ನಟ ಡಾ. ವಿಷ್ಣು ಕ್ಯಾಲೆಂಡರ್ ಬಿಡುಗಡೆ

ಬೆಂಗಳೂರು: ಡಾ.ವಿಷ್ಣು ಸೇನಾ ಸಮಿತಿ ಹೊಸ ವರ್ಷಕ್ಕೆ ವಿಷ್ಣು ಕ್ಯಾಲೆಂಡರ್ ಹೊರತಂದಿದೆ. 7 ವರ್ಷಗಳಿಂದ ಪ್ರತಿಬಾರಿ ಹೊಸ ಪರಿಕಲ್ಪನೆ ಮತ್ತು ವಿನ್ಯಾಸಗಳಿಂದ ಕ್ಯಾಲೆಂಡರ್ ಹೊರತರುತ್ತಿರುವ ಸೇನೆ ಈ ಬಾರಿ ‘ಕೋಟಿಗೊಬ್ಬ ಸಿಂಹಸ್ವರೂಪಿ ಡಾ. ವಿಷ್ಣುವರ್ಧನ’ ಎಂಬ ಪರಿಕಲ್ಪನೆಯಲ್ಲಿ ಆಕರ್ಷಕ ಕ್ಯಾಲೆಂಡರ್ ರೂಪಿಸಿದೆ. 14 ಪುಟಗಳ ವರ್ಣರಂಜಿತ ಕ್ಯಾಲೆಂಡರ್​ನಲ್ಲಿ ಹಲವು ವಿಶೇಷಗಳಿವೆ. ವಿಷ್ಣು ನಟಿಸಿದ್ದ ಚಿತ್ರಗಳಲ್ಲಿನ ಅದ್ಭುತ ಸನ್ನಿವೇಶಗಳಲ್ಲಿ ತೆಗೆದ ಭಾವಚಿತ್ರಗಳನ್ನು ಮುದ್ರಿಸಲಾಗಿದೆ. ಪ್ರತಿ ಪುಟದಲ್ಲೂ ವಿವಿಧ ಭಂಗಿಯಲ್ಲಿ ಕಾಣಿಸಿಕೊಳ್ಳುವ ವಿಷ್ಣುವಿನ ಬಣ್ಣ ಬಣ್ಣದ ಭಾವಚಿತ್ರಗಳು ಚಿತ್ರ ರಸಿಕರಿಗೆ ಮತ್ತೊಮ್ಮೆ ಆ ಚಿತ್ರಗಳನ್ನು ಮೆಲುಕು ಹಾಕುವಂತೆ ಮಾಡುತ್ತವೆ. ವೃತ್ತಿಪರ ಕ್ಯಾಲೆಂಡರ್​ನಂತೆ ರಜೆ ದಿನಗಳು, ರಾಹುಕಾಲ, ಗುಳಿಕಕಾಲ, ಅಮಾವಾಸ್ಯೆ, ಹುಣ್ಣಿಮೆ ಒಳಗೊಂಡಿದೆ. ವಿಷ್ಣು ಬದುಕಿದ್ದಾಗ ಹಂಚಿಕೊಂಡ ಅನುಭವಗಳು ಹಾಗೂ ಡಾ.ವಿಷ್ಣುವರ್ಧನ್ ಸಿಂಹಸ್ವರೂಪಿ ಹೇಗೆ ಎಂಬುದರ ಬಗ್ಗೆ ಕೆ.ಕಲ್ಯಾಣ್, ಶ್ರೀವತ್ಸ, ನಾಗೇಂದ್ರ ಪ್ರಸಾದ್ ಸೇರಿ ಚಿತ್ರರಂಗ ಮತ್ತು ಸಂಗೀತ ಲೋಕದ ಗಣ್ಯರ ಮಾತುಗಳಿವೆ. ಇಷ್ಟೆಲ್ಲ ಮಾಹಿತಿ ಒಳಗೊಂಡ ಕ್ಯಾಲೆಂಡರ್​ನ ಮೌಲ್ಯ ನೂರು ರೂ. ದಾಟುತ್ತದೆ. ಆದರೆ, ಪ್ರತಿ ಮನೆಯಲ್ಲೂ ವಿಷ್ಣು ರಾಜಾಜಿಸಬೇಕು ಮತ್ತು ಅವರ ನೆನಪು ಚಿರಾಯುವಾಗಿರಬೇಕು ಎಂಬ ಕಾರಣಕ್ಕೆ ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ಮತ್ತು ಸ್ನೇಹಿತರು 50 ರೂ. ಗಳಿಗೆ ನೀಡುತ್ತಿದ್ದಾರೆ. ಈ ಆಕರ್ಷಕ ಕ್ಯಾಲೆಂಡರ್ ಎಲ್ಲ ಜಿಲ್ಲೆ ಮತ್ತು ತಾಲೂಕುಗಳ ಬಸ್ ನಿಲ್ದಾಣಗಳ ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿದೆ.