ಸೈನಾಗೆ ವೀಸಾ ಸಂಕಷ್ಟ

ನವದೆಹಲಿ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ಷಟ್ಲರ್ ಕೆ. ಶ್ರೀಕಾಂತ್ ವೀಸಾ ಸಮಸ್ಯೆ ಎದುರಿಸಿದ್ದಾರೆ. ಮುಂದಿನ ವಾರ ಡೆನ್ಮಾರ್ಕ್​ನ ಓಡ್ನೆಸ್​ನಲ್ಲಿ ಆರಂಭವಾಗಲಿರುವ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಗಾಗಿ ಇವರಿಬ್ಬರೂ ಸಲ್ಲಿಸಿದ್ದ ವೀಸಾ ಅರ್ಜಿ ಪುರಸ್ಕೃತಗೊಂಡಿರಲಿಲ್ಲ. ಈ ಬಗ್ಗೆ ಟ್ವಿಟರ್ ಮೂಲಕ ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್​ಗೆ ಮನವಿ ಮಾಡಿದ ಬಳಿಕ, ವೀಸಾ ಅರ್ಜಿಯ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ. ಬಿಡಬ್ಲ್ಯುಎಫ್​ನ ಸೂಪರ್ 750 ಟೂರ್ನಿ ಇದಾಗಿದ್ದು, ಅಕ್ಟೋಬರ್ 15ರಿಂದ 20ರವರೆಗೆ ನಡೆಯಲಿದೆ. ಸೈನಾ ಕೂಡ ನಿಗದಿತ ಸಮಯದಲ್ಲಿಯೇ ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಹೊಸ ನಿಯಮದಿಂದಾಗಿ ವೀಸಾ ಪಡೆದುಕೊಳ್ಳುವ ಪ್ರಕ್ರಿಯೆ ವಿಳಂಬವಾಗಿದೆ. ಈ ಬಗ್ಗೆ ಗಮನ ನೀಡುವಂತೆ ಕೇಂದ್ರ ವಿದೇಶಾಂಗ ಇಲಾಖೆಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.

‘ಹೈದರಾಬಾದ್​ನಲ್ಲಿ ನನ್ನ ವೀಸಾದ ಪ್ರಕ್ರಿಯೆ ಮಂಗಳವಾರ ಆರಂಭವಾಗಿದೆ. ಅಸಾಧ್ಯವಾದದ್ದನ್ನು ಸಾಧಿಸಿದ್ದಕ್ಕೆ ಗೃಹ ಸಚಿವಾಲಯದ ಅಧಿಕಾರಿ ಹಾಗೂ ರಜೆ ಇದ್ದರೂ ಕೆಲಸ ಮಾಡಿದ ವಿಎಫ್​ಎಸ್ ಗ್ಲೋಬಲ್ ಹಾಗೂ ಡೆನ್ಮಾರ್ಕ್ ರಾಯಭಾರ ಕಚೇರಿಗೆ ಧನ್ಯವಾದಗಳು. ಶುಕ್ರವಾರ ವೀಸಾ ಸಿಗುವ ಸಾಧ್ಯತೆ ಇದೆ’ ಎಂದು ಟ್ವೀಟ್ ಮಾಡಿದ್ದಾರೆ. 29 ವರ್ಷದ ಸೈನಾ ನೆಹ್ವಾಲ್, ಕಳೆದ ವರ್ಷ ಇದೇ ಟೂರ್ನಿಯಲ್ಲಿ ರನ್ನರ್​ಅಪ್ ಆಗಿದ್ದರು. ಹೊಸ ನಿಯಮದ ಪ್ರಕಾರ ಡೆನ್ಮಾರ್ಕ್ ವೀಸಾ ಪಡೆಯಲು ರಾಯಭಾರಿ ಕಚೇರಿಗೆ ಖುದ್ದಾಗಿ ಹಾಜರಿರಬೇಕಿದೆ. ರಾಯಭಾರ ಕಚೇರಿ ಸೂಚನೆಯ ಮೇರೆಗೆ ರಜಾದಿನವೂ ತೆರೆದಿದ್ದ ಹೈದರಾಬಾದ್​ನ ವೀಸಾ ಅರ್ಜಿ ಕೇಂದ್ರಕ್ಕೆ ಸೈನಾ ಖುದ್ದಾಗಿ ಆಗಮಿಸಿದ್ದರು. -ಪಿಟಿಐ/ಏಜೆನ್ಸೀಸ್

Leave a Reply

Your email address will not be published. Required fields are marked *