PHOTOS: ಸಾಹಸಸಿಂಹ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿ ಅಭಿಮಾನಿಯಿಂದ ಜನಜಾಗೃತಿ ರಥಯಾತ್ರೆ

ಹಾವೇರಿ: ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರ ಇದೀಗ ರಾಜ್ಯದೆಲ್ಲೆಡೆ ತಾರಕಕ್ಕೇರಿದೆ. ಈ ಹೊತ್ತಿನಲ್ಲಿ ಹಾವೇರಿ ಜಿಲ್ಲೆಯ ಅವರ ಅಭಿಮಾನಿಯೊಬ್ಬ ವಿಷ್ಣುರಂತೆ ವೇಷ-ಭೂಷಣ ಧರಿಸಿ, ಸ್ಮಾರಕದ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದಾರೆ.

ರಾಣೆಬೆನ್ನೂರು ತಾಲೂಕಿನ ಐರಣಿ ಗ್ರಾಮದ ನಿವಾಸಿಯಾಗಿರುವ ನಾಗಬಸಯ್ಯ ಮಳಿಮಠ, ಸಾಹಸಸಿಂಹ ವಿಷ್ಣುವರ್ಧನ್ ಅವರ ಪಕ್ಕಾ ಅಭಿಮಾನಿ. ವಿಷ್ಣು ಸ್ಮಾರಕ ನಿರ್ಮಾಣ ಗೊಂದಲಕ್ಕೆ ಬೇಸರ ವ್ಯಕ್ತಪಡಿಸಿ, ಅವರ ಸ್ಮಾರಕ ಸೂಕ್ತ ಸ್ಥಳದಲ್ಲೇ ಆಗಲಿ. ಆದರೆ ಅವರ ಸಮಾಧಿ ಮಾತ್ರ ಅಭಿಮಾನ್ ಸ್ಟುಡಿಯೋದಲ್ಲೇ ಆಗಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಅರಿವು ಮೂಡಿಸಲು ತನ್ನ ರಥದಲ್ಲಿ ಕನ್ನಡ ಚಿತ್ರರಂಗ ದಿಗ್ಗಜರ ಭಾವಚಿತ್ರಗಳನ್ನು ಹಾಕಿಕೊಂಡು ಬೆಂಗಳೂರಿನತ್ತ ಹೊರಟಿದ್ದಾರೆ.

ಡಾ.ವಿಷ್ಣುವರ್ಧನ್ ರವರ ಹಾದಿಯಲ್ಲಿ ನಡೆಯುತ್ತಿರುವ ಇವರು, ಅವರಂತೆ ವೇಷಭೂಷಣ ಧರಿಸಿ, ಮನ ಮುಟ್ಟುವಂತೆ ಡೈಲಾಗ್ ಹೇಳುತ್ತಾರೆ. ಕನ್ನಡ ರಾಜೋತ್ಸವ ಹಾಗೂ ಕನ್ನಡದ ಯಾವುದೇ ಕಾರ್ಯಕ್ರಮ ಇದ್ದರೂ ಅಲ್ಲಿ ಹಾಜರಿದ್ದು, ಕರ್ನಾಟಕದ ಮಣ್ಣಿನ ಸೊಗಡಿನ ಪರಿಚಯ ಮಾಡಿಕೊಡುತ್ತಾರೆ. (ದಿಗ್ವಿಜಯ ನ್ಯೂಸ್​)