ಟೀಮ್ ದಿಕ್ಕುತಪ್ಪಿಸಿದ ಲಾರ್ಡ್ಸ್ ಸೋಲು

ಟೆಸ್ಟ್ ಕ್ರಿಕೆಟ್​ನಲ್ಲಿ ವಿಶ್ವ ನಂ.1 ತಂಡವಾಗಿದ್ದರೂ, ಭಾರತಕ್ಕೆ ಸೋಲುಗಳು ಹೊಸತಲ್ಲ. ಅದರಲ್ಲೂ ವಿದೇಶದ ಟೆಸ್ಟ್ ವೇಳೆ ಭಾರತ ತಂಡದ ಸೋಲು ಮಾಮೂಲಾಗಿಬಿಟ್ಟಿದೆ. ಭಾರತದ ಅಭಿಮಾನಿಗಳು ವಿದೇಶದ ಟೆಸ್ಟ್ ವೇಳೆ ತಂಡದ ಗೌರವಯುತ ಸೋಲನ್ನು (ಮೊದಲ ಟೆಸ್ಟ್​ನಲ್ಲಿ ಕಂಡ ರೀತಿ) ಗೆಲುವಿನಂತೆ ಸಂಭ್ರಮಮಿಸುವುದು ಸಹಜವಾಗಿದೆ. ಆದರೆ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಲಾರ್ಡ್ಸ್ ಟೆಸ್ಟ್​ನಲ್ಲಿ ಕಂಡ ಸೋಲು ತಂಡಕ್ಕೆ ಅದರಲ್ಲೂ, ವಿಶ್ವ ನಂ.1 ತಂಡಕ್ಕೆ ಶೋಭೆಯಲ್ಲ. ಆಡುವ ಬಳಗದ ಆಯ್ಕೆ ಹಂತದಲ್ಲಿಯೇ ಎಡವಿದ್ದ ತಂಡ, 4 ದಿನಗಳ ಆಟದಲ್ಲಿ ಒಮ್ಮೆಯೂ ಸಣ್ಣ ಮಟ್ಟದ ಪ್ರತಿರೋಧವನ್ನೂ ತೋರದೆ ಇನಿಂಗ್ಸ್ ಹಾಗೂ 159 ರನ್​ಗಳಿಂದ ಇಂಗ್ಲೆಂಡ್​ಗೆ ಶರಣಾಯಿತು. ಆತ್ಮವಿಶ್ವಾಸವನ್ನೇ ಕುಗ್ಗಿಸುವಂಥ ನಿರ್ವಹಣೆಯೊಂದಿಗೆ ಕೊಹ್ಲಿ ನಾಯಕತ್ವದಲ್ಲಿ ಭಾರತ ಮೊಟ್ಟಮೊದಲ ಇನಿಂಗ್ಸ್ ಸೋಲು ಕಂಡಿದೆ.

ಲಾರ್ಡ್ಸ್​ನ ಅತಿಹೀನಾಯ ಸೋಲಿನ ಬಳಿಕ, ಇಂಗ್ಲೆಂಡ್​ಗೆ ಪ್ರವಾಸ ಮಾಡಿದ ಅತ್ಯಂತ ಕೆಟ್ಟ ತಂಡ ಎನ್ನುವ ಕುಖ್ಯಾತಿಯೂ ಭಾರತ ತಂಡದ್ದಾಗಿದೆ. ಇಂಗ್ಲೆಂಡ್ ನೆಲದಲ್ಲಿ ಈವರೆಗೂ ಆಡಿದ 59 ಟೆಸ್ಟ್​ಗಳ ಪೈಕಿ ಗೆದ್ದಿರುವುದು 6ರಲ್ಲಿ ಮಾತ್ರ. ಅದರಲ್ಲೂ ಕಳೆದೊಂದು ದಶಕದಲ್ಲಿ ಇಂಗ್ಲೆಂಡ್​ನಲ್ಲಿ ಭಾರತದ ನಿರ್ವಹಣೆ ಎಷ್ಟು ದಯನೀಯವಾಗಿದೆಯೆಂದರೆ, ಆಡಿರುವ 11 ಪಂದ್ಯಗಳಲ್ಲಿ 1ರಲ್ಲಿ ಮಾತ್ರವೇ ಗೆಲುವು ಕಂಡಿದೆ. ಪಂದ್ಯ ಸೋತ ಬಳಿಕ ಕೊಹ್ಲಿ ಆಯ್ಕೆ ವಿಚಾರದಲ್ಲಿ ತಪ್ಪಾಗಿರುವುದನ್ನು ಒಪ್ಪಿಕೊಂಡರು. ಅದರೊಂದಿಗೆ ತಂಡದ ಉಳಿದ ಬ್ಯಾಟ್ಸ್​ಮನ್​ಗಳು ಶಾಟ್​ಗಳ ಆಯ್ಕೆಯಲ್ಲಿ ತಪು್ಪ ಮಾಡಿದರು ಎನ್ನುವ ಮಾತನ್ನು ಪುನರಾವರ್ತನೆ ಮಾಡಿದರು. ಕಳೆದ ಐದು ಟೆಸ್ಟ್​ಗಳ ಪೈಕಿ ತಂಡ ಒಂಚೂರು ಹೋರಾಟವಿಲ್ಲದೆ ಸೋಲು ಕಂಡ ಪಂದ್ಯ ಇದು ಎಂದ ಕೊಹ್ಲಿ, ಟ್ರೆಂಟ್​ಬ್ರಿಜ್​ನಲ್ಲಿ ಗೆಲುವಿನ ವಿಶ್ವಾಸದಲ್ಲಿರುವುದಾಗಿ ಹೇಳಿದ್ದಾರೆ. ಆದರೆ, ಲಾರ್ಡ್ಸ್ ಟೆಸ್ಟ್​ನಲ್ಲಿ ಬ್ಯಾಟ್ಸ್ ಮನ್​ಗಳ ನಿರ್ವಹಣೆ ಕಂಡ ಬಳಿಕ ಅಭಿಮಾನಿಗಳಿಗೆ ಈ ನಂಬಿಕೆಯಿಲ್ಲ. ವೈಟ್​ವಾಷ್ ಅವಮಾನ ಕಾಣದೆ ತವರಿಗೆ ಬರಲಿ ಎನ್ನುವುದಷ್ಟೇ ಸದ್ಯದ ಆಸೆ!

ಮೊದಲು ಸುನೀಲ್ ಗಾವಸ್ಕರ್, ಆ ಬಳಿಕ ಸಚಿನ್ ತೆಂಡುಲ್ಕರ್, ಬಳಿಕ ಇಂಗ್ಲೆಂಡ್ ನೆಲದಲ್ಲಿ ತಂಡದ ಭಾರವನ್ನು ಹೊತ್ತವರು ವಿರಾಟ್ ಕೊಹ್ಲಿ. ಆದರೆ, ಗಾವಸ್ಕರ್ ಹಾಗೂ ಸಚಿನ್ ಜತೆಗಿದ್ದ ಅದ್ಭುತ ಟೀಮ್ ಕೊಹ್ಲಿ ಜತೆಗಿಲ್ಲ. ಸುನೀಲ್ ಗಾವಸ್ಕರ್ ಹೋರಾಟಕ್ಕೆ ನಿಂತರೆಂದರೆ, ಅವರಿಗೆ ಬೆಂಬಲವಾಗಿ ನಿಲ್ಲಬಲ್ಲ ಜಿಆರ್ ವಿಶ್ವನಾಥ್, ದಿಲೀಪ್ ವೆಂಗ್ಸರ್ಕಾರ್ ಹಾಗೂ ಮೊಹಿಂದರ್ ಅಮರ್​ನಾಥ್​ರಂಥ ಘಟಾನುಘಟಿಗಳಿದ್ದರು. ಸಚಿನ್ ತೆಂಡುಲ್ಕರ್ ಹೋರಾಟಕ್ಕೆ ನಿಂತರೆ ಅವರಿಗೆ ಬೆಂಬಲವಾಗಿ ದ್ರಾವಿಡ್, ಗಂಗೂಲಿ, ಲಕ್ಷ್ಮಣ್ ಜತೆಗಿರುತ್ತಿದ್ದರು. ಆದರೆ, ಈ ಅದೃಷ್ಟ ಕೊಹ್ಲಿಗಿಲ್ಲ. ಇಂಗ್ಲೆಂಡ್​ನಲ್ಲಿ ಕೊಹ್ಲಿ ಹೋರಾಟದ ಆಟಕ್ಕಿಳಿದರೆ ಅವರಿಗೆ ಜತೆಯಾಗಿ ನಿಲ್ಲುವ ಕೆಚ್ಚು ಪ್ರದರ್ಶಿಸುವುದು ಅಶ್ವಿನ್ ಅಥವಾ ಹಾರ್ದಿಕ್​ವಾತ್ರ.

‘ಕ್ರೀಸ್​ನಲ್ಲಿ ನಿಂತು ಆಡಲು ಮಾನಸಿಕವಾಗಿ ಸಿದ್ಧವಾಗಿದ್ದರೆ, ಎಂಥ ಕಠಿಣ ಪರಿಸ್ಥಿತಿಯಲ್ಲೂ ಆಡಬಹುದು’ ಎಂದಿರುವ ಕೊಹ್ಲಿ, ಮೊದಲ ಟೆಸ್ಟ್​ನಲ್ಲಿ ಅದೇ ರೀತಿ ಆಡಿದ್ದರು. ಆದರೆ, ಉಳಿದ ಬ್ಯಾಟ್ಸ್​ಮನ್​ಗಳು ಇಂಗ್ಲಿಷ್ ವಾತಾವರಣಕ್ಕೆ ಹೊಂದಿಕೊಳ್ಳಲು ತಡಬಡಾಯಿಸುತ್ತಿದ್ದಾರೆ. ಲಾರ್ಡ್ಸ್ ಟೆಸ್ಟ್​ನಲ್ಲಿ ಕೊಹ್ಲಿ ಇನಿಂಗ್ಸ್​ನ ಅದೃಷ್ಟ ತಂಡಕ್ಕಿರಲಿಲ್ಲ. ಎರಡೂ ಇನಿಂಗ್ಸ್

ಗಳಲ್ಲಿ ಭಾರತ 150ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಯಿತು. ಕಳೆದ ಒಂದು ದಶಕದಲ್ಲಿ ಇಂಗ್ಲೆಂಡ್ ನೆಲದಲ್ಲಿ ಗರಿಷ್ಠ ಟೆಸ್ಟ್ ಸೋಲು ಕಂಡ ಅಗ್ರ ಟೆಸ್ಟ್ ದೇಶ ಭಾರತ. ಒಟ್ಟು 9 ಸೋಲುಗಳು ದಾಖಲಾಗಿವೆ. ಭಾರತಕ್ಕೆ ಹೋಲಿಸಿದರೆ ಇಂಗ್ಲೆಂಡ್​ನಲ್ಲಿ ಪಾಕಿಸ್ತಾನದ ದಾಖಲೆಯೇ ಅದ್ಭುತವಾಗಿದೆ. ಕಳೆದ 10 ವರ್ಷದಲ್ಲಿ ಆಂಗ್ಲರ ನೆಲದಲ್ಲಿ ಆಡಿದ 10 ಪಂದ್ಯಗಳ ಪೈಕಿ 4ರಲ್ಲಿ ತಂಡ ಜಯ ಸಾಧಿಸಿದೆ.

ಭಾರತಕ್ಕೆ ಇನ್ನೂ ಸರಣಿ ಉಳಿಸಿಕೊಳ್ಳುವ ಹಾಗೂ ಗೆದ್ದುಕೊಳ್ಳುವ ಅವಕಾಶವಿದೆ. ಆದರೆ, ಇಂಥ ದೊಡ್ಡ ಹೀನಾಯ ಸೋಲಿನಿಂದ ತಂಡದ ಆಟಗಾರರು ಮಾನಸಿಕವಾಗಿ ಹೇಗೆ ಎದ್ದು ಬರಲಿದ್ದಾರೆ ಎನ್ನುವ ಕುತೂಹಲವೂ ಇದೆ. ಇದರ ನಡುವೆ ಕೊಹ್ಲಿ ಗಾಯದ ಸಮಸ್ಯೆ ಎದುರಿಸಿದ್ದಾರೆ. ಶನಿವಾರ ಟ್ರೆಂಟ್​ಬ್ರಿಜ್​ನಲ್ಲಿ 3ನೇ ಟೆಸ್ಟ್ ಆರಂಭವಾಗಲಿದೆ. ಎಲ್ಲ ಹಿನ್ನಡೆಯನ್ನು ಮೂಟೆಕಟ್ಟಿ ಹೊಸ ತಂಡವಾಗಿ ಆಡುವ ಅನಿವಾರ್ಯತೆ ತಂಡಕ್ಕಿದೆ.

ನಂ. 1 ಪಟ್ಟ ಕಳೆದುಕೊಂಡ ಕೊಹ್ಲಿ

ಲಾರ್ಡ್ಸ್ ಟೆಸ್ಟ್​ನಲ್ಲಿ 9 ವಿಕೆಟ್ ಸಾಧನೆ ಮಾಡಿದ ಜೇಮ್್ಸ ಆಂಡರ್​ಸನ್ ಐಸಿಸಿ ರ್ಯಾಂಕಿಂಗ್​ನಲ್ಲಿ 19 ಅಂಕ ಸಂಪಾದಿಸಿ ಅಗ್ರಸ್ಥಾನ ಕಾಯ್ದಕೊಂಡಿದ್ದಾರೆ. ಇದರೊಂದಿಗೆ 900 ಅಂಕಗಳ ಗಡಿ ದಾಟಿರುವ ಆಂಡರ್​ಸನ್, 1980ರಲ್ಲಿ ಇಯಾನ್ ಬಾಥಮ್ ಬಳಿಕ ಐಸಿಸಿ ರ್ಯಾಂಕಿಂಗ್​ನಲ್ಲಿ 900 ಅಂಕಗಳ ಗಡಿ ದಾಟಿದ ಮೊದಲ ಇಂಗ್ಲೆಂಡ್ ಬೌಲರ್ ಎನಿಸಿಕೊಂಡರು. ಬ್ಯಾಟಿಂಗ್ ರ್ಯಾಂಕಿಂಗ್​ನಲ್ಲಿ ವಿರಾಟ್ ಕೊಹ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದು, ಸ್ಟೀವನ್ ಸ್ಮಿತ್ ಅಗ್ರಸ್ಥಾನಕ್ಕೇರಿದ್ದಾರೆ. ಪಂದ್ಯಶ್ರೇಷ್ಠ ಗೌರವ ಪಡೆದಿದ್ದ ಆಲ್ರೌಂಡರ್ ಕ್ರಿಸ್ ವೋಕ್ಸ್ ಆಲ್ರೌಂಡರ್ ರ್ಯಾಂಕಿಂಗ್​ನಲ್ಲಿ 7ನೇ ಸ್ಥಾನಕ್ಕೇರಿದ್ದಾರೆ. ಕೊಹ್ಲಿ 919 ಅಂಕದೊಂದಿಗೆ 2ನೇ ಸ್ಥಾನಕ್ಕಿಳಿದರೆ, ಸ್ಟೀವನ್ ಸ್ಮಿತ್ 929 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ.

ಸೋಲಿನ ಕುರಿತು ವರದಿ ಕೇಳಲಿರುವ ಮಂಡಳಿ ಮೊದಲ ಎರಡು ಟೆಸ್ಟ್​ನ ಸೋಲಿನ ಹಿನ್ನೆಲೆಯಲ್ಲಿ ಬಿಸಿಸಿಐ, ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಅವರಿಂದ ವರದಿಯನ್ನು ಕೇಳಲಿದೆ ಎಂದು ವರದಿಯಾಗಿದೆ. ‘ಸಿದ್ಧತೆಗೆ ಸಮಯ ಸಿಕ್ಕಿಲ್ಲ ಎಂದು ತಂಡ ದೂರುವಂತೆ ಇಲ್ಲ. ದಕ್ಷಿಣ ಆಫ್ರಿಕಾದಲ್ಲಿ ಸರಣಿ ಸೋತಾಗ, ನಿಬಿಡ ವೇಳಾಪಟ್ಟಿ ಹಾಗೂ ಅಭ್ಯಾಸ ಪಂದ್ಯಗಳ ಕೊರತೆಯನ್ನು ದೂರಲಾಗಿತ್ತು. ಆದರೆ, ಇಂಗ್ಲೆಂಡ್ ಪ್ರವಾಸದ ವೇಳೆ ಆಟಗಾರರ ಜತೆ ಮಾತನಾಡಿಯೇ ಮೊದಲು ನಿಗದಿತ ಓವರ್​ಗಳ ಸರಣಿ ನಡೆಸಿ ಬಳಿಕ ಟೆಸ್ಟ್ ಸರಣಿ ನಿಗದಿ ಮಾಡಲಾಗಿತ್ತು’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಾಡೋ ಟೂರ್​ನ ರೂಪದಲ್ಲಿ ಭಾರತ ಎ ತಂಡ ಕೂಡ ಇಂಗ್ಲೆಂಡ್ ಪ್ರವಾಸ ಮಾಡಿತ್ತು. ಹಾಗಿದ್ದರೂ ತಂಡ ಸೋತಿದ್ದು ನಿರಾಸೆಯಾಗಿದೆ ಎಂದಿದ್ದಾರೆ.

ಗ್ರೆಗ್ ಚಾಪೆಲ್​ಗಿಂತ ರವಿಶಾಸ್ತ್ರಿ ಡೇಂಜರ್!

ತಂಡದ ಸೋಲು ಟ್ವಿಟರ್​ನಲ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ. ‘ನಮ್ಮ ಅತಿ ಕೆಟ್ಟ ಕೋಚ್ ಗ್ರೆಗ್ ಚಾಪೆಲ್​ಗಿಂತ ರವಿಶಾಸ್ತ್ರಿ ತಂಡಕ್ಕೆ ಡೇಂಜರ್’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ನಾವು ಕೆಟ್ಟ ಪ್ರವಾಸಿ ತಂಡ. ಸ್ವಿಂಗ್ ಚೆಂಡನ್ನು ಆಡಲು ನಮಗೆ ಸಾಧ್ಯವಾಗುವುದಿಲ್ಲ. ರವಿಶಾಸ್ತ್ರಿ ಈಗಲೂ ಕೋಚ್ ಆಗಿರುವುದೇ ಅಚ್ಚರಿ. ಬ್ಯಾಟಿಂಗ್ ಸ್ನೇಹಿ ಪಿಚ್​ಗಳಲ್ಲಿ ಮಾತ್ರವೇ ನಮ್ಮ ತಂಡ ಅಬ್ಬರಿಸುತ್ತದೆ ಎನ್ನುವುದೇ ನಾಚಿಕೆಗೇಡು. ಶ್ರೀಲಂಕಾ ಹಾಗೂ ಪಾಕಿಸ್ತಾನದಂಥ ತಂಡಗಳು ವಿದೇಶಿ ಟೆಸ್ಟ್​ಗಳನ್ನು ಗೆಲ್ಲುತ್ತವೆ. ಆಂಡರ್​ಸನ್ ಹಾಗೂ ಬ್ರಾಡ್ ನಿವೃತ್ತಿಯಾದ ಬಳಿಕ ಭಾರತಕ್ಕೆ ಬೌಲಿಂಗ್ ಕೋಚ್ ಆಗಬಹುದು’ ಎಂದು ಬರೆದಿದ್ದಾರೆ.