ಇಂಗ್ಲೆಂಡ್​ ನೆಲದಲ್ಲಿ ಅಜರುದ್ದೀನ್​ ದಾಖಲೆ ಮುರಿದ ವಿರಾಟ್​ ಕೊಹ್ಲಿ

ನಾಟಿಂಗ್​ಹ್ಯಾಂ: ಆಂಗ್ಲರ ನಾಡಿನಲ್ಲಿ ನಾಲ್ಕು ವರ್ಷಗಳ ಹಿಂದೆ ಒಂದೊಂದು ರನ್ ಕಸಿಯಲು ಪರದಾಡಿದ್ದ ಸ್ಟಾರ್ ಬ್ಯಾಟ್ಸ್​ಮನ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಸಕ್ತ ಪ್ರವಾಸದಲ್ಲಿ ರನ್ ಪ್ರವಾಹ ಹರಿಸುವ ಮೂಲಕ ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್​ ಅಜರುದ್ದೀನ್​ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.

ಟ್ರೆಂಟ್​ಬ್ರಿಜ್ ಮೈದಾನದಲ್ಲಿ ವಿರಾಟ್ ಕೊಹ್ಲಿ (103 ರನ್, 197 ಎಸೆತ, 10 ಬೌಂಡರಿ) ಭರ್ಜರಿ ಶತಕ ಗಳಿಸುವ ಮೂಲಕ ಸರಣಿಯ 2ನೇ ದಾಖಲೆಯ ಶತಕ ಪೂರೈಸಿದ್ದು, ಸರಣಿಯಲ್ಲಿ ಮೂರು ಪಂದ್ಯಗಳಿಂದ ಒಟ್ಟು 440 ರನ್​ ಕಲೆ ಹಾಕಿದ್ದಾರೆ. ಈ ಮೂಲಕ ಇಂಗ್ಲೆಂಡ್​ ನೆಲದಲ್ಲಿ ಟೆಸ್ಟ್​ ಸರಣಿಯಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಭಾರತೀಯ ನಾಯಕ ಎಂಬ ಗೌರವಕ್ಕೆ ಪಾತ್ರರಾದರು.

ಇದಕ್ಕೂ ಮುನ್ನ ಟೀಂ ಇಂಡಿಯಾದ ಮಾಜಿ ನಾಯಕ ಅಜರುದ್ದೀನ್​ 1990ರಲ್ಲಿ ಇಂಗ್ಲೆಂಡ್​ ಪ್ರವಾಸ ಕೈಗೊಂಡಿದ್ದಾಗ 3 ಪಂದ್ಯಗಳಲ್ಲಿ 426 ರನ್​ ಗಳಿಸಿದ್ದರು. ಈಗ ಕೊಹ್ಲಿ ಈ ಅಜರುದ್ದೀನ್​ ದಾಖಲೆಯನ್ನು ಮುರಿದಿದ್ದಾರೆ. ಸರಣಿಯಲ್ಲಿ ಇನ್ನೂ 2 ಟೆಸ್ಟ್​ ಪಂದ್ಯಗಳು ಬಾಕಿ ಇರುವುದರಿಂದ ಕೊಹ್ಲಿ ಇನ್ನಷ್ಟು ರನ್​ ಕಲೆ ಹಾಕುವ ನಿರೀಕ್ಷೆ ಇದೆ. (ಏಜೆನ್ಸೀಸ್​)