ವಿರಾಟ್​ಗೆ ಫ್ಯಾನ್ಸ್ ಚಾಟಿ!

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅಗತ್ಯಕ್ಕಿಂತ ಹೆಚ್ಚಿನ ಗೌರವ ಪಡೆದ ಆಟಗಾರ ನೀವು, ಭಾರತದ ಬ್ಯಾಟ್ಸ್ ಮನ್​ಗಳಿಗಿಂತ ವಿದೇಶದ ಬ್ಯಾಟ್ಸ್​ಮನ್​ಗಳ ಆಟವೇ ಇಷ್ಟ ಎಂದು ಹೇಳಿದ ಅಭಿಮಾನಿಯೊಬ್ಬನಿಗೆ, ‘ಹಾಗಿದ್ದರೆ ನೀವು ಭಾರತದಲ್ಲಿ ಉಳಿಯುವ ಅಗತ್ಯವಿಲ್ಲ’ ಎಂದು ಕೊಹ್ಲಿ ಹೇಳಿರುವ ಮಾತು ಟ್ವಿಟರ್​ನಲ್ಲಿ ವೈರಲ್ ಆಗಿದ್ದು, ಕೊಹ್ಲಿಯನ್ನು ಸಂಕಷ್ಟಕ್ಕೆ ದೂಡಿದೆ.

ನವೆಂಬರ್ 5ರಂದು 30ನೇ ವರ್ಷದ ಜನ್ಮದಿನ ಆಚರಿಸಿಕೊಂಡ ಕೊಹ್ಲಿ, ಅದೇ ದಿನ ಹೊಸ ಆಪ್ ಬಿಡುಗಡೆ ಮಾಡಿದ್ದರು. ಇದೇ ವೇಳೆ ಸಾಮಾಜಿಕ ಜಾಲತಾಣದ ಲೈವ್​ಗೆ

ಬಂದಿದ್ದ ಕೊಹ್ಲಿ, ಅಭಿಮಾನಿಗಳು ಕಳುಹಿಸಿದ್ದ ಸಂದೇಶಗಳು ಹಾಗೂ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು. ಈ ವೇಳೆ ಒಬ್ಬ ಅಭಿಮಾನಿ, ‘ನೀವು ಓವರ್​ರೇಟೆಡ್ ಬ್ಯಾಟ್ಸ್ ಮನ್. ವೈಯಕ್ತಿಕವಾಗಿ ನಿಮ್ಮ ಬ್ಯಾಟಿಂಗ್​ನಲ್ಲಿ ನಾನು ವಿಶೇಷ ವಾದದ್ದೇನನ್ನೂ ಕಾಣುವುದಿಲ್ಲ. ಭಾರತದ ಬ್ಯಾಟ್ಸ್​ಮನ್​ಗಳಿಗಿಂತ ಹೆಚ್ಚಾಗಿ ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್​ಗಳ ಆಟ

ಇಷ್ಟವಾಗುತ್ತದೆ’ ಎಂದು ಸಂದೇಶ ಕಳಿಸಿದ್ದ. ಅಭಿಮಾನಿಯ ಕ್ರಿಕೆಟ್ ವಿಮರ್ಶೆಯನ್ನು ಓದಿದ ಕೊಹ್ಲಿ, ‘ಹೌದಾ, ಹಾಗಿದ್ದರೆ ನೀವು ಭಾರತದಲ್ಲಿ ವಾಸವಿರಲೂ ಬಾರದು. ಬೇರೆ ಎಲ್ಲಾದರು ಹೋಗಿ ಉಳಿಯಬಹುದಲ್ಲವೆ? ಬೇರೆ ದೇಶವನ್ನು ಇಷ್ಟಪಟ್ಟು ನಮ್ಮ ದೇಶದಲ್ಲಿ ಉಳಿದರೆ ಹೇಗೆ? ನೀವು ನನ್ನನ್ನು ಇಷ್ಟಪಡುತ್ತೀರೋ, ಇಲ್ಲವೋ ಅದರಿಂದ ನಾನೇನೂ ಚಿಂತಿತನಾಗುವುದಿಲ್ಲ. ಆದರೆ, ನಮ್ಮ ದೇಶದ ಸಂಗತಿಗಳನ್ನು ಇಷ್ಟಪಡದೇ ಇದ್ದ ಮೇಲೆ ಇಲ್ಲಿ ಉಳಿಯುವ ಅಗತ್ಯವಿಲ್ಲ. ನಿಮ್ಮ ಆಯ್ಕೆಗಳು ಸರಿಯಾಗಿದ್ದಾಗಿರಲಿ’ ಎಂದು ಪ್ರತಿಕ್ರಿಯಿಸಿದರು. ಆದರೆ, ಕೊಹ್ಲಿ ಹೇಳಿಕೆ ಕೆಲ ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

‘ಟೆನಿಸ್​ನಲ್ಲಿ ಕೊಹ್ಲಿ, ಫೆಡರರ್​ರ ಅಭಿಮಾನಿ ಅಲ್ಲವೆ. ಭಾರತದ ಯೂಕಿ, ಸಾಕೇತ್ ಅಥವಾ ರಾಮ್ುಮಾರ್​ರನ್ನು ಬಿಟ್ಟು ಫೆಡರರ್​ರನ್ನು ಇಷ್ಟಪಟ್ಟಿದ್ದಕ್ಕೆ ಅವರು ದೇಶ ಬಿಡುತ್ತಾರೆಯೇ?’ ಎಂದು ಮಿಹಿರ್ ಎನ್ನುವವರು ಪ್ರಶ್ನಿಸಿದ್ದಾರೆ. ‘ಈತ ಮದುವೆ ಯಾಗಿದ್ದು ಇಟಲಿಯಲ್ಲಿ. ಜರ್ಮನಿ ನಿರ್ವಿುತ ಕಾರುಗಳನ್ನು ಓಡಿಸುವ, ಯುರೋಪಿಯನ್ ಫುಟ್​ಬಾಲ್ ವೀಕ್ಷಣೆ ಮಾಡುವ ವ್ಯಕ್ತಿ, ಬೇರೆ ದೇಶದ ಕ್ರಿಕೆಟಿಗರನ್ನು ಇಷ್ಟಪಡುತ್ತಿದ್ದರೆ ದೇಶ ಬಿಟ್ಟು ಹೋಗಿ ಎನ್ನುವ ಮಾತನ್ನಾಡುತ್ತಿದ್ದಾರೆ. ಎಂಥಾ ವಿಪರ್ಯಾಸ’ ಎಂದು ಕೆಲವರು ಬರೆದಿದ್ದಾರೆ.