ದುಬೈ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಮುಂದುವರಿದಿದ್ದಾರೆ. ಸೋಮವಾರ ಐಸಿಸಿಯ ಏಕದಿನ ರ‍್ಯಾಂಕಿಂಗ್ ಪಟ್ಟಿ ಪ್ರಕಟಗೊಂಡಿದ್ದು, ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ನಂ.1 ಬೌಲರ್ ಎನಿಸಿಕೊಂಡಿದ್ದಾರೆ.
ಮೂರು ಪಂದ್ಯಗಳ ಸರಣಿಯಲ್ಲಿ 183 ರನ್ ಸಿಡಿಸುವ ಮೂಲಕ, ಕೊಹ್ಲಿ ಸರಣಿಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರೆ, ರೋಹಿತ್ ಶರ್ಮ ಸರಣಿಯಲ್ಲಿ 171 ರನ್ ಸಿಡಿಸಿದ್ದರು. ಕೊಹ್ಲಿ 2 ಅಂಕ ಸಂಪಾದಿಸಿ ತಮ್ಮ ಒಟ್ಟಾರೆ ಅಂಕವನ್ನು 886ಕ್ಕೆ ಏರಿಸಿಕೊಂಡಿದ್ದರೆ, ರೋಹಿತ್ ಶರ್ಮ 3 ಅಂಕ ಸಂಪಾದಿಸಿ ಒಟ್ಟಾರೆ ಅಂಕವನ್ನು 868 ಅಂಕಕ್ಕೆ ಏರಿಸಿಕೊಂಡಿದ್ದಾರೆ.
ಪಾಕಿಸ್ತಾನದ ಬಾಬರ್ ಅಜಮ್ 829 ಅಂಕದೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ಎಡಗೈ ಆರಂಭಿಕ ಶಿಖರ್ ಧವನ್ ಕೂಡ ಏಳು ಸ್ಥಾನ ಏರಿಕೆ ಕಂಡಿದ್ದು, 15ನೇ ಸ್ಥಾನ ಪಡೆದಿದ್ದಾರೆ. ಸರಣಿಯ 2 ಇನಿಂಗ್ಸ್ಗಳಿಂದ ಧವನ್ 170 ರನ್ ಸಿಡಿಸಿದ್ದರು. ಕೆಎಲ್ ರಾಹುಲ್ 21 ಸ್ಥಾನ ಏರಿಕೆ ಕಾಣುವ ಮೂಲಕ 50ನೇ ಸ್ಥಾನ ಪಡೆದಿದ್ದಾರೆ. ಗಾಯದಿಂದ ಚೇತಡಿಸಿಕೊಂಡು ಮರಳಿದ ಜಸ್ಪ್ರೀತ್ ಬುಮ್ರಾ 764 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದು, ನ್ಯೂಜಿಲೆಂಡ್ನ ಟ್ರೆಂಟ್ ಬೌಲ್ಟ್, ಅಫ್ಘಾನಿಸ್ತಾನದ ಮುಜೀಬ್ ಉರ್ ರೆಹಮಾನ್, ದಕ್ಷಿಣ ಆಫ್ರಿಕಾದ ಕಗಿಸೋ ರಬಾಡ ಹಾಗೂ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಮೊದಲ ಐದು ಸ್ಥಾನಗಳಲ್ಲಿದ್ದಾರೆ.