More

  ವಿಷ್ಣುವರ್ಧನ್ ಅಂತ್ಯಕ್ರಿಯೆ ನಡೆದ ಪುಣ್ಯಸ್ಥಳಕ್ಕಾಗಿ ಬೀದಿಗಿಳಿಯಲು ಸಜ್ಜಾದ ಅಭಿಮಾನಿಗಳು: ಡಿ.17ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

  ಮಂಡ್ಯ: ಚಿತ್ರನಟ ಡಾ.ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ಪುಣ್ಯಭೂಮಿ ಸ್ಥಳ ಉಳಿವಿಗಾಗಿ ಬೆಂಗಳೂರಿನಲ್ಲಿ ಡಿ.17ರಂದು ಬೃಹತ್ ಹೋರಾಟ ರೂಪಿಸಲಾಗಿದೆ ಎಂದು ಡಾ.ವಿಷ್ಣು ಸೇನಾ ಸಮಿತಿಯ ಜಿಲ್ಲಾಧ್ಯಕ್ಷ ಹಿರೇಮರಳಿ ವಿಷ್ಣುವಿಠಲ್ ತಿಳಿಸಿದರು.
  ಬೆಂಗಳೂರಿನ ಸ್ವಾತಂತ್ರೃ ಉದ್ಯಾನದಲ್ಲಿ ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ಪ್ರತಿಭಟನೆ ನಡೆಯಲಿದೆ. ವಿಷ್ಣುವರ್ಧನ್ ಅವರ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
  ಡಾ.ವಿಷ್ಣುವರ್ಧನ್ ಅಭಿಮಾನಿ ಸಂಘಗಳ ಒಕ್ಕೂಟ ಈ ಹೋರಾಟವನ್ನು ರೂಪಿಸಿದೆ. ಚಿತ್ರನಟ ದಿವಂಗತ ಬಾಲಕೃಷ್ಣ ಅವರಿಗೆ ಸೇರಿದ ಅಭಿಮಾನ್ ಸ್ಟುಡಿಯೋದಲ್ಲಿ ಡಾ.ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದಿದೆ. ಅಲ್ಲಿ ಸ್ಮಾರಕ ನಿರ್ಮಾಣಕ್ಕಾಗಿ ಈ ಮೊದಲು ಜಾಗ ನೀಡುವುದಾಗಿ ಬಾಲಕೃಷ್ಣ ಅವರ ಮಕ್ಕಳು ಹೇಳಿದ್ದರು. ಆದರೀಗ ತಕರಾರು ತೆಗೆದು ನಿರಾಕರಿಸುತ್ತಿದ್ದಾರೆ. ಪೂಜೆ ಪುನಸ್ಕಾರಕ್ಕೂ ತಡೆಯೊಡ್ಡಲಾಗುತ್ತಿದೆ. ವಿಷ್ಣುವರ್ಧನ್ ಅವರು ಮೃತಪಟ್ಟು 14 ವರ್ಷವಾದರೂ ಸ್ಮಾರಕ ಮಾತ್ರ ನಿರ್ಮಾಣವಾಗಿಲ್ಲ. ಈ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಲಾಗಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ನಾವು ಕೇಳುತ್ತಿರುವುದು ಕೇವಲ 10 ಗುಂಟೆಯನ್ನಷ್ಟೇ ಎಂದರು.
  ಸಮಿತಿಯ ಜಿಲ್ಲಾ ಗೌರವಾಧ್ಯಕ್ಷ ಎಚ್.ಪಿ.ಸತೀಶ್, ಪದಾಧಿಕಾರಿಗಳಾದ ಸುಧಾರಾಣಿ, ಕಲಾಂಧರ, ಮಹೇಶ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts