ಅರುಣ್​ ಜೇಟ್ಲಿಯವರ ಬಂಗಲೆಯಲ್ಲೇ ಅದ್ಧೂರಿಯಾಗಿ ನಡೆದಿತ್ತು ವೀರೇಂದ್ರ ಸೆಹ್ವಾಗ್​ ಮದುವೆ; ಆದರೆ ಜೇಟ್ಲಿಯವರೇ ಪಾಲ್ಗೊಂಡಿರಲಿಲ್ಲ…

ನವದೆಹಲಿ: ಮಾಜಿ ಸಚಿವ ಅರುಣ್​ ಜೇಟ್ಲಿ ನಿಧನಕ್ಕೆ ರಾಜಕೀಯ ಮುಖಂಡರಲ್ಲದೆ ಬಾಲಿವುಡ್​ ನಟರು, ಕ್ರಿಕೆಟ್​ ಆಟಗಾರರೂ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ಕ್ರಿಕೆಟರ್​ ವೀರೇಂದ್ರ ಸೆಹ್ವಾಗ್​ ಟ್ವೀಟ್​ ಮಾಡಿ, ನನಗೆ ವೈಯಕ್ತಿಕವಾಗಿ ತುಂಬ ನಷ್ಟವಾಗಿದೆ. ಅವರೊಂದಿಗೆ ನನಗೆ ಉತ್ತಮ ಬಾಂಧವ್ಯವಿತ್ತು ಎಂದು ಹೇಳಿದ್ದಾರೆ.

ಅರುಣ್​ ಜೇಟ್ಲಿ ಸಲ್ಲಿಸಿದ ಸಾರ್ವಜನಿಕ ಸೇವೆ ಮಹತ್ತರವಾದದ್ದು. ಹಾಗೇ ದೆಹಲಿ ಜಿಲ್ಲಾ ಕ್ರಿಕೆಟ್​ ಅಸೋಸಿಯೇಶನ್​ ನಾಯಕತ್ವ ವಹಿಸಿಕೊಂಡಿದ್ದ ಅವರು ನನ್ನನ್ನೂ ಸೇರಿಸಿ ಹಲವು ಆಟಗಾರರು ದೆಹಲಿಯಿಂದ ದೇಶಮಟ್ಟದಲ್ಲಿ ಆಡಲು ಸಹಾಯ ಮಾಡಿದ್ದಾರೆ. ಆಟಗಾರರ ಅಗತ್ಯಗಳನ್ನು ಕೇಳಿ, ಅವರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಅವರ ಕುಟುಂಬ ಹಾಗೂ ಆತ್ಮೀಯರಿಗೆ ನೋವು ಭರಿಸುವ ಶಕ್ತಿ ದೇವರು ನೀಡಲಿ, ಓಂ ಶಾಂತಿ ಎಂದು ನೆನಪಿಸಿಕೊಂಡಿದ್ದಾರೆ.

ಅರುಣ್​ ಜೇಟ್ಲಿ ಡಿಡಿಸಿಎ ಅಧ್ಯಕ್ಷರಾಗಿ ದಶಕಕ್ಕೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ್ದರು. ಹಾಗೇ ಬಿಸಿಸಿಐ ಉಪಾಧ್ಯಕ್ಷರೂ ಆಗಿದ್ದರು.

ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ, ವೀರೇಂದ್ರ ಸೆಹ್ವಾಗ್​ ಮದುವೆಯಾಗಿದ್ದು ಅರುಣ್​ ಜೇಟ್ಲಿ ಅವರ ಸರ್ಕಾರಿ ಬಂಗಲೆಯಲ್ಲಿ. 2004ರಲ್ಲಿ ಸೆಹ್ವಾಗ್​ ಆರತಿ ಅವರ ಕೈಹಿಡಿದಿದ್ದಾರೆ. ಆಗ ಅರುಣ್​ ಜೇಟ್ಲಿ ಸೆಹ್ವಾಗ್​ ತಂದೆಗೆ ಹೇಳಿ ದೆಹಲಿಯ ಅಶೋಕ ರಸ್ತೆಯಲ್ಲಿರುವ ತಮ್ಮ ಮನೆಯಲ್ಲೇ ಮದುವೆ ನಡೆಸಿದ್ದಾರೆ.

ಮದುವೆಯ ಎಲ್ಲ ಸಿದ್ಧತೆಗಳನ್ನೂ ತಮ್ಮ ಬಂಗಲೆಯಲ್ಲಿ ಮಾಡಿದ್ದ ಅವರು ಅತಿಥಿಗಳಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಸಿದ್ದರು. ಆದರೆ ಅವರು ಮಾತ್ರ ಮದುವೆಯಲ್ಲಿ ಪಾಲ್ಗೊಂಡಿರಲಿಲ್ಲ. ಕಾರಣ ಯಾವುದೋ ಕಾರ್ಯದ ನಿಮಿತ್ತ ಆ ಸಮಯದಲ್ಲಿ ಬೆಂಗಳೂರಿನಲ್ಲಿ ಇದ್ದರು.

Leave a Reply

Your email address will not be published. Required fields are marked *