ಟೆನ್ನಿಸ್​ ದಿಗ್ಗಜ ರೋಜರ್​​​ ಫೆಡರರ್​ ಭೇಟಿ ವೇಳೆ ನಡೆದ ಮಾತುಕತೆ ಬಿಚ್ಚಿಟ್ಟ ವಿರಾಟ್​

ಸಿಡ್ನಿ: ಟೀಂ ಇಂಡಿಯಾದ ಯಶಸ್ವಿ ನಾಯಕ ವಿರಾಟ್​ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾರೊಂದಿಗೆ ಕೆಲ ದಿನಗಳ ಹಿಂದೆ ಟೆನ್ನಿಸ್​ ದಿಗ್ಗಜ ರೋಜರ್​ ಫೆಡರರ್​​ರನ್ನು ಭೇಟಿ ಮಾಡಿದ್ದರು. ಸಾಕಷ್ಟು ಕುತೂಹಲ ಮೂಡಿಸಿದ್ದ ಉಭಯ ಆಟಗಾರರ ಭೇಟಿ ವೇಳೆ ನಡೆದ ಮಾತುಕತೆ ಬಹಿರಂಗಗೊಂಡಿದೆ.

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಮತ್ತು ಏಕದಿನ ಸರಣಿಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿ ಜನ ಮೆಚ್ಚಗೆ ಗಳಿಸಿರುವ ನಾಯಕ ವಿರಾಟ್​ ಕೊಹ್ಲಿ ಆಸ್ಟ್ರೇಲಿಯಾ ಓಪನ್​ ಟೂರ್ನಿಯಲ್ಲಿ ಭಾಗವಹಿಸಿದ್ದ ಸ್ವಿಸ್ ಆಟಗಾರ ರೋಜರ್​ ಫೆಡರರ್​ರನ್ನು ಭೇಟಿ ಮಾಡಿದ್ದರು.​

ಈ ಬಗ್ಗೆ ಬಿಸಿಸಿಐ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಕೊಹ್ಲಿ, ಫೆಡರರ್ ಭೇಟಿಯನ್ನು ಒಂದು ಸುಂದರ ಸಮಯ ಎಂದು​ ಹೊಗಳಿದ್ದಾರೆ. ಈ ಹಿಂದೆ ಹಲವು ಬಾರಿ ಫೆಡರರ್​ ಅವರನ್ನು ನಾನು ಭೇಟಿಯಾಗಿದ್ದೇನೆ. ಅವರು ಕೂಡ ಹಲವು ವರ್ಷಗಳ ಹಿಂದೆ ಸಿಡ್ನಿಯಲ್ಲಿ ನನ್ನನ್ನು ಭೇಟಿ ಮಾಡಿದ್ದಾಗಿ ಹೇಳಿದ್ದನ್ನು ಕೇಳಿ ಬಹಳ ಖುಷಿಯಾಯಿತು ಎಂದರು.

ನಾನು ಚಿಕ್ಕವನಿದ್ದಾಗಿನಿಂದ ಅವರ ಆಟವನ್ನು ನೋಡಿದ್ದೇನೆ. ಅವರೊಬ್ಬ ಉತ್ತಮ ಟೆನ್ನಿಸ್​ ಆಟಗಾರ ಮಾತ್ರವಲ್ಲ, ಉತ್ತಮ ವ್ಯಕ್ತಿಯು ಆಗಿದ್ದಾರೆ. ಅವರೊಂದಿಗಿನ ಮಾತುಕತೆಯ ಕ್ಷಣವನ್ನು ಹೇಗೆ ವಿವರಿಸಬೇಕೆಂದು ಗೊತ್ತಾಗುತ್ತಿಲ್ಲ ಎಂದು ಹೇಳಿದರು.

ಭೇಟಿ ವೇಳೆ ನಾನು ಸಾಕಷ್ಟು ಪ್ರಶ್ನೆಗಳ ಸುರಿಮಳೆಗೈದೆ, ಪ್ರಮುಖವಾಗಿ ಮನಸ್ಥಿತಿ ಬಗ್ಗೆ ಪ್ರಶ್ನೆಯನ್ನು ಕೇಳಿದೆ. ಯಾವ ರೀತಿ ಅವರು ಆಟಕ್ಕೆ ತಯಾರಾಗುತ್ತಾರೆ. ಕ್ರೀಡೆಯ ಬಗ್ಗೆ ಅವರ ಚಿಂತನೆ ಏನು ಎಂಬುದರ ಕುರಿತು ಪ್ರಶ್ನೆಗಳನ್ನು ಕೇಳಿದೆ. ಇದೊಂದು ಸುಂದರವಾದ ಸಮಯ ಎಂದು ಕೊಹ್ಲಿ ಸ್ಮರಿಸಿದ್ದಾರೆ.

ಈಗಾಗಲೇ ಕಾಂಗರೂ ನೆಲದಲ್ಲಿ ಏಕದಿನ ಹಾಗೂ ಟೆಸ್ಟ್​ ಸರಣಿಯನ್ನು ವಶಪಡಿಸಿಕೊಂಡು ವಿಶ್ವ ಕ್ರಿಕೆಟ್​ ಸಿಂಹಾಸನದಲ್ಲಿ ರಾಜರಥರಂತೆ ಮೆರೆಯುತ್ತಿರುವ ಕೊಹ್ಲಿ ಪಡೆ, ಪ್ರಸ್ತುತ ಆತಿಥೇಯ ನ್ಯೂಜಿಲೆಂಡ್​ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನೆಡೆ ಕಾಯ್ದುಕೊಂಡು ತಮ್ಮ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಭಾರತೀಯ ಕ್ರಿಕೆಟ್​ ಪಾಲಿಗೆ ಈಗ ಸುವರ್ಣ ಯುಗವೆಂದು ಹೇಳಬಹುದಾಗಿದೆ. (ಏಜೆನ್ಸೀಸ್​)