ನ್ಯೂಜಿಲೆಂಡ್​​​ ವಿರುದ್ಧದ ಸೆಮಿಫೈನಲ್​ನಲ್ಲಿ ಸೋತ ಬಳಿಕ ನಾಯಕ ವಿರಾಟ್​​ ಕೊಹ್ಲಿ ಹೇಳಿದ್ದೇನು ಗೊತ್ತೆ?

ಮ್ಯಾಂಚೆಸ್ಟರ್​: 2019ನೇ ಐಸಿಸಿ ವಿಶ್ವಕಪ್​ನ ಆರಂಭದಿಂದಲೂ ಸೆಮಿಫೈನಲ್​ವರೆಗೂ ಅದ್ಭುತ ಪ್ರದರ್ಶನ ತೋರಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದ ಟೀಂ ಇಂಡಿಯಾ ಬುಧವಾರ ನ್ಯೂಜಿಲೆಂಡ್​​ ವಿರುದ್ಧದ ಸೆಮಿಫೈನಲ್ಲಿ ತೀರಾ ಕಳಪೆ ಆಟವಾಡಿ ಸೋಲನುಭವಿಸಿದೆ. ಈ ಸೋಲಿನ ಬಗ್ಗೆ ನಾಯಕ ವಿರಾಟ್​​ ಕೊಹ್ಲಿ ತಮ್ಮ ಮನದಾಳದ ನೋವನ್ನು ವ್ಯಕ್ತಪಡಿಸಿದ್ದಾರೆ.

ಭಾರತದ ಈ ಸೋಲಿನಿಂದ ಕೋಟ್ಯಂತರ ಅಭಿಮಾನಿಗಳ ಕನಸು ನೂಚ್ಚುನೂರಾಗಿದೆ. ಈ ಬಗ್ಗೆ ಕೊಹ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕಿವೀಸ್​​ ತಂಡದ ಉತ್ತಮ ಬೌಲಿಂಗ್​ನಿಂದ ಭಾರತಕ್ಕೆ ಸೋಲಲು ಪ್ರಮುಖ ಕಾರಣವಾಗಿದೆ. ಆರಂಭದಲ್ಲಿಯೇ ಭಾರತ ಮೂರು ವಿಕೆಟ್​ಗಳನ್ನು ಕಳೆದುಕೊಳ್ಳುವ ಮೂಲಕ ತಂಡ ಆಘಾತಕ್ಕೊಳಗಾಯಿತು. ಆದರೂ ಮಧ್ಯಮ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಹಾಗೂ ಮಹೇಂದ್ರ ಸಿಂಗ್​ ಧೋನಿ ಉತ್ತಮ ಆಟದೊಂದಿಗೆ ತಂಡವನ್ನು ಗೆಲುವಿನ ಸಮೀಪಕ್ಕೆ ಕರೆದುಕೊಂಡು ಹೋದರು. ಆದರೆ, ಅವರಿಬ್ಬರು ವಿಕೆಟ್​ ಕಳೆದುಕೊಂಡ ಬಳಿಕ ತಂಡ ತೀವ್ರ ಆಘಾತಕ್ಕೊಳಗಾಗಿ ಕೇವಲ 18 ರನ್​ಗಳಿಂದ ಸೋಲನುಭವಿಸಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಟೂರ್ನಿಯ ಎಲ್ಲ ಪಂದ್ಯಗಳಲ್ಲಿ ಉತ್ತಮ ಆಟವಾಡಿ ಸೆಮೀಸ್​ನ ಕೇವಲ 45 ನಿಮಿಷಗಳ ಕೆಟ್ಟ ಆಟದಿಂದ ಭಾರತ ತಂಡ ವಿಶ್ವಕಪ್​​ ಗೆಲ್ಲುವ ಕನಸು ಭಗ್ನಗೊಂಡಿದೆ. ಈ ಸೋಲಿಗೆ ಅಭಿಮಾನಿಗಳಲ್ಲಿ ನಾನು ಕ್ಷಮೆ ಕೋರುತ್ತೇನೆ. ಟೂರ್ನಿಯ ಎಲ್ಲ ಪಂದ್ಯಗಳಲ್ಲಿ ತಂಡಕ್ಕೆ ಪ್ರೋತ್ಸಾಹ ನೀಡುವಲ್ಲಿ ನೀವು ಯಶಸ್ವಿಯಾಗಿದ್ದೀರಿ. ನಿಮ್ಮಂತೆಯೇ ನಾನು ನಿರಾಸೆಗೊಂಡಿದ್ದೇನೆ. ಮುಂದಿನ ಟೂರ್ನಿಗಲ್ಲಿ ನಿಮ್ಮ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ ಎಂದು ಅಭಿಮಾನಿಗಳಲ್ಲಿ ಕೊಹ್ಲಿ ಕ್ಷಮೆಯಾಚಿಸಿದರು.

ಕೊಹ್ಲಿ ಟೀಂ ಇಂಡಿಯಾದ ಪಿಸಿಯೋಥೆರಾಪಿಸ್ಟ್​​​​​​ ಪ್ಯಾಟ್ರಿಕ್ ಫರ್ಹಾರ್ಟ್ ಮತ್ತು ತರಬೇತಿದಾರ ಶಂಕರ್ ಬಸು ಅವರಿಗೆ ಧನ್ಯವಾಗಳನ್ನು ತಿಳಿಸಿದ್ದಾರೆ. ನೀವಿಬ್ಬರು ತಂಡಕ್ಕಾಗಿ ಸಾಕಷ್ಟು ಶ್ರಮ ವಹಸಿದ್ದೀರಿ. ನೀವಿಬ್ಬರೂ ನಿಜಕ್ಕೂ ಮಹನೀಯರು. ನಿಮ್ಮ ಮುಂದಿನ ಜೀವನದ ಹಾದಿ ಶುಭವಾಗಿರಲಿ ಎಂದು ಹಾರೈಸುತ್ತೇನೆ ಎಂದು ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *