ದುಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, 2019ರ ಐಸಿಸಿಯ ವರ್ಷದ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. 2019ರಲ್ಲಿ ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ನಾಯಕನಾಗಿ ವಿರಾಟ್ ಕೊಹ್ಲಿ ದೊಡ್ಡ ಮಟ್ಟದ ಯಶಸ್ಸು ಸಂಪಾದಿಸಿದ್ದರು.
ಕೊಹ್ಲಿಯೊಂದಿಗೆ ನಾಲ್ವರು ಇತರ ಭಾರತೀಯರು ಕೂಡ ಐಸಿಸಿ ಟೆಸ್ಟ್ ಹಾಗೂ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. ಟೆಸ್ಟ್ ತಂಡದಲ್ಲಿ ದ್ವಿಶತಕವೀರ ಕರ್ನಾಟಕದ ಮಯಾಂಕ್ ಅಗರ್ವಾಲ್ ಸ್ಥಾನ ಪಡೆದಿದ್ದರೆ, ಆರಂಭಿಕ ರೋಹಿತ್ ಶರ್ಮ, ವೇಗಿ ಮೊಹಮದ್ ಶಮಿ ಹಾಗೂ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಏಕದಿನ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ಹಾಗೂ ಏಕದಿನ ಎರಡೂ ಮಾದರಿಯಲ್ಲಿ ಅದ್ಭುತ ಫಾರ್ಮ್ನಲ್ಲಿದ್ದರು. 31 ವರ್ಷದ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಕಳೆದ ವರ್ಷದ ಅಕ್ಟೋಬರ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೀವನಶ್ರೇಷ್ಠ 254 ರನ್ ಬಾರಿಸಿದ್ದರು. ಇದು ಅವರ 7ನೇ ಟೆಸ್ಟ್ ದ್ವಿಶತಕವೆನಿಸಿತ್ತು. ಇನ್ನು ಮಯಾಂಕ್ ಅಗರ್ವಾಲ್ 2019ರಲ್ಲಿ ಎರಡು ದ್ವಿಶತಕ ಹಾಗೂ ಒಂದು ಶತಕ ಬಾರಿಸಿದ್ದರೆ, ಎರಡು ಬಾರಿ ಅರ್ಧಶತಕದ ಗಡಿ ದಾಟಿದ್ದರು. ನವೆಂಬರ್ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಟೆಸ್ಟ್ನಲ್ಲಿ ಜೀವನಶ್ರೇಷ್ಠ 243 ರನ್ ಬಾರಿಸಿದ್ದರು.
ಕುಲದೀಪ್ ಯಾದವ್ ಕೂಡ ಉತ್ತಮ ನಿರ್ವಹಣೆ ಮೂಲಕ ಗಮನ ಸೆಳೆದಿದ್ದರು. ಏಕದಿನ ಕ್ರಿಕೆಟ್ನಲ್ಲಿ ಎರಡು ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ ಅಪರೂಪದ ಬೌಲರ್ಗಳ ಕ್ಲಬ್ಗೆ ಅವರು ಸೇರಿದ್ದಾರೆ. ಕಳೆದ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ 2ನೇ ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.
2019ರ ಐಸಿಸಿ ವರ್ಷದ ಏಕದಿನ ತಂಡ (ಬ್ಯಾಟಿಂಗ್ ಕ್ರಮಾಂಕದಲ್ಲಿ): ರೋಹಿತ್ ಶರ್ಮ, ಶೈ ಹೋಪ್, ವಿರಾಟ್ ಕೊಹ್ಲಿ (ನಾಯಕ), ಬಾಬರ್ ಅಜಮ್ ಕೇನ್ ವಿಲಿಯಮ್ಸನ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ವಿ.ಕೀ), ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್, ಮೊಹಮದ್ ಶಮಿ, ಕುಲದೀಪ್ ಯಾದವ್.
2019ರ ಐಸಿಸಿ ವರ್ಷದ ಟೆಸ್ಟ್ ತಂಡ (ಬ್ಯಾಟಿಂಗ್ ಕ್ರಮಾಂಕದಲ್ಲಿ): ಮಯಾಂಕ್ ಅಗರ್ವಾಲ್, ಟಾಮ್ ಲಾಥಮ್ ಮಾರ್ನಸ್ ಲಬುಶೇನ್, ವಿರಾಟ್ ಕೊಹ್ಲಿ (ನಾಯಕ), ಸ್ಟೀವನ್ ಸ್ಮಿತ್, ಬೆನ್ ಸ್ಟೋಕ್ಸ್, ಬಿಜೆ ವ್ಯಾಟ್ಲಿಂಗ್ (ವಿ.ಕೀ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನೀಲ್ ವ್ಯಾಗ್ನರ್, ನಾಥನ್ ಲ್ಯಾನ್.
ವಿರಾಟ್ ಕೊಹ್ಲಿ ಸತತ ಮೂರನೇ ವರ್ಷ, ಐಸಿಸಿಯ ಟೆಸ್ಟ್ ಹಾಗೂ ಏಕದಿನ ಎರಡೂ ತಂಡಗಳಿಗೆ ನಾಯಕರಾಗಿ ಆಯ್ಕೆಯಾಗಿದ್ದಾರೆ. 2017, 2018ನೇ ಸಾಲಿನಲ್ಲೂ ಅವರು ಈ ಗೌರವ ಪಡೆದಿದ್ದರು.
ಲಬುಶೇನ್ ಭವಿಷ್ಯದ ಆಟಗಾರ
ವರ್ಷದ ಉದಯೋನ್ಮುಖ ಆಟಗಾರನಾಗಿ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ರ ಆಯ್ಕೆ ಬಹಳ ಸರಳವಾಗಿತ್ತು. 2019ರಲ್ಲಿ ಆಡಿದ 11 ಪಂದ್ಯಗಳಿಂದ 1104 ರನ್ ಬಾರಿಸಿರುವ ಲಬುಶೇನ್, ವರ್ಷದ ಆರಂಭದಲ್ಲಿ ಟೆಸ್ಟ್ ರ್ಯಾಂಕಿಂಗ್ನಲ್ಲಿ 110ನೇ ಸ್ಥಾನದಲ್ಲಿದ್ದರೆ, ವರ್ಷದ ಕೊನೆಯಲ್ಲಿ 4ನೇ ಸ್ಥಾನಕ್ಕೇರಿದ್ದರು. ಆ ಕಾರಣದಿಂದಾಗಿ ಅರ್ಹವಾಗಿಯೇ ಅವರು ಈ ಪ್ರಶಸ್ತಿಗೆ ಭಾಜನವಾಗಿದ್ದಾರೆ.