ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ

ನವದೆಹಲಿ: ತಮ್ಮ ಸ್ಫೋಟಕ ಬ್ಯಾಟಿಂಗ್​ ಮೂಲಕ ಹಲವು ದಾಖಲೆಗಳನ್ನು ಮುರಿದು ಕ್ರಿಕೆಟ್​ ಜಗತ್ತಿನಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಒತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಈಗ ಸಾಮಾಜಿಕ ಜಾಲತಾಣಗಳಲ್ಲೂ ಹೊಸ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ.

ವಿರಾಟ್​ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ತಮ್ಮ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿಯ ಅಭಿಮಾನಿಗಳು ಮತ್ತು ಫಾಲೋವರ್​ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಪ್ರಸ್ತುತ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ 100 ಮಿಲಿಯನ್​ (10 ಕೋಟಿ) ಫಾಲೋವರ್​ಗಳನ್ನು ಪಡೆದಿದ್ದಾರೆ. ಈ ಮೂಲಕ 10 ಕೋಟಿ ಫಾಲೋವರ್​ಗಳನ್ನು ಪಡೆದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿರಾಟ್​ ಕೊಹ್ಲಿ ಫೇಸ್​ಬುಕ್​ (3.71 ಕೋಟಿ), ಟ್ವಿಟರ್​ (2.94 ಕೋಟಿ) ಮತ್ತು ಇನ್​ಸ್ಟಾಗ್ರಾಂ (3.35 ಕೋಟಿ)ನಲ್ಲಿ ಫಾಲೋವರ್​ಗಳನ್ನು ಹೊಂದಿದ್ದಾರೆ. ಇದು ಕ್ರಿಕೆಟ್ ಮಾಂತ್ರಿಕ ಸಚಿನ್​ ತೆಂಡುಲ್ಕರ್​ ಮತ್ತು ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ಹೊಂದಿರುವ ಫಾಲೋವರ್​ಗಳಿಗಿಂತಲೂ ಹೆಚ್ಚಿದೆ. ಜತೆಗೆ ಇತರೆ ದೇಶಗಳ ಕ್ರಿಕೆಟಿಗರಿಗಿಂತ ಕೊಹ್ಲಿ ಸಾಕಷ್ಟು ಮುಂದಿದ್ದಾರೆ.

ಇನ್ನು ಎರಡು ವಾರಗಳಲ್ಲಿ ಕ್ರಿಕೆಟ್​ ವಿಶ್ವಕಪ್​ ಪ್ರಾರಂಭವಾಗುತ್ತಿದ್ದು, ವಿಶ್ವಕಪ್​ ಸಂದರ್ಭದಲ್ಲಿ ಕೊಹ್ಲಿ ಬೆಂಗಲಿಗರು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)