ವಿರಾಟ್​ ಕೊಹ್ಲಿಗೆ 100 ಶತಕ ಗಳಿಸುವ ಸಾಮರ್ಥ್ಯವಿದೆ: ಅಜರುದ್ದೀನ್​

ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ತಮ್ಮ ಫಿಟ್​ನೆಸ್​ ಅನ್ನು ಕಾಯ್ದುಕೊಂಡರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ಶತಕ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್​ ಅಜರುದ್ದೀನ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್​ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ 39ನೇ ಶತಕ ಸಿಡಿಸಿದ ನಂತರ ಪ್ರತಿಕ್ರಿಯೆ ನೀಡಿರುವ ಅಜರುದ್ದೀನ್​ ‘ಇತ್ತೀಚಿನ ದಿನಗಳಲ್ಲಿ ವಿರಾಟ್​ ಬ್ಯಾಟಿಂಗ್​ನಲ್ಲಿ ಸ್ಥಿರತೆ ಇದೆ. ಅವರು ನಿರಂತರವಾಗಿ ರನ್​ ಗಳಿಸುತ್ತಿದ್ದಾರೆ. ಕೊಹ್ಲಿ ಓರ್ವ ಅತ್ಯುತ್ತಮ ಆಟಗಾರ. ಆತ ಶತಕ ಗಳಿಸಿದ ಬಹುತೇಕ ಪಂದ್ಯಗಳಲ್ಲಿ ಭಾರತ ಗೆಲುವು ಸಾದಿಸಿದೆ ಎಂದು ತಿಳಿಸಿದ್ದಾರೆ.

ಎರಡನೇ ಪಂದ್ಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅರ್ಧ ಶತಕ ಗಳಿಸಿ ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತ ತಂಡ ಎರಡನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿತು ಎಂದು ಅಜರುದ್ದೀನ್​ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕ್ರಿಕೆಟ್​ ದೇವರು ಸಚಿನ್​ ತೆಂಡುಲ್ಕರ್​ ಮಾತ್ರ 100 ಶತಕ ಗಳಿಸಿದ್ದಾರೆ. ಸಚಿನ್​ 782 ಇನಿಂಗ್ಸ್​ಗಳಲ್ಲಿ 100 ಶತಕ ಗಳಿಸಿದ್ದರೆ, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್​ 668 ಇನಿಂಗ್ಸ್​ಗಳಲ್ಲಿ 71 ಶತಕ ಗಳಿಸಿದ್ದರೆ, ಕೊಹ್ಲಿ ಕೇವಲ 401 ಶತಕಗಳಲ್ಲಿ 64 ಶತಕ ಸಿಡಿಸಿದ್ದಾರೆ. (ಏಜೆನ್ಸೀಸ್​)