ಪ್ರಚಂಡ ಹಿಂದೂ ಬಂಡೆ ಸಾಧ್ವಿ ಪ್ರಜ್ಞಾ ಸಿಂಗ್!

ಕಾವಿ ಎಂದರೆ ಬರಿಯ ಬಣ್ಣವಲ್ಲ. ಅದು ಸ್ವಾಭಿಮಾನದ ತಾಕತ್ತು. ಅದು ಸ್ವಂತ ಲಾಭಕ್ಕಾಗಿ ಯಾರೆದುರೂ ತಲೆಬಾಗದ ಹಿಮ್ಮತ್ತು. ಕಾವಿಯೆಂದರೆ ತ್ಯಾಗ, ಕಾವಿಯೆಂದರೆ ಸಮರ್ಪಣೆ ಎನ್ನುವ ಸಾಧ್ವಿ ಪ್ರಜ್ಞಾ ಸಿಂಗ್ ಗಂಡೆದೆಯೂ ಅಳಕುವಂಥ ಸಂಕಷ್ಟಗಳನ್ನು ಜಯಿಸಿ ಬಂದಿದ್ದಾರೆ.

 ನಾಲ್ಕಾರು ವರ್ಷಗಳ ಹಿಂದಿನ ಮಾತು. ಸಾಮಾಜಿಕ ಸಮಾನತೆ ಕುರಿತಂತೆ ಮಾತನಾಡುವ ಸ್ವಾಮೀಜಿಯೊಬ್ಬರು ಬೀದರ್​ಗೆ ಬಂದಿದ್ದರು. ವೇದಿಕೆಗೆ ತಡವಾಗಿ ಆಗಮಿಸಿದ ಸ್ವಾಮೀಜಿ ಅಲ್ಲಿ ಏರ್​ಕೂಲರ್ ಇಲ್ಲದಿರುವುದನ್ನು ಕಂಡು ಕಾರ್ಯಕರ್ತರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡರು. ವೇದಿಕೆಯ ಮೇಲಿದ್ದ ಫ್ಯಾನುಗಳು ಅವರಿಗೆ ಸಾಕಾಗಲಿಲ್ಲ. ವೇದಿಕೆ ಮುಂಭಾಗದಲ್ಲಿ ಹದಿನೈದಿಪ್ಪತ್ತು ಬುರ್ಖಾಧಾರಿ ಕಾಲೇಜು ತರುಣಿಯರಿದ್ದಾರೆ ಎಂಬ ಕಾರಣಕ್ಕೆ ತಮ್ಮ ಇಡೀ ಭಾಷಣವನ್ನು ಇಸ್ಲಾಂ ಪರವಾಗಿ ಮಂಡಿಸಲಾರಂಭಿಸಿದರು. ಇಸ್ಲಾಂನ ಕುರಿತಂತೆ ಅವರ ಅರೆಬರೆ ಜ್ಞಾನ ಅದರಿಂದಾಗಿ ಹುಟ್ಟಿದ ವಿಶ್ವ ಮಾನವತೆಯ ಕಲ್ಪನೆಯನ್ನು ಅವರು ಬಿಚ್ಚಿಡುತ್ತಿದ್ದರು. ಇವರೆಲ್ಲರ ಪಾಲಿಗೆ ವಿಶ್ವಮಾನವತೆ ಎಂದರೆ ಹಿಂದೂ ಧರ್ಮವನ್ನು ತೆಗಳುವುದು, ಮುಸಲ್ಮಾನ-ಕ್ರಿಶ್ಚಿಯನ್ನರನ್ನು ಹೊಗಳುವುದಷ್ಟೇ. ಹಿಂದೂಗಳ ಆಚರಣೆಯನ್ನು ಬೈಯ್ಯುವಾಗ ಇವರೊಳಗೆ ಹರಿಯುವ ಉತ್ಸಾಹದ ಕರೆಂಟು ನೋಡಲು ಎರಡು ಕಣ್ಣು ಸಾಲದು. ಇವರುಗಳು ಧರಿಸಿರುವ ಕಾವಿಗೆ ಗೌರವ ಕೊಡುವುದನ್ನು ಕಲಿಸಿದ್ದು ಇದೇ ಹಿಂದೂಧರ್ಮ ಎನ್ನುವುದನ್ನು ಮರೆತೇ ಬಿಡುತ್ತಾರಲ್ಲ ಇವರು.

ಇಷ್ಟೆಲ್ಲವೂ ಈಗ ನೆನಪಾಗಿದ್ದೇಕೆಂದರೆ ಎರಡು ದಿನಗಳ ಹಿಂದೆ ಬೆಂಕಿಯ ಚೆಂಡು ಸಾಧ್ವಿ ಪ್ರಜ್ಞಾ ಸಿಂಗರನ್ನು ಭೇಟಿಯಾಗಿದ್ದೆ. ಕಾಂಗ್ರೆಸ್ ಸರ್ಕಾರ ಕೇಸರಿ ಭಯೋತ್ಪಾದನೆ ಎಂಬ ಹೊಸ ಪದವನ್ನು ಹುಟ್ಟುಹಾಕಲೆಂದೇ ಮೋಸದಿಂದ ಬಂಧಿಸಿದ ಹೆಣ್ಣುಮಗಳೇ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್. ಮಧ್ಯಪ್ರದೇಶದ ಭಿಂಡ್​ನಲ್ಲಿ ಚಂದ್ರಪಾಲ್ ಸಿಂಗ್ ಎಂಬ ಜನಾನುರಾಗಿ ಆಯುರ್ವೆದಿಕ್ ವೈದ್ಯರ ಮಗಳಾಗಿ ಜನಿಸಿದ ಸಾಧ್ವಿ ಎಂಎವರೆಗೆ ಅಧ್ಯಯನ ನಡೆಸಿದ್ದರು. ಕಾಲೇಜಿನ ದಿನಗಳಲ್ಲಿಯೇ ಸದಾ ಲವಲವಿಕೆಯಿಂದ ಕೂಡಿರುತ್ತಿದ್ದ ಆಕೆ ದೇಶದ್ರೋಹಿಗಳ ವಿರುದ್ಧ ಭರ್ಜರಿಯಾದ ದನಿಯನ್ನೇ ಎತ್ತುತ್ತಿದ್ದರು. ದುರ್ಗಾವಾಹಿನಿಯ ಸಕ್ರಿಯ ಸದಸ್ಯರೂ ಆಗಿದ್ದರು ಆಕೆ. ತಂದೆಯ ದೈವಭೀರು ವ್ಯಕ್ತಿತ್ವದಿಂದ ಪ್ರೇರೇಪಿತವಾಗಿದ್ದ ಪ್ರಜ್ಞಾ ಬಲು ಚಿಕ್ಕ ವಯಸ್ಸಿನಲ್ಲಿಯೇ ಸಂನ್ಯಾಸತ್ವವನ್ನು ಸ್ವೀಕರಿಸಿಬಿಟ್ಟಿದ್ದರು. ಮಾಲೆಗಾಂವ್​ನಲ್ಲಿ ಸ್ಪೋಟವಾದಾಗ ಅದರ ಜಾಡು ಹಿಡಿದು ಕಾಂಗ್ರೆಸ್ ಸರ್ಕಾರ ಬಂದು ನಿಂತಿದ್ದು ಸಾಧ್ವಿ ಬಳಿ. ವಿಚಾರಣೆಗೆಂದು ಕರೆದಾಗ ಆಕೆ ಭಯೋತ್ಪಾದನಾ ನಿಗ್ರಹ ದಳದೆದುರು ಮುಲಾಜಿಲ್ಲದೇ ಹೋಗಿ ನಿಂತರು. ಚಿದಂಬರಂ ತಾನೇ ಸೃಷ್ಟಿಸಿದ ಕೇಸರಿ ಭಯೋತ್ಪಾದನೆ ಎಂಬ ಭೂತವನ್ನು ಸಿಂಗರಿಸಲು ಕಾವಿಧಾರಿಯಾಗಿದ್ದ ಸಾಧ್ವಿಯಂತ ಸಮರ್ಥ ವ್ಯಕ್ತಿ ಮತ್ತೊಬ್ಬರು ಸಿಗಲು ಸಾಧ್ಯವೇ ಇರಲಿಲ್ಲ. ಆಕೆಯನ್ನು ವಿಚಾರಣೆಗೊಯ್ದ ಭಯೋತ್ಪಾದನಾ ನಿಗ್ರಹ ದಳ ಆಕೆಯೊಂದಿಗೆ ಅತ್ಯಂತ ಕ್ರೂರವಾಗಿ ನಡೆದುಕೊಂಡಿತು. ಸುಮಾರು ಎರಡು ವರ್ಷಗಳ ಕಾಲ ಆಕೆಗೆ ನಿರಂತರವಾಗಿ ಕಿರುಕುಳ ಕೊಡಲಾಯಿತು. ಅನೇಕ ರಾತ್ರಿಗಳುದ್ದಕ್ಕೂ ಲೆದರ್ ಬೆಲ್ಟ್​ನಿಂದ ಬಡಿಯಲಾಯ್ತು. ಎಲೆಕ್ಟ್ರಿಕ್ ಶಾಕ್​ಗಳನ್ನು ಕೊಡಲಾಯ್ತು. ಒಮ್ಮೆಯಂತೂ 24 ದಿನಗಳ ಕಾಲ ಒಂದು ತುತ್ತು ಅನ್ನವನ್ನೂ ಕೊಡದೇ ಸತಾಯಿಸಲಾಯ್ತು. ತುಚ್ಛ ಪದಗಳಲ್ಲಿ ನಿಂದಿಸುವುದಲ್ಲದೆ ಆಕೆಯನ್ನು ಸುತ್ತುವರಿದಿದ್ದ ಪುರುಷ ಪೊಲೀಸರು ಲೈಂಗಿಕವಾದ ಕೀಳು ಪದಗಳ ಬಳಕೆಯಿಂದ ಆಕೆಯನ್ನು ಮಾನಸಿಕವಾಗಿ ಕೊಲ್ಲಲು ಪ್ರಯತ್ನಿಸಿದ್ದರು. ದುರಂತವೆಂದರೆ ಆಕೆಯನ್ನು ಸ್ಥಳೀಯ ಮಾಜಿಸ್ಟ್ರೇಟರ ಮುಂದೆಯೂ ತರದೇ ಚಾರ್ಜ್​ಶೀಟ್ ಕೂಡ ದಾಖಲು ಮಾಡದೆ ಕಾನೂನು ಬಾಹಿರವಾಗಿಯೇ ಕೂಡಿಹಾಕಿಕೊಂಡಿತ್ತು ವ್ಯವಸ್ಥೆ. ಹಿಂದೂಧರ್ಮವೆಂದರೆ ಏನೆಂದು ಕೇಳುವ ‘ಪುಣ್ಯಾತ್ಮ’ರೆಲ್ಲ ಒಮ್ಮೆ ಈ ಗಟ್ಟಿಗಿತ್ತಿಯನ್ನು ನೋಡಬೇಕು.

ಪೊಲೀಸರು ತಮಗೆ ಬೇಕಾದ್ದನ್ನು ಹೇಳಿಸಲೆಂದೇ ಇಷ್ಟೆಲ್ಲ ಕಿರುಕುಳ ಕೊಟ್ಟ ನಂತರವೂ ಆಕೆ ಅವರ ಒಂದು ಹೇಳಿಕೆಯನ್ನೂ ಪುನರುಚ್ಚರಿಸಲಿಲ್ಲ. ಮಂಪರು ಪರೀಕ್ಷೆಗಳು, ಬ್ರೇನ್ ಮ್ಯಾಪಿಂಗ್​ಗಳು ಆಕೆಯೆದುರು ಸೋತು ಮಲಗಿಬಿಟ್ಟವು. ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ ಹತ್ತು ವರ್ಷಗಳ ನಂತರ ಆಕೆಯ ವಿರುದ್ಧ ಒಂದೇ ಒಂದು ಸಾಕ್ಷಿಯನ್ನು ಸಂಗ್ರಹಿಸಲಾಗದೆ ಕೈಚೆಲ್ಲಿ ಆಕೆಗೆ ಜಾಮೀನು ನೀಡಬಹುದೆಂದಿತು. ಈಗ ಬೆಂಗಳೂರಿನ ಯೋಗ ಕೇಂದ್ರವೊಂದರಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಾಧ್ವಿ ಅವರನ್ನು ಈ ಹತ್ತು ವರ್ಷಗಳ ಅನುಭವ ಕೇಳಿದಾಗ ಅವರಾಡಿದ ಮಾತುಗಳು ಎಂಥವನನ್ನೂ ಬೆಚ್ಚಿ ಬೀಳಿಸುವಂಥವು.

ಸಂಕಷ್ಟಗಳನ್ನು ಜಯಿಸಿ ಬಂದ ಸಾಧ್ವಿ ಪೊಲೀಸರ ಕ್ರೌರ್ಯವನ್ನು ಕಂಡು ಆರಂಭದಲ್ಲಿ ಆ ಜೀವ ಬೆಚ್ಚಿ ಬಿದ್ದಿರಲಿಕ್ಕೆ ಸಾಕು. ಆದರೆ ಕ್ರಮೇಣ ಅಧರ್ಮದ ತಾಳಕ್ಕೆ ಕುಣಿಯಲಾರೆನೆಂದು ನಿಶ್ಚಯಿಸಿದ ಸಾಧ್ವಿ ಕಲ್ಲು ಬಂಡೆಯಾಗಿಬಿಟ್ಟರು. ತಾನು ಕಾವಿ ಧರಿಸಿರುವುದೇ ರಾಷ್ಟ್ರಕ್ಕೆ ತನ್ನನ್ನು ಸಮರ್ಪಣೆ ಮಾಡಿಕೊಳ್ಳಲು ಮತ್ತು ಧರ್ಮ ಪುನರ್​ಸ್ಥಾಪನೆಗೆ ಭಗವಂತನ ಆಯುಧವಾಗಿ ಕೆಲಸ ಮಾಡಲು ಎಂದು ಆಕೆಗೆ ಅರಿವಿತ್ತು. ಹಾಗಾಗಿಯೇ ಎಲ್ಲ ಅಧರ್ವಿುಯ ಚಟುವಟಿಕೆಗಳನ್ನು ಎದುರಿಸಿ ನಿಲ್ಲಬೇಕೆಂದು ಸಂಕಲ್ಪ ಮಾಡಿಬಿಟ್ಟರು. ಆಕೆಯ ಬಾಯಿಂದ ನಾಲ್ಕಾರು ಹೆಸರುಗಳನ್ನಾದರೂ ಹೊರಡಿಸಿ ಕೇಸರಿ ಭಯೋತ್ಪಾದನೆಯ ತಮ್ಮ ಹೇಳಿಕೆಯನ್ನು ದೃಢಪಡಿಸಲು ಹಾತೊರೆದಿತ್ತು ಪೊಲೀಸ್ ಪಡೆ. ದಿನಗಟ್ಟಲೆ ಬಡಿದರೂ ಅವರು ಬಯಸಿದ ಒಂದೇ ಒಂದು ಹೇಳಿಕೆಯನ್ನು ಸಾಧ್ವಿ ಕೊಡಲಿಲ್ಲ. ಆ ವೇಳೆಗಾಗಲೇ ಸಾಧ್ವಿ ಸೊಂಟ ಮುರಿದಿತ್ತು. ಕೈ-ಕಾಲುಗಳು ಎತ್ತಿ ಇಡಲಾಗದಷ್ಟು ಸವೆದು ಹೋಗಿದ್ದವು. ಚರ್ಮದ ಗಾಯಗಳು ವ್ರಣವಾಗಿಬಿಟ್ಟಿದ್ದವು. ಆ ವೇಳೆಯಲ್ಲಿಯೂ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದ ಸಾಧ್ವಿ ನ್ಯಾಯಾಧೀಶರ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುವಷ್ಟು ನೈತಿಕವಾಗಿ ಬಲಾಢ್ಯರಾಗಿದ್ದರು. ಕಾವಿ ಎಂದರೆ ಬರಿಯ ಬಣ್ಣವಲ್ಲ. ಅದು ಸ್ವಾಭಿಮಾನದ ತಾಕತ್ತು. ಅದು ಸ್ವಂತ ಲಾಭಕ್ಕಾಗಿ ಯಾರೆದುರೂ ತಲೆಬಾಗದ ಹಿಮ್ಮತ್ತು. ಆಕೆ ನ್ಯಾಯಾಲಯಕ್ಕೆ ಬರುವ ವೇಳೆಗೆ ಇನ್ನೂ ಕೆಲವಷ್ಟು ಸಾಧುಗಳು ಬೇರೆ ಬೇರೆ ಕಾರಣಕ್ಕೆ ನ್ಯಾಯಾಧೀಶರೆದುರು ನಿಲ್ಲುತ್ತಿದ್ದರಂತೆ. ಲಂಬಕೋನಕ್ಕೆ ಬಾಗಿ ನ್ಯಾಯಾಧೀಶರನ್ನು ದೇವರೆನ್ನುವ ಅವರ ಸ್ಥಿತಿಯ ಕುರಿತಂತೆ ಗರ್ಜಿಸುವ ಸಾಧ್ವಿ ‘ಧರ್ಮಕ್ಕೆ ಬದ್ಧವಾಗಿ ನಡೆದವರು ಯಾರೆದುರೂ ತಲೆಬಾಗಬೇಕಿಲ್ಲ. ಅದು ನ್ಯಾಯಾಧೀಶರೇ ಇರಲಿ, ಮುಖ್ಯಮಂತ್ರಿಯೇ ಇರಲಿ’ ಎನ್ನುವಾಗ ಅವರ ಕಂಗಳನ್ನು ನೋಡಬೇಕು, ಅದು ನಿಗಿನಿಗಿ ಕೆಂಡ!

ಎರಡು ವರ್ಷಗಳ ಕಿರುಕುಳದ ನಂತರ ಜೈಲಿಗೆ ವರ್ಗಾವಣೆಯಾದ ಸಾಧ್ವಿ ಅಲ್ಲಿಯೂ ತನ್ನದೇ ಆದ ಖದರ್​ನಿಂದ ಬದುಕಿದ್ದವರು. ಪೂಜೆ, ಸಾಧನೆ ಇವುಗಳಿಗಾಗಿ ಪೂರ್ಣ ಸಮಯ ಕೊಡುತ್ತಿದ್ದರು. ‘ಮೊದಲೆಲ್ಲ ಭಗವಂತ ದೊಡ್ಡ ಕಾರ್ಯಕ್ಷೇತ್ರವನ್ನು ನನಗೆ ಕೊಟ್ಟಿದ್ದ. ಈಗ ಜೈಲು ನನ್ನ ಕಾರ್ಯಕ್ಷೇತ್ರವಾಯ್ತು. ಕಾರ್ಯವ್ಯಾಪ್ತಿ ಚಿಕ್ಕದಿದ್ದುದರಿಂದ ಹೆಚ್ಚಿನ ಕೆಲಸ ಮಾಡಲು ಅವಕಾಶ ಸಿಕ್ಕಿತು’ ಎಂಬ ಆಕೆಯ ಮಾತುಗಳಲ್ಲಿ ಜಗತ್ತಿನ ಎಲ್ಲ ವ್ಯಕ್ತಿತ್ವ ವಿಕಸನದ ಭಾಷಣಗಳೂ ತೆಪ್ಪಗಾಗುತ್ತವೆ! ಜೈಲಿನಲ್ಲೇ ಬಂಧಿಯಾಗಿರುವ ಅನೇಕರ ಸಮಸ್ಯೆಗಳನ್ನು ಆಕೆ ಆಲಿಸುತ್ತಿದ್ದರು. ಸಾಂತ್ವನದ ಪರಿಹಾರ ನೀಡಬಲ್ಲವರಿಗೆ ಮೈದಡವಿ ಕಳಿಸುತ್ತಿದ್ದರು. ಸ್ವಲ್ಪ ಹೆಚ್ಚಿನ ಸಹಾಯದ ಅಗತ್ಯವಿದ್ದವರಿಗೆ ಮೇಲಧಿಕಾರಿಗೆ ಪತ್ರ ಬರೆಯುವ ಕೆಲಸ ಮಾಡಿಕೊಡುತ್ತಿದ್ದರು. ಊಟ-ತಿಂಡಿಯ ವ್ಯವಸ್ಥೆಯಲ್ಲಿ ದೋಷ ಕಂಡು ಬಂದಾಗ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಮಸ್ಯೆ ಪರಿಹರಿಸುತ್ತಿದ್ದರು. ಒಟ್ಟಿನಲ್ಲಿ ಆಕೆ ಒಂದರೆಕ್ಷಣವೂ ಸುಮ್ಮನೆ ಕುಳಿತವರಲ್ಲ. ನಿರಂತರ ಕಿರುಕುಳದ ಪರಿಣಾಮವಾಗಿ ಆಕೆಗೆ ಸ್ತನ ಕ್ಯಾನ್ಸರ್ ಅಮರಿಕೊಂಡಿತ್ತು. ಮೂರನೇ ಹಂತದಲ್ಲಿದ್ದ ಈ ಕ್ಯಾನ್ಸರಿಗೂ ಆಗಿನ ಯುಪಿಎ ಸರ್ಕಾರ ಕರಗದೆ ಆಕೆಯನ್ನು ಜೈಲಿನಲ್ಲೇ ಉಳಿಸಿತ್ತು. ಆಕೆಯನ್ನು ಬಿಟ್ಟುಬಿಟ್ಟರೆ ‘ಹಿಂದೂ ಭಯೋತ್ಪಾದನೆ’ ಎಂಬ ಸೃಷ್ಟಿಗೊಂಡ ಪದ ಮೌಲ್ಯ ಕಳೆದುಕೊಳ್ಳುವುದೆಂಬ ಹೆದರಿಕೆ ಕಾಂಗ್ರೆಸ್ಸಿಗೆ ಇದ್ದೇ ಇತ್ತು. ಕೊನೆಗೂ ಸಾಧ್ವಿ ಹೊರಬರಲು ಮೋದಿಯವರ ಸರ್ಕಾರವೇ ಬರಬೇಕಾಯ್ತು!

ಆರದ ಕಿಚ್ಚು: ಅಚ್ಚರಿಯೇನು ಗೊತ್ತೇ? ಹತ್ತು ವರ್ಷಗಳ ಕಾಲ ಗಂಡೆದೆಯವರೂ ಬೆಚ್ಚುವ ಕಿರುಕುಳವನ್ನು ಸಹಿಸಿಕೊಂಡು ಹೊರಬರುವ ಕನಸನ್ನೂ ಕಾಣದೇ ಏಕಾಂಗಿಯಾಗಿಯೇ ಕಾಲ ತಳ್ಳಿದ್ದ ಸಾಧ್ವಿ ಒಳಗಿನ ಕಿಚ್ಚು ಒಂದಿನಿತೂ ಆರಿಲ್ಲ. ಮಾಡದ ತಪ್ಪನ್ನು ಹೊರಿಸಿಕೊಂಡು ಶಿಕ್ಷೆ ಅನುಭವಿಸಿದ ನೋವೊಂದು ಬಿಟ್ಟರೆ ಆಕೆ ಈಗಲೂ ಬಲಾಢ್ಯವಾಗಿಯೇ ಇದ್ದಾರೆ. ಕಾವಿಯೆಂದರೆ ತ್ಯಾಗ, ಕಾವಿಯೆಂದರೆ ಸಮರ್ಪಣೆ ಎನ್ನುವ ಸಾಧ್ವಿ ರಾಷ್ಟ್ರಕ್ಕಾಗಿ ಮತ್ತು ಧರ್ಮಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧವೆಂದು ಹೇಳುವಾಗ ಎದುರಿಗೆ ಕುಳಿತವರ ಜೀವ ಒಮ್ಮೆ ಅಲುಗಾಡೀತು! ಸಾಧು-ಸಂತರುಗಳ ಮೇಲಿನ ಗೌರವ ಕಡಿಮೆಯಾಗುತ್ತಿರುವ ಹೊತ್ತಲ್ಲಿ ಸಾಧ್ವಿ ಆದರ್ಶದ ಮೇರು ಪರ್ವತವಾಗಿ ನಿಲ್ಲುತ್ತಾರೆ. ಆಕೆ ಏರ್​ಕೂಲರ್ ಸಿಗಲಿಲ್ಲವೆಂದು ಕೂಗಾಡುವ ಜಾಯಮಾನದವರಲ್ಲ. ರಾಜಕಾರಣಿಗಳೆದುರು ತಗ್ಗಿ ಬಗ್ಗಿ ನಡೆದು ಕೈಚಾಚಿ ನಿಲ್ಲುವಂತಹ ವ್ಯಕ್ತಿತ್ವದವರಂತೂ ಅಲ್ಲವೇ ಅಲ್ಲ. ಆಕೆ ಹಿಂದೂಧರ್ಮವೇ ಮೂರ್ತಿಯಾಗಿ ನಿಂತ ಅಚಲ ಬಂಡೆ.

ಇಂದಿನ ದಿನಗಳಲ್ಲಿ ಹಿಂದೂಧರ್ಮಕ್ಕೆ ಆತಂಕವೆದುರಾಗಿರುವುದಂತೂ ಖಂಡಿತ ಹೌದು. ಆಳುವ ಸರ್ಕಾರಗಳು ಸಾಮಾಜಿಕ ಅಸಮಾನತೆಯನ್ನು ತೋರಿದಾಗ ಮನಸ್ಸು ಸಿಡಿದೇಳುವುದು ಸಹಜವೇ. ಹಿಂದೂ ಸಂಸ್ಥೆಗಳನ್ನು ಸರ್ಕಾರಗಳು ಹಿಡಿತದಲ್ಲಿಟ್ಟುಕೊಳ್ಳುವುದು, ಇತರ ಮತೀಯರನ್ನು ಅಲ್ಪಸಂಖ್ಯಾತರೆಂದು ಕರೆದು ಬಿಟ್ಟುಬಿಡುವುದು ಇದು ಸಾಮಾಜಿಕ ತುಮುಲವನ್ನು ಸೃಷ್ಟಿಸಿದೆ. ಸಂಧ್ಯಾ ಜೈನ್ ನಾಲ್ಕು ವರ್ಷಗಳ ಹಿಂದೆ ಬರೆದ ಲೇಖನವೊಂದರಲ್ಲಿ, ‘ತಮಿಳುನಾಡಿನ ಹಿಂದೂ ಎಂಡೋಮೆಂಟ್ ವಿಭಾಗವು 36,425 ಮಂದಿರಗಳನ್ನು, 56 ಮಠಗಳನ್ನು, ಅವುಗಳಿಗೆ ಸೇರಿದ 47 ಮಂದಿರಗಳನ್ನು, 1721 ದತ್ತಿ ಸಂಸ್ಥೆಗಳನ್ನು ಮತ್ತು 189 ಟ್ರಸ್ಟ್​ಗಳನ್ನು ತನ್ನ ಹಿಡಿತದಲ್ಲಿರಿಸಿಕೊಂಡಿದೆ’ ಎಂದಿದ್ದರು. ಈ ಹಿಡಿತ ಅದೆಷ್ಟು ಬಲವಾಗಿದೆಯೆಂದರೆ ಧಾರ್ವಿುಕ ಚಟುವಟಿಕೆ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವವರು ಹಿಂದೂಗಳೆನಿಸಿಕೊಂಡರೆ ಸರ್ಕಾರ ಅವರ ಕುತ್ತಿಗೆಯ ಮೇಲೆ ಸದಾ ಕತ್ತಿಯನ್ನಿಟ್ಟುಕೊಂಡೇ ಕೂತಿರುತ್ತದೆ.

ಆರ್​ಟಿಇ (ಶಿಕ್ಷಣದ ಹಕ್ಕು) ಕಾನೂನುಗಳು ಬಹುಸಂಖ್ಯಾತ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುವಂಥವು, ಅಲ್ಪಸಂಖ್ಯಾತರಿಗೆ ಅಲ್ಲೂ ವಿನಾಯಿತಿ. ಇದರರ್ಥ ಹಿಂದೂಗಳಾಗಿರುವುದರಿಂದ ನಾವು ಹೆಚ್ಚಿನ ತೆರಿಗೆ ಕಟ್ಟಬೇಕೆಂಬುದೇ ಹೊರತು ಮತ್ತೇನೂ ಇಲ್ಲ. ಮುಸಲ್ಮಾನ ರಾಜರುಗಳ ಕಾಲಕ್ಕೆ ಇಂತಹ ತೆರಿಗೆಯನ್ನು ಜೇಸಿಯಾ ಎಂದು ಕರೆಯಲಾಗುತ್ತಿತ್ತು. ನಾವಿಂದಿಗೂ ಅದರಿಂದ ಮುಕ್ತವಾಗಿಲ್ಲ. ಇದನ್ನು ಪ್ರತಿಭಟಿಸಿಯೇ ರಾಮಕೃಷ್ಣ ಮಠ-ಮಿಷನ್​ಗಳು ಬಲು ಹಿಂದೆಯೇ ತಮ್ಮನ್ನು ತಾವು ಹಿಂದೂಗಳಲ್ಲ ಎಂದು ಘೊಷಿಸಿಕೊಂಡುಬಿಟ್ಟಿದ್ದವು.

ಅದೊಂದು ಬಲು ರೋಚಕವಾದ ಕಥನ. ಬಾಂಗ್ಲಾದಿಂದ ಓಡಿಬಂದ ನಿರಾಶ್ರಿತರಿಗಾಗಿ ಬಂಗಾಳದ ರಾಹ್ರಾದಲ್ಲಿ ಸರ್ಕಾರದ ವಿನಂತಿಯ ಮೇರೆಗೆ ರಾಮಕೃಷ್ಣ ಮಿಷನ್ ವಿದ್ಯಾಸಂಸ್ಥೆಗಳನ್ನು ನಿರ್ವಿುಸಿತ್ತು. ಸಹಜವಾಗಿಯೇ ಎಲ್ಲ ಸಹಕಾರವನ್ನೂ ಸರ್ಕಾರವೇ ನೀಡುತ್ತಿತ್ತು. ಆದರೆ ಆಡಳಿತ ವ್ಯವಸ್ಥೆಯ ಪೂರ್ಣ ಅಧಿಕಾರ ರಾಮಕೃಷ್ಣ ಮಿಷನ್ ಕೈಯಲ್ಲೇ ಇತ್ತು. ಹಿಂದೂಗಳ ಕೈಕೆಳಗೆ ದುಡಿಯುವುದನ್ನು ಸಹಿಸದ ಕಮ್ಯುನಿಸ್ಟ್ ಪಡೆಗಳು ಕಿರಿಕಿರಿ ಮಾಡಲಾರಂಭಿಸಿದವು. 1980 ರಲ್ಲಿ ಸ್ವಾಮಿ ಶಿವಮಯಾನಂದರನ್ನು ಮಿಷನ್ ಪ್ರಾಂಶುಪಾಲರಾಗಿ ಕಳಿಸಿಕೊಟ್ಟಾಗ ಪ್ರತಿಭಟಿಸಿದ ಎಡಪಕ್ಷ ಬೆಂಬಲಿತ ಅಧ್ಯಾಪಕರು ಶಾಲೆಯ ಆಡಳಿತವನ್ನು ತಮ್ಮ ಕೈಗೇ ತೆಗೆದುಕೊಂಡರು. ಕಲ್ಕತ್ತಾ ವಿಶ್ವವಿದ್ಯಾಲಯ ಇಡಿಯ ಆಡಳಿತವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಹುನ್ನಾರವುಳ್ಳ ನೋಟೀಸ್​ಗಳನ್ನು ಕಳಿಸಿತು. ಈ ವಿಷ ಎಷ್ಟು ಬೇಗನೇ ಎಲ್ಲೆಡೆ ಹಬ್ಬಿತೆಂದರೆ ರಾಮಕೃಷ್ಣ ಮಿಷನ್ ಸಂಚಾಲಿತ ಅನೇಕ ಶಾಲೆಗಳು ತಮಗೂ ಪ್ರತ್ಯೇಕ ಗವರ್ನಿಂಗ್ ಕೌನ್ಸಿಲ್ ಬೇಕೆಂದು ಪಟ್ಟು ಹಿಡಿದವು. ಎಡಪಂಥೀಯರ ಈ ಷಡ್ಯಂತ್ರದಿಂದ ಹೊರಬರಲು ಮಿಷನ್​ಗೆ ಇದ್ದಿದ್ದು ಒಂದೇ ಮಾರ್ಗ. ತಮ್ಮನ್ನು ತಾವು ಧಾರ್ವಿುಕ ಅಲ್ಪಸಂಖ್ಯಾತರೆಂದು ಕರೆದುಕೊಳ್ಳುವುದು ಮಾತ್ರ! ಅಲ್ಲಿನ ಹೈಕೋರ್ಟು ಇದನ್ನು ಒಪ್ಪಿ ಸರ್ಕಾರ ಈ ಶಾಲೆಗಳ ಮೇಲೆ ಕಣ್ಣುಹಾಕುವಂತಿಲ್ಲವೆಂದು ಎಚ್ಚರಿಕೆ ಕೊಟ್ಟಿತು. ತೂಗುಕತ್ತಿಯಿಂದ ಮಿಷನ್ ಪಾರಾಯ್ತು ನಿಜ. ಆದರೆ ದೇಶಾದ್ಯಂತ ಅಲ್ಲೋಲ-ಕಲ್ಲೋಲವೆದ್ದಿತು.

ಎಡಪಂಥೀಯರ ಆಳ್ವಿಕೆಯ ಉಸಿರುಗಟ್ಟಿಸುವ ವಾತಾವರಣದಲ್ಲಿ ತಮಗಿದ್ದ ಅನಿವಾರ್ಯತೆಯನ್ನು ಸಮಾಜದ ಮುಂದೆ ಬಿಚ್ಚಿಟ್ಟ ಮಿಷನ್ ಕೇಸಿನಿಂದ ಒಂದು ಹೆಜ್ಜೆ ಹಿಂದೆ ಸರಿಯಿತಾದರೂ ಸರ್ಕಾರದ ವಿರುದ್ಧ ಮಾತ್ರ ಇದೇ ಆಧಾರದ ಮೇಲೆ ಬಡಿದಾಟ ಮುಂದುವರಿಸಿತು. 1995ರಲ್ಲಿ ಸುಪ್ರೀಂಕೋರ್ಟು ಈ ಇಡೀ ಪ್ರಕರಣಕ್ಕೆ ತೆರೆ ಎಳೆದು ಮಿಷನ್ ಅನ್ನು ಹಿಂದೂವೇ ಎಂದು ಘೊಷಿಸಿತು. ಅಷ್ಟರವೇಳೆಗೆ ಬಂಗಾಳದಲ್ಲಿ ಎಡಪಂಥೀಯರ ಗೋಣು ಸಾಕಷ್ಟು ಮುರಿದಿದ್ದರಿಂದ ಅವರು ಇದರ ವಿರುದ್ಧ ಗಲಾಟೆ ಮಾಡಹೋಗದೇ ಸುಮ್ಮನಾಗಿಬಿಟ್ಟಿದ್ದರು. ಇತ್ತ ಮಿಷನ್ ಕೂಡ ತೀರ್ಪಿನ ಕುರಿತಂತೆ ತಲೆಕೆಡಿಸಿಕೊಳ್ಳದೆ ಶಾಂತವಾಯ್ತು.

ಚರ್ಚೆ ನಡೆಯಬೇಕಿರೋದು ಪ್ರತ್ಯೇಕ ಧರ್ಮದ್ದಲ್ಲ. ಬದಲಿಗೆ ಅಲ್ಪಸಂಖ್ಯಾತ ಸ್ಥಾನಮಾನದ್ದು. ಹಿಂದುವಾಗಿರುವುದಕ್ಕೆ ನಮ್ಮದೇ ರಾಷ್ಟ್ರದಲ್ಲಿ ನಾವೇ ಹೆಚ್ಚಿನ ಬೆಲೆ ತೆರಬೇಕಾಗಿರುವುದು ಖಂಡಿತ ಸಹಿಸಲಸಾಧ್ಯ. ಈ ವಿಚಾರದಲ್ಲಿ ಲಿಂಗಾಯತ ತರುಣರಷ್ಟೇ ಅಲ್ಲ, ಎಲ್ಲರೂ ಜಾಗೃತರಾಗಬೇಕಾದ ಹೊತ್ತು ಬಂದಿದೆ. ಮತ-ಮತಗಳ ತಾಕಲಾಟದ ಮೂಲಕ ನಮ್ಮನ್ನು ದಾರಿ ತಪ್ಪಿಸುತ್ತಿರುವ ರಾಜಕಾರಣಿಗಳಷ್ಟೇ ಅಲ್ಲ ಸಂತರಿಂದಲೂ ನಾವೀಗ ದೂರವಿರಬೇಕಿದೆ. ಧರ್ಮ ವಿಭಜನೆಯ ಬದಲು ಅಲ್ಪಸಂಖ್ಯಾತರೆಂದು ದೇಶದ ಸತ್ವವನ್ನೆಲ್ಲ ಹೀರುತ್ತಿರುವವರಿಂದ ಸವಲತ್ತುಗಳನ್ನು ಮರಳಿಪಡೆದು ಸಾಮಾನ್ಯರಿಗೆ ಹಂಚಬೇಕಿದೆ. ಸಾಮಾಜಿಕ ಸಮಾನತೆಯೆಂದರೆ ಇದೇ ತಾನೇ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *