ಮೋದಿ-ಯೋಗಿ ಕರ್ನಾಟಕಕ್ಕೆ ಬರಲೇಬಾರದೆ?!

ರಾಮ ಉತ್ತರ ಭಾರತದವ. ಅವನಿಗೆ ಸೀತೆಯನ್ನು ದೊರಕಿಸಿಕೊಡಲು ಪ್ರಯತ್ನಪಟ್ಟ ಸುಗ್ರೀವ-ಆಂಜನೇಯರು ದಕ್ಷಿಣದವರು. ಕಾಶಿ ಉತ್ತರ ಭಾರತದಲ್ಲಿದೆ. ಆಸ್ತಿಕರು ಅಲ್ಲಿಂದ ಗಂಗೆಯನ್ನು ತಂದು ಅಭಿಷೇಕ ಮಾಡುವ ರಾಮೇಶ್ವರ ದಕ್ಷಿಣ ಭಾರತದ ಆಸ್ತಿ. ಬೆಂಗಳೂರು ನಮ್ಮದಾದರೂ ಇಲ್ಲಿ ಅಧ್ಯಯನಕ್ಕೆ ಬರುವ ಬಹಳಷ್ಟು ಜನ ಉತ್ತರ ಭಾರತದವರು.

ಚುನಾವಣೆಯ ಫಲಿತಾಂಶವನ್ನು ಅನೇಕ ಬಾರಿ ಆಯಾ ನಾಯಕರುಗಳ ಮುಖಭಾವವನ್ನು ಗಮನಿಸಿಯೇ ಊಹಿಸಿಬಿಡಬಹುದು ಎನಿಸುತ್ತದೆ. ಕರ್ನಾಟಕದ ಚುನಾವಣೆ ಮಹತ್ವದ ಹಂತಕ್ಕೆ ಬಂದಿದೆ. ಆರು ತಿಂಗಳ ಹಿಂದಿನ ಕಾಂಗ್ರೆಸ್ಸಿನ ಪರಿಸ್ಥಿತಿ ಈಗ ಬಹಳ ಬದಲಾಗಿದೆ. ಐದು ವರ್ಷ ಪೂರೈಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದು ಬೀಗುತ್ತಿರುವ ಸಿದ್ದರಾಮಯ್ಯನವರು ತಾವು ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಗೆಲ್ಲುವುದು ಕಷ್ಟವೆಂಬ ಭೀತಿಯಲ್ಲಿದ್ದಾರೆ. ಹೀಗಾಗಿಯೇ ಅವರಿಗೆ ಬಾದಾಮಿ ಸಮರ್ಥ ಸ್ಥಳವೆನಿಸಿರಲು ಸಾಕು. ಆದರೆ ಅಮಿತ್ ಷಾ ಬಾದಾಮಿಯಲ್ಲಿ ಶ್ರೀರಾಮುಲು ಅವರನ್ನು ಕಣಕ್ಕಿಳಿಸುವ ಮೂಲಕ ತೋರಿರುವ ತಂತ್ರಗಾರಿಕೆ ಎಂಥವರನ್ನೂ ಬೆಚ್ಚಿ ಬೀಳಿಸಿದೆ. ಶ್ರೀರಾಮುಲು ಸಾಗುತ್ತಿರುವ ವೇಗವನ್ನು ಮತ್ತು ಕಾರ್ಯಕರ್ತರೊಂದಿಗಿನ ಅವರ ವಿನೀತಭಾವವನ್ನು ಗಮನಿಸಿದರೆ ಅವರು ಜನರಿಗೆ ಬಲು ಬೇಗ ಹತ್ತಿರವಾಗಿ ಬಾದಾಮಿ ಕ್ಷೇತ್ರವನ್ನು ಗೆದ್ದುಬಿಟ್ಟರೂ ಅಚ್ಚರಿ ಪಡಬೇಕಿಲ್ಲ. ಕೆ.ಎಚ್. ಪಾಟೀಲರು ಕಟ್ಟಿದ್ದ ಗದಗ್​ನ ಕಾಂಗ್ರೆಸ್ ಭದ್ರಕೋಟೆಯನ್ನು ತಾನು ಕಣಕ್ಕಿಳಿದ ಮೊದಲ ಬಾರಿಗೇ ಚೂರುಗೈದವರು ಅವರು. ಶ್ರೀರಾಮುಲು ಚುನಾವಣೆಗೆ ನಿಂತಾಗ ಗದಗ್​ನ ಪ್ರತಿ ಮನೆಯ ವ್ಯಕ್ತಿಗೂ ಇವರು ತಮ್ಮವರೇ ಎನಿಸಿಬಿಟ್ಟಿತ್ತು. ಅದು ಅವರ ಕಾರ್ಯಶೈಲಿ. ಕಾರ್ಯಕರ್ತರೊಂದಿಗಿನ ಬಾಂಧವ್ಯವನ್ನು ಹೇಗಿಟ್ಟುಕೊಳ್ಳಬೇಕೆಂಬುದನ್ನು ಅವರನ್ನು ನೋಡಿಯೇ ಕಲಿಯಬೇಕು. ಸುಮಾರು ಎಂಟೊಂಭತ್ತು ವರ್ಷದ ಹಿಂದಿನ ಮಾತು. ಭಾಜಪಾ ಯುವಮೋರ್ಚಾದ ತರುಣರು ‘ಮಂತ್ರಿಯೊಂದಿಗೆ ಮಾತುಕತೆ’ ಎಂಬ ಕಾರ್ಯಕ್ರಮದಡಿಯಲ್ಲಿ ಶ್ರೀರಾಮುಲುರನ್ನು ಆಹ್ವಾನಿಸಿದ್ದರಂತೆ. ಇತರನೇಕ ಮಂತ್ರಿಗಳು ಕರೆದರೂ ಬಂದಿರಲಿಲ್ಲ. ಆದರೆ ಶ್ರೀರಾಮುಲು ಮಾತ್ರ ಬಂದಿದ್ದಲ್ಲದೇ ಕಾರ್ಯಕರ್ತರೊಂದಿಗೆ ಬಲು ಸಲುಗೆಯಿಂದಲೇ ಮಾತನಾಡಿ ಕೊನೆಗೆ ತನ್ನದ್ದೇ ಖರ್ಚಿನಲ್ಲಿ ಮೃಷ್ಟಾನ್ನ ಭೋಜನವನ್ನೂ ಮಾಡಿಸಿದ್ದರಂತೆ. ಹೀಗೆ ಸಭೆ ಮುಗಿದ ನಂತರ ಪ್ರತಿಯೊಬ್ಬರಿಗೂ ಊಟ ಹಾಕಿಸುವ ರೂಢಿ ತಮ್ಮಲ್ಲಿಲ್ಲವೆಂದು ಕೆಲವರು ಬುದ್ಧಿ ಹೇಳಲು ಹೊರಟಾಗ ‘ಕಾರ್ಯಕರ್ತರಿಂದಾಗಿಯೇ ನಮಗೆ ಅಧಿಕಾರ. ಹೀಗಾಗಿ ಅವರು ಚೆನ್ನಾಗಿದ್ದಷ್ಟೂ ಪಕ್ಷಕ್ಕೆ ಬಲ’ ಎಂದಿದ್ದರಂತೆ ಶ್ರೀರಾಮುಲು. ಏರಿದ ಏಣಿಯನ್ನು ಎಂದಿಗೂ ಒದೆಯದ ವಿನೀತಭಾವವೇ ಅವರ ಆಸ್ತಿ. ಮಂತ್ರಿಯಾಗಿದ್ದಾಗ ವಿಧಾನಸೌಧದ ಅವರ ಕಚೇರಿಯಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಪ್ರತಿನಿತ್ಯ ಒಳ್ಳೆಯ ಹೋಟೆಲಿನಿಂದ ಊಟ ಬರುವಂತೆ ವ್ಯವಸ್ಥೆ ಮಾಡಿಟ್ಟಿದ್ದರು. ಹೀಗಾಗಿ ಅಕ್ಕ-ಪಕ್ಕದ ಕಚೇರಿಯ ಕೆಲಸಗಾರರೂ ಊಟದ ಹೊತ್ತಲ್ಲಿ ಅವರ ಕಚೇರಿಗೆ ಹೋಗಿ ಕುಳಿತಿರುತ್ತಿದ್ದರಂತೆ. ಅವರೊಂದಿಗಿನ ಅನೇಕರ ಪಾಲಿಗೆ ಶ್ರೀರಾಮುಲು ಥೇಟು ತೆಲುಗು ಹೀರೋ. ಅದಕ್ಕೇ ಬಾದಾಮಿಯ ಕಣಕ್ಕೆ ಅವರು ಬಂದೊಡನೆ ಅಲ್ಲಿನ ಕಾರ್ಯಕರ್ತರಲ್ಲಿ ಉತ್ಸಾಹ ನೂರ್ಮಡಿಯಾಗಿರುವುದು ಮತ್ತು ಎದುರಾಳಿಗಳಲ್ಲಿ ತಳಮಳ ಸಾವಿರ ಪಟ್ಟು ಹೆಚ್ಚಾಗಿರೋದು.

ಸಿದ್ದರಾಮಯ್ಯನವರ ಕಂಗಳಲ್ಲಿ ಆತಂಕದ ಛಾಯೆ ಇದ್ದೇ ಇದೆ. ಚುನಾವಣೆಗೆ ಆರು ತಿಂಗಳ ಮುನ್ನ ಅವರಲ್ಲಿ ಯಾವ ಭರವಸೆಯಿತ್ತೋ ಅದು ಈಗ ಖಂಡಿತ ಕಾಣುತ್ತಿಲ್ಲ. ದೇವಸ್ಥಾನಗಳಿಗೆ ಹೋಗೋದು ಮೂಢನಂಬಿಕೆ, ಹೋಮ-ಹವನಗಳಲ್ಲಿ ಪಾಲ್ಗೊಳ್ಳೋದು ವೈಚಾರಿಕತೆಗೆ ವಿರೋಧ, ಧರ್ಮಸ್ಥಳಕ್ಕೆ ಹೋಗುವಾಗ ಮಾಂಸ ತಿನ್ನಲೇಬಾರದೆಂಬ ಕೋಟ್ಯಂತರ ಜನರ ನಂಬಿಕೆ ಮೂರ್ಖತನದ್ದು ಎಂದೆಲ್ಲಾ ಅಧಿಕಾರದ ಹೊತ್ತಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಈಗ ದೇವಸ್ಥಾನಗಳಿಗೆ ಹೋಗುತ್ತಾರೆ, ಹಣೆ ತುಂಬ ಕುಂಕುಮ ಹಚ್ಚಿಸಿಕೊಂಡು ಪ್ರಚಾರ ಮಾಡುತ್ತಾರೆ, ಕದ್ದು-ಮುಚ್ಚಿ ಹೋಮ-ಹವನಗಳಿಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ‘ನಾನೂ ಹಿಂದೂ’ ಅಂತ ಮತ್ತೆಮತ್ತೆ ಸಾಬೀತು ಪಡಿಸುವ ಹತಾಶ ಪ್ರಯತ್ನ ಮಾಡುತ್ತಿದ್ದಾರೆ. ಜನರು ನಂಬುವುದು ಪಕ್ಕಕ್ಕಿರಲಿ, ಮಂದಿರವೊಂದರಲ್ಲಿ ಆರತಿ ಮಾಡುವಾಗ ಆರತಿಯೇ ನಂದಿಹೋಗಿ ಕಾರ್ಯಕರ್ತರು ಗಾಬರಿಗೊಂಡು ಪರಸ್ಪರ ಆತಂಕದಿಂದ ನೋಡಿಕೊಂಡಿದ್ದು ಈಗ ವೈರಲ್ ಆಗಿರುವ ವಿಡಿಯೋ!

ಸೋಲು-ಗೆಲುವು, ಪ್ರಯತ್ನ-ಹತಾಶೆಗಳು ಇದ್ದದ್ದೇ. ಆದರೆ ಸೋಲುತ್ತೇನೆಂಬ ಹೆದರಿಕೆಯಲ್ಲಿ ದೇಶವನ್ನೇ ತುಂಡು ಮಾಡಲು ಹೋಗುವ ಮನಸ್ಥಿತಿ ಇದೆಯಲ್ಲಾ ಅದನ್ನು ಮಾತ್ರ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಸೋಲು ಖಾತ್ರಿಯಾಗುತ್ತಿದ್ದಂತೆ ಸಿದ್ದರಾಮಯ್ಯ ತಮಗೆ ಸವಾಲಾಗಿರುವ ನರೇಂದ್ರ ಮೋದಿಯನ್ನು ಹಣಿಯಲು ಯಾವ ಉಪಾಯಕ್ಕೆ ಮೊರೆಹೋದರು ಗೊತ್ತೇನು!? ಮೋದಿ ಮತ್ತು ಯೋಗಿಯನ್ನು ಉತ್ತರ ಭಾರತದವರು ಮತ್ತು ತಾವು ಕನ್ನಡಿಗರೆಂದು ಬಿಂಬಿಸಿಕೊಳ್ಳುವ ಕೊನೆಯ ಪ್ರಯತ್ನಕ್ಕೆ ಮುನ್ನುಡಿ ಬರೆದರು. ಇದು ಕೇಂಬ್ರಿಜ್ ಅನಾಲಿಟಿಕಾ ಕರ್ನಾಟಕವನ್ನು ಗೆಲ್ಲಲು ಕಾಂಗ್ರೆಸ್ಸಿಗೆ ರೂಪಿಸಿಕೊಟ್ಟ ರಣತಂತ್ರ. ಮೊದಲು ಧರ್ಮವನ್ನು ವಿಭಜಿಸಿ, ಆನಂತರ ಅಗತ್ಯ ಬಿದ್ದರೆ ಕನ್ನಡದ ಸೆಂಟಿಮೆಂಟನ್ನು ವ್ಯಾಪಕಗೊಳಿಸಿ ಅಂತ. ಮೊದಲನೇ ಹಂತವನ್ನು ಸೂಕ್ತವಾಗಿ ಮಾಡಿದ ಸಿದ್ದರಾಮಯ್ಯನವರು ಲಿಂಗಾಯತರನ್ನು ಹಿಂದೂಗಳಿಂದ ಪ್ರತ್ಯೇಕಿಸುವ ಸಾಹಸ ಮಾಡಿದರು. ಅದರಿಂದ ಲಾಭವಾಗುವ ಬದಲು ಬಿಟ್ಟ ಬಾಣ ತಿರುಗಿ ಬಂದು ಎದೆಗೇ ಚುಚ್ಚುವ ಹಂತ ನಿರ್ವಣವಾದಾಗ ಗಾಬರಿಗೊಳಗಾಗಿ ಧರ್ಮ ವಿಭಜನೆಯ ವಿಚಾರದಲ್ಲಿ ತಾನು ತಟಸ್ಥವೆಂಬಂತೆ ಬಿಂಬಿಸಿಕೊಳ್ಳಲಾರಂಭಿಸಿದರು. ಆರು ತಿಂಗಳ ಹಿಂದೆ 120 ಸೀಟುಗಳನ್ನು ಗೆಲ್ಲುವ ಮೂಲಕ ಸುಲಭವಾಗಿ ಗದ್ದುಗೆ ಹಿಡಿದುಬಿಡುತ್ತೇವೆ ಎಂಬ ಭ್ರಮೆಯಲ್ಲಿದ್ದ ಸಿದ್ದರಾಮಯ್ಯನವರಿಗೆ ಒಂದು ತಿಂಗಳ ಹಿಂದಿನ ಸಮೀಕ್ಷೆ ಗಾಬರಿ ಹುಟ್ಟಿಸಿಬಿಟ್ಟಿತ್ತು. ಈಗ ಭಾಜಪಾ ಮತ್ತು ಕಾಂಗ್ರೆಸ್ ಸಮಬಲದ ಹೋರಾಟಕ್ಕೆ ಬಂದು ನಿಂತಿವೆ ಮತ್ತು ಯಾವ ಪಕ್ಷಕ್ಕೂ ಬಹುಮತ ಬರಲಾರದು ಎಂಬುದು ಅವರ ಅರಿವಿಗೆ ಬಂತು. ನರೇಂದ್ರಮೋದಿ ಮತ್ತು ಯೋಗಿ ಆದಿತ್ಯನಾಥರು ಪ್ರಚಾರದ ಕಣಕ್ಕೆ ಧುಮುಕುವ ಮುನ್ನವೇ ಪರಿಸ್ಥಿತಿ ಹೀಗಾದರೆ, ಮುಂದೇನು? ಎಂಬ ಗೊಂದಲಕ್ಕೊಳಗಾದ ಸಿದ್ದರಾಮಯ್ಯನವರು ಉತ್ತರ ಭಾರತ ಮತ್ತು ದಕ್ಷಿಣ ಭಾರತಗಳ ವಿಭಜನೆಯ ಸೂತ್ರವನ್ನು ಮುಂದಿಟ್ಟು ಭಡಕಾಯಿಸಲೆತ್ನಿಸಿದರು.

ರಾಮ ಉತ್ತರ ಭಾರತದವ. ಅವನಿಗೆ ಸೀತೆಯನ್ನು ದೊರಕಿಸಿಕೊಡಲು ಪ್ರಯತ್ನಪಟ್ಟ ಸುಗ್ರೀವ-ಆಂಜನೇಯರು ದಕ್ಷಿಣ ಭಾರತದವರು. ಕಾಶಿ ಉತ್ತರ ಭಾರತದಲ್ಲಿದೆ. ಆಸ್ತಿಕರು ಅಲ್ಲಿಂದ ಗಂಗೆಯನ್ನು ತಂದು ಅಭಿಷೇಕ ಮಾಡುವ ರಾಮೇಶ್ವರ ದಕ್ಷಿಣ ಭಾರತದ ಆಸ್ತಿ. ಬೆಂಗಳೂರು ನಮ್ಮದಾದರೂ ಇಲ್ಲಿ ಅಧ್ಯಯನಕ್ಕೆ ಬರುವ ಬಹಳಷ್ಟು ಜನ ಉತ್ತರ ಭಾರತದವರು. ಕರ್ನಾಟಕದ ಅನೇಕರು ಕೆಲಸ ಅರಸಿಕೊಂಡು ಮುಂಬೈ, ದೆಹಲಿಗೆ ಹೋಗುತ್ತಾರೆ. ಇವೆಲ್ಲದರ ಅರಿವಿದ್ದೂ ಮತ ಗಳಿಕೆಗಾಗಿ ಭಾರತವನ್ನೇ ವಿಭಜಿಸಿ ಉತ್ತರ ಭಾರತದವರು ದಕ್ಷಿಣ ಭಾರತಕ್ಕೆ ಬರಲೇಬಾರದೆಂಬಂತೆ ಟ್ವೀಟು ಮಾಡಿದ ಸಿದ್ದರಾಮಯ್ಯನವರಿಗೆ ನಾಯಕತ್ವದ ಅರ್ಹತೆ ಎಷ್ಟಿದೆ ಎಂಬುದು ಪ್ರಶ್ನಾರ್ಹವೇ ಸರಿ! ಅವರಿಗೆ ವಿಭಜನೆ ಮಾಡಿ, ಆಳ್ವಿಕೆ ಮಾಡುವ ರೂಢಿ ಚೆನ್ನಾಗಿಯೇ ಆಗಿದೆ. ಮತ ದೊರೆಯುವುದೆನ್ನುವುದಾದರೆ ಉತ್ತರ-ದಕ್ಷಿಣ ಭಾರತವನ್ನು ವಿಭಜಿಸುತ್ತಾರೆ, ಅಗತ್ಯ ಬಿದ್ದರೆ ಉತ್ತರ-ದಕ್ಷಿಣ ಕರ್ನಾಟಕವನ್ನೂ ವಿಭಜಿಸಿಬಿಡುತ್ತಾರೆ. ಅಕಸ್ಮಾತ್ ಕುಟುಂಬವನ್ನು ವಿಭಜಿಸುವುದರಿಂದ ವೋಟು ದೊರೆಯುತ್ತದೆನ್ನುವುದಾದರೆ ಅದಕ್ಕೂ ಸಿದ್ಧರಾದಾರು. ಯಾವ ಒಡೆದಾಳುವ ರಾಜನೀತಿ ಎಂಬ ಆರೋಪವನ್ನು ಕಾಂಗ್ರೆಸ್ಸು ಬಿಜೆಪಿಗೆ ಮಾಡುತ್ತಿತ್ತೋ ಅವೆಲ್ಲವನ್ನೂ ಸಿದ್ದರಾಮಯ್ಯನವರು ಇಂದು ತಾವೇ ಮಾಡುತ್ತಿದ್ದಾರೆ. ನರೇಂದ್ರಮೋದಿ ಮಾತ್ರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎನ್ನುತ್ತ ಹಿಂದೂ-ಮುಸಲ್ಮಾನ-ಕ್ರಿಶ್ಚಿಯನ್ನರ ನ್ನೆಲ್ಲ ಜತೆಯಲ್ಲೇ ಕರೆದುಕೊಂಡು ಹೋಗಿ ಗುರಿ ಮುಟ್ಟುವ ತವಕದಲ್ಲಿದ್ದಾರೆ.

ಇತ್ತ ಕಾಂಗ್ರೆಸ್ಸು ಮತ್ತು ಸಿದ್ದರಾಮಯ್ಯ ಹತಾಶ ಪ್ರಯತ್ನಗಳಲ್ಲಿ ನಿರತವಾಗಿದ್ದರೆ ಅತ್ತ ನರೇಂದ್ರ ಮೋದಿ ಮಾತ್ರ ಕರ್ನಾಟಕದಲ್ಲಿ ಚುನಾವಣೆಯೇ ಇಲ್ಲವೇನೋ ಎನ್ನುವಷ್ಟು ನಿರುಮ್ಮಳವಾಗಿದ್ದಾರೆ. ಈ ಚುನಾವಣೆಯ ನಡುವೆಯೇ ಅವರು ಇಂಗ್ಲೆಂಡು ಮತ್ತು ಚೀನಾ ಪ್ರವಾಸವನ್ನೂ ಮಾಡಿಕೊಂಡು ಬಂದಿರೋದು. ಯುರೋಪಿಯನ್ ಯೂನಿಯನ್​ನಿಂದ ಹೊರ ಹೋಗುವ ಸಿದ್ಧತೆ ನಡೆಸುತ್ತಿರುವ ಇಂಗ್ಲೆಂಡಿನ ಪರಿಸ್ಥಿತಿ ಸದ್ಯಕ್ಕಂತೂ ಬಲು ಕೆಟ್ಟದ್ದಾಗಿದೆ. ಮುಂದಿನ ಕೆಲವು ವರ್ಷಗಳ ಕಾಲ ಅದು ತನ್ನನ್ನು ತಾನು ಸಂಭಾಳಿಸಿಕೊಳ್ಳಲು ಹೆಣಗಾಡಲಿರುವುದು ಖಚಿತವೇ. ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿರುವ ಮೋದಿ ತಾವೇ ಮುಂಚಿತವಾಗಿ ಇಂಗ್ಲೆಂಡಿನೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಿಕೊಂಡು ಮುಂದಿನ ದಿನಗಳಲ್ಲಿ ವ್ಯಾಪಾರ ಅಭಿವೃದ್ಧಿಗೆ ಬೇಕಾಗಿರುವ ಒಪ್ಪಂದಗಳನ್ನು ಮಾಡಿಕೊಂಡು ಬಂದಿದ್ದಾರೆ. ಜತೆಗೆ ಚೀನಾಕ್ಕೂ ಭೇಟಿಕೊಟ್ಟು ಯಾರೂ ಊಹಿಸದ ರೀತಿಯಲ್ಲಿ ಜಾಗತಿಕ ಮಟ್ಟದ ಷಾಕ್ ಕೊಟ್ಟಿದ್ದಾರೆ. ಭಾರತ ಮತ್ತು ಚೀನಾ ಸಂಬಂಧ ಬಲು ಕೆಟ್ಟದಾಗಿದೆ ಎಂದೇ ಎಲ್ಲರೂ ಭಾವಿಸಿದ್ದರು. ಡೋಕ್ಲಾಮ್ ವಿವಾದದ ನಂತರವಂತೂ ಅದು ಪೂರ್ತಿ ಹಾಳುಗೆಡವಿಹೋಗಿತ್ತು. ಚೀನಾ ಕೂಡ ಆನಂತರ ಸ್ವಲ್ಪ ಧಾಷ್ಟರ್್ಯದಿಂದ ನಡೆದುಕೊಂಡು ಭಾರತದೊಂದಿಗಿನ ಮಾತುಕತೆಯನ್ನು ಹೆಚ್ಚು-ಕಡಿಮೆ ಸ್ಥಗಿತಗೊಳಿಸಿಬಿಟ್ಟಿತ್ತು. ಹಾಗಂತ ಚೀನಾದ ಪರಿಸ್ಥಿತಿಯೇನೂ ಉತ್ತಮವಾಗಿರಲಿಲ್ಲ. ರಾಷ್ಟ್ರೀಯವಾದಿಯಾಗಿರುವ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಬಂದ ಮೇಲೆ ಚೀನಾದ ವ್ಯಾಪಾರ ವಹಿವಾಟುಗಳ

ಮೇಲೆ ಸಾಕಷ್ಟು ನಿಬಂಧನೆ ಹೇರಲಾಗಿತ್ತು. ಹೀಗಾಗಿ ಚೀನಾಕ್ಕೆ ಜಾಗತಿಕ ಮಟ್ಟದಲ್ಲಿ ತನ್ನ ಗೌರವವನ್ನುಳಿಸಿಕೊಳ್ಳಲು ಭಾರತದೊಂದಿಗಿನ ಸುಂದರ ಬಾಂಧವ್ಯ ಅತ್ಯಗತ್ಯವೇ ಆಗಿತ್ತು. ಮೊದಲೆಲ್ಲ ತಾನು ಪಾಕಿಸ್ತಾನದ ಗೆಳೆಯ ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಚೀನಾ, ಜಾಗತಿಕ ವೇದಿಕೆಗಳಲ್ಲಿ ನರೇಂದ್ರ ಮೋದಿ ಪಾಕಿಸ್ತಾನದ ಬಣ್ಣವನ್ನು ಪದೇ-ಪದೆ ಬಯಲಿಗೆಳೆದ ನಂತರ ತಣ್ಣಗಾಗಿಬಿಟ್ಟಿತ್ತು. ಈಗಂತೂ ಪಾಕಿಸ್ತಾನದ ಗೆಳೆಯನೆಂದು ಹೇಳಿಕೊಳ್ಳಲು ಗಲ್ಪ್ ರಾಷ್ಟ್ರಗಳು ನಾಚುವಂಥ ಪರಿಸ್ಥಿತಿ ನಿರ್ವಣವಾಗಿಬಿಟ್ಟಿದೆ. ಮುಸಲ್ಮಾನ ರಾಷ್ಟ್ರಗಳು ಪಾಕಿಸ್ತಾನಕ್ಕಿಂತಲೂ ಭಾರತಕ್ಕೆ ಹೆಚ್ಚು ಹತ್ತಿರವಾಗಿರುವುದು ಮೋದಿ ಮಾಡಿದ ಬಲುದೊಡ್ಡ ಮ್ಯಾಜಿಕ್ಕು! ಜಾಗತಿಕ ಪ್ರವಾಸಗಳ ಮೂಲಕ ಮೋದಿ ಭಾರತವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಭಾರತದೊಂದಿಗೆ ಚೆಂದದ ಸಂಬಂಧ ಹೊಂದುವುದು ಚೀನಾಕ್ಕೂ ಅನಿವಾರ್ಯ. ಪರಿಸ್ಥಿತಿಯ ಲಾಭವನ್ನು ಪಡೆಯಲೆಂದೇ ನರೇಂದ್ರ ಮೋದಿ ಚೀನಾಕ್ಕೆ ಹೋಗಿ ಮಾತುಕತೆ ನಡೆಸಿದ್ದಾರೆ. ಹಾಗಂತ ಮನಮೋಹನ್ ಸಿಂಗರಂತೆ ತಲೆ ಬಗ್ಗಿಸಿ ಹೆದರಿಕೆಯಿಂದ ಹೋಗಿ ನಿಂತಿಲ್ಲ. ತಾವು ಚೀನಾಕ್ಕೆ ಹೋಗುವ ಮುನ್ನ ಛತ್ತೀಸ್​ಘಡದಲ್ಲಿ ಒಂದಷ್ಟು ನಕ್ಸಲರನ್ನು ಮಟ್ಟಹಾಕಿ 60ಕ್ಕೂ ಹೆಚ್ಚು ನಕ್ಸಲರು ಶರಣಾಗುವಂತೆ ಮಾಡಿ ಬಲವಾದ ದಂಡವನ್ನು ಹಿಡಿದೇ ಚೀನಾಕ್ಕೆ ಹೋಗಿದ್ದಾರೆ. ಚೀನಾದ ಉಪ ವಿದೇಶಾಂಗ ಮಂತ್ರಿ ಕಾಂಗ್ ಶೂನ್ಯೊ ‘ಮಾತುಕತೆಯುದ್ದಕ್ಕೂ ಒನ್ ಬೆಲ್ಟ್ ಒನ್ ರೋಡ್ ನ ಕುರಿತಂತೆ ಭಾರತ ತನ್ನ ನಿಲುವನ್ನು ಸಡಿಲಿಸಲೇ ಇಲ್ಲ’ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅದರರ್ಥ ಮೋದಿ ಜಗತ್ತಿನ ಯಾವ ಮೂಲೆಗೆ ಹೋದರೂ ಭಾರತದ ಗೌರವವನ್ನು ಒಂದಿನಿತೂ ಕಡಿಮೆ ಮಾಡಲು ಒಪ್ಪಿಕೊಳ್ಳಲಾರರು. ಇಂಥವರನ್ನು ಸಿದ್ದರಾಮಯ್ಯನವರು ಎಷ್ಟು ಸಲೀಸಾಗಿ ಉತ್ತರ ಭಾರತೀಯನೆಂದು ಕರೆದು ರಾಜ್ಯಕ್ಕೆ ಬರಬಾರದು ಎಂದುಬಿಟ್ಟರಲ್ಲ! ಈ ರೀತಿಯ ಯೋಜನೆ ಬಿಹಾರದಲ್ಲಿ ನಿತೀಶ್ ಕುಮಾರ್​ಗೆ ಮತ ತಂದುಕೊಟ್ಟಿತ್ತು. ಅವರ ಒಟ್ಟಾರೆ ಪ್ರಚಾರವೇ ‘ಬಿಹಾರಿ ಮತ್ತು ಬಾಹರಿ’ (ಹೊರಗಿನವನು) ಎನ್ನುವಂಥ ಹೇಳಿಕೆಯ ಮೇಲೆ ನಿಂತಿತ್ತು. ನಿತೀಶ್ ಕುಮಾರ್ ಈ ಹೇಳಿಕೆಯಿಂದ ಲಾಭವನ್ನು ಗಳಿಸಿದ್ದರು ಏಕೆಂದರೆ ಅವರು ಬಿಹಾರದ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮನ್ನು ತಾವು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು. ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಷ್ಟೂ ಕಾಲ ಇಲ್ಲಿನ ನಾಗರಿಕರನ್ನು ಉಡಾಫೆಯಿಂದ ಮಾತನಾಡಿಸುತ್ತ, ಕೇಳಿದ ಪ್ರಶ್ನೆಗಳಿಗೆ ದರ್ಪದಿಂದ ಉತ್ತರಿಸುತ್ತ, ತುಷ್ಟೀಕರಣದ ನೀತಿಯನ್ನು ಅನುಸರಿಸುತ್ತ ತಮ್ಮ ಅವಧಿಯಲ್ಲಿ ಕರ್ನಾಟಕವನ್ನು ಅಕ್ಕ-ಪಕ್ಕದ ರಾಜ್ಯಗಳಿಗಿಂತ ಹಿಂದೆ ತಳ್ಳಿಬಿಟ್ಟರಲ್ಲ ಹೀಗಾಗಿ ಈಗ ಅವರ ಈ ದಾಳ ಖಂಡಿತವಾಗಿಯೂ ಕೆಲಸಕ್ಕೆ ಬರಲಾರದು.

ಅವರಿಗಿರುವ ಅಸ್ತ್ರ ಪ್ರಕಾಶ್​ರಾಜ್ ಮಾತ್ರ. ಆತನ ಮೂಲಕ ಹುಚ್ಚು-ಹುಚ್ಚಾದ ಹೇಳಿಕೆಗಳನ್ನು ಕೊಡಿಸುತ್ತಾ ಜಾತಿ-ಜಾತಿಗಳನ್ನು ಭಡಕಾಯಿಸುವ ಮತ್ತು ಮೋದಿ ವಿರುದ್ಧ ಇರುವ ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳ ಯುಗವಾದ್ದರಿಂದ ಯಾವ ಸುಳ್ಳೂ ಬಹಳ ಕಾಲ ನಿಲ್ಲುವುದಿಲ್ಲ. ಜನ ಸತ್ಯವನ್ನು ಒರೆಗೆ ಹಚ್ಚಿ ಆ ಕ್ಷಣದಲ್ಲಿಯೇ ನೋಡಿಬಿಡುತ್ತಾರೆ. ಹೀಗಾಗಿಯೇ ಈ ಬಾರಿ ಚುನಾವಣೆ ಹಿಂದಿನಂತೆ ಸಾಂಪ್ರದಾಯಿಕವಲ್ಲ. ಜಾತಿಯನ್ನು ವಿಭಜಿಸಿ, ಹಣ ಹಂಚಿ, ಹೆಂಡ ಕುಡಿಸಿ ವೋಟು ತೆಗೆದುಕೊಳ್ಳುವಷ್ಟು ಚುನಾವಣೆ ಸಲೀಸಾಗಿಲ್ಲ. ಇದೊಂದು ಸ್ವಾಗತಾರ್ಹ ಬದಲಾವಣೆ. ಹೊಸದಾಗಿ ಮತದಾರ ಪಟ್ಟಿಗೆ ಸೇರ್ಪಡೆಯಾಗಿರುವ ತರುಣ ಸಮೂಹ ಕೈಲಿರುವ ಅಂಗೈಯಗಲದ ಮೊಬೈಲಿನಲ್ಲೇ ಜಗತ್ತನ್ನೆಲ್ಲ ನೋಡುವಾಗ ಉತ್ತರಭಾರತ-ದಕ್ಷಿಣಭಾರತಗಳ ನಡುವೆ ವ್ಯತ್ಯಾಸ ಇರುವುದು ಮುಖ್ಯಮಂತ್ರಿಗಳ ತಲೆಯಲ್ಲಿ ಮಾತ್ರ. ಜಗತ್ತು ಬಹಳ ಮುಂದೆ ಹೋಗಿಯಾಗಿದೆ.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *