Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಅಫ್ಜಲ್ ಖಾನ್ ಶಿವಾಜಿಯನ್ನು ಅಪ್ಪಿಕೊಂಡಿದ್ದು ಸ್ನೇಹಕ್ಕಲ್ಲ!

Monday, 23.07.2018, 3:05 AM       No Comments

ರಾಹುಲ್ ತಾವು ಪ್ರಬುದ್ಧ ರಾಜಕಾರಣಿಯಲ್ಲ, ಸಮರ್ಥ ನಾಯಕನಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಸೂಕ್ತ ಕಾರಣವೇ ಇಲ್ಲದೆ ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಸೋಲಾಗಿದೆ. ಕಾಂಗ್ರೆಸ್​ನ ಮುಖವಾಡ ಬಯಲಾಗಿದೆ. ವಿಧಿ ಇಲ್ಲದೆ ಅದು 2019ರ ತಯಾರಿಯಲ್ಲಿ ತೊಡಗಬೇಕಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಈ ಬಗೆಯ ಅವಿಶ್ವಾಸ ಗೊತ್ತುವಳಿ ಬಹುಶಃ ನಡೆದೇ ಇರಲಿಲ್ಲವೇನೋ. ಪ್ರಧಾನಿ ನರೇಂದ್ರ ಮೋದಿ ಅಂತಿಮವಾಗಿ ಜಯಭೇರಿ ಬಾರಿಸಿದರು ನಿಜ. ಆದರೆ ಪ್ರಜಾಪ್ರಭುತ್ವದ ಮೌಲ್ಯಗಳು ಸತ್ತುಹೋಗಿದ್ದವು. ಹಾಗೆ ಸುಮ್ಮನೆ ಹಳೆಯ ಒಂದಷ್ಟು ದಾಖಲೆಗಳನ್ನು ನೆನಪಿಸಿಕೊಳ್ಳುವುದಾದರೆ ಅಟಲ್ ಬಿಹಾರಿ ವಾಜಪೇಯಿಯವರು ಒಂದು ಮತದಿಂದ ಸರ್ಕಾರವನ್ನು ಕಳೆದುಕೊಂಡದ್ದು ಇಂದಿಗೂ ಹಸಿಯಾಗಿದೆ. ವಾಜಪೇಯಿ ಅಕೌಂಟಿನಲ್ಲಿರುವ ದಾಖಲೆಯೇನು ಗೊತ್ತೇ? ಅವರೊಬ್ಬರೇ ಎರಡು ಬಾರಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದ್ದು, ಒಂದು ಬಾರಿ ಅವಿಶ್ವಾಸ ಗೊತ್ತುವಳಿಯನ್ನು ಎದುರಿಸಿದ್ದು! ಮನಮೋಹನ್ ಸಿಂಗರಂತೂ ಹತ್ತು ವರ್ಷಗಳ ಎರಡು ಪೂರ್ಣ ಅಧಿಕಾರಾವಧಿಯಲ್ಲಿ ಒಮ್ಮೆಯೂ ಅವಿಶ್ವಾಸವನ್ನು ಎದುರಿಸುವ ಪ್ರಮೇಯವೇ ಬರಲಿಲ್ಲ. ಇಂದಿರಾ ಗಾಂಧಿಯಂತೂ 66-75ರ ನಡುವೆ 12 ಬಾರಿ ಮತ್ತು 81-82 ರ ನಡುವಿನ 15 ತಿಂಗಳಲ್ಲಿ ಮೂರು ಬಾರಿ ಅವಿಶ್ವಾಸ ಗೊತ್ತುವಳಿಯನ್ನು ಎದುರಿಸಿದರು. ಮೊರಾರ್ಜಿ ದೇಸಾಯಿ 1979 ರಲ್ಲಿ ಗೊತ್ತುವಳಿ ಮತಕ್ಕೆ ಹೋಗುವ ಮುನ್ನವೇ ರಾಜೀನಾಮೆ ಕೊಟ್ಟರು. 1993 ರಲ್ಲಿ ನರಸಿಂಹರಾಯರು ಅವಿಶ್ವಾಸವನ್ನು ಎದುರಿಸಿ ಗೆದ್ದದ್ದು 20-20 ಕ್ರಿಕೆಟ್ ಮ್ಯಾಚಿನಂತಿತ್ತು. ಗೊತ್ತುವಳಿಯ ವಿರುದ್ಧವಾಗಿ 265 ಮತಗಳು ಚಲಾಯಿಸಲ್ಪಟ್ಟಿದ್ದರೆ, ಪರವಾಗಿ 251 ಮತಗಳು ಬಿದ್ದಿದ್ದವು. ಈ ಹೊತ್ತಲ್ಲೇ ಜಾರ್ಖಂಡ್ ಮುಕ್ತಿ ಮೋರ್ಚಾದ ಲಂಚದ ಹಗರಣ ಹೊರಬಂದು ಪಾರ್ಲಿಮೆಂಟಿನಲ್ಲಿ ಅಲ್ಲೋಲಕಲ್ಲೋಲವೆದ್ದಿತು. ಕಾಂಗ್ರೆಸ್ಸು ಅಧಿಕಾರ ಪಡೆಯಲು ಯಾವ ಹಂತಕ್ಕೆ ಬೇಕಿದ್ದರೂ ಹೋಗಬಲ್ಲುದು. ಅಧಿಕಾರ ಕಳೆದುಕೊಂಡು 5 ವರ್ಷ ತೆಪ್ಪಗೆ ಪ್ರತಿಪಕ್ಷವಾಗಿ ನಿಲ್ಲುವುದು ಸ್ವಾತಂತ್ರ್ಯ ಬಂದಾಗಿನಿಂದಲೂ ಅದಕ್ಕೆ ಸಾಧ್ಯವಿಲ್ಲ. ಜವಾಹರಲಾಲ್ ನೆಹರು ಪಟೇಲರನ್ನು ಹಿಂದೆಳೆದು ತಾವು ಮುಂದೆ ಧಾವಿಸಿದರು. ಇಂದಿರಾ ಗಾಂಧಿ ಅಧಿಕಾರ ಕೈತಪ್ಪುವುದೆಂದಾಗ ತುರ್ತು ಪರಿಸ್ಥಿತಿಯನ್ನು ಹೇರಿ ದೇಶವನ್ನೇ ತನ್ನ ಹಿಡಿತಕ್ಕೆಳೆದುಕೊಂಡರು. ರಾಜೀವ್ ಗಾಂಧಿ ತನ್ನ ತಾಯಿಯ ಹತ್ಯೆಯ ಅನುಕಂಪದ ಅಲೆಯನ್ನು ಅಧಿಕಾರ ಪಡೆಯಲು ಬಳಸಿಕೊಂಡರೆ ಸೋನಿಯಾ ಹತ್ತು ವರ್ಷಗಳ ಕಾಲ ಮುಖವಾಡವೊಂದನ್ನಿಟ್ಟುಕೊಂಡು ತಾವೇ ಅಧಿಕಾರ ನಡೆಸಿದರು. ಇನ್ನೀಗ ರಾಹುಲ್ ಗಾಂಧಿಯ ಸರದಿ. ಬಹುಶಃ ಪ್ರಧಾನಿ ಕುರ್ಚಿಯಲ್ಲಿ ನರೇಂದ್ರ ಮೋದಿ ಅಲ್ಲದೆ ಮತ್ಯಾರು ಕುಳಿತಿದ್ದರೂ ಕಾಂಗ್ರೆಸ್ಸು ಅವರನ್ನು ಪದವಿಯಿಂದ ಇಷ್ಟರ ವೇಳೆಗೆ ಹೊರದಬ್ಬಿಬಿಡುತ್ತಿತ್ತು. 70 ವರ್ಷಗಳ ನಂತರ ಕಾಂಗ್ರೆಸ್ಸಿಗರ ಕಂಗಳಲ್ಲಿ ಕಣ್ಣಿಟ್ಟು ಎದುರಿಸಿ ಗೆಲ್ಲಬಲ್ಲ ಛಾತಿಯಿರುವ ಒಬ್ಬ ನಾಯಕ ಸಿಕ್ಕಿದ್ದಾನೆ.

ಜಯಪ್ರಕಾಶ ನಾರಾಯಣರ ಆಂದೋಲನದ ಹೊತ್ತಿಗೆ ಸಮರ್ಥ ನಾಯಕನೊಬ್ಬ ದೊರೆತಿದ್ದಾನೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ತಮ್ಮ ಹಿಂದೆ-ಮುಂದೆ ತಿರುಗುತ್ತಿದ್ದ ಅನೇಕ ನಾಯಕರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿನ ಬಾಲಂಗೋಚಿಗಳಾಗಿಬಿಡುತ್ತಾರೆ ಎಂದು ಜಯಪ್ರಕಾಶರಿಗೂ ತಡವಾಗಿ ಅರ್ಥವಾಯ್ತು. ಅತ್ತ ಸಮಾಜವಾದವೂ ಇಲ್ಲ, ಇತ್ತ ಸಮಾಜದ ಕಾಳಜಿಯೂ ಇಲ್ಲ! ಮಜಾ ಮಾಡುವ ನಾಯಕರಿಂದಲೇ ದೇಶ ತುಂಬಿಹೋಯ್ತು. ಜನರನ್ನು ಮರುಳು ಮಾಡಿ ವೋಟು ಗಳಿಸುವ ತಂತ್ರಗಾರಿಕೆ ಇವರೆಲ್ಲರಿಗೂ ಬಲವಾಗಿ ಸಿದ್ಧಿಸಿತ್ತು. ಯಾರೋ ತೀರಿಕೊಂಡ ಅನುಕಂಪವೋ, ರೈತರಂತೆ ವೇಷ ಹಾಕಿಯೋ, ಜಾತಿ-ಭಾಷೆ-ಪಂಗಡಗಳ ಹೆಸರನ್ನಿಟ್ಟುಕೊಂಡೋ ಅಧಿಕಾರ ಹಿಡಿಯುವುದನ್ನು ಇವರೆಲ್ಲರೂ ಕರಗತ ಮಾಡಿಕೊಂಡು ಭಾರತವನ್ನು ಬ್ರಿಟಿಷರ ಆಶಯದಂತೆ ಅಯೋಗ್ಯರ ನಾಡಾಗಿಯೇ ಕಟ್ಟಿಬಿಟ್ಟರು.

ಆಗ ಕನಸುಗಳನ್ನು ಬಿತ್ತಿ ‘ಹೊಸ ಭಾರತ ನಿರ್ಮಾಣ ಮಾಡುವೆ’ ಎಂಬ ಭರವಸೆ ಕೊಟ್ಟು ಪ್ರಧಾನಿ ಹುದ್ದೆಗೇರಿದ್ದು ಅಟಲ್ ಬಿಹಾರಿ ವಾಜಪೇಯಿ. ಅವರ ಮಾತು, ಆಡಳಿತಶೈಲಿ, ಪ್ರಾಮಾಣಿಕತೆ, ಶುದ್ಧತೆ, ನಿಸ್ವಾರ್ಥ ಇವೆಲ್ಲವೂ ಕಣ್ಣು ಕೋರೈಸುವಂತಿದ್ದವು. ಆದರೂ ಅಟಲ್​ಜೀ ಮೋದಿಯಂತಿರಲಿಲ್ಲ. ಅವರ ಹೃದಯ ಎಲ್ಲರಿಗಾಗಿ ಮರುಗುತ್ತಿತ್ತು, ಕಾಂಗ್ರೆಸ್ಸಿಗರಿಗಾಗಿ ಕೂಡ. ಅದಕ್ಕೇ ಈಗಲೂ ಕಾಂಗ್ರೆಸ್ಸಿಗರು ಹೇಳೋದು ಮೋದಿ ಅಟಲ್​ಜೀಯಂತಲ್ಲ ಅಂತ. ಹೌದು ಮತ್ತೇ! ಅಟಲ್​ಜೀ ಕಾಂಗ್ರೆಸ್ಸಿಗರ ತಪ್ಪುಗಳನ್ನು ಕ್ಷಮಿಸಿ ಅವರನ್ನು ಒಳಗೆ ತಳ್ಳುವ ಎಲ್ಲ ಅವಕಾಶಗಳನ್ನು ಕೈಚೆಲ್ಲಿ ಕೊನೆಗೆ ಅವರೇ ರಚಿಸಿದ್ದ ಖೆಡ್ಡಾಕ್ಕೆ ಬಿದ್ದು ಚೇತರಿಸಿಕೊಳ್ಳಲಾಗದ ಹಂತಕ್ಕೆ ತಲುಪಿಬಿಟ್ಟರು. ಮುಂದಿನ 10 ವರ್ಷ ಭಾರತದ ಪಾಲಿಗೆ ಕರಾಳರಾತ್ರಿಯ ನೀರವ ಮೌನ. ಮಾತೇ ಆಡದ ಮನಮೋಹನ್ ಸಿಂಗರು ಭಾರತದ ಕೀರ್ತಿಧ್ವಜವನ್ನು ಸುಂಟರಗಾಳಿಗೂ ಹಾರದಂತೆ ಮಾಡಿಬಿಟ್ಟರು. ಫಡಫಡಿಸುತ್ತಿದ್ದ ಭಾರತೀಯ ತರುಣರಿಗೆ ಬೆಳ್ಳಿಕಿರಣವಾಗಿ ಗೋಚರಿಸಿದ್ದು ನರೇಂದ್ರ ಮೋದಿ! ಅವರು ಪ್ರಧಾನಿಯಾದರೆ ಕೈಯಲ್ಲಿ ಮಂತ್ರದಂಡ ಹಿಡಿದೇ ಬರುತ್ತಾರೆಂದು ಇಡಿಯ ದೇಶ ವಿಶೇಷವಾಗಿ ನಂಬಿಬಿಟ್ಟಿತು. ಅವರ ಬಳಿ ಎಲ್ಲ ಸಮಸ್ಯೆಗಳಿಗೂ ಎಲ್ಲರ ಕಷ್ಟಗಳಿಗೂ ಪರಿಹಾರವಿದೆಯೆಂದು ದೇಶದ ತಾರುಣ್ಯ ಅವರನ್ನು ಆರಿಸಿ ಪ್ರಧಾನಿ ಪಟ್ಟಕ್ಕೇರಿಸಿತು.

2014 ರಲ್ಲಿ ನರೇಂದ್ರ ಮೋದಿಗೆ ಮತ ಹಾಕುವಾಗ ಅವರು ಯಾವ ಪಕ್ಷವೆಂಬುದನ್ನೂ ಜನ ನೋಡಿರಲಿಲ್ಲ. ಮೋದಿ ಕೂಡ ಜನರ ಆಶೋತ್ತರಗಳಿಗೆ ತಕ್ಕಂತೆ ನಡೆದುಕೊಂಡರು. ಕೊಟ್ಟ ಮಾತಿನಂತೆ ಒಂದೊಂದನ್ನೇ ಪೂರೈಸುತ್ತ ಜನರೆದುರು ಲೆಕ್ಕ ನೀಡುತ್ತ ಸಾಗಿದರೆ ಇತ್ತ ಪ್ರತಿಪಕ್ಷಗಳು ಚಡಪಡಿಸಲಾರಂಭಿಸಿದವು. ನೈತಿಕವಾಗಿ ಗಟ್ಟಿ ಇದ್ದವನ ಮತ್ತು ಆಂತರ್ಯದಲ್ಲೂ ಪ್ರಾಮಾಣಿಕತೆ ಇದ್ದವನ ಎದುರಿಸುವುದು ಸುಲಭವಲ್ಲವೆಂದು ನೆಹರು ಪ್ರಣೀತ ಕಾಂಗ್ರೆಸ್ಸಿಗೆ ಅರ್ಥವಾಗಲಿಕ್ಕೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಬೇಕಾಗಿತ್ತು!

12 ವರ್ಷಗಳ ಕಾಲ ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿದ್ದುಕೊಂಡು ಕಾಂಗ್ರೆಸ್ಸಿನ ಎಲ್ಲ ಪಟ್ಟುಗಳನ್ನು ಅರಿತಿದ್ದ ಮೋದಿಗೆ ಪ್ರಧಾನಮಂತ್ರಿಯಾದಾಗ ಕಾಂಗ್ರೆಸ್ಸು ಎಸೆದ ಯಾವ ಬಾಣಗಳೂ ತಾಕಲೇ ಇಲ್ಲ. ಪ್ರತೀ ಬಾಣಕ್ಕೂ ಅವರು ಪ್ರತಿಬಾಣವನ್ನು ಸಿದ್ಧ ಮಾಡಿಕೊಂಡೇ ಇದ್ದರು. ರಾಜ್ಯ-ರಾಜ್ಯಗಳನ್ನೇ ಮೋದಿ ಭಾಜಪದ ತೆಕ್ಕೆಗೆ ಒಪ್ಪಿಸುತ್ತ ಕಾಂಗ್ರೆಸ್ಸನ್ನು ಪ್ರಾದೇಶಿಕ ಪಕ್ಷದ ಮಟ್ಟಕ್ಕೆ ಇಳಿಸುತ್ತ ವೇಗವಾಗಿ ಬೆಳೆಯುತ್ತಿರುವಾಗ ಅವರನ್ನು ತಡೆಯಲು ಭಿನ್ನ-ಭಿನ್ನ ಮಾರ್ಗಗಳನ್ನು ಅನುಸರಿಸಿ ಸೋತ ಕಾಂಗ್ರೆಸ್ಸು ಕೊನೆಗೆ ಬಂದು ಆತುಕೊಂಡಿದ್ದು ಅವಿಶ್ವಾಸ ಗೊತ್ತುವಳಿ ನಿರ್ಣಯಕ್ಕೆ!

ಈ ಅವಿಶ್ವಾಸ ನಿರ್ಣಯದ ಆಲೋಚನೆ ಅದ್ಯಾರಿಗೆ ಮೊದಲು ಬಂತೋ ದೇವರೇ ಬಲ್ಲ. ಆದರೆ ಇಂಥದ್ದೊಂದು ಕಾಂಗ್ರೆಸ್ಸನ್ನು ನಿರ್ನಾಮ ಮಾಡುವ ಆಲೋಚನೆಯನ್ನು ಕೊಟ್ಟವರನ್ನು ಕಾಂಗ್ರೆಸ್ಸಿನಿಂದ ಹೊರದಬ್ಬುವುದೇ ಒಳಿತು. ಅವಿಶ್ವಾಸ ನಿರ್ಣಯವನ್ನು ಗೆಲ್ಲುವಷ್ಟು ಲೋಕಸಭಾ ಸದಸ್ಯರ ಸಂಖ್ಯೆ ಕಾಂಗ್ರೆಸ್ಸಿನ ಬಳಿ ಇರಲಿಲ್ಲ. ಇನ್ನು ಆಳುವ ಪಕ್ಷದ ವಿರುದ್ಧ ಗಂಭೀರವಾದ ಆರೋಪಗಳೂ ಅವರ ಬಳಿ ಇರಲಿಲ್ಲ. ಇಷ್ಟಿದ್ದರೂ ಸೋನಿಯಾ ಅವಿಶ್ವಾಸ ಗೊತ್ತುವಳಿಯನ್ನು ಬೆಂಬಲಿಸಿ ‘ನಮ್ಮ ಬಳಿ ಸಂಖ್ಯೆಯಿದೆ’ ಎಂದು ಹೇಳಿದ್ದರಲ್ಲಿ ಖಂಡಿತವಾಗಿಯೂ ಷಡ್ಯಂತ್ರ ಅಡಗಿತ್ತು. ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಮಾಣವಚನಕ್ಕೆ ಆಗಮಿಸಿದ್ದ ಸೋನಿಯಾ ‘ಮಹಾಘಟಬಂಧನ’ಕ್ಕೆ ಮುನ್ನುಡಿಯೇನೋ ಬರೆದಿದ್ದರು. ಆದರೆ ಅದರ ನಾಯಕತ್ವ ವಹಿಸಬಲ್ಲ ಸಾಮರ್ಥ್ಯ ರಾಹುಲ್​ಗಿದೆ ಎಂಬುದನ್ನು ಎಲ್ಲರಿಗೂ ಒಪ್ಪಿಸುವಲ್ಲಿ ಸೋತು ಹೋಗಿದ್ದರು. ಅದಕ್ಕೆ ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಕಾಂಗ್ರೆಸ್ಸಿನ ವಾರ್​ರೂಮಿನ ಪಂಡಿತರು ನಿಶ್ಚಯಿಸಿಬಿಟ್ಟಿದ್ದರು. ಈ ವಾರ್​ರೂಮಿನ ಸದಸ್ಯರು ಯಾರ್ಯಾರು ಎಂಬುದನ್ನು ಅನುಮಾನಿಸಲು ಸಾಹಸ ಮಾಡಬೇಕಿಲ್ಲ. ಅವಿಶ್ವಾಸ ನಿರ್ಣಯದ ವೇಳೆ ರಾಹುಲ್​ರ

50 ನಿಮಿಷಗಳ ಕೆಟ್ಟ ಭಾಷಣವನ್ನು ಮತ್ತು ಅವರು ಪ್ರಧಾನಮಂತ್ರಿಯವರಿಗೆ ಅಪ್ಪುಗೆ ನೀಡಿದ್ದನ್ನು ಸಮರ್ಥಿಸಿಕೊಂಡವರನ್ನು ಗಮನಿಸಿದರೆ ಸಾಕು. ಪತ್ರಕರ್ತ ನಿಖಿಲ್ ವಾಗ್ಲೆ ‘ಆಕ್ರಮಣಕಾರಿ ಭಾಷಣದಿಂದ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ರಾಹುಲ್, ಮೋದಿಯ ಬಂಡವಾಳವನ್ನು ಮತ್ತು ರಫೆಲ್ ಡೀಲಿನಲ್ಲಿ ಅವರ ಕೈವಾಡವನ್ನು ಬಯಲಿಗೆಳೆದಿದ್ದಾರೆ. ಪತ್ರಿಕೆಗಳಿಗೆ ಶೀರ್ಷಿಕೆ ಸಿಕ್ಕಿರಬೇಕು’ ಎಂದು ಟ್ವೀಟ್ ಮಾಡಿದ್ದಲ್ಲದೆ ‘ಇದುವರೆಗಿನ ರಾಹುಲರ ಅದ್ಭುತವಾದ ಭಾಷಣವಿದು. ಇದಕ್ಕೆ 10ಕ್ಕೆ 8 ಅಂಕಗಳನ್ನು ಕೊಡಬಹುದು’ ಎಂದೂ ಹೇಳಿದ್ದರು. ವಾಗ್ಲೆಯ ಟ್ವೀಟ್ ನೋಡುತ್ತಿದ್ದರೆ ಭಾಷಣವನ್ನು ಅವರೇ ಬರೆದುಕೊಟ್ಟಿದ್ದರೆನಿಸುವಂತಿತ್ತು. ಮೋದಿ-ವಿರೋಧಿ ಸಾಗರಿಕಾ ಘೊಷ್, ‘ರಾಹುಲ್​ರ ಆಕ್ರಮಣಕಾರಿ ಭಾಷಣವನ್ನು ತಡೆದುಕೊಳ್ಳಲಾಗದೆ ವ್ಯಂಗ್ಯಕ್ಕೆ ಮತ್ತು ಕೂಗಾಟಕ್ಕೆ ಬಿಜೆಪಿ ಮೊರೆಹೋಯ್ತು’ ಎಂದು ಟ್ವೀಟ್ ಮಾಡಿದ್ದರು. ಎಚ್ಚರಿಕೆಯಿಂದಲೇ ಹೆಜ್ಜೆಯಿಟ್ಟಿದ್ದ ರಾಜ್​ದೀಪ್ ‘ರಾಹುಲ್ ಭಾಷಣದಿಂದ ಭೂಕಂಪವೇನೂ ಬರಲಿಲ್ಲ. ಆದರೆ ಸದನದಲ್ಲಿ ಅಲುಗಾಟವಂತೂ ಆಗಿದೆ’ ಎಂದಿದ್ದರು. ನಿಧಿ ರಾಜಧಾನ್, ಶ್ರೀನಿವಾಸ್ ಜೈನ್ ಕೂಡ ಹೀಗೆಯೇ ಟ್ವೀಟ್ ಮಾಡಿದರು. ರಾಹುಲ್ ಭಾಷಣ ಮುಗಿಯುತ್ತಿದ್ದಂತೆ ಇವರು ತುದಿಗಾಲಲ್ಲಿ ನಿಂತು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದನ್ನು ನೋಡಿದರೆ ಇವರುಗಳೇ ಸೇರಿ ಭಾಷಣವನ್ನು ಬರೆದುಕೊಟ್ಟು ಮುಂದೇನು ಮಾಡಬೇಕೆಂಬ ಕಿವಿಮಾತನ್ನು ಹೇಳಿದ್ದಿರಬೇಕು. ಹೀಗಾಗಿಯೇ ಭಾಷಣದುದ್ದಕ್ಕೂ ಅನವಶ್ಯಕವಾಗಿ ದನಿಯನ್ನೇರಿಸುತ್ತಿದ್ದ ರಾಹುಲ್ ಪ್ರಬುದ್ಧ ರಾಜಕಾರಣಿಯೆಂದಂತೂ ಅನಿಸುತ್ತಿರಲಿಲ್ಲ. ಸರ್ಕಾರದ ವಿರುದ್ಧ ತಾನು ಮಾಡಿದ ಒಂದು ಆರೋಪಕ್ಕೂ ಪುರಾವೆಗಳನ್ನು ಒದಗಿಸಲಿಲ್ಲ. ರಫೆಲ್ ಡೀಲ್​ನ ಕುರಿತಂತೆ ಮಾತನಾಡುತ್ತ ಫ್ರಾನ್ಸಿನ ಅಧ್ಯಕ್ಷರನ್ನು ಚರ್ಚೆಯಲ್ಲಿ ಎಳೆದು ತಂದದ್ದು ರಾಹುಲ್​ರನ್ನು ಪಪ್ಪು ಎಂದು ಕರೆಯುವುದಕ್ಕೆ ಸಮರ್ಥನೆಯಂತಿತ್ತು! ಸ್ಥಳದಲ್ಲಿಯೇ ರಕ್ಷಣಾ ಸಚಿವೆ ರಾಹುಲ್​ಗೆ ಉತ್ತರ ಕೊಟ್ಟಿದ್ದಲ್ಲದೆ ತನ್ನ ಉತ್ತರಕ್ಕೆ ಪುರಾವೆಗಳನ್ನೂ ಒದಗಿಸಿ ಚಕಿತಗೊಳಿಸಿಬಿಟ್ಟರು. ಭಾರತ ಸರ್ಕಾರ ಅದೆಷ್ಟು ತೀವ್ರಗತಿಯಲ್ಲಿ ತನ್ನ ವಿದೇಶಾಂಗ ಇಲಾಖೆಯ ಜಾಲವನ್ನು ಬಳಸಿಕೊಂಡಿತೆಂದರೆ ಮಧ್ಯಾಹ್ನದ ವಿರಾಮ ಕಳೆಯುವುದರೊಳಗೆ ರಾಹುಲ್ ಹೇಳಿಕೆಯನ್ನು ಫ್ರಾನ್ಸ್ ತಿರಸ್ಕರಿಸಿ ಪ್ರಕಟಣೆಯನ್ನೇ ಹೊರಡಿಸಿಬಿಟ್ಟಿತು. ಬಹುಶಃ ಪ್ರತಿಪಕ್ಷಗಳಿಗೆ ಇದಕ್ಕಿಂತಲೂ ದೊಡ್ಡ ಮುಖಭಂಗ ಮತ್ತೊಂದಿರಲಿಕ್ಕಿಲ್ಲ.

ಇಲ್ಲಿಗೇ ನಿಲ್ಲಿಸದ ರಾಹುಲ್ ಬರೆದು ಕೊಟ್ಟ ಸ್ಕ್ರಿಪ್ಟ್​ನಲ್ಲಿದ್ದಂತೆ ಭಾತೃತ್ವದ, ಪ್ರೇಮದ ಮಾತುಗಳನ್ನಾಡುತ್ತ ಪ್ರಧಾನಮಂತ್ರಿಯವರನ್ನು ತಬ್ಬಿಕೊಂಡರು. ಈ ಘಟನೆಯಿಂದ ಒಂದು ಕ್ಷಣ ವಿಚಲಿತರಾದಂತೆ ಕಂಡ ಮೋದಿ ಮರಳಿ ಹೊರಟಿದ್ದ ರಾಹುಲ್​ರನ್ನು ಮತ್ತೆ ಕರೆದು ಒಂದಷ್ಟು ಕಿವಿಮಾತು ಹೇಳಿ ಬೆನ್ನು ತಟ್ಟಿ ಕಳುಹಿಸಿದರು. ಬಹುಶಃ ಅಲ್ಲಿಗೇ ಮುಗಿದಿದ್ದರೆ ರಾಹುಲ್​ರ ಈ ವರ್ತನೆ ಇದೇ ಪತ್ರಕರ್ತರ ಮೂಲಕ ಗೌರವದ ಗುಣಗಾನವಾಗಿ ಮಾರ್ಪಟ್ಟುಬಿಟ್ಟಿರುತ್ತಿತ್ತು. ರಾಹುಲ್ ಸೀಟಿಗೆ ಮರಳಿ ತಮ್ಮ ಗುರು ವೇಣುಗೋಪಾಲರತ್ತ ತಿರುಗಿ ಕಣ್ಣು ಹೊಡೆದು ಹೇಳಿಕೊಟ್ಟಿದ್ದನ್ನು ಸರಿಯಾಗಿ ನಿರ್ವಹಿಸಿದ್ದೇನೆ ಎಂಬಂತೆ ನಟನೆ ಮಾಡಿದರು. ಈ ದೃಶ್ಯ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ರಾಹುಲ್ ಬಂಡವಾಳ ಬಯಲಾಯ್ತು. ಸ್ವತಃ ಸ್ಪೀಕರ್ ತರಾಟೆಗೆ ತೆಗೆದುಕೊಂಡರು. ಈ ಹೊತ್ತಲ್ಲೂ ಆರ್​ಜೆಡಿಯ ನಾಯಕ ತೇಜಸ್ವಿ ಯಾದವ್ ರಾಹುಲ್​ನ ಬೆನ್ನು ತಟ್ಟಿ ‘ಓ ಮಿತ್ರ, ಕಣ್ಣು ಹೊಡೆದದ್ದು ಬಹಳ ಚೆನ್ನಾಗಿತ್ತು. ಬಿಜೆಪಿಗೆ ಎಲ್ಲಿ ಹೊಡೆತ ಬೀಳಬೇಕೋ ಅಲ್ಲಿಯೇ ಬಿದ್ದಿದೆ’ ಎಂದು ಟ್ವೀಟ್ ಮಾಡಿದರು. ಉಮರ್ ಅಬ್ದುಲ್ಲ, ಶಶಿ ತರೂರ್​ರಂಥವರು ಅಪ್ಪುಗೆಗೆ ಕಾಯುತ್ತಿದ್ದವರಂತೆ ಆಗಿಂದಾಗ್ಯೆ ಟ್ವೀಟ್ ಮಾಡಿ ಒಟ್ಟಾರೆ ಮನದಿಂಗಿತ ವ್ಯಕ್ತಪಡಿಸಿಬಿಟ್ಟರು. ನಡೆದುದ್ದೆಲ್ಲದಕ್ಕೂ ಒಂದು ಪೂರ್ವ ನಿಯೋಜಿತ ಆಲೋಚನೆ ಇದ್ದೇ ಇತ್ತು ಎಂಬುದಕ್ಕೆ ಹಿಂದಿನ ಎರಡು ದಿನಗಳಲ್ಲಿ ಇದೇ ಪಾಳಯ ಟ್ವಿಟರ್​ನಲ್ಲಿ ‘ಟಾಕ್ ಟು ಅ ಮುಸ್ಲಿಂ’ ಎಂಬ ಟ್ರೆಂಡ್ ಸೃಷ್ಟಿಸಿ ‘ದ್ವೇಷವಲ್ಲ ಪ್ರೀತಿ ಬೇಕು’ ಎಂದು ಹೇಳುವ ಪ್ರಯತ್ನ ಮಾಡಿತ್ತು. ಅವಿಶ್ವಾಸ ಗೊತ್ತುವಳಿಯಲ್ಲಿ ಸೋಲುತ್ತೇವೆಂದು ಗೊತ್ತಿದ್ದರೂ ಅದನ್ನೊಂದು ಜಾಗತಿಕ ಸುದ್ದಿ ಮಾಡಿ ರಾಹುಲ್ ಅಪ್ಪುಗೆಯನ್ನು ದೇಶ ಮತ್ತು ಜಗತ್ತು ನೋಡುವಂತೆ ಮಾಡಬೇಕಾಗಿದ್ದುದು ವಾರ್​ರೂಮಿನ ಪಂಡಿತರಿಗೆ ಅಗತ್ಯವಾಗಿತ್ತು. ತಯಾರಿ ಎಷ್ಟಿತ್ತೆಂದರೆ ರಾಹುಲ್ ತಬ್ಬಿಕೊಂಡ ಕೆಲ ಹೊತ್ತಿನಲ್ಲೇ ಬಿಬಿಸಿ ಈ ವರದಿಯನ್ನು ಪ್ರಕಟಿಸಿ ‘ರಾಹುಲ್ ಅಪ್ಪು್ಪಗೆಯಿಂದ ಮೋದಿಗೆ ನಡುಕ’ ಎಂಬ ಶೀರ್ಷಿಕೆಯನ್ನೂ ಕೊಟ್ಟುಬಿಟ್ಟಿತು. ಆದರೆ ದೇವರೂ ನರೇಂದ್ರ ಮೋದಿಯವರೊಂದಿಗಿದ್ದ. ಹೀಗಾಗಿ ಕಣ್ಣು ಮಿಟುಕಿಸಿ ರಾಹುಲ್ ಅವಿಶ್ವಾಸ ಗೊತ್ತುವಳಿಯಲ್ಲಿ ಸೋತರು. ಮಹಾಘಟಬಂಧನದ ವಿಶ್ವಾಸ ಪಡೆಯುವಲ್ಲಿ ಸೋತರು. ತಾನು ನಾಯಕನೆಂದು ಜನರಲ್ಲಿ ನಂಬಿಕೆ ಮೂಡಿಸುವಲ್ಲಿ ಸೋತರು. ಕೊನೆಗೆ ತನ್ನ ನಂಬಿದವರ ಮುನ್ನಡೆಸುವ ಸಾಮರ್ಥ್ಯವಿದೆ ಎಂಬುದರಲ್ಲಿಯೂ ಸೋತು ಹೋದರು. ಎಂದಿನಂತೆ ರಾಹುಲ್​ಗೆ ದಕ್ಕಿರುವುದು ‘ನೈತಿಕ ವಿಜಯ’ ಮಾತ್ರ! ಈಗ ಕಾಂಗ್ರೆಸ್ಸು 2019ರ ಮತ್ತೊಂದು ನೈತಿಕ ವಿಜಯಕ್ಕಾಗಿ ತಯಾರಿ ನಡೆಸಬೇಕಿದೆ ಅಷ್ಟೇ.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *

Back To Top