ಫೆಡರರ್ ಭೇಟಿಯಾದ ಕೊಹ್ಲಿ

ಮೆಲ್ಬೋರ್ನ್: ಆಸ್ಟ್ರೇಲಿಯಾ ನೆಲದಲ್ಲಿ ಸತತ 2 ಸರಣಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿದ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಶನಿವಾರ ರಾಡ್ ಲೆವರ್ ಅರೇನಾದಲ್ಲಿ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಅವರನ್ನು ಭೇಟಿಯಾದರು. ಪತ್ನಿ ಅನುಷ್ಕಾ ಶರ್ಮ ಜತೆಗೂಡಿ ಕೊಹ್ಲಿ, ಮಾಜಿ ಚಾಂಪಿಯನ್ ನೊವಾಕ್ ಜೋಕೊವಿಕ್ ಹಾಗೂ ಅಮೆರಿಕ ತಾರೆ ಸೆರೇನಾ ವಿಲಿಯಮ್್ಸ ಅವರ 3ನೇ ಸುತ್ತಿನ ಪಂದ್ಯಗಳನ್ನು ವೀಕ್ಷಿಸಿದರು. ಫೆಡರರ್​ರನ್ನು ಭೇಟಿ ಮಾಡಿದ ವಿಷಯವನ್ನು ಚಿತ್ರ ಸಹಿತವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕೊಹ್ಲಿ, ‘ಆಸ್ಟ್ರೇಲಿಯನ್ ಓಪನ್​ನಲ್ಲಿ ಎಂಥಾ ಅದ್ಭುತ ದಿನ. ಅಮೋಘ ರೀತಿಯಲ್ಲಿ ಆಸ್ಟ್ರೇಲಿಯನ್ ಸಮ್ಮರ್​ಗೆ ವಿದಾಯ ಹೇಳುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. ಆಸ್ಟ್ರೇಲಿಯನ್ ಟ್ವಿಟರ್ ಖಾತೆ ಕೂಡ ಫೆಡ್-ಕೊಹ್ಲಿ ಚಿತ್ರ ಹಂಚಿಕೊಂಡಿದೆ.