More

    ವಿಶ್ವಗುರು ಅಂಕಣ|ವಿವೇಕಾನಂದರ ನೆನಪಿನಲ್ಲಿ ವೀರ್​ಭಾರತ್!

    ಚಾಮರಾಜನಗರ ಜಿಲ್ಲೆಯ ಕೆಲವು ಹಳ್ಳಿಗಳಲ್ಲಂತೂ ಪಕ್ಕದ ಹಳ್ಳಿಯ ಬೇರೆ ಜಾತಿಯವರನ್ನು ಬರಲೂ ಬಿಡದಷ್ಟು ಜಾತಿಯ ಸಂಘರ್ಷವಿದೆ. ಈ ಕುರಿತಂತೆ ಆಯಾಹಳ್ಳಿಗಳಲ್ಲೇ ಚರ್ಚೆ ಮಾಡಿದ್ದೇವೆ. ಹಳಬರನ್ನು ಬಿಟ್ಟು ಹೊಸ ತರುಣರು ಇದಕ್ಕೊಂದು ಪರಿಹಾರ ಹುಡುಕಬಲ್ಲರೇ ಎಂದೂ ಕೂಡ ಕೇಳಿಕೊಂಡಿದ್ದೇವೆ.

    ವಿವೇಕಾನಂದರ ಮತ್ತೊಂದು ಜಯಂತಿ ಮುಗಿದೇಹೋಯ್ತು. ಪ್ರತೀಬಾರಿಯೂ ವಿವೇಕಾನಂದರ ಜಯಂತಿ ಆಚರಿಸುವಾಗ ನಮ್ಮಲ್ಲೊಂದು ಹೊಸ ತಾರುಣ್ಯದ ಚೈತನ್ಯ ಉಕ್ಕುತ್ತದೆ. 40ನೇ ವರ್ಷದ ಹುಟ್ಟುಹಬ್ಬವನ್ನೂ ಕಾಣದ ಒಬ್ಬ ಸಂತ ಜನಮಾನಸವನ್ನು ಇಷ್ಟು ಆಕರ್ಷಕವಾಗಿ ತಟ್ಟುವುದು ಸಾಧ್ಯವೇ ಎಂಬುದನ್ನು ಯೋಚಿಸುತ್ತಿರುತ್ತೇನೆ! ಅವರ ಬದುಕು, ಬರಹ, ಮಾತು, ಪತ್ರ ಎಲ್ಲವೂ ಚೇತೋಹಾರಿಯೇ. ಹೊಸದರ ಕಡೆಗೆ ಪ್ರೋತ್ಸಾಹಿಸುವಂಥದ್ದೇ. ಹಳೆಯ ಮೌಢ್ಯ, ಕಂದಾಚಾರಗಳನ್ನೆಲ್ಲ ಕಿತ್ತೊಗೆದು ವೈಚಾರಿಕ ಜಗತ್ತಿಗೆ ನಮ್ಮನ್ನೆಳದೊಯ್ಯಬಲ್ಲ ಅಪರೂಪದ ಶಕ್ತಿಯದು. ಅವರನ್ನು ಓದಿದಷ್ಟೂ ವಿಸ್ತಾರವೆನಿಸುತ್ತಾರೆ. ಅರಿಯಲು ಪ್ರಯತ್ನ ಪಟ್ಟಷ್ಟೂ ಆಳವೆನಿಸುತ್ತಾರೆ. ಯಾವಾಗ ಅವರನ್ನು ಹೊಕ್ಕು ಬಂದರೂ ಕಪ್ಪೆಚಿಪ್ಪಿನೊಳಗೆ ಅಡಗಿರುವ ಅವರ ವಿಚಾರಧಾರೆಯ ಮುತ್ತೊಂದು ಸಿಗುವುದು ಪಕ್ಕಾ. ಅವರ ಪ್ರೇರಣೆ ಇಂದಿಗೂ ಅಲೆ-ಅಲೆಯಾಗಿ ಸಮಾಜವನ್ನು ವ್ಯಾಪಿಸಿಕೊಳ್ಳುತ್ತಿದೆ. ಇಷ್ಟನ್ನೂ ಈಗೇಕೆ ಹೇಳಬೇಕಾಯಿತೆಂದರೆ ಅವರ ಜಯಂತಿಯೂ ಸೇರಿಕೊಂಡಂತೆ ಮೂರು ದಿನಗಳ ಕಾಲ ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ ‘ವೀರ್​ಭಾರತ್’ ಎನ್ನುವ ಹೆಸರಿನಲ್ಲಿ ಪಾದಯಾತ್ರೆಯನ್ನು ಹಮ್ಮಿಕೊಂಡಿತ್ತು. ಪ್ರತಿ ಜಿಲ್ಲೆಯ ಕಾರ್ಯಕರ್ತರು ತಂತಮ್ಮ ಜಿಲ್ಲೆಗಳ ಹಳ್ಳಿಗಳನ್ನೇ ಪಾದಯಾತ್ರೆಯ ಮೂಲಕ ಜೋಡಿಸಬೇಕಿತ್ತು. ಈ ಹಿನ್ನೆಲೆಯಲ್ಲಿಯೇ ನಾನು ಚಾಮರಾಜನಗರವನ್ನು ಆರಿಸಿಕೊಂಡಿದ್ದೆ. ಅನೇಕರ ದೃಷ್ಟಿಯಿಂದ ಹಿಂದುಳಿದ ಜಿಲ್ಲೆಯೆಂದು ಕರೆಸಿಕೊಳ್ಳಲ್ಪಡುವ ಚಾಮರಾಜನಗರ ನಿಜಕ್ಕೂ ಹೇಗಿದೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಒಂದು ಜಿಲ್ಲೆ, ರಾಜ್ಯ, ದೇಶಗಳನ್ನು ನೋಡಲು ಅಲ್ಲಿನ ಪಟ್ಟಣಗಳನ್ನು ನೋಡಿದರಾಗಲಿಲ್ಲ. ಹಳ್ಳಿಗಳ ಜನಜೀವನದ ದರ್ಶನ ಮಾಡಿಕೊಳ್ಳುವುದು ಅಗತ್ಯ ಎಂಬುದನ್ನು ನಂಬಿದವನು ನಾನು. ಹೀಗಾಗಿಯೇ ಚಾಮರಾಜನಗರ ತಾಲೂಕಿಗೆ ಸೇರಿದ ಹಳ್ಳಿಗಳನ್ನು ಮುಟ್ಟುವ ಪ್ರಯತ್ನ ಮಾಡಿದ್ದು. ಈ ಒಟ್ಟಾರೆ ಯಾತ್ರೆಯ ಉದ್ದೇಶವೇ ಹಳ್ಳಿಗಳ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತ, ಸಾಧ್ಯವಾದರೆ ತರುಣರು ಆ ಸಮಸ್ಯೆಗಳಿಗೆ ಪರಿಹಾರವನ್ನು ಕೊಡುವ ದಿಕ್ಕಿನಲ್ಲಿ ಆಲೋಚಿಸುವುದಾಗಿತ್ತು.

    ನಮ್ಮ ಹಳ್ಳಿಗಳಲ್ಲಿ ಇಂದು ಕಾಡುತ್ತಿರುವ ಬಲುದೊಡ್ಡ ಸಮಸ್ಯೆಯೇ ವ್ಯಸನಕ್ಕೆ ದಾಸರಾದ ತರುಣರು! ಬೀಡಿ, ಸಿಗರೇಟುಗಳಿಂದ ಹಿಡಿದು ಸಂಜೆಯಾದೊಡನೆ ಹೆಂಡದಂಗಡಿಗೆ ಧಾವಿಸುವವರ ಸಂಖ್ಯೆ ಕಡಿಮೆ ಏನೂ ಇಲ್ಲ. ಇವೆಲ್ಲವನ್ನೂ ಮೀರಿಸಿದ್ದು ಗುಟ್ಕಾದ ಹಾವಳಿ. ಇವುಗಳಲ್ಲಿ ಒಂದೊಂದೂ ಕೂಡ ಯೌವ್ವನವನ್ನು ನಾಶಮಾಡಲು ಬೆಟ್ಟದಷ್ಟು ಕೊಡುಗೆಯನ್ನು ನೀಡುತ್ತವೆ. ಇತ್ತೀಚೆಗೆ ಇವೂ ಸಾಲದೆಂಬಂತೆ ಕೈಯ್ಯಲ್ಲಿ ತರುಣರು ಮೊಬೈಲ್ ಹಿಡಿಯಲಾರಂಭಿಸಿದ್ದಾರೆ. ಫೇಸ್​ಬುಕ್, ವಾಟ್ಸಪ್​ಗಳಲ್ಲಿ, ಟಿಕ್​ಟಾಕ್​ಗಳಲ್ಲಿ ಅವರು ಕಳೆಯುವ ಸಮಯ ಯೌವ್ವನದ ಹೊತ್ತನ್ನು ಎಂದೂ ಮರಳಿ ಕೊಡುವುದಿಲ್ಲ. ದಾರಿಯುದ್ದಕ್ಕೂ ಈ ಕುರಿತಂತೆ ಜಾಗೃತಿ ಮೂಡಿಸುತ್ತ ವ್ಯಸನಮುಕ್ತ ಹಳ್ಳಿಗಳನ್ನು ಮಾಡಬಹುದಾ? ಎಂದು ತರುಣರನ್ನು ಪ್ರಶ್ನಿಸುತ್ತಿದ್ದೆವು. ಇಂತಹ ಚಟಗಳಿಂದ ಪೊಳ್ಳಾದ ದೇಹ ಹೊಂದಿರುವ ತರುಣರು ವಿವೇಕಾನಂದರ ಕನಸಿನ ಭಾರತ ಕಟ್ಟಬಲ್ಲರೇನು?! ಸ್ವಾಮೀಜಿ ಆಶಿಷ್ಠ, ಬಲಿಷ್ಠ ದೃಢಿಷ್ಠ ತರುಣರು ಬೇಕೆಂದು ಪದೇಪದೆ ಕೇಳುತ್ತಿದ್ದರು. ದುರದೃಷ್ಟಕರ ಸಂಗತಿ ಎಂದರೆ ಅಂತಹ ತರುಣರನ್ನು ಹುಡುಕುವುದೇ ಕಠಿಣವೆನಿಸಲಾರಂಭಿಸಿದೆ. ಹೀಗಾಗಿಯೇ ಪಾದಯಾತ್ರೆಯ ಪಂಥಾಹ್ವಾನ. ಹೆಚ್ಚು ಕಡಿಮೆ ಪ್ರತಿ ದಿನ 30 ಕಿಲೋಮೀಟರ್​ಗಳಷ್ಟು ನಡೆಯುತ್ತ, 10-15 ಹಳ್ಳಿಗಳನ್ನು ಭೇಟಿ ಮಾಡುತ್ತ, ಅಲ್ಲೆಲ್ಲ ಕಾರ್ಯಕ್ರಮಗಳನ್ನು ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೆವು. ಆದರೆ ಈ ಯಾತ್ರೆ ಬರಿ ವ್ಯಸನಮುಕ್ತ ಸಮಾಜದ ನಿರ್ವಣಕ್ಕಲ್ಲ, ಬದಲಿಗೆ ವ್ಯಾಜ್ಯಮುಕ್ತ ಹಳ್ಳಿಗಳ ನಿರ್ವಣದ ಕುರಿತಂತೆಯೂ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಿತು. ಹಳ್ಳಿಗಳ ಸಣ್ಣ-ಪುಟ್ಟ ಜಗಳಗಳನ್ನು ಇತ್ಯರ್ಥ ಮಾಡಿಸಲು ಇಂದು ಜಿಲ್ಲಾಕೋರ್ಟುಗಳಿಗೆ ಧಾವಿಸಲಾಗುತ್ತಿದೆ. ಹೈಕೋರ್ಟ್, ಸುಪ್ರೀಂಕೋರ್ಟ್​ಗಳ ಕದತಟ್ಟಿ ಲಕ್ಷಾಂತರ ರೂಪಾಯಿಗಳ ಖರ್ಚು ಮಾಡಿಕೊಂಡು ನ್ಯಾಯ ಸಿಗದೆ ಪರಿತಪಿಸುವವರೂ ಇದ್ದಾರೆ. ಈ ನಡುವೆಯೇ ಚಾಮರಾಜನಗರದ ಬಸವನಪುರ ಎಂಬ ಹಳ್ಳಿಯಲ್ಲಿ ಜನ ನ್ಯಾಯಾಲಯದ ಮೆಟ್ಟಿಲೇ ಹತ್ತುವುದಿಲ್ಲ ಎಂಬುದನ್ನು ಕೇಳಿದಾಗ ಅಚ್ಚರಿಯಾಯ್ತು! ಊರಿನ ಭಿನ್ನ-ಭಿನ್ನ ಮತಗಳ ನಾಯಕರನ್ನು ಆಯಾ ಮತದವರೇ ಆರಿಸಿ ನ್ಯಾಯ ನಿರ್ಣಯ ಮಾಡಲು ಕೂರಿಸುತ್ತಾರೆ. ಯಾವ ವ್ಯಾಜ್ಯಗಳು ಅವರೆದುರಿಗೆ ಬಂದರೂ ಸಾಕ್ಷಿಗಳನ್ನು ವಿಚಾರಣೆ ಮಾಡಿ ದೂರುದಾರರನ್ನು ಹತ್ತಿರದಿಂದ ನೋಡಿರುವ ಅನುಭವದ ಆಧಾರದ ಮೇಲೆ ಅವರು ತೀರ್ಪನ್ನು ಕೊಡುತ್ತಾರೆ. ಈ ತೀರ್ಪನ್ನು ನ್ಯಾಯ ಕೇಳುವವರು ಗೌರವಿಸಬೇಕು. ಹಾಗೆ ಗೌರವಿಸದೆ ನ್ಯಾಯಾಲಯಕ್ಕೆ ಹೋದರೆ ಇಲ್ಲಿ ದಂಡಕಟ್ಟಿಯೇ ಹೋಗಬೇಕೆಂಬ ನಿಯಮ ಅವರೊಳಗಿದೆ. ಆ ಊರಿನಲ್ಲಿ ಚುನಾವಣೆಗಳ ಹೊತ್ತಲ್ಲಿ ಜನ ಪಕ್ಷಗಳಾಗಿ ಒಡೆಯುವುದಿಲ್ಲ. ಎಲ್ಲ ಪಕ್ಷದವರೂ ಊರಿಗೆ ಬಂದಾಗ ಸಮುದಾಯಭವನದಲ್ಲಿ ಅವರಿಗೆ ಸನ್ಮಾನ ಮಾಡಲಾಗುತ್ತದೆ. ಯಾರು ಗೆದ್ದರೂ ಹಳ್ಳಿಯ ಜನ ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಾರೆ. ಅಕ್ಕ-ಪಕ್ಕದ ಅನೇಕ ಹಳ್ಳಿಗಳು ಹಾಗೆಯೇ ಇವೆ. ಇದು ನಿಜಕ್ಕೂ ಚೇತೋಹಾರಿಯಾದ ಪ್ರಸಂಗ. ಚಾಮರಾಜನಗರವೆಂದೊಡನೆ ಏನನ್ನೋ ಕಲ್ಪನೆ ಕಟ್ಟಿಕೊಳ್ಳುವ ಬೆಂಗಳೂರಿಗರು ಒಮ್ಮೆ ಈ ಕುರಿತಂತೆ ಆಲೋಚಿಸಲೇಬೇಕು!

    ಹಳ್ಳಿಗರೊಂದಿಗೆ ರ್ಚಚಿಸಲು ಮತಾಂತರವೆಂಬುದೂ ಒಂದು ವಿಚಾರವಾಗಿತ್ತು. ನಾವು ಸಾಗಿಬಂದ ಹಳ್ಳಿಯೊಂದರಲ್ಲಿ ಇರುವುದು ಎರಡೇ ಜಾತಿಯ ಜನ. ಹಾಗಂತ ಅಲ್ಲಿನ ಹಿರಿಯರು ಹೇಳಿದರು. ನನ್ನ ಆಸಕ್ತಿ ಕೆರಳಿ ಯಾರೆಂದು ಕೇಳಿದರೆ 78 ಪ್ರತಿಶತದಷ್ಟು ದಲಿತರು ಉಳಿದ 22 ಪ್ರತಿಶತದಷ್ಟು ಕ್ರಿಶ್ಚಿಯನ್ನರು ಎಂದುಬಿಟ್ಟರು! ಒಂದು ಸಾವಿರದಷ್ಟು ಜನಸಂಖ್ಯೆ ಇರುವ ಆ ಹಳ್ಳಿಯಲ್ಲಿ ಕ್ಯಾಥೋಲಿಕರ ಮತ್ತು ಪೊ›ಟೆಸ್ಟೆಂಟರ ಎರಡು ಚರ್ಚುಗಳಿವೆ. ಮತಾಂತರಗೊಂಡ ತಾಯಿಯೊಬ್ಬರನ್ನು ಅದೇಕೆ ಹೀಗೆ ಎಂದು ಕೇಳಿದ್ದಕ್ಕೆ, ಆಕೆ ಏನೂ ಮಾತನಾಡದೆ ಸುಮ್ಮನಾಗಿಬಿಟ್ಟರು. ಚೆನ್ನಪ್ಪನಪುರದಲ್ಲಿ ಮತಾಂತರಗೊಂಡ ಮನೆಯೊಂದಕ್ಕೆ ಹೋಗಿ ಮತಾಂತರವಾದದ್ದೇಕೆಂದು ಕೇಳಿದ್ದಕ್ಕೆ, ಆಕೆ ಕೊಟ್ಟ ಉತ್ತರವೇ ‘ಅಲ್ಲಿ ಒಬ್ಬನೇ ದೇವರು, ಇಲ್ಲಿ ನೂರಾರು’ ಅಂತ. ‘ನಿಮ್ಮ ಮನೆದೇವರೂ ಒಬ್ಬನೇ ಆಗಿದ್ದಾನಲ್ಲವೇ?’ ಎಂದರೆ ಆಕೆಯ ಬಳಿ ಉತ್ತರವಿಲ್ಲ. ಆಕೆಯ ಯಜನಮಾನರು ಕ್ರಿಶ್ಚಿಯನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಸತ್ಯವನ್ನು ಆಕೆ ತಡವಾಗಿ ಬಾಯ್ಬಿಟ್ಟರು. ‘ಸುತ್ತೂರು ಶ್ರೀಗಳು ನಡೆಸುವ ಸಂಸ್ಥೆಗಳಲ್ಲಿರುವಂತಹ ಮುಸಲ್ಮಾನರು, ಕ್ರಿಶ್ಚಿಯನ್ನರನ್ನು ಹಿಂದೂಗಳಾಗಿ ಪರಿವರ್ತಿಸುವುದಿಲ್ಲವಲ್ಲ; ಮತ್ತೆ ಕ್ರಿಶ್ಚಿಯನ್ನರು ಮಾತ್ರ ಹಾಗೇಕೆ ಮಾಡಬೇಕು?’ ಎಂದು ನಾವು ಹಾಕಿದ ಪ್ರಶ್ನೆಗೆ ಆಕೆ ಜಾಣತನದಿಂದ ನುಣುಚಿಕೊಂಡಳು. ಕೊನೆಗೆ ‘ಮಾತೃಧರ್ಮಕ್ಕೆ ಮರಳುವ ಮನಸ್ಸಿದೆಯಾ?’ ಎಂಬ ಪ್ರಶ್ನೆಗೆ ಆಕೆ ಹೇಳಿದ್ದೇನು ಗೊತ್ತೇ? ‘ನಾವೆಲ್ಲ ಬಂದುಬಿಟ್ಟರೆ ರ್ಚಚಿಗೆ ಬೀಗ ಹಾಕಬೇಕಾಗುತ್ತಷ್ಟೇ’ ಅಂತ. ಅಂದರೆ ರ್ಚಚಿಗೆ ಬೀಗಹಾಕುವುದನ್ನು ತಡೆಯಬೇಕೆಂದೇ ಅವರು ಅನಿವಾರ್ಯವಾಗಿ ಕ್ರಿಶ್ಚಿಯನ್ನರಾಗಿ ಉಳಿದಿದ್ದಾರೆ. ಎಂತಹ ವಿಪರ್ಯಾಸವಲ್ಲವೇ?!

    ಹಾಗಂತ ಮತಾಂತರಕ್ಕೆ ಇದೊಂದೇ ಕಾರಣವಲ್ಲ. ಚಾಮರಾಜನಗರದ ಹಳ್ಳಿಗಳು ಜಾತೀಯತೆಯ ಉತ್ತುಂಗದಲ್ಲಿವೆ. ಕೆಲವು ಹಳ್ಳಿಗಳಲ್ಲಂತೂ ಪಕ್ಕದ ಹಳ್ಳಿಯ ಬೇರೆ ಜಾತಿಯವರನ್ನು ಬರಲೂ ಬಿಡದಷ್ಟು ಜಾತಿಯ ಸಂಘರ್ಷವಿದೆ. ಈ ಕುರಿತಂತೆ ಆಯಾ ಹಳ್ಳಿಗಳಲ್ಲೇ ಚರ್ಚೆ ಮಾಡಿದ್ದೇವೆ. ಹಳಬರನ್ನು ಬಿಟ್ಟು ಹೊಸ ತರುಣರು ಇದಕ್ಕೊಂದು ಪರಿಹಾರ ಹುಡುಕಬಲ್ಲರೇ ಎಂದೂ ಕೂಡ ಕೇಳಿಕೊಂಡಿದ್ದೇವೆ. ಶತಶತಮಾನಗಳ ರೂಢಿಯೊಂದು ಭಾಷಣಗಳಿಂದ ದೂರವಾಗಿಬಿಡಬಹುದು ಎಂದು ನಮಗೇನೂ ಅನಿಸುವುದಿಲ್ಲ. ಆದರೆ ಆಯಾ ಹಳ್ಳಿಗಳಲ್ಲಿ ನಮಗೆ ಸಿಕ್ಕಿರುವ ತರುಣರು ಈ ದಿಕ್ಕಿನಲ್ಲಿ ಹೊಸ ಪ್ರಯೋಗಕ್ಕೆ ನಾಂದಿ ಹಾಡಬಲ್ಲರೆಂಬ ವಿಶ್ವಾಸವಂತೂ ಇದೆ.

    ಈ ಹಳ್ಳಿಗಳಲ್ಲಿ ನಾವು ಪೌರತ್ವ ಕಾಯ್ದೆ ಕುರಿತಂತೆಯೂ ಚರ್ಚೆ ಮಾಡಿದ್ದೇವೆ. ಪುಂಡರೊಂದಷ್ಟು ಜನ ರಾಷ್ಟ್ರದ ಆಸ್ತಿಯನ್ನು ನಾಶಮಾಡಿದ್ದರ ಕುರಿತಂತೆ ಈ ಜನರಿಗೆ ಆಕ್ರೋಶವಿರುವುದನ್ನೂ ಗಮನಿಸಿದ್ದೇವೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಪೌರತ್ವ ಕಾಯ್ದೆಯನ್ನು ವಿರೋಧಿಸಿ, ಅದರಲ್ಲೂ ವಿರೋಧಕ್ಕೆ ಹಿಂಸಾಮಾರ್ಗವನ್ನು ಅನುಸರಿಸುವ ಮೂಲಕ ಮುಸಲ್ಮಾನರು ಈ ಹಳ್ಳಿಗಳಲ್ಲಿದ್ದ ಸದ್ಭಾವನೆಯನ್ನು ಕಳೆದುಕೊಂಡುಬಿಟ್ಟಿದ್ದಾರೆ.

    ಮೇಲ್ನೋಟಕ್ಕೆ ನೋಡುವುದಾದರೆ ಮೋದಿ ಪ್ರತಿಭಟನೆಗಳನ್ನು ನಿಯಂತ್ರಿಸಲಾಗಲಿಲ್ಲ ಎಂದೆನಿಸುವುದು ನಿಜವಾದರೂ ಹಳ್ಳಿಹಳ್ಳಿಗಳಲ್ಲಿ ಸರ್ಕಾರಿ ಆಸ್ತಿ-ಪಾಸ್ತಿಯನ್ನು ನಾಶಮಾಡಿದವರ ವಿರುದ್ಧ ಭುಗಿಲೆದ್ದಿರುವ ಆಕ್ರೋಶ ಕಣ್ಣಿಗೆ ರಾಚುವಂಥದ್ದು!

    ಒಟ್ಟಾರೆ ಮೂರು ದಿನಗಳಲ್ಲಿ ಸುಮಾರು ಸಾವಿರ ಕಾರ್ಯಕರ್ತರು 800ಕ್ಕೂ ಹೆಚ್ಚು ಹಳ್ಳಿಗಳನ್ನು ಭೇಟಿಮಾಡಿ ವಿವೇಕಾನಂದರ ವಿಚಾರ ಮುಟ್ಟಿಸಿದ್ದಾರೆ. ಅಂದಹಾಗೆ ಹಳ್ಳಿಯ ಉತ್ಥಾನದ ವಿಚಾರಕ್ಕೂ ವಿವೇಕಾನಂದರಿಗೂ ಸಂಬಂಧವೇನು ಎನ್ನುವುದನ್ನು ಹೇಳುವುದೇ ಮರೆತೆ. ವಾಸ್ತವವಾಗಿ ಕನ್ಯಾಕುಮಾರಿಯ ಬಂಡೆಯ ಮೇಲೆ ಕ್ರಿಶ್ಚಿಯನ್ನರು ನೆಟ್ಟಿದ್ದ ಶಿಲುಬೆಯನ್ನು ತೆರವುಗೊಳಿಸಿ ಅಲ್ಲೊಂದು ವಿವೇಕಾನಂದರ ಪ್ರತಿಮೆಯನ್ನು ನಿರ್ವಿುಸಿ ಮಂದಿರವನ್ನೂ ಕಟ್ಟಿದ ಏಕನಾಥ್ ರಾನಡೆ ಅವರ ಪ್ರಯತ್ನಕ್ಕೆ ಭರ್ತಿ 50 ವರ್ಷ ತುಂಬಿತು. ಇದು ನೆಪ ಹೌದಾದರೂ ತರುಣರೊಳಗಿನ ಸಾಮರ್ಥ್ಯ ಅನಾವರಣಗೊಳಿಸುವ ಒಂದು ಪ್ರಯತ್ನವೂ ಆಗಬೇಕಿತ್ತು. ಮೊದಲ ದಿನ 25 ರಿಂದ 30 ಕಿ.ಮೀ. ನಡೆದಾಗ ಮರುದಿನ ಮನಸ್ಸು ಏಳುವುದೇ ಬೇಡವೆನ್ನುತ್ತಿರುತ್ತದೆ. ಆದರೆ ಗುರಿಮುಟ್ಟುವವರೆಗೆ ನಡೆಯಲೇಬೇಕೆಂಬ ಹಂಬಲ, ಛಲ ಹೇಗೋ ಎಬ್ಬಿಸುತ್ತದೆ, ಧಾವಿಸುವಂತೆ ಮಾಡುತ್ತದೆ. ಮೂರನೆಯ ದಿನವೂ ಇದನ್ನು ಮಾಡುವವರು ನಿಜಕ್ಕೂ ನಿಶ್ಚಿತಮತಿಗಳೇ ಆಗಿರುತ್ತಾರೆ. ಈ ರೀತಿಯ ಕಬ್ಬಿಣದ ಮಾಂಸಖಂಡಗಳ, ಉಕ್ಕಿನ ನರಮಂಡಲಗಳ, ಮಿಂಚಿನ ಬುದ್ಧಿಶಕ್ತಿಯ, ಅಗಾಧ ಇಚ್ಛಾಶಕ್ತಿಯ ತರುಣರನ್ನು ತಾನೇ ವಿವೇಕಾನಂದರು ಬಯಸಿದ್ದು? ಅದರ ಸಣ್ಣದೊಂದು ಪರೀಕ್ಷೆ ಕೂಡ ಈ ಯಾತ್ರೆಯೊಂದಿಗೆ ಆಗಿಬಿಡುತ್ತದೆ. ಎಲ್ಲಕ್ಕಿಂತ ಹೆಚ್ಚು ಶಿಕ್ಷಿತ ತರುಣರು ಹಳ್ಳಿಹಳ್ಳಿಗೆ ಹೋಗಿ ಜನಜಾಗೃತಿಯಲ್ಲಿ ನಿರತರಾಗಬೇಕೆಂದು ವಿವೇಕಾನಂದರು ಹೇಳಿದ್ದರಲ್ಲ, ಆ ಮಾತು ಸಾರ್ಥಕವಾದಂತಾಗುತ್ತದೆ. ಸ್ವಾಮಿ ವಿವೇಕಾನಂದರು ಯಾವಾಗಲೂ ಹೇಳುತ್ತಿದ್ದರು, ‘ಕೃಷಿಕನ ದರಿದ್ರ ನಿವಾಸದಿಂದ ನೇಗಿಲನ್ನು ಹಿಡಿದು ನವಭಾರತ ಮೈದೋರಲಿ. ಬೆಸ್ತನ ಜೋಪಡಿ, ಚಮ್ಮಾರ, ಜಾಡಮಾಲಿಗಳ ಗುಡಿಸಲಿನಿಂದ ಅದು ಹೊರಹೊಮ್ಮಲಿ. ಮಳಿಗೆಯಿಂದ, ಕಾರ್ಖಾನೆಯಿಂದ, ಅಂಗಡಿಯಿಂದ, ಪರ್ವತ-ಕಾನನಗಳಿಂದ, ಕಂದರ-ವನಗಳಿಂದ ನವಭಾರತ ಮೂರ್ತಿ ರೂಪುಗೊಳ್ಳಲಿ’ ಎಂದು. ಅಂತಹ ಭಾರತ ಮತ್ತೊಮ್ಮೆ ಮೈದಳೆಯಬೇಕಾಗಿದೆ. ಮತ್ತದು ಹಳ್ಳಿಗಳ ಮೂಲಕವೇ ಆಗಬೇಕಾಗಿದೆ. ಹಾಗೆಂದೇ ನಡೆದದ್ದು ವೀರ್​ಭಾರತ್ ಪಾದಯಾತ್ರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts