ಹಾರ್ದಿಕ್​, ರಾಹುಲ್​ ವಿವಾದಾತ್ಮಕ ಹೇಳಿಕೆ ಕುರಿತು ಕೊನೆಗೂ ಮೌನ ಮುರಿದ ಕೊಹ್ಲಿ

ದೆಹಲಿ: ಮಹಿಳೆಯರ ಕುರಿತಾಗಿ ಟೀಂ ಇಂಡಿಯಾದ ಯುವ ಆಟಗಾರರಾದ ಹಾರ್ದಿಕ್​ ಪಾಂಡ್ಯ ಹಾಗೂ ಕೆ.ಎಲ್​. ರಾಹುಲ್ ನೀಡಿದ್ದ ವಿವಾದಾತ್ಮಕ ಹೇಳಿಕೆ ಸಂಬಂಧ ನಾಯಕ ವಿರಾಟ್​ ಕೊಹ್ಲಿ ಕೊನೆಗೂ ಮೌನ ಮುರಿದಿದ್ದಾರೆ.

ಬಾಲಿವುಡ್​ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್​ ಜೋಹಾರ್​ ನಡೆಸಿಕೊಡುವ ”ಕಾಫಿ ವಿತ್​​ ಕರಣ್​” ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಪಾಂಡ್ಯ ಮತ್ತು ರಾಹುಲ್,​​ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಹಿಳೆಯರ ಕುರಿತಾಗಿ ಕೆಟ್ಟದಾಗಿ ಕಾಮೆಂಟ್​ ಮಾಡಿದ್ದರು. ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ, ಬಿಸಿಸಿಐ ಕೂಡ ಉಭಯ ಆಟಗಾರರಿಗೆ ಕ್ಲಾಸ್​ ತೆಗೆದುಕೊಂಡಿದೆ.

ಈ ಬಗ್ಗೆ ಇದುವರೆಗೂ ತುಟಿ ಬಿಚ್ಚದೇ ಇದ್ದಿದ್ದ ನಾಯಕ ಕೊಹ್ಲಿ ಈಗ ತಮ್ಮ ಟೀಂಮೇಟ್​​ಗಳನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಭಾರತೀಯ ಕ್ರಿಕೆಟ್​ ತಂಡದವರಾಗಿದ್ದು, ಜವಬ್ದಾರಿಯುತ ಆಟಗಾರರಾಗಿರುವ ನಮಗೆ ಆ ಹೇಳಿಕೆಯನ್ನು ಹೊಂದಿಸಬೇಡಿ. ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಹೇಳಿಕೆ ಬಗ್ಗೆ ಬಿಸಿಸಿಐ ನೀಡುವ ನಿರ್ಧಾರವನ್ನು ಎದುರು ನೋಡುತ್ತಿದ್ದೇವೆ ಎಂದು ಕೊಹ್ಲಿ ತಿಳಿಸಿದರು.

ಈ ಬದಲಾವಣೆ ಡ್ರಸ್ಸಿಂಗ್​ ಕೊಠಡಿಯಲ್ಲಿನ ನಮ್ಮ ನಂಬಿಕೆಗಳನ್ನು ಬದಲಾಯಿಸುವುದಿಲ್ಲ. ಇತಿಹಾಸ ನಿರ್ಮಿಸಲು ಸಮರ್ಥರಿರುವ ನಮ್ಮ ಸ್ಪೂರ್ತಿಗೆ ಇದರಿಂದ ಏನು ಆಗುವುದಿಲ್ಲ. ನಿರ್ಧಾರ ಹೊರಬಂದ ನಂತರ ಆ ಬಗ್ಗೆ ಒಟ್ಟಾಗಿ ಯೋಚಿಸಬೇಕಾಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.

ಶನಿವಾರ ಆಸಿಸ್​ ವಿರುದ್ಧ ನಡೆಯುವ ಮೊದಲ ಏಕದಿನ ಪಂದ್ಯದ ಆರಂಭಕ್ಕೂ ಮುನ್ನ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಮಾತನಾಡಿದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *