ವಿರಾಟ್ ಕೊಹ್ಲಿ, ಮೀರಾಬಾಯಿಗೆ ಖೇಲ್​ರತ್ನ ಗೌರವ

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ವಿಶ್ವ ಚಾಂಪಿಯನ್ ವೇಟ್​ಲಿಫ್ಟರ್ ಮೀರಾಬಾಯಿ ಚಾನು 2018ರ ಸಾಲಿನ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್​ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ, ಅಥ್ಲೀಟ್ ಹಿಮಾ ದಾಸ್ ಮತ್ತು ಕರ್ನಾಟಕದ ಟೆನಿಸ್ ತಾರೆ ರೋಹನ್ ಬೋಪಣ್ಣ ಸಹಿತ 20 ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿಗೆ ಪಡೆದಿದ್ದಾರೆ. ಕ್ರೀಡಾ ಸಚಿವಾಲಯ ಗುರುವಾರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಅಧಿಕೃತವಾಗಿ ಘೋಷಿಸಿದೆ. ಕಳೆದ ಒಂದು ದಶಕದಿಂದ ಭಾರತ ಬಾಕ್ಸಿಂಗ್ ತಂಡದ ಕೋಚ್ ಆಗಿರುವ ಮೈಸೂರಿನ ಸಿಎ ಕುಟ್ಟಪ್ಪ ಮತ್ತು ರಾಜ್ಯದ ಹಿರಿಯ ಅಥ್ಲೆಟಿಕ್ಸ್ ಕೋಚ್ ವಿಆರ್ ಬೀಡು, ದ್ರೋಣಾಚಾರ್ಯ ಪ್ರಶಸ್ತಿ ಪಡೆದಿದ್ದಾರೆ.

ಪ್ರಶಸ್ತಿಯಲ್ಲೇನಿದೆ

1991-92ರಲ್ಲಿ ಆರಂಭಗೊಂಡ ಖೇಲ್​ರತ್ನ ಪ್ರಶಸ್ತಿ 7.5 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ. ಜತೆಗೆ ಒಂದು ಪದಕ, ಪ್ರಮಾಣ ಪತ್ರವನ್ನೂ ರಾಷ್ಟ್ರಪತಿ ವಿತರಿಸಲಿದ್ದಾರೆ. ಅರ್ಜುನ, ದ್ರೋಣಾಚಾರ್ಯ ಮತ್ತು ಧ್ಯಾನ್​ಚಂದ್ ಪ್ರಶಸ್ತಿ ತಲಾ 5 ಲಕ್ಷ ರೂ. ನಗದು ಬಹುಮಾನ ಮತ್ತು ಕ್ರಮವಾಗಿ ಅರ್ಜುನ, ದ್ರೋಣಾಚಾರ್ಯ ಮತ್ತು ಧ್ಯಾನ್​ಚಂದ್ ಪ್ರತಿಮೆ, ಪ್ರಮಾಣಪತ್ರವನ್ನು ಒಳಗೊಂಡಿದೆ.

2018ರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು: ರಾಜೀವ್ ಗಾಂಧಿ ಖೇಲ್​ರತ್ನ: ವಿರಾಟ್ ಕೊಹ್ಲಿ (ಕ್ರಿಕೆಟ್), ಮೀರಾಬಾಯಿ ಚಾನು (ವೇಟ್​ಲಿಫ್ಟಿಂಗ್).

ಅರ್ಜುನ ಪ್ರಶಸ್ತಿ: ಸ್ಮೃತಿ ಮಂದನಾ (ಕ್ರಿಕೆಟ್), ರೋಹನ್ ಬೋಪಣ್ಣ (ಟೆನಿಸ್), ನೀರಜ್ ಚೋಪ್ರಾ, ಜಿನ್ಸನ್ ಜಾನ್ಸನ್, ಹಿಮಾ ದಾಸ್ (ಅಥ್ಲೆಟಿಕ್ಸ್), ಶುಭಾಂಕರ್ ಶರ್ಮ (ಗಾಲ್ಪ್), ಸತೀಶ್ ಕುಮಾರ್ (ಬಾಕ್ಸಿಂಗ್), ಸಿಕ್ಕಿ ರೆಡ್ಡಿ (ಬ್ಯಾಡ್ಮಿಂಟನ್), ಮನ್​ಪ್ರೀತ್ ಸಿಂಗ್, ಸವಿತಾ (ಹಾಕಿ), ರವಿ ರಾಥೋಡ್ (ಪೋಲೋ), ರಾಹಿ ಸನೋಬಟ್, ಅಂಕುರ್ ಮಿತ್ತಲ್, ಶ್ರೇಯಸಿ ಸಿಂಗ್ (ಶೂಟಿಂಗ್), ಮನಿಕಾ ಬಾತ್ರಾ, ಜಿ. ಸತ್ಯನ್ (ಟೇಬಲ್ ಟೆನಿಸ್), ಸುಮಿತ್ (ಕುಸ್ತಿ), ಪೂಜಾ (ವುಶು), ಅಂಕುರ್ ಧಾಮ (ಪ್ಯಾರಾ ಅಥ್ಲೆಟಿಕ್ಸ್), ಮನೋಜ್ ಸರ್ಕಾರ್ (ಪ್ಯಾರಾ ಬ್ಯಾಡ್ಮಿಂಟನ್).

ದ್ರೋಣಾಚಾರ್ಯ ಪ್ರಶಸ್ತಿ: ಎಸ್​ಎಸ್ ಪನ್ನು (ಅಥ್ಲೆಟಿಕ್ಸ್), ಸಿಎ ಕುಟ್ಟಪ್ಪ (ಬಾಕ್ಸಿಂಗ್), ವಿಜಯ್ ಶರ್ಮ (ವೇಟ್​ಲಿಫ್ಟಿಂಗ್), ಶ್ರೀನಿವಾಸ ರಾವ್ (ಟೇಬಲ್ ಟೆನಿಸ್), ಕ್ಲಾರೆನ್ಸ್ ಲೋಬೋ (ಹಾಕಿ), ತಾರಕ್ ಸಿನ್ಹಾ (ಕ್ರಿಕೆಟ್), ಜೀವನ್​ಕುಮಾರ್ ಶರ್ಮ (ಜುಡೋ), ವಿಆರ್ ಬೀಡು (ಅಥ್ಲೆಟಿಕ್ಸ್).

ಧ್ಯಾನ್​ಚಂದ್ ಪ್ರಶಸ್ತಿ: ಸತ್ಯದೇವ್ ಪ್ರಸಾದ್ (ಆರ್ಚರಿ), ಭರತ್ ಛೇಟ್ರಿ (ಹಾಕಿ), ಬಾಬಿ ಅಲೋಶಿಯಸ್, ಚೌಗಲೆ ದಾದು ದತ್ತಾತ್ರೇಯ (ಕುಸ್ತಿ).

ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್: ಜೆಎಸ್​ಡಬ್ಲ್ಯು ಸ್ಪೋರ್ಟ್ಸ್, ರಾಷ್ಟ್ರೀಯ ಇಸ್ಪಾತ್ ನಿಗಮ್ ಲಿಮಿಟೆಡ್, ಇಶಾ ಔಟ್​ರೀಚ್.

25ರಂದು ಪ್ರಶಸ್ತಿ ಪ್ರದಾನ

ರಾಷ್ಟ್ರಪತಿ ಭವನದಲ್ಲಿ ಸೆ. 25ರಂದು ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ದಿನವಾದ ಆ. 29ರಂದು ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಏಷ್ಯಾಡ್​ನಿಂದಾಗಿ ಸಮಾರಂಭ ಮುಂದೂಡಲ್ಪಟ್ಟಿತ್ತು.

ಖೇಲ್​ರತ್ನ ತಪ್ಪಿದ್ದಕ್ಕೆ ಭಜರಂಗ್ ಗರಂ!

ಕಾಮನ್ವೆಲ್ತ್-ಏಷ್ಯನ್ ಗೇಮ್್ಸ ಸ್ವರ್ಣ ಪದಕ ವಿಜೇತ ಭಜರಂಗ್ ಪೂನಿಯಾ, ತಮಗೆ ಖೇಲ್​ರತ್ನ ಪ್ರಶಸ್ತಿ ಸಿಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋಡ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ. ಇಲ್ಲದಿದ್ದರೆ ಸರ್ಕಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಬೆದರಿಕೆ ಒಡ್ಡಿದ್ದಾರೆ.


ಅಥ್ಲೀಟ್​ಗಳ ಗುರುವಿಗೆ ಸಂದ ಗೌರವ

ಬೆಂಗಳೂರು: ಕಳೆದ 46 ವರ್ಷಗಳಿಂದ ಪಟ್ಟ ಶ್ರಮ. ನೂರಾರು ಅಥ್ಲೀಟ್​ಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ್ದು ಸಾರ್ಥಕವಾಯಿತು ಎಂದು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ವಿಆರ್ ಬೀಡು ಹೇಳಿದ್ದಾರೆ. ಕೇಂದ್ರ ಸರ್ಕಾರದಿಂದ ಕೋಚ್​ಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿಗೆ ಭಾಜರಾದ ಕುರಿತು ‘ವಿಜಯವಾಣಿ’ಯೊಂದಿಗೆ ಸಂತೋಷ ಹಂಚಿಕೊಂಡ ಬೀಡು, ಪ್ರಶಸ್ತಿ ದಕ್ಕಿರುವುದು ಸಹಜವಾಗಿ ಖುಷಿ ನೀಡಿದೆ. ಅಶ್ವಿನಿ ನಾಚಪ್ಪ, ಉದಯ್ ಕೆ ಪ್ರಭು, ರೀತ್ ಅಬ್ರಾಹಂ, ಜಿಜಿ ಪ್ರಮೀಳಾ, ಎಂಕೆ ಆಶಾ ಸೇರಿದಂತೆ ಅದೆಷ್ಟೋ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅಥ್ಲೀಟ್​ಗಳಿಗೆ ಮಾರ್ಗದರ್ಶನ ನೀಡಿದ್ದೆ. ಸಣ್ಣ ಮಟ್ಟದ ಕೂಟದಿಂದ ಹಿಡಿದು ಒಲಿಂಪಿಕ್ಸ್ ವರೆಗೂ ಅಥ್ಲೀಟ್​ಗಳನ್ನು ತಯಾರು ಮಾಡಿದ್ದೇನೆ ಎಂದು 71 ವರ್ಷದ ಕೋಚ್ ಹೇಳಿದರು. ರಾಷ್ಟ್ರೀಯ ಕ್ರೀಡಾ ಸಂಸ್ಥೆ (ಎನ್​ಐಎಸ್) ಮೂಲಕ 1972ರಲ್ಲಿ ಕೋಚಿಂಗ್ ವೃತ್ತಿ ಆರಂಭಿಸಿದ ಬೀಡು, ಮೂಲತಃ ಉಡುಪಿ ಜಿಲ್ಲೆಯವರು. 1989ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಟ್ರಾ್ಯಕ್ ಮತ್ತು ಫೀಲ್ಡ್ ಚಾಂಪಿಯನ್​ಷಿಪ್​ನಲ್ಲಿ ಭಾರತದ ಲಾಂಗ್​ಜಂಪ್ ಕೋಚ್ ಆಗಿದ್ದರು. 1991ರಲ್ಲಿ ರಾಷ್ಟ್ರೀಯ ಕೋಚ್ ಆಗಿದ್ದರು. ಬೀಡು ದ್ರೋಣಾಚಾರ್ಯ ಪ್ರಶಸ್ತಿ ಪಡೆಯುತ್ತಿರುವ ಕರ್ನಾಟಕದ 2ನೇ ಅಥ್ಲೆಟಿಕ್ಸ್ ಕೋಚ್ ಎನಿಸಿಕೊಂಡಿದ್ದಾರೆ. 2014ರಲ್ಲಿ ಎನ್ ಲಿಂಗಪ್ಪ ಈ ಪ್ರಶಸ್ತಿ ಪಡೆದಿದ್ದರು.

ವಿಜೇಂದರ್​ಗೆ ತರಬೇತಿ ನೀಡಿದ್ದ ಕುಟ್ಟಪ್ಪ!

2008ರ ಒಲಿಂಪಿಕ್ ಪದಕ ವಿಜೇತ ವಿಜೇಂದರ್ ಸಿಂಗ್, ಶಿವ ಥಾಪ ಸೇರಿದಂತೆ ಹಲವು ಬಾಕ್ಸರ್​ಗಳಿಗೆ ಮಾರ್ಗದರ್ಶನ ನೀಡಿರುವ ಮೈಸೂರು ಮೂಲದ 39 ವರ್ಷದ ಸಿಎ ಕುಟ್ಟಪ್ಪ, ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ 2006ರಲ್ಲಿ ಕೋಚಿಂಗ್ ಡಿಪ್ಲೊಮಾ ಪೂರೈಸಿದ್ದರು. ಬಳಿಕ ಆರ್ವಿು ಸ್ಪೋರ್ಟ್ಸ್ ಸಂಸ್ಥೆಯಲ್ಲಿ ಕೋಚ್ ಆಗಿ ನಿಯೋಜನೆಗೊಂಡರು. ಪ್ರಸ್ತುತ ರಾಷ್ಟ್ರೀಯ ತಂಡದ ಸಹಾಯಕ ಕೋಚ್ ಹಾಗೂ ಕೋಚ್ ಸ್ಥಾನವನ್ನು ವಹಿಸಿಕೊಂಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಂಥ ದೊಡ್ಡ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ ಎನ್ನುತ್ತಾರೆ ಆರ್ವಿುಯಲ್ಲಿ ಸುಬೇದಾರ್ ಆಗಿರುವ ಕುಟ್ಟಪ್ಪ.