ಎರಡನೇ ಏಕದಿನ: ನೆಟ್ಸ್​ನಲ್ಲಿ ಬೆವರು ಹರಿಸಿದ ಟೀಂ ಇಂಡಿಯಾ ಆಟಗಾರರು

ಅಡಿಲೇಡ್​: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ಏಕದಿನ ಸರಣಿ ಗೆಲ್ಲಲು ಮುಂದಿನ ಎರಡೂ ಪಂದ್ಯ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿರುವ ಟೀಂ ಇಂಡಿಯಾದ ಆಟಗಾರರು ಇಂದು ನೆಟ್ಸ್​ನಲ್ಲಿ ಕಠಿಣ ಅಭ್ಯಾಸ ನಡೆಸಿದ್ದಾರೆ.

ನಾಳೆ ಅಡಿಲೇಡ್​ನಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಆಟಗಾರರು ಬ್ಯಾಟಿಂಗ್​, ಬೌಲಿಂಗ್​, ಫೀಲ್ಡಿಂಗ್​ ಅಭ್ಯಾಸ ನಡೆಸಿದರು. ಮೊದಲ ಏಕದಿನ ಪಂದ್ಯದಲ್ಲಿ ಬೇಗ ಔಟಾಗಿದ್ದ ನಾಯಕ ವಿರಾಟ್​ ಕೊಹ್ಲಿ ಕಠಿಣ ಅಭ್ಯಾಸ ನಡೆಸಿದ್ದು, ಎರಡನೇ ಪಂದ್ಯದಲ್ಲಿ ಪುಟಿದೇಳಲು ಸಿದ್ಧತೆ ನಡೆಸಿದರು. ಅಡಿಲೇಡ್​ನಲ್ಲಿ ಕೊಹ್ಲಿ ಒಟ್ಟು ಮೂರು ಪಂದ್ಯಗಳನ್ನಾಡಿದ್ದು ಒಂದು ಪಂದ್ಯದಲ್ಲಿ ಶತಕ ಗಳಿಸಿದ್ದಾರೆ.

ಬೌಲಿಂಗ್​ ವಿಭಾಗದಲ್ಲಿ ಭುವನೇಶ್ವರ್​ ಕುಮಾರ್​ ಮತ್ತು ಯಜುವೇಂದ್ರ ಚಹಾಲ್​ ಇಂದು ಕಠಿಣ ಅಭ್ಯಾಸ ನಡೆಸಿದರು. ಎರಡನೇ ಪಂದ್ಯದಲ್ಲಿ ಚಹಾಲ್​ಗೆ ಸ್ಥಾನ ಸಿಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಚಹಾಲ್​ ಬೆವರು ಹರಿಸಿ ಅಭ್ಯಾಸ ಮಾಡಿದರು.

2016ರಲ್ಲಿ ಭಾರತ ತಂಡ 1-4 ಅಂತರದಿಂದ ಏಕದಿನ ಸರಣಿಯಲ್ಲಿ ಸೋಲನುಭವಿಸಿತ್ತು. ಈ ಬಾರಿ ಹಿಂದಿನ ಸೋಲಿನ ಕಹಿಯನ್ನು ಮರೆಯಲು ಉತ್ತಮ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಲು ಆಟಗಾರರು ಕಠಿಣ ಅಭ್ಯಾಸ ನಡೆಸಿದ್ದಾರೆ. (ಏಜೆನ್ಸೀಸ್​)