ವಿಶ್ವಕಪ್​ಗೆ ರಿಷಭ್​ ಪಂತ್​ ಬದಲು ದಿನೇಶ್​ ಕಾರ್ತಿಕ್​ರನ್ನು ಆಯ್ಕೆ ಮಾಡಿದ್ದಕ್ಕೆ ಕಾರಣ ತಿಳಿಸಿದ ಕೊಹ್ಲಿ

ನವದೆಹಲಿ: ಕ್ರಿಕೆಟ್​ ವಿಶ್ವಕಪ್​ಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಈಗಾಗಲೇ ವಿಶ್ವಕಪ್​ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಟೀಂ ಇಂಡಿಯಾಗೆ ಯುವ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ರಿಷಭ್​ ಪಂತ್​ ಅವರನ್ನು ಆಯ್ಕೆ ಮಾಡದೆ ಅನುಭವಿ ಆಟಗಾರ ದಿನೇಶ್​ ಕಾರ್ತಿಕ್​ರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಪಂತ್​ರನ್ನು ಆಯ್ಕೆಮಾಡದ್ದಕ್ಕೆ ಕ್ರಿಕೆಟ್​ ವಲಯದಲ್ಲಿ ತೀವ್ರ ಆಕ್ರೋಶ ಕೇಳಿಬಂದಿತ್ತು. ಈಗ ಈ ಕುರಿತು ವಿರಾಟ್​ ಕೊಹ್ಲಿ ಸ್ಪಷ್ಟನೆ ನೀಡಿದ್ದು, ದಿನೇಶ್​ ಕಾರ್ತಿಕ್​ರನ್ನು ಆಯ್ಕೆ ಮಾಡಿದ್ದು ಏಕೆ ಎಂದು ತಿಳಿಸಿದ್ದಾರೆ.

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ನಾಯಕ ಕೊಹ್ಲಿಯ ಮೊದಲ ಆಯ್ಕೆ. ಧೋನಿಗೆ ಗಾಯದ ಸಮಸ್ಯೆ ಕಾಡಿದರೆ ಅವರ ಬದಲು ಕಾರ್ತಿಕ್​ ಅವರನ್ನು ಕಣಕ್ಕಿಳಿಸಬಹುದು. ಕಾರ್ತಿಕ್​ ಅನುಭವಿ ಆಟಗಾರರಾಗಿದ್ದು, ವಿಕೆಟ್​ ಹಿಂದೆಯೂ ಚುರುಕಾಗಿದ್ದಾರೆ. ಜತೆಗೆ ತಂಡಕ್ಕೆ ಅಗತ್ಯವಿದ್ದಾಗ ಒತ್ತಡವನ್ನು ತಡೆದುಕೊಂಡು ಉತ್ತಮ ಆಟ ಆಡಬಲ್ಲರು. ಇದು ತಂಡದ ಆಯ್ಕೆ ಮಂಡಳಿಯ ಎಲ್ಲಾ ಸದಸ್ಯರೂ ಈ ವಿಷಯದ ಕುರಿತು ಸಹಮತ ವ್ಯಕ್ತಪಡಿಸಿದರು. ಜತೆಗೆ ತಂಡದ ಹಿತದೃಷ್ಟಿಯಿಂದ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೊಹ್ಲಿ ತಿಳಿಸಿದ್ದಾರೆ.

ಕಾರ್ತಿಕ್​ 2004ರಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಆದರೆ ಇಷ್ಟು ವರ್ಷಗಳಲ್ಲಿ ಅವರು ಕೇವಲ 91 ಪಂದ್ಯಗಳಲ್ಲಿ ಮಾತ್ರ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಅವರು ಎಲ್ಲ ಬ್ಯಾಟಿಂಗ್​ ಆರ್ಡರ್​ನಲ್ಲಿ ಉತ್ತಮ ಆಟವಾಡಿದ್ದಾರೆ.

ರಿಷಭ್​ ಪಂತ್​ಗೆ ತಂಡದಲ್ಲಿ ಅವಕಾಶ ನೀಡಬೇಕಿತ್ತು. ಅವರಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಒಂದು ವೇದಿಕೆಯನ್ನು ಕಲ್ಪಿಸಬೇಕಿತ್ತು ಎಂದು ಭಾರತದ ಮತ್ತು ಇತರ ದೇಶಗಳ ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

One Reply to “ವಿಶ್ವಕಪ್​ಗೆ ರಿಷಭ್​ ಪಂತ್​ ಬದಲು ದಿನೇಶ್​ ಕಾರ್ತಿಕ್​ರನ್ನು ಆಯ್ಕೆ ಮಾಡಿದ್ದಕ್ಕೆ ಕಾರಣ ತಿಳಿಸಿದ ಕೊಹ್ಲಿ”

Comments are closed.