ನೂತನ ವರ್ಷ ಆರಂಭವಾಗುವ ಸಂದರ್ಭದಲ್ಲಿ ಎಲ್ಲರೂ ಏನಾದರೊಂದು ನಿರ್ಣಯ ಕೈಗೊಳ್ಳುವುದು ರೂಢಿ. ಇದಕ್ಕೆ ರಾಜಕಾರಣಿಗಳು, ಕ್ರೀಡಾಪಟುಗಳು, ಸಿನಿಮಾರಂಗದ ಸೆಲೆಬ್ರಿಟಿಗಳು ಮುಂತಾಗಿ ಯಾರೂ ಹೊರತಲ್ಲ. 2020ರ ಹೊಸ್ತಿಲಲ್ಲಿ ಯಾರ್ಯಾರು ಏನೇನು ಸಂಕಲ್ಪ ಮಾಡಿರಬಹುದು ಎಂಬುದನ್ನು ಕನ್ನಡದ ಖ್ಯಾತ ಹಾಸ್ಯ ಸಾಹಿತಿ, ‘ವಿಜಯವಾಣಿ’ಯ ಅಂಕಣಕಾರ ಎಚ್. ಡುಂಡಿರಾಜ್ Fun ಶೈಲಿಯಲ್ಲಿ ಹೇಳ್ತಾ ಇದ್ದಾರೆ, ಕೇಳೋಣ ಬನ್ನಿ.
ವಿರಾಟ್ ಕೊಹ್ಲಿ
ಈ ವರ್ಷ ಅಂದ್ರೆ ಟ್ವೆಂಟಿ ಟ್ವೆಂಟಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟ್ವೆಂಟಿ ಟ್ವೆಂಟಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಕಪ್ ನಮ್ದೇ. ಇದು ಆರ್ಸಿಬಿ ಸ್ಲೋಗನ್ ಅಂದ್ಕೋಬೇಡಿ! ‘ತುಂಬಾ ಚೆನ್ನಾಗಿ ಆಡ್ತೀರಿ. ಆದರೆ ಮುಂಗೋಪ, ಜಗಳಗಂಟ ಸ್ವಭಾವ’ ಅಂತ ಅನೇಕರು ನನ್ನನ್ನು ಟೀಕಿಸುತ್ತಾರೆ. ಈ ವರ್ಷದಿಂದ ಅದನ್ನೆಲ್ಲ ಬಿಡ್ತೀನಿ. ಯಾಕಂದ್ರೆ ನೈಂ-ಟೀನ್ ಮುಗೀತು. ಇನ್ನೂ ಟೀನೇಜರ್ ಥರ ಇರೋದು ಸರಿಯಲ್ಲ. ತೆಂಡೂಲ್ಕರ್ ಹಾಗೆ ಜಂಟಲ್ವ್ಯಾನ್ ಆಗಿದ್ರೆ ನಿವೃತ್ತನಾದ ನಂತರ ರಾಜ್ಯಸಭಾ ಸದಸ್ಯತ್ವ, ಭಾರತ ರತ್ನ ಪ್ರಶಸ್ತಿ ಬರಬಹುದು. ಈ ವರ್ಷ ಬೌಂಡರಿ ದಾಟೋದಿಲ್ಲ ಅಂತ ಪ್ರಾಮಿಸ್ ಮಾಡಿದೀನಿ. ಮೈದಾನದಲ್ಲಲ್ಲ, ಮನೇಲಿ ಅನುಷ್ಕಾ ಹಾಕುವ ಬೌಂಡರಿ!