ವಿಡಿಯೋ| ಗೆಲುವಿನ ಖುಷಿಯಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದ ವಿರುಷ್ಕಾ ದಂಪತಿ: ಸರಣಿ ಜಯದ ಬಗ್ಗೆ ಕೊಹ್ಲಿ ಹೇಳಿದ್ದೇನು?

ಸಿಡ್ನಿ: ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್​ ಸರಣಿ ಗೆದ್ದ ಟೀಂ ಇಂಡಿಯಾ ಖುಷಿಯ ಅಲೆಯಲ್ಲಿ ತೇಲುತ್ತಿದೆ. ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಈ ಸಾಧನೆ ಮಾಡಿರುವುದು ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ. ವಿಶೇಷವಾಗಿ ಕೊಹ್ಲಿ ಮಡದಿ ಅನುಷ್ಕಾ ಶರ್ಮಾ ಪಾಲಿಗಂತೂ ಇದು ಸಂತಸದ ಕ್ಷಣವಾಗಿದ್ದು, ಮೈದಾನದಲ್ಲೇ ಸ್ಟಾರ್​ ದಂಪತಿ ಜತೆಯಾಗಿ ಹೆಜ್ಜೆಯಿಟ್ಟು ಗೆಲುವನ್ನು ಸಂಭ್ರಮಿಸಿದ್ದಾರೆ.

ಸಿಡ್ನಿಯಲ್ಲಿ ನಡೆದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯ ಡ್ರಾನಲ್ಲಿ ಅಂತ್ಯವಾಗುತ್ತಿದ್ದಂತೆ ಟೀಂ ಇಂಡಿಯಾ ಪಾಳೆಯದಲ್ಲಿ ಹರ್ಷ ಮನೆ ಮಾಡಿತ್ತು. ನಾಲ್ಕು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ 2-1 ಅಂತರದಲ್ಲಿ ಗೆಲುವು ಸಾಧಿಸಿದ ಕೊಹ್ಲಿ ಪಡೆ ಇತಿಹಾಸ ನಿರ್ಮಿಸಿದರು. ಇದೇ ಮೊದಲ ಬಾರಿಗೆ ಆಸಿಸ್​ ನೆಲದಲ್ಲಿ ಟೆಸ್ಟ್​ ಸರಣಿ ಗೆದ್ದ ಕೀರ್ತಿಯನ್ನು ಭಾರತ ತನ್ನ ಮುಡಿಗೇರಿಸಿಕೊಂಡಿತು.

ನಾಯಕ ಕೊಹ್ಲಿ ಈ ಕ್ಷಣವನ್ನು ತಮ್ಮ ಮುದ್ದಿನ ಮಡದಿ ಅನುಷ್ಕಾರೊಂದಿಗೆ ಹಂಚಿಕೊಂಡರು. ಸಿಡ್ನಿ ಮೈದಾನದಲ್ಲಿ ಒಟ್ಟಿಗೆ ಹೆಜ್ಜೆ ಹಾಕುತ್ತಾ, ಪರಸ್ಪರ ನೋಡುತ್ತಾ ಹಾಗೂ ನಗುತ್ತಾ ಗೆಲುವನ್ನು ಸಂಭ್ರಮಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಆಗಿದ್ದು, ವೈರಲ್​ ಆಗಿದೆ. ಅಲ್ಲದೆ, ಕೊಹ್ಲಿಗೆ ಶುಭಾಶಯಗಳ ಸುರಿಮಳೆ ಹರಿದುಬರುತ್ತಿದೆ.

ಇದು ನನ್ನ ಜೀವನದ ಉತ್ತಮ ಸಾಧನೆ
ಈ ಬಗ್ಗೆ ಮಾತನಾಡಿರುವ ಕೊಹ್ಲಿ ಇದು ನನ್ನ ಜೀವನದ ಉತ್ತಮ ಸಾಧನೆ. ನಾವು ವಿಶ್ವಕಪ್​ ಗೆದ್ದ ಸಂದರ್ಭದಲ್ಲಿ ನಾನು ಯುವ ಕ್ರಿಕೆಟಿಗನಾಗಿದ್ದೆ. ಆಗ ಇತರರು ಭಾವನಾತ್ಮಕವಾಗಿ ಇದ್ದುದ್ದನ್ನು ನಾನು ನೋಡಿದ್ದೆ. ಈ ಸರಣಿ ಗೆಲುವಿನಿಂದ ನಮ್ಮನ್ನು ಬೇರೆ ರೀತಿಯಲ್ಲಿ ಗುರುತಿಸಲಿದ್ದಾರೆ. ನಾವು ಈಗ ಏನನ್ನು ಸಾಧಿಸಿದ್ದೇವೆ ಅದರ ಬಗ್ಗೆ ನಮಗೆ ನಿಜವಾಗಿಯೂ ಹೆಮ್ಮೆ ಇದೆ ಎಂದು ಕೊಹ್ಲಿ ಸಂತಸ ಹಂಚಿಕೊಂಡಿದ್ದಾರೆ.

71 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಆಸಿಸ್​ ನೆಲದಲ್ಲಿ ಸರಣಿಯನ್ನು ಗೆದ್ದಿದೆ. (ಏಜೆನ್ಸೀಸ್​)