ರಂಜಾನಿನಲ್ಲಿ ಉಗ್ರರನ್ನು ಕೊಲ್ಲಬಾರದಾ?!

ಮುಸ್ಲಿಂ ದೇಶಗಳ ವಲಯದಲ್ಲಿ ಭಾರತದ ಇಮೇಜ್ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ, ಪಾಕಿಸ್ತಾನದ ಪ್ರಭಾವ ಕುಗ್ಗುತ್ತಿದೆ. ಈಗ ಕಾಶ್ಮೀರದಲ್ಲಿ ಭಾರತ ಸರ್ಕಾರ ಏಕಪಕ್ಷೀಯವಾಗಿ ಕದನವಿರಾಮ ಘೋಷಣೆ ಮಾಡಿರುವುದು ಈ ಬೆಳವಣಿಗೆಗೆ ಪೂರಕವಾಗಿದ್ದು, ಸಂಚಲನವನ್ನೇ ಉಂಟುಮಾಡಿದೆ.

ಜಮ್ಮು-ಕಾಶ್ಮೀರದಲ್ಲಿ ರಂಜಾನ್ ನೆಪದಲ್ಲಿ ಏಕಪಕ್ಷೀಯ ಕದನವಿರಾಮ ಘೊಷಣೆಯಾಗಿದೆ. ಶಾಂತಿಯನ್ನು ಬಯಸುವಂತಹ ಮುಸಲ್ಮಾನರು ಆಚರಿಸುವ ರಂಜಾನ್ ಹಬ್ಬ ಶಾಂತಿಯುತವಾಗಿ ಕಳೆಯಲೆಂಬ ಬಯಕೆ ಅವರದ್ದು. ಇಷ್ಟೆಲ್ಲಾ ಶಾಂತಿಪ್ರಿಯರಾಗಿರುವಂತಹ ಜಮ್ಮು-ಕಾಶ್ಮೀರದ ಮುಸಲ್ಮಾನರು ಶಾಂತಿಯ ಪಾಠವನ್ನು ಸೈನಿಕರಿಗೆ ಹೇಳಿಕೊಡುವ ಬದಲು ಭಯೋತ್ಪಾದಕರಿಗೇ ಹೇಳಿದರೆ ಈ ವೇಳೆಗೆ ಸಮಸ್ಯೆಯೇ ಪರಿಹಾರವಾಗಿಬಿಟ್ಟಿರುತ್ತಿತ್ತಲ್ಲಾ! ಕಳೆದ 18 ತಿಂಗಳಲ್ಲಿ ಎನ್​ಕೌಂಟರ್​ಗಳ ಮೂಲಕ ಹುಡು-ಹುಡುಕಿ 300 ಭಯೋತ್ಪಾದಕರನ್ನು ಕೊಂದು ಬಿಸಾಡಿದ ಸೇನೆ ಈಗ ಕೈಕಟ್ಟಿ ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ವಣವಾಗಿರುವುದು ಪ್ರಧಾನಿ ನರೇಂದ್ರ ಮೋದಿಯವರ ತುಷ್ಟೀಕರಣದ ರಾಜಕಾರಣವೇ? ಇದೇ ರಂಜಾನ್​ನ ಹೊತ್ತಿನಲ್ಲಿ ಉಪವಾಸವನ್ನು ಸಂಜೆಯ ವೇಳೆಗೆ ಬಿಡಬೇಕಾದ ಸಮಯದಲ್ಲಿ ಲೆಫ್ಟಿನೆಂಟ್ ಉಮರ್ ಫಯಾಜ್​ರನ್ನು ಶೋಪಿಯಾನಿನ ಬೀದಿಗಳಲ್ಲಿ ಕೊಂದರಲ್ಲ ಉಗ್ರರು! ಮೋದಿ ಅದನ್ನು ಮರೆತೇಬಿಟ್ಟರಾ? ತೀರಿಕೊಂಡ ಸೈನಿಕನ ಬದುಕಿಗೆ ನಯಾಪೈಸೆ ಕಿಮ್ಮತ್ತು ಈ ದೇಶದಲ್ಲಿ ಇಲ್ಲವಾ? ಪ್ರಶ್ನೆಗಳು ಪುಂಖಾನುಪುಂಖವಾಗಿವೆ.

ವಾಸ್ತವವಾಗಿ ಕಾಶ್ಮೀರ ಕಣಿವೆಯಲ್ಲಿ ಸೈನಿಕರ ಕೈ ಮೇಲಾಗಿದ್ದು 2017ರಲ್ಲಿ ಘೊಷಣೆಯಾದ ‘ಆಪರೇಷನ್ ಆಲ್ ಔಟ್’ ನಂತರವೇ. ಸ್ವಲ್ಪ ನೆನಪು ಮಾಡಿಕೊಳ್ಳಿ. ಬುರ್ಹಾನ್ ವಾನಿ ಎಂಬ ಭಯೋತ್ಪಾದಕರ ಪೋಸ್ಟರ್​ಬಾಯ್ ತನ್ನ ಇತರೆ ಮಿತ್ರರೊಂದಿಗೆ ಕೈಯಲ್ಲಿ ಸ್ವಯಂಚಾಲಿತ ಗನ್ನು ಹಿಡಿದುಕೊಂಡು ಫೇಸ್​ಬುಕ್​ನಲ್ಲಿ ಫೋಟೊ ಹಾಕಿದ್ದ. ‘ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ’ ಎಂಬ ಸವಾಲು ಹಾಕಿದ್ದ. ಆತ ಮಾಡಿದ ಒಂದೇ ತಪ್ಪೆಂದರೆ ಸವಾಲನ್ನೆಸೆದದ್ದು ಭಾರತೀಯ ಸೇನೆಗೆ. ಸೇನೆಗೆ ಈ ಫೋಟೊ ಬಲು ಮಹತ್ವದ ದಾಖಲೆಯಾಗಿ ದಕ್ಕಿತು. ಕೆಲವೇ ದಿನಗಳಲ್ಲಿ ಬುರ್ಹಾನ್ ವಾನಿಯನ್ನು ಅಟ್ಟಿಸಿಕೊಂಡು ಹೋಗಿ ಅವನನ್ನು ಕೊಂದು ಬಿಸಾಡಿತು. ನಂತರ ಅವನ ಶವವನ್ನು ಮನೆಯವರಿಗೆ ಕೊಟ್ಟ ಸೈನ್ಯ ಶವಯಾತ್ರೆಯಲ್ಲಿ ಭಾಗವಹಿಸಿದ್ದ ಸಹಸ್ರಾರು ಜನರ ನಡುವೆ ಬುರ್ಹಾನ್ ವಾನಿಯ ಉಳಿದ ಭಯೋತ್ಪಾದಕ ಮಿತ್ರರನ್ನು ಗುರುತಿಸಿತು. ಅವರನ್ನು ಉಳಿದವರಿಂದ ಪ್ರತ್ಯೇಕಗೊಳಿಸಿ ಹಂತ-ಹಂತವಾಗಿ ಒಬ್ಬೊಬ್ಬರನ್ನು ಸ್ವರ್ಗದ ಸುಂದರಿಯರ ಬಳಿ ಕಳಿಸಿಕೊಡಲಾಯಿತು. ಅದರ ಜತೆ-ಜತೆಯಲ್ಲೇ ಶುರುವಾಗಿದ್ದು ಆಪರೇಷನ್ ಆಲ್ ಔಟ್. ನರೇಂದ್ರ ಮೋದಿಯವರು ಬಂದಾಗಿನಿಂದಲೂ ಸೈನಿಕರ ಕೈ ಅದೆಷ್ಟು ಬಲಗೊಂಡಿದೆ ಎಂದರೆ ಕಣಿವೆಯಲ್ಲಿ ಹತರಾದ ಭಯೋತ್ಪಾದಕರ ಸಂಖ್ಯೆ 53 ಪ್ರತಿಶತ ಏರಿಕೆ ಕಂಡಿದೆ. ಗಡಿಯು ತುಂಬ ಬಲವಾಗಿ ಕಾಯಲ್ಪಡುತ್ತಿರುವುದರಿಂದ, ಜಮ್ಮು-ಕಾಶ್ಮೀರದ ಒಳಗೆ ನುಸುಳುತ್ತಿರುವ ಪಾಕೀ ಉಗ್ರಗಾಮಿಗಳ ಸಂಖ್ಯೆಯೂ ತೀವ್ರವಾಗಿ ಕಡಿಮೆಯಾಗಿದೆ. ಹೀಗಾಗಿಯೇ ಅಪಕ್ವವಾದರೂ ಸರಿ ಕಾಶ್ಮೀರದ ತರುಣರ ಕೈಲಿ ಆಧುನಿಕ ಗನ್ನುಗಳನ್ನು ಕೊಟ್ಟು ತುಡಿತವನ್ನು ಹೆಚ್ಚಿಸಿ ಅವರನ್ನೇ ಭಯೋತ್ಪಾದನಾ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಎಲ್ಲ ಹೊಸಬರನ್ನು ಈ ಕಾರ್ಯಕ್ಕೆ ಆಹ್ವಾನಿಸಲು ಕಾಶ್ಮೀರದ ಪ್ರತಿಗಾಮಿಗಳ ಮುಂದೆ ಇರುವ ಏಕೈಕ ಅಸ್ತ್ರವೆಂದರೆ ಮೋದಿಯೇ! ಮುಸಲ್ಮಾನರನ್ನು ನಾಶಮಾಡಲೆಂದೇ ಬಂದ ದೆವ್ವವೆಂಬಂತೆ ನರೇಂದ್ರ ಮೋದಿಯನ್ನು ಚಿತ್ರಿಸಿಯೇ ಅವರು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳೋದು. ಅದಕ್ಕೆ ಅವರಿಗೆ ಯೋಗಿ ಆದಿತ್ಯನಾಥ, ಪ್ರವೀಣ್ ತೊಗಾಡಿಯಾರ ಭಾಷಣಗಳೂ ಉಪಯೋಗಕ್ಕೆ ಬರುತ್ತವೆ. ಕಳೆದ ನಾಲ್ಕಾರು ವರ್ಷಗಳಲ್ಲಿ ಪ್ರತಿ ವರ್ಷ ನೂರಿನ್ನೂರು ಜನ ಈ ಕಾರ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಿರುವುದು ಭಯ ಹುಟ್ಟಿಸುವಂಥ ಸಂಗತಿಯೇ.

ಭಾರತವನ್ನು ಮುಸ್ಲಿಂ-ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಇಂದು ನಿನ್ನೆಯದಲ್ಲ. ಭಾರತದಲ್ಲಿ ಮುಸಲ್ಮಾನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಜಗತ್ತಿನ ಮುಂದೆ ಸಾರಿ ಇಸ್ಲಾಂನ ರಕ್ಷಣೆಗೆ ಮುಸಲ್ಮಾನ ರಾಷ್ಟ್ರಗಳಿಂದ ದೊಡ್ಡ ಮೊತ್ತದ ಹಣವನ್ನು ಬಾಚುವುದು ಪಾಕಿಸ್ತಾನದ ಬದುಕಿನ ಶೈಲಿ. ಇದರ ಮೊದಲ ಬೀಜವನ್ನು ಬಿತ್ತಿದ್ದೇ ಮೊಹಮ್ಮದ್ ಅಲಿ ಜಿನ್ನಾ. 1946ರಲ್ಲಿ ಈಜಿಪ್ಟ್​ನ ಕೈರೋದಲ್ಲಿ ನಡೆದ ಅಂತಾರಾಷ್ಟ್ರೀಯ ಮುಸ್ಲಿಂ ಸಮಾವೇಶದಲ್ಲಿ ಭಾಗವಹಿಸಿದ್ದ ಆತ ಹಿಂದೂಗಳ ವಿಸ್ತಾರವನ್ನು ತಡೆಯಲು ಮುಸಲ್ಮಾನರಿಗಿರುವ ಏಕೈಕ ಮಾರ್ಗ ಪಾಕಿಸ್ತಾನ ಎಂದು ವಾದಿಸಿದ್ದ. ಅಂದು ಅದನ್ನು ಪರಿಪೂರ್ಣವಾಗಿ ಯಾರೂ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಆದರೆ ಕಾಲಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರದ ವಿಷಯವನ್ನು ಅಗತ್ಯಕ್ಕಿಂತ ಹೆಚ್ಚು ಹಿಗ್ಗಿಸಿ ಪ್ರಸ್ತುತ ಪಡಿಸಿದ ಪಾಕಿಸ್ತಾನ ಮುಸಲ್ಮಾನ ರಾಷ್ಟ್ರಗಳನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯ್ತು. 70ರ ದಶಕದಲ್ಲಿ ರಷ್ಯಾದೊಂದಿಗಿನ ಕದನದ ವೇಳೆಗೆ ಸೌದಿ ಅರೇಬಿಯಾ ಪೂರ್ಣ ಪ್ರಮಾಣದಲ್ಲಿ ಪಾಕಿಸ್ತಾನದ ಕಡೆ ವಾಲಿಕೊಂಡಿತು. ಆ ವೇಳೆಗಾಗಲೇ ಭಾರತದ ವಿದೇಶಾಂಗ ನೀತಿ ಪಂಚಶೀಲ ತತ್ತ್ವದ ಆಧಾರದ ಮೇಲೆ ಅದೆಷ್ಟು ಹುಚ್ಚು-ಹುಚ್ಚಾಗಿ ರೂಪುಗೊಂಡಿತ್ತೆಂದರೆ ರಷ್ಯಾದ ಸೆರಗು ಹಿಡಿದುಕೊಂಡು ಜಗತ್ತನ್ನೆದುರಿಸುವ ಎದೆಗಾರಿಕೆ ತೋರಿತ್ತು ಭಾರತ. ರಷ್ಯಾದ ವಿರುದ್ಧ ಮುಸಲ್ಮಾನ ರಾಷ್ಟ್ರಗಳನ್ನು ಎತ್ತಿಕಟ್ಟಿದ ಅಮೆರಿಕ ಪಾಕಿಸ್ತಾನವನ್ನು ತನ್ನತ್ತ ಸೆಳೆದುಕೊಂಡು ಅಲ್ಲಿನ ಅಧಿಕಾರಿಗಳಿಗೆ ಗೂಢಚರ್ಯುಯ ತರಬೇತಿಯನ್ನೂ ಕೊಟ್ಟಿತು. ಐಎಸ್​ಐ ರೂಪುಗೊಂಡಿದ್ದೇ ರಷ್ಯಾದ ವಿರುದ್ಧ ಗೂಢಚರ್ಯುಗಾಗಿ. ಅಮೆರಿಕ ಯಶಸ್ವಿಯಾಗಿ ರಷ್ಯಾವನ್ನು ಮುರಿದುಹಾಕುವ ವೇಳೆಗೆ ಭಾರತ ಪೂರ್ಣ ಗೊಂದಲದಲ್ಲಿತ್ತು. ಅತ್ತ ರಷ್ಯಾವನ್ನೂ ನೆಚ್ಚಿಕೊಳ್ಳಲಾಗದೇ ಇತ್ತ ಅಮೆರಿಕವನ್ನೂ ಒಪ್ಪಿಕೊಳ್ಳಲಾಗದೇ ವಿದೇಶಾಂಗ ನೀತಿ ಹಳ್ಳ ಹಿಡಿದಿತ್ತು. ಇದರ ಲಾಭ ಪಡೆದಿದ್ದು ಮಾತ್ರ ಪಾಕಿಸ್ತಾನವೇ. ಅದು ಅಮೆರಿಕದ ಎಲ್ಲ ಸವಲತ್ತುಗಳನ್ನು ಪಡೆಯಿತು. ಅಮೆರಿಕದ ಜತೆಗಾರನೆಂಬ ಕಾರಣಕ್ಕೆ ಮುಸಲ್ಮಾನ ರಾಷ್ಟ್ರಗಳಲ್ಲಿ ಅದರ ಪ್ರಭಾವವೂ ಅಧಿಕವಾಯಿತು. ಇದನ್ನು ತಡೆಯಲು ಆನಂತರದ ಯಾವ ಪ್ರಧಾನಿಗಳೂ ವಿಶೇಷ ಪ್ರಯತ್ನ ಮಾಡಲೇ ಇಲ್ಲ.

ಅಧಿಕಾರಕ್ಕೆ ಬಂದೊಡನೆ ಮೋದಿಗಿದ್ದ ದೊಡ್ಡ ಸವಾಲು ಮುಸಲ್ಮಾನ ರಾಷ್ಟ್ರಗಳನ್ನು ತಮ್ಮತ್ತ ಸೆಳೆದುಕೊಳ್ಳುವುದೇ ಆಗಿತ್ತು. ಅದಾಗಲೇ ಭಾರತದ ಪರ ಒಲವಿರುವಂತಹ ಗಲ್ಪ್ ರಾಷ್ಟ್ರಗಳನ್ನು ಮುಂದಿಟ್ಟುಕೊಂಡು ಅವರ ಮೂಲಕ ಇತರೆಲ್ಲ ರಾಷ್ಟ್ರಗಳನ್ನು ಸೆಳೆಯುತ್ತಾ ಪಾಕಿಸ್ತಾನವನ್ನು ಏಕಾಂಗಿಯಾಗಿಸಬೇಕಿತ್ತು. ಸೂಕ್ಷ್ಮವಾಗಿ ಗಮನಿಸಿದರೆ ಎಲ್ಲ ಮುಸಲ್ಮಾನ ರಾಷ್ಟ್ರಗಳೂ ಅಮೆರಿಕದ ವಿರೋಧಿ ಎಂದೆನಿಸಿದರೂ ಆಂತರ್ಯದಲ್ಲಿ ಅಮೆರಿಕ ಹೇಳಿದಂತೆ ಬದುಕು ನಡೆಸುವಂಥವು. ಈ ಮುಸಲ್ಮಾನ ರಾಷ್ಟ್ರಗಳ ರಕ್ಷಣೆ, ನೀತಿ-ನಿರೂಪಣೆ, ಬದುಕಿನ ಶೈಲಿ ಎಲ್ಲವೂ ಕ್ರಿಶ್ಚಿಯನ್ ರಾಷ್ಟ್ರಗಳಿಂದ ಬಹುವಾಗಿ ಪ್ರಭಾವಿತಗೊಂಡಿವೆ. ನರೇಂದ್ರ ಮೋದಿ ಅಮೆರಿಕಕ್ಕೆ ಹತ್ತಿರವಾಗುವ ಮೂಲಕ ಮುಸ್ಲಿಂ ರಾಷ್ಟ್ರಗಳ ನಾಡಿಯನ್ನು ಬಲವಾಗಿ ಹಿಡಿದುಬಿಟ್ಟರು. ಈ ಒಂದೊಂದೇ ರಾಷ್ಟ್ರಗಳು ಮೋದಿಯನ್ನು ವಿಶೇಷವಾಗಿ ಸ್ವಾಗತಿಸಲಾರಂಭಿಸಿದವು. ಗೋಧ್ರಾದ ಹತ್ಯಾಕಾಂಡದೊಂದಿಗೆ ಜಾಗತಿಕ ಮಟ್ಟದಲ್ಲಿ ಕೊಲೆಗಡುಕನೆಂದು ಬಿರುದು ಪಡೆದುಕೊಂಡಿದ್ದ ಮೋದಿ ಈಗ ಇದ್ದಕ್ಕಿದ್ದಂತೆ ಜಗತ್ತಿನಲ್ಲಿ ಅತ್ಯಂತ ನಂಬಿಕಸ್ಥ ಮತ್ತು ಶಾಂತಿಯನ್ನು ಪ್ರಸ್ತಾಪಿಸುವ ಸಾಮರ್ಥ್ಯವುಳ್ಳ ಮಹಾನಾಯಕನಾಗಿ ಗುರುತಿಸಿಕೊಂಡರು. ಅನೇಕ ಮುಸಲ್ಮಾನ ರಾಷ್ಟ್ರಗಳ ರಾಜರುಗಳಿಗಂತೂ ಮೋದಿಯವರ ಮೇಲೆ ಅಪಾರವಾದ ವಿಶ್ವಾಸ. ಅಬುಧಾಬಿಗೆ ಎರಡೆರಡು ಬಾರಿ ಹೋಗಿಬಂದ ಪ್ರಧಾನಿ ಅಲ್ಲಿ ದೇವಸ್ಥಾನ ನಿರ್ವಣಕ್ಕೆ ಜಾಗವನ್ನು ಗಿಟ್ಟಿಸಿಕೊಳ್ಳುವಲ್ಲಿಯೂ ಯಶಸ್ವಿಯಾದರು. ಕಠೋರ ಇಸ್ಲಾಂ ಪ್ರಚಾರ ಮಾಡುವ ಸೌದಿ ಅರೇಬಿಯಾ ಕೂಡ ಮೋದಿ ಮೋಡಿಗೆ ಒಳಗಾಗಿ ಅವರಿಗೆ ತಮ್ಮ ರಾಷ್ಟ್ರದ ಅತ್ಯುನ್ನತ ನಾಗರಿಕ ಗೌರವವನ್ನು ನೀಡಿತು. ನೆನಪಿರಲಿ ಇಂತಹದ್ದೊಂದು ಗೌರವವನ್ನು ಸೌದಿ ಪಾಕಿಸ್ತಾನದ ಯಾವೊಬ್ಬನಿಗೂ ಇದುವರೆಗೂ ಕೊಟ್ಟಿಲ್ಲ. ಹಾಗಂತ ನರೇಂದ್ರ ಮೋದಿ ಈ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಗಟ್ಟಿಮಾಡಿಕೊಳ್ಳಬೇಕೆಂದು ಆಲೋಚಿಸಿದ್ದು

ಅನವಶ್ಯಕ ವಿದೇಶಾಂಗ ಹೊರೆಯಲ್ಲ. ಗಲ್ಪ್ ರಾಷ್ಟ್ರಗಳಲ್ಲಿ ಲಕ್ಷಾಂತರ

ಭಾರತೀಯರು ಕೆಲಸ ಮಾಡುತ್ತಿದ್ದು ಇವರೆಲ್ಲರೂ ಭಾರತಕ್ಕೆ ಮರಳಿ

ಹಣ ಕಳಿಸುತ್ತಾರಲ್ಲಾ 2015 ರಲ್ಲಿ ಹೀಗೆ ಜಾಗತಿಕವಾಗಿ ಬಂದ ಹಣದಲ್ಲಿ

ಅರ್ಧಕ್ಕೂ ಹೆಚ್ಚು ಭಾಗ ಇವರದ್ದೇ ಆಗಿತ್ತು. ಭಾರತ ಗಲ್ಪ್ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಬಲಗೊಳಿಸಿಕೊಳ್ಳುವುದೆಂದರೆ ಅಲ್ಲಿರುವ ಭಾರತೀಯರ ಜೀವನವನ್ನು ಇನ್ನೂ ಹೆಚ್ಚು ಸುಂದರಗೊಳಿಸುವುದೆಂದರ್ಥ. ಜತೆಗೆ ಪಾಕಿಸ್ತಾನವನ್ನು ಎಲ್ಲರಿಂದಲೂ ದೂರವಾಗಿಸಿ ಆಂತರಿಕವಾಗಿ ಬೇಯುವಂತೆ ಮಾಡುವಲ್ಲಿ ಸಫಲವಾಗುವುದು ಕೂಡ.

ಭಾರತದ ವಿದೇಶಾಂಗ ಸಚಿವಾಲಯವೂ ಬಲು ತೀಕ್ಷ್ಣವಾಗಿ ಕೆಲಸ ಮಾಡಿತು. ಹೋದ ಹೋದಲ್ಲೆಲ್ಲಾ ಪಾಕಿಸ್ತಾನದ ಭಯೋತ್ಪಾದನಾ ತುಡಿತವನ್ನು ಜಗತ್ತಿನ ಮುಂದೆ ವಿಸ್ತಾರವಾಗಿ ತೆರೆದಿಟ್ಟಿತು. ಮೊದ-ಮೊದಲೆಲ್ಲಾ ಪದೇಪದೆ ‘ಗುಡ್-ಟೆರರಿಸಂ ಬ್ಯಾಡ್-ಟೆರರಿಸಂ’ನ ಕುರಿತಂತೆ ಪ್ರಧಾನಮಂತ್ರಿಯಾದಿಯಾಗಿ ವಿದೇಶಾಂಗ ಸಚಿವರು ಇಲಾಖೆಯ ಅಧಿಕಾರಿಗಳೆಲ್ಲ ಎಲ್ಲ ಜಾಗತಿಕ ವೇದಿಕೆಗಳಲ್ಲೂ ಮಾತನಾಡುವುದನ್ನು ಕಂಡಾಗ ನಮಗೂ ಕಿರಿ-ಕಿರಿ ಎನಿಸುತ್ತಿತ್ತು. ಆದರೆ ಈ ಮಾತುಗಳ ಕಾರಣದಿಂದಾಗಿಯೇ ಪಾಕಿಸ್ತಾನದ ವಿರುದ್ಧ ಜಾಗತಿಕ ಅಭಿಪ್ರಾಯ ಮೂಡಿದ್ದಲ್ಲದೇ ಅದರ ಬೆಂಬಲಕ್ಕೆ ನಿಲ್ಲುವುದು ಬದಲಾವಣೆಯ ಈ ಹೊತ್ತಲ್ಲಿ ಪ್ರಗತಿಪರವಲ್ಲವೆಂಬುದು ಎಲ್ಲ ರಾಷ್ಟ್ರಗಳಿಗೂ ಅರಿವಾಗಲಾರಂಭಿಸಿತು. ಬೇರೆಲ್ಲ ರಾಷ್ಟ್ರಗಳು ಬಿಡಿ ಈಗ ಚೀನಾ ಕೂಡ ಪಾಕಿಸ್ತಾನ ತನ್ನ ಮಿತ್ರ ಎಂದು ಧೈರ್ಯವಾಗಿ ಹೇಳಲಾಗದ ಸ್ಥಿತಿ ತಲುಪಿದೆ. ತನ್ನ ಆಪ್ತಮಿತ್ರನಾಗಿದ್ದ ಸೌದಿಯೊಂದಿಗೆ ಯೆಮನ್​ನ ವಿಚಾರದಲ್ಲಿ ಪಾಕಿಸ್ತಾನ ಕಿತ್ತಾಡಿಕೊಂಡ ಮೇಲಂತೂ ಭಾರತದ ತೂಕ ಒಂದಷ್ಟು ಜಾಸ್ತಿಯೇ ಆಗಿದೆ. ಭಾರತದ ಪರವಾಗಿ ಮುಸಲ್ಮಾನ ರಾಷ್ಟ್ರಗಳು ಈಗ ಬಲು ಜೋರಾಗಿಯೇ ಪ್ರತಿಪಾದನೆ ಆರಂಭಿಸಿವೆ. ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋ ಆಪರೇಷನ್ ಎಂಬ ವಿಶ್ವಸಂಸ್ಥೆಯ ನಂತರದ ದೊಡ್ಡ ರಾಷ್ಟ್ರಗಳ ಸಂಘಟನೆಯಲ್ಲಿ ಭಾರತಕ್ಕೂ ಸ್ಥಾನ ಕೊಡಬೇಕೆಂದು ಈಗ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿರುವುದು ಬಾಂಗ್ಲಾದೇಶವೇ. 57 ರಾಷ್ಟ್ರಗಳ ಈ ಒಕ್ಕೂಟದಲ್ಲಿ ಭಾರತಕ್ಕೆ ಸ್ಥಾನ ಸಿಗುವುದೆಂದರೆ ಪಾಕಿಸ್ತಾನದ ಕತೆ ಶಾಶ್ವತವಾಗಿ ಮುಗಿದಂತೆ. ಈ ಒಕ್ಕೂಟದಲ್ಲಿ ಸೇರಿಕೊಳ್ಳಲು 2006ರಲ್ಲೂ ನಮಗೆ ಅಡ್ಡಗಾಲು ಹಾಕಿದ್ದು ಪಾಕಿಸ್ತಾನ ಮಾತ್ರ. ಭಾರತದ ಕುರಿತಂತೆ ಭೀತಿಯನ್ನು ತುಂಬಿಸಿ ಅದು ತನ್ನ ಬೇಳೆ ಬೇಯಿಸಿಕೊಳ್ಳುತ್ತಲೇ ಇತ್ತು. ಈ ಬಾರಿ ನಮ್ಮ ಪರವಾಗಿ ಮಾತನಾಡುತ್ತಿರುವುದು ನಮ್ಮ ನೆರೆಯೇ ಆಗಿರುವಂಥ ಮತ್ತೊಂದು ಮುಸಲ್ಮಾನ ರಾಷ್ಟ್ರ ಬಾಂಗ್ಲಾದೇಶ ಎನ್ನುವುದು ಪಾಕಿಸ್ತಾನಕ್ಕೆ ಖಂಡಿತ ನುಂಗಲಸಾಧ್ಯ.

ಇಂತಹ ಹೊತ್ತಲ್ಲಿ ಕಾಶ್ಮೀರದ ಕಣಿವೆಯಲ್ಲಿ ಒಂದು ಸಣ್ಣ ಪ್ರೇರಣಾದಾಯಿ ನಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಾಮರ್ಥ್ಯವನ್ನು ನೂರು ಪಟ್ಟು ಹೆಚ್ಚಿಸಲಿದೆ ಎಂಬುದು ಮೋದಿಯವರಿಗೆ ಗೊತ್ತಿದ್ದುದರಿಂದಲೇ ಏಕಪಕ್ಷೀಯ ಕದನವಿರಾಮಕ್ಕೆ ಕೈಹಾಕಿದ್ದು. ಹಾಗಂತ ಇದು ಮೊದಲ ಬಾರಿಯೇನಲ್ಲ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿ ಆಗಿದ್ದಾಗ ಎರಡು ಬಾರಿ ಹೀಗೆ ಕದನವಿರಾಮ ಘೊಷಿಸಲಾಗಿತ್ತು. ಆಗ ಭಯೋತ್ಪಾದಕರ ಸಂಖ್ಯೆ ಕಡಿಮೆಯಾಗಿರಲಿಲ್ಲವಾದರೂ ಶಾಂತಿ ನೆಲೆಸುವಂತೆ ಮಾಡುವ ಭಾರತದ ಪ್ರಯತ್ನದ ಕುರಿತಂತೆ ಜಾಗತಿಕ ಗೌರವ ವ್ಯಕ್ತವಾಗಿತ್ತು. ಈಗ ಮೋದಿ ಮತ್ತೊಮ್ಮೆ ಅದೇ ಹೆಜ್ಜೆ ಇಟ್ಟಿದ್ದಾರೆ. ಈ ಕ್ರಮದಿಂದಾಗಿ ಮುಸಲ್ಮಾನ ರಾಷ್ಟ್ರಗಳಲ್ಲಿ ಉತ್ಪಾತವೇ ಆಗಿದೆ. ಅಲ್ ಜಜೀರಾ ಎಂಬ ಮಧ್ಯ ಏಷ್ಯಾದ ಮಹತ್ವದ ಮಾಧ್ಯಮ ಈ ಸುದ್ದಿ ವಿಶೇಷವಾಗಿ ಪ್ರಕಟವಾಗುವಂತೆ ನೋಡಿಕೊಂಡಿದೆ. ನರೇಂದ್ರ ಮೋದಿ ಎಷ್ಟು ಎಚ್ಚರಿಕೆಯಿಂದ ಕದನವಿರಾಮ ಘೊಷಿಸಿದ್ದಾರೆಂದರೆ ರಂಜಾನಿಗಿಂತ ಒಂದೇ ದಿನದ ಮುನ್ನ ಈ ಹೇಳಿಕೆಯನ್ನು ಕೊಟ್ಟು ಭಯೋತ್ಪಾದಕರಿಗೆ ಪ್ರತಿಕ್ರಿಯಿಸಲು ಸೂಕ್ತ ಸಮಯವೂ ಇಲ್ಲದಂತೆ ನೋಡಿಕೊಂಡಿದ್ದಾರೆ. ಸಹಜವಾಗಿಯೇ ಆತುರಕ್ಕೆ ಬಿದ್ದ ಲಷ್ಕರ್-ಎ-ತೊಯ್ಬಾ ‘ರಂಜಾನ್​ನ ವೇಳೆಯೂ ನಾವು ಭಯೋತ್ಪಾದನೆ ನಿಲ್ಲಿಸಲಾರೆವು’ ಎಂಬ ಹೇಳಿಕೆ ಕೊಟ್ಟು ಭಾರತ ಸರ್ಕಾರ ರಚಿಸಿದ ಖೆಡ್ಡಾಕ್ಕೆ ಹೋಗಿ ಬಿದ್ದಿದೆ.

ನಮ್ಮಲ್ಲನೇಕರಿಗೆ ಗೊತ್ತಿಲ್ಲದಿರುವ ಸಂಗತಿ ಒಂದೇ. ಈ ಕದನವಿರಾಮ ಬೇಷರತ್ತಾಗಿರುವಂಥದ್ದಲ್ಲ. ಭಯೋತ್ಪಾದಕರನ್ನು ಹುಡುಕಲು ಕಾಶ್ಮೀರಿಗಳ ಮನೆಯೊಳಗೆ ನುಗ್ಗುವ ಮತ್ತು ಅಲ್ಲಿಯೇ ಅವರನ್ನು ಕೊಲ್ಲುವ ಸೈನಿಕ ಕಾರ್ಯಾಚರಣೆಯನ್ನು ಬಿಟ್ಟು ಉಳಿದೆಲ್ಲವೂ ಎಂದಿನಂತೆ ಚಾಲ್ತಿಯಲ್ಲಿರುತ್ತದೆ. ಹೀಗಾಗಿಯೇ ಕದನವಿರಾಮ ಘೊಷಣೆಯಾದ ನಂತರವೂ ದಾಳಿಗೆಂದು ಬಂದ ನಾಲ್ಕು ಉಗ್ರರನ್ನು ಭಾರತೀಯ ಸೇನೆ ಕೊಂದು ಬಿಸಾಡಿತು.

ಈ ಪ್ರಯತ್ನದಿಂದಾಗಿ ನರೇಂದ್ರ ಮೋದಿ ಕಣಿವೆಯಲ್ಲಿ ಪ್ರತ್ಯೇಕತಾವಾದದ ಬಾವುಟವನ್ನು ಹಿಡಿದು ತಿರುಗುತ್ತಿದ್ದವರಿಗೆ ಸರಿಯಾಗಿಯೇ ಹೊಡೆತ ಕೊಟ್ಟಿದ್ದಾರೆ. ಮತ್ತು ಕಾಶ್ಮೀರದ ಒಳಿತನ್ನು ಬಯಸುವ ಮುಸಲ್ಮಾನರಿಗೆ ಸರ್ಕಾರದೊಂದಿಗೆ ವ್ಯವಹರಿಸಲು ರಾಜಮಾರ್ಗ ರೂಪಿಸಿಕೊಟ್ಟಿದ್ದಾರೆ. ಹಾಗೊಂದು ಅಭಿಪ್ರಾಯವಂತೂ ಎಲ್ಲ ದಿಕ್ಕಿನಿಂದಲೂ ವ್ಯಕ್ತವಾಗುತ್ತಿದೆ. ಹೀಗಾಗಿಯೇ ಕರ್ನಾಟಕದಲ್ಲಿ ಕಾಂಗ್ರೆಸ್ಸು ರಾಜಕೀಯ ಗದ್ದಲದಲ್ಲಿ ನಿರತವಾಗಿದ್ದಾಗ ಮೋದಿ ಶ್ರೀನಗರದಲ್ಲಿ ಜಲವಿದ್ಯುತ್ ಕೇಂದ್ರ ಲೋಕಾರ್ಪಣೆ ಮಾಡಲು, ಜೋಜಿಲಾ ಪಾಸ್​ನಲ್ಲಿ ಟನಲ್ ನಿರ್ವಣದ ಅಡಿಗಲ್ಲು ಹಾಕಲು ಹೋಗಿದ್ದರು.

ಮೋದಿಯವರ ದೃಷ್ಟಿ ವಿಶಾಲವಾಗಿದೆ. ಬಲು ನಿಚ್ಚಳವೂ ಆಗಿದೆ. ಫಲಿತಾಂಶಕ್ಕಾಗಿ ಕಾದು ನೋಡುವ ವ್ಯವಧಾನ ನಮಗೆ ಬೇಕಿದೆ ಅಷ್ಟೇ.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *