ವಿಷ್ಣು ನೆಲೆವೀಡು ಕರಿವರದರಾಜಬೆಟ್ಟ

ಪ್ರಸಾದ್‌ಲಕ್ಕೂರು ಚಾಮರಾಜನಗರ: ನಗರದ ಹೊರವಲಯದಲ್ಲಿರುವ ಸುಪ್ರಸಿದ್ಧ ಕರಿವರದರಾಜ ಬೆಟ್ಟದಲ್ಲಿ ಪುರಾತನ ವಿಷ್ಣು ದೇವಾಲಯವಿದ್ದು ಅಸಂಖ್ಯಾತ ಭಕ್ತರನ್ನು ಹೊಂದಿದೆ.

ನಗರದ ಸೋಮವಾರಪೇಟೆ ಬಡಾವಣೆಯ ದಕ್ಷಿಣ ದಿಕ್ಕಿನಲ್ಲಿ ಕರಿವರದರಾಜ ಬೆಟ್ಟವಿದೆ. ಇಲ್ಲಿ ನೆಲೆಗೊಂಡಿದ್ದ ರೋಮಜ ಎಂಬ ಮಹರ್ಷಿಯು 1688ರಲ್ಲಿ ವಿಷ್ಣು ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕರಿವರದರಾಜ ಎಂದರೆ ಆನೆಯೆಂದು ಹೇಳಲಾಗುತ್ತದೆ. ಕಡಿದಾದ ಈ ಬೆಟ್ಟದಲ್ಲಿ ಹಿಂದೆ ಹೆಚ್ಚಾಗಿ ಆನೆಗಳು ಸೇರಿದಂತೆ ಇತರ ಕಾಡುಪ್ರಾಣಿಗಳು ವಾಸವಿದ್ದವು. ಆದ್ದರಿಂದ ಕರಿವರದರಾಜನ ಬೆಟ್ಟ ಎಂದು ಕರೆಯಲಾಗುತ್ತದೆ. ವಿಷ್ಣು ಆನೆಗೆ ಮೋಕ್ಷ ನೀಡಿದ್ದರಿಂದ ಆತನ ಮೂರ್ತಿಯನ್ನು ಬೆಟ್ಟದಲ್ಲಿ ಪ್ರತಿಷ್ಠಾಪಿಸಿ 400 ವರ್ಷಗಳ ಹಿಂದೆ ದೇವಾಲಯ ನಿರ್ಮಾಣ ಮಾಡಲಾಗಿದೆ.

ನಗರದಿಂದ 4 ಕಿ.ಮೀ.ದೂರದಲ್ಲಿರುವ ಕರಿವರದರಾಜನ ಬೆಟ್ಟವು ಯಡಬೆಟ್ಟ ಮತ್ತು ಎಣ್ಣೆಹೊಳೆ ಬೆಟ್ಟಗಳ ಜತೆ ಸಂಪರ್ಕ ಹೊಂದಿದ್ದು ಇದೊಂದು ಬೆಟ್ಟಗಳ ಸಾಲಾಗಿದೆ.ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುವ ಈ ಬೆಟ್ಟವು ಪ್ರವಾಸಿ ತಾಣವೂ ಹೌದು.

ಕರಿವರದರಾಜ ಬೆಟ್ಟದಲ್ಲಿರುವ ವಿಷ್ಣು ದೇವಾಲಯವು ಮುಜರಾಯಿ ಇಲಾಖೆ ಸೇರಿದೆ. ಕುರುಚಲು ಸಸ್ಯ ಸಂಪತ್ತು, ಜಿಂಕೆ, ಚಿರತೆಗಳನ್ನು ಹೊಂದಿರುವ ಬೆಟ್ಟವು ಅರಣ್ಯ ಇಲಾಖೆಯ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದ ವಶದಲ್ಲಿದೆ.

ಬೆಟ್ಟದ ಸುತ್ತಲಿರುವ ಹರದನಹಳ್ಳಿ, ಬಂಡಿಗೆರೆ, ಕರಿನಂಜನಪುರ, ಸೋಮವಾರಪೇಟೆ, ಅಮಚವಾಡಿ, ಹೊನ್ನಹಳ್ಳಿ, ವೆಂಕಟಯ್ಯನಛತ್ರ, ಮೂಡ್ಲುಪುರ, ಮಲ್ಲಯ್ಯನಪುರ, ಉತ್ತವಳ್ಳಿ, ಶಿವಪುರ, ಗಾಳಿಪುರ, ಯಡಪುರ ಗ್ರಾಮಗಳಲ್ಲಿ ಕರಿವರದರಾಜ ಸ್ವಾಮಿಯ ಭಕ್ತರು ಇದ್ದಾರೆ. ಯಳಂದೂರು ತಾಲೂಕಿಗೆ ಸೇರಿದ ಸುಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟದಲ್ಲಿರುವ ರಂಗನಾಥಸ್ವಾಮಿಯನ್ನು ಶ್ವೇತಾಚಲ, ಗುಂಡ್ಲುಪೇಟೆ ತಾಲೂಕಿಗೆ ಸೇರಿದ ಹುಲುಗನಮುರಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿರುವ ವೆಂಕಟರಮಣಸ್ವಾಮಿಯನ್ನು ವ್ಯಾಘ್ರಾಚಲ, ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿರುವ ಗೋಪಾಲಸ್ವಾಮಿಯನ್ನು ಹಿಮಾಚಲ, ಕರಿವರದರಾಜ ಬೆಟ್ಟದಲ್ಲಿರುವ ವಿಷ್ಣುವನ್ನು ವೃದ್ಧಾಚಲ ಎಂದು ಕರೆಯಲಾಗುತ್ತಿದೆ.

800 ಮೆಟ್ಟಿಲುಗಳಿವೆ: ಬೆಟ್ಟವು ಹಲವು ಔಷಧೀಯ ಸಸ್ಯಗಳನ್ನು ಒಳಗೊಂಡಿದೆ. ಬೆಟ್ಟವನ್ನು ಏರಿ ವಿಷ್ಣುವಿನ ದರ್ಶನ ಪಡೆಯಲು ರಸ್ತೆಯಲ್ಲದೆ 800 ಮೆಟ್ಟಿಲುಗಳಿವೆ. ಪ್ರವಾಸೋದ್ಯಮ ಇಲಾಖೆಯಿಂದ 1ಕೋಟಿ ರೂ.ವೆಚ್ಚದಲ್ಲಿ ಮೆಟ್ಟಿಲುಗಳ ದುರಸ್ತಿ ಕಾರ್ಯ ನಡೆಯುತ್ತಿದ್ದು, ಇಲ್ಲಿಯ ತನಕ 600 ಮೆಟ್ಟಿಲುಗಳ ದುರಸ್ತಿಯಾಗಿವೆ. ಇನ್ನು 200 ಮೆಟ್ಟಿಲುಗಳ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ.
2008ರಲ್ಲಿ ರಾಜ್ಯದ ಅಧಿಕಾರ ವಹಿಸಿಕೊಂಡಿದ್ದ ಬಿಜೆಪಿ ಸರ್ಕಾರ ಕರಿವರದರಾಜ ಬೆಟ್ಟವನ್ನು ದೇವ ವನವಾಗಿ ಅಭಿವೃದ್ಧಿಪಡಿಸಲು ಚಾಲನೆ ನೀಡಿತ್ತು. ಪ್ರವಾಸೋದ್ಯಮ ಇಲಾಖೆಯು ಭಕ್ತರ ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಯಾತ್ರಿ ನಿವಾಸ್ ನಿರ್ಮಿಸಿದೆ.

ಪ್ರತಿ ಶನಿವಾರ ಪೂಜೆ: ಪ್ರತಿ ಶನಿವಾರ ಬೆಟ್ಟದಲ್ಲಿರುವ ವಿಷ್ಣು ದೇವಾಲಯದಲ್ಲಿ ಪೂಜೆ ನಡೆಯುತ್ತಿದೆ. ಇದಲ್ಲದೆ ಶ್ರಾವಣ ಶನಿವಾರ, ಧನುರ್ಮಾಸ, ರಥಸಪ್ತಮಿ, ವಿಷ್ಣು ದೀಪೋತ್ಸವಗಳ ಸಂದರ್ಭಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಬೆಟ್ಟದ ಮೇಲೆ ದೇವಾಲಯ ಇರುವುದರಿಂದ ಬೆಳಗ್ಗೆ ಮತ್ತು ಸಂಜೆ ಹಲವರು ಮೆಟ್ಟಿಲುಗಳನ್ನು ಏರಿ ವಾಯುವಿಹಾರ ಮಾಡುತ್ತಾರೆ. ಪ್ರಾಚೀನ ಕಾಲದಲ್ಲಿ ಈ ಬೆಟ್ಟದಲ್ಲಿ ಋಷಿ ಮುನಿಗಳ ಲೋಕ ಕಲ್ಯಾಣಾರ್ಥ ಯಜ್ಞ, ಯಾಗಗಳನ್ನು ನೆರವೇರಿಸುತ್ತಿದ್ದರು. ಆಗ ರಾಕ್ಷಸರು ಉಪಟಳ ನೀಡುತ್ತಿದ್ದರು. ಕೋಪಗೊಂಡ ಋಷಿಗಳು ಕಿರುಕುಳ ನೀಡುವ ರಾಕ್ಷಸರು ಕಾಗೆಗಳಾಗಲಿ, ಅವರು ಇಲ್ಲಿಗೆ ಬಾರದಿರಲಿ ಎಂದು ಶಾಪ ನೀಡಿದ್ದರಂತೆ. ಹಾಗಾಗಿ ಈಗಲೂ ಬೆಟ್ಟದಲ್ಲಿ ಹಾಗೂ ದೇವಾಲಯದಲ್ಲಿ ಕಾಗೆಗಳಿಲ್ಲ ಅವುಗಳು ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಕಳೆದ 4 ತಲೆ ಮಾರಿನಿಂದ ನಮ್ಮ ಕುಟುಂಬದವರು ಕರಿವರದರಾಜ ಬೆಟ್ಟದಲ್ಲಿರುವ ವಿಷ್ಣು ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತ ಬಂದಿದ್ದೇವೆ. ಈಗ ನಾನು ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದೇನೆ. ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದರಿಂದ ತಿಂಗಳಿಗೆ 4 ರೂ. 35 ಪೈಸೆ ಸಂಬಳ ನೀಡಲಾಗುತ್ತಿದೆ. ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಪೂಜೆ, ಆರಾಧನೆ ವೃತ್ತಿಯನ್ನು ಮುಂದುವರಿಸುತ್ತಿದ್ದೇವೆ.
ಪುರುಷೋತ್ತಮ್, ಅರ್ಚಕ, ಕರಿವರದರಾಜಬೆಟ್ಟ