ವಾಸ ಗಳಿಸಿದ್ದ ಮೋದಿ ಅದೇ ನೇಪಾಳದಲ್ಲಿ ಕಮ್ಯುನಿಸ್ಟ್ ಸರ್ಕಾರ ಬರದಿರುವಂತೆ ತಡೆಯುವಲ್ಲಿ ಮಾಧೇಶಿಗಳಿಗೆ ಬೆಂಬಲಕೊಟ್ಟು ತೀವ್ರ ಟೀಕೆಗೆ ಒಳಗಾಗಿದ್ದರು. ದುರ್ದೈವವೆಂಬಂತೆ ಕಮ್ಯುನಿಸ್ಟರಾದ ಕೆ.ಪಿ.ಓಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದುಬಿಟ್ಟರು. ಸಹಜವಾಗಿಯೇ ಅಂದುಕೊಂಡಂತಾಗದೇ ಕಳೆದ ಒಂದು ವರ್ಷದಿಂದ ನೇಪಾಳದೊಂದಿಗೆ ಕಹಿಬಾಂಧವ್ಯ ಮುಂದುವರಿದೇ ಇತ್ತು.

ಚೀನಾ ನೇಪಾಳಕ್ಕೆ ಹತ್ತಿರವಾಗುವುದನ್ನು ತಡೆದು ಜಾಗತಿಕ ಮಟ್ಟದಲ್ಲಿ ನೇಪಾಳದೊಂದಿಗಿನ ಬಾಂಧವ್ಯವನ್ನು ಮತ್ತೆ ಸಾಬೀತುಪಡಿಸುವ ಧಾವಂತದಲ್ಲಿದ್ದ ನರೇಂದ್ರ ಮೋದಿ ನೇಪಾಳದ ಪ್ರಧಾನಿ ಓಲಿಯವರನ್ನು ಭಾರತಕ್ಕೆ ಕರೆಸಿಕೊಂಡು ಅಪಾರವಾದ ಗೌರವ ಕೊಟ್ಟದ್ದಲ್ಲದೇ ಈಗ ತಾವೇ ನೇಪಾಳದೆಡೆಗೆ ಧಾವಿಸಿದರು. ಈ ಬಾರಿ ಅವರು ಕಾಠ್ಮಂಡುವಿಗಿಂತ ಜನಕಪುರವನ್ನೇ ವಿಶೇಷವಾಗಿ ಆಯ್ದುಕೊಂಡು ಅಲ್ಲಿ ಕಾರ್ಯಕ್ರಮ ಮಾಡಿದ್ದಲ್ಲದೇ ಪ್ರವಾಸೋದ್ಯಮ ಯೋಜನೆಯನ್ನೂ ಘೊಷಿಸಿದರು. ಜನಕ್​ಪುರ-ಅಯೋಧ್ಯಾ ಬಸ್ ಸಂಚಾರವನ್ನು ಆರಂಭಿಸುವುದರ ಜತೆಗೆ ಜನಕಪುರದ ಅಭಿವೃದ್ಧಿಗೆ 100 ಕೋಟಿ ರೂಪಾಯಿಯ ಸಹಾಯವನ್ನೂ ಘೊಷಿಸಿದರು. ಪ್ರಧಾನಿ ಓಲಿಯವರನ್ನು ಕಾಠ್ಮಂಡುವಿನಲ್ಲಿ ಭೇಟಿಮಾಡಿ, ಹಾಳಾಗಿದ್ದ ಸಂಬಂಧವನ್ನು ತಿಳಿಗೊಳಿಸುವ ಯತ್ನ ಮಾಡಿದರು. ದೂರದಿಂದ ನೋಡುವವರಿಗೆ ನೇಪಾಳ ಮೋದಿಯವರ ಮತ್ತೊಂದು ವಿದೇಶ ಪ್ರವಾಸವಷ್ಟೇ. ಆದರೆ ಬಲ್ಲವರಿಗೆ ಮಾತ್ರ ಇದು ಚೀನಾದ ತೆಕ್ಕೆಯಿಂದ ನೇಪಾಳವನ್ನು ಸೆಳೆದುಕೊಳ್ಳುವ ಬಲು ದೊಡ್ಡ ಪ್ರಯಾಸವೆಂದು ಅರ್ಥವಾದೀತು.

ನೇಪಾಳದ ಭೇಟಿಯ ಒಂದು ವಾರದ ಒಳಗೆ ಮೋದಿ ರಷ್ಯಾಕ್ಕೆ ಹೋದರು. ಈ ಬಾರಿ ಕೂಡ ರಾಜಧಾನಿಯಲ್ಲಿ ಔಪಚಾರಿಕ ಭೇಟಿಯಾಗದೇ ಎರಡೂ ರಾಷ್ಟ್ರಗಳ ನಾಯಕರು ಸೋಚಿಯಲ್ಲಿ ಜತೆಯಾದರು, ಅಡ್ಡಾಡಿದರು, ಒಂದಷ್ಟು ಹರಟಿದರು ಎಂದು ಪತ್ರಿಕೆಗಳು ವರದಿ ಮಾಡಿದವು. ಹಾಗೆ ಸುಮ್ಮನೆ ಆಲೋಚಿಸಿ ನೋಡಿ. ತಮ್ಮ ರಾಷ್ಟ್ರಗಳ ಅಭಿವೃದ್ಧಿಗೆ ಪುರುಸೊತ್ತಿಲ್ಲದೇ ದುಡಿಯುತ್ತಿರುವ ಮೋದಿ ಮತ್ತು ಪುತಿನ್ ಹೀಗೆ ಟೈಮ್ಾಸ್ ಮಾಡುತ್ತ ಅಡ್ಡಾಡುವುದು ಸಾಧ್ಯವೇನು? ಅದರಲ್ಲೂ ಈ ಬಾರಿಯ ಚುನಾವಣಾ ಗೆಲುವು ರಷ್ಯಾ ಮೇಲೆ ಪುತಿನ್​ಗೆ ಬಲವಾದ ಹಿಡಿತವನ್ನು ತಂದುಕೊಟ್ಟಿದೆ. ಜಾಗತಿಕ ಮಟ್ಟದಲ್ಲೂ ರಷ್ಯಾ ಹಿಂದೆಂದಿಗಿಂತಲೂ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ. ಭಾರತ ಅಮೆರಿಕದತ್ತ ವಾಲುತ್ತಿದೆ ಎಂಬ ಕೂಗು ಜೋರಾಗಿರುವಾಗಲೇ ಮೋದಿ ರಷ್ಯಾಕ್ಕೆ ಭೇಟಿ ನೀಡುವ ಮೂಲಕ ಮಾಸ್ಟರ್ ಸ್ಟ್ರೋಕ್ ಕೊಟ್ಟರು. ಹೊರನೋಟಕ್ಕೆ ರಷ್ಯಾದೊಂದಿಗೆ ರಕ್ಷಣೆಗೆ ಸಂಬಂಧಪಟ್ಟ ಒಪ್ಪಂದಗಳಾಗಿವೆ ಎಂಬ ಸುದ್ದಿ ಬಂತು. ಒಳಗೆ ನಡೆದಿದ್ದೇನೆಂಬುದನ್ನುದನ್ನು ಅರ್ಥೈಸಿಕೊಳ್ಳುವುದು ಸುಲಭ ಸಾಧ್ಯವೇನಲ್ಲ. ಏಕೆಂದರೆ ರಷ್ಯಾ ಭೇಟಿ ಮುಗಿಸಿ ಮೋದಿ ಮರಳಿದೊಡನೆ ಅಮೆರಿಕ ಭಾರತದೊಂದಿಗೆ ತಗಾದೆ ತೆಗೆದು ಒಂದಷ್ಟು ಕಿರಿಕಿರಿ ಮಾಡಿತು. ಮುಂದೇನೆಂದು ಎಲ್ಲರೂ ಕಾತರವಾಗಿರುವಾಗಲೇ ಮೋದಿ ಇಂಡೋನೇಷ್ಯಾ, ಮಲೇಷ್ಯಾ, ಸಿಂಗಾಪುರಗಳ ಪ್ರವಾಸವನ್ನು ಕೈಗೊಂಡರು. ಇಂಡೋನೇಷ್ಯಾದಲ್ಲಿ ಮೋದಿಯವರಿಗೆ ಸಿಕ್ಕ ಅದ್ದೂರಿ ಸ್ವಾಗತ ಭಾರತದೊಳಗಿರುವ ಪ್ರತಿಯೊಬ್ಬ ಮಹತ್ವಾಕಾಂಕ್ಷಿ ಕಾಂಗ್ರೆಸ್ ನಾಯಕನ ಹೊಟ್ಟೆಯೊಳಗೆ ನೂರಾರು ಲೀಟರ್ ಪೆಟ್ರೋಲಿಗೆ ಬೆಂಕಿ ಹಚ್ಚಿದಂತಾಗಿರಬಹುದು. ಅಲ್ಲಿನ ಅಧ್ಯಕ್ಷರು ತಮ್ಮ ಮೊಮ್ಮಗನಿಗೆ ಶ್ರೀನರೇಂದ್ರ ಎಂಬ ಹೆಸರನ್ನಿಟ್ಟಿದುದನ್ನು ಹೆಮ್ಮೆಯಿಂದ ಹೇಳಿಕೊಂಡರು. ಚೀನಾದೊಂದಿಗೆ ಇಂಡೋನೇಷ್ಯಾಕ್ಕಿದ್ದ ಆಂತರಿಕ ಸಂಘರ್ಷವನ್ನು ಮುಂದಿರಿಸಿಕೊಂಡು ಅಲ್ಲಿನ ಬಂದರೊಂದನ್ನು ಅಭಿವೃದ್ಧಿಪಡಿಸುವ ಮತ್ತು ಅದನ್ನು ರಕ್ಷಣಾ ದೃಷ್ಟಿಯಿಂದ ಬಳಸಿಕೊಳ್ಳುವ ಒಪ್ಪಂದಗಳನ್ನು ಮೋದಿ ಮಾಡಿಕೊಂಡರು. ಮಲೇಷ್ಯಾದ ಪ್ರವಾಸವನ್ನು ಮುಗಿಸಿ ಅವರು ಸಿಂಗಾಪುರಕ್ಕೆ ಕಾಲಿಡುವ ವೇಳೆಗಾಗಲೇ ಅಮೆರಿಕ ತನ್ನ ಪೆಸಿಫಿಕ್ ಕಮಾಂಡಿನ ಹೆಸರನ್ನು ಇಂಡೊ-ಪೆಸಿಫಿಕ್ ಕಮಾಂಡೊ ಎಂದು ಬದಲಿಸಿಯಾಗಿತ್ತು. ಇದು ಸಿಂಗಾಪುರಕ್ಕೆ ಹೋಗುವ ಮುನ್ನ ಮೋದಿ ಬತ್ತಳಿಕೆಯಲ್ಲಿ ಅಮೆರಿಕ ಇಟ್ಟ ವಿಶಿಷ್ಟವಾದ ಬಾಣ. ಲೇಖನದ ಆರಂಭದಲ್ಲೇ ಹೇಳಿದಂತೆ ಹೆಸರಿನ ಬದಲಾವಣೆಯಿಂದ ರಕ್ಷಣಾ ರೂಪುರೇಷೆಯಲ್ಲಿ ಬದಲಾವಣೆಯೇನೂ ಬಂದಿರಲಿಲ್ಲ. ಆದರೆ ಪೆಸಿಫಿಕ್ ಸಮುದ್ರದಲ್ಲಿ ಪ್ರಮುಖವಾದ ಹೊಣೆಗಾರಿಕೆ ಭಾರತದ್ದೇ ಎಂದು ಬಲು ದೊಡ್ಡ ಸಂದೇಶವನ್ನು ರವಾನಿಸಿಯಾಗಿತ್ತು. ಚೀನಾಕ್ಕೆ ಟಕ್ಕರ್ ಕೊಡಬಲ್ಲಂತಹ ರಾಷ್ಟ್ರ ಭಾರತ ಮಾತ್ರ ಎಂಬುದನ್ನು ನರೇಂದ್ರ ಮೋದಿ ಜಗತ್ತಿಗೆ ಒಪ್ಪಿಸುವಲ್ಲಿ ಈ ನಾಲ್ಕು ವರ್ಷಗಳಲ್ಲಿ ಯಶಸ್ವಿಯಾಗಿದ್ದರು. ಅದರ ಪ್ರಭಾವ ಸಿಂಗಾಪುರದ ಭೇಟಿಯ ಸಂದರ್ಭದಲ್ಲಿ ಖಂಡಿತ ಕಂಡುಬಂತು. ಈಗ ಮೋದಿ ಅಲ್ಲಿ ಮಾತುಕತೆಗೆ ನಿಲ್ಲುವಾಗ ಅತಿ ದೊಡ್ಡ ಜನಸಂಖ್ಯೆಯ ರಾಷ್ಟ್ರವೊಂದರ ಪ್ರಧಾನಿಯಾಗಿ ಅಷ್ಟೇ ಅಲ್ಲ ಬದಲಿಗೆ ಏಷ್ಯಾದ ಪ್ರಭಾವಿ ರಾಷ್ಟ್ರವೊಂದರ ಪ್ರಧಾನಿಯಾಗಿ ನಿಂತಿದ್ದರು. ಸಿಂಗಾಪುರದ ಪ್ರಧಾನಿ ತನ್ನ ದೇಶದ ಸಸ್ಯವೊಂದಕ್ಕೆ ಮೋದಿಯವರ ಹೆಸರನ್ನಿಟ್ಟರು. ಅಚ್ಚರಿಯೇನು ಗೊತ್ತೇ? ಇದೇ ತಿಂಗಳ 12ನೇ ತಾರೀಕು ಉತ್ತರ ಕೊರಿಯಾದ ನಾಯಕ ಕಿಮ್ೊಂದಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸುತ್ತಿರುವುದು ಸಿಂಗಾಪುರದಲ್ಲೇ.

ಎಲ್ಲಾ ಚುಕ್ಕಿಗಳನ್ನು ಹರಡಿಬಿಟ್ಟಿದ್ದೇನೆ, ಅವುಗಳನ್ನು ಸೇರಿಸಿದಾಗ ಚಿತ್ತಾರ ಏನಾಗುತ್ತದೆಂಬುದನ್ನು ನಾವೇ ಊಹಿಸಬೇಕು ಅಷ್ಟೇ. ಇಂಗ್ಲೆಂಡಿನಲ್ಲಿ ತನ್ನ ಪ್ರಭಾವವನ್ನು ಬೀರುವ ಮುಂಚೆ ನಾರ್ಡಿಕ್ ರಾಷ್ಟ್ರಗಳನ್ನು ಸೆಳೆದುಕೊಳ್ಳುವುದು, ನೇಪಾಳಕ್ಕೆ ಹೋಗುವ ಮುನ್ನ ಚೀನಾದೊಂದಿಗೆ ಮಾತುಕತೆಯಾಡಿ ಭೂಮಿಕೆ ಸಿದ್ಧಪಡಿಸುವುದು, ರಷ್ಯಾದೊಂದಿಗೆ ಮಹತ್ವದ ರಕ್ಷಣಾ ಒಪ್ಪಂದ ಮಾಡಿಕೊಂಡ ನಂತರವೂ ಅಮೆರಿಕದೊಂದಿಗಿನ ಅತಿ ಘನಿಷ್ಠ ಬಾಂಧವ್ಯವನ್ನು ಆನಂದಿಸುವುದು, ಸಿಂಗಾಪುರದಲ್ಲಿ ಟ್ರಂಪ್ ಕಿಮ್ ಭೇಟಿಗೆ ಮುನ್ನ ಭೂಮಿಕೆ ಸಿದ್ಧಪಡಿಸುವುದು ಇವೆಲ್ಲವೂ ಸಾಮಾನ್ಯವಾದ ಸಂಗತಿಯಲ್ಲ. ಬರಲಿರುವ ದಿನಗಳಲ್ಲಿ ಮಹತ್ವದ್ದೇನೋ ಘಟಿಸಲಿದೆ. ಮೋದಿ, ಮನಮೋಹನ್ ಸಿಂಗರಂತೆ ಅಲ್ಲ. ಅವರು ಗುಡ್ಡ ತನ್ನ ಬಳಿ ಬರಲೆಂದು ಕಾಯುತ್ತ ಕುಳಿತುಕೊಳ್ಳುವ ಜಾಯಮಾನದವರೇ ಅಲ್ಲ; ತಾವೇ ಗುಡ್ಡಕ್ಕೆ ಹೋಗಿ ತಮಗೆ ಬೇಕಾಗಿರುವ ರತ್ನವನ್ನು ಹುಡುಕಿಕೊಂಡೇ ತರುತ್ತಾರೆ. ಅವರು ತರಲು ಪ್ರಯತ್ನಿಸುತ್ತಿರುವ ಆ ವಸ್ತು ಯಾವುದೆಂಬುದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ. ಅಲ್ಲಿಯವರೆಗೂ ಕಾಂಗ್ರೆಸ್ಸಿಗರು ಬಾಯಿ ಬಡಿದುಕೊಳ್ಳುತ್ತಿರಲಿ. ನಾವು ರಾಷ್ಟ್ರವನ್ನು ವಿಶ್ವಮಟ್ಟದಲ್ಲಿ ಎದೆಯೆತ್ತಿ ನಿಲ್ಲುವಂತೆ ಮಾಡಲು ಪ್ರಯತ್ನಿಸುತ್ತಿರುವ ಒಬ್ಬ ಅಪರೂಪದ ನಾಯಕನೊಂದಿಗೆ ದೃಢವಾಗಿ ನಿಲ್ಲೋಣ.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *

Back To Top