ವಿರಾಟ್ ಕೊಹ್ಲಿ ರ‍್ಯಾಂಕಿಂಗ್ ರೆಕಾರ್ಡ್!

ದುಬೈ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಇತಿಹಾಸದಲ್ಲಿ ಟೆಸ್ಟ್ ಹಾಗೂ ಏಕದಿನದ ರ್ಯಾಂಕಿಂಗ್​ನಲ್ಲಿ ಏಕಕಾಲದಲ್ಲಿ 900 ಅಂಕಗಳ ಗಡಿ ದಾಟಿದ ವಿಶ್ವದ ಕೇವಲ 2ನೇ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಇನ್ನು ಬೌಲರ್​ಗಳ ರ್ಯಾಂಕಿಂಗ್​ನಲ್ಲಿ ಜಸ್​ಪ್ರೀತ್ ಬುಮ್ರಾ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ.

ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಮಾತ್ರವೇ ಏಕಕಾಲದಲ್ಲಿ ಟೆಸ್ಟ್ ಹಾಗೂ ಏಕದಿನದಲ್ಲಿ 900 ಅಂಕಗಳನ್ನು ಹೊಂದಿದ್ದ ಆಟಗಾರ ಎನಿಸಿದ್ದರು. ಈಗ ಈ ಪಟ್ಟಿಗೆ 909 ಅಂಕದೊಂದಿಗೆ ಕೊಹ್ಲಿ ಸೇರ್ಪಡೆಯಾಗಿದ್ದಾರೆ. ಇನ್ನೂ ಎರಡೂ ಮಾದರಿಯಲ್ಲಿ 900 ಅಂಕದ ಗಡಿ ದಾಟಿದ ವಿಶ್ವದ 5ನೇ ಆಟಗಾರರೆನಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯನ್ನು ಭಾರತ ತಂಡ 5-1 ರಿಂದ ಗೆದ್ದುಕೊಂಡಿತು. ಇದರಲ್ಲಿ 29 ವರ್ಷದ ಕೊಹ್ಲಿ ಮೂರು ಶತಕದೊಂದಿಗೆ ವಿಶ್ವದಾಖಲೆಯ 558 ರನ್ ಸಿಡಿಸಿದ್ದರು. 876 ಅಂಕದಿಂದ ಏಕದಿನ ಸರಣಿ ಆರಂಭಿಸಿದ್ದ ಕೊಹ್ಲಿ ಒಟ್ಟು 33 ಅಂಕ ಸಂಪಾದಿಸುವ ಮೂಲಕ 900 ಅಂಕ ದಾಟಿದ ಭಾರತದ ಮೊದಲ ಬ್ಯಾಟ್ಸ್​ಮನ್ ಎನಿಸಿದರು. ಇದಕ್ಕೂ ಮುನ್ನ ಸಚಿನ್ ತೆಂಡುಲ್ಕರ್ 887 ಅಂಕ ಸಂಪಾದನೆ ಮಾಡಿದ್ದೇ ಭಾರತದ ಆಟಗಾರನ ಶ್ರೇಷ್ಠ ಸಾಧನೆ ಎನಿಸಿತ್ತು. 1998ರ ಜನವರಿಯ ಜಿಂಬಾಬ್ವೆ ಪ್ರವಾಸದ ವೇಳೆ ಸಚಿನ್ ಈ ಅಂಕದ ಗಡಿ ಮುಟ್ಟಿದ್ದರು. -ಪಿಟಿಐ/ಏಜೆನ್ಸೀಸ್

27 ವರ್ಷಗಳ ಗರಿಷ್ಠ ಅಂಕ

ಕೊಹ್ಲಿಯ 909 ಅಂಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 27 ವರ್ಷಗಳ ಬಳಿಕ ಬ್ಯಾಟ್ಸ್​ಮನ್ ಪಡೆದ ಗರಿಷ್ಠ ಅಂಕ ಎನಿಸಿದೆ. 1991ರಲ್ಲಿ ಆಸ್ಟ್ರೇಲಿಯಾದ ಡೀನ್ ಜೋನ್ಸ್ 918 ಅಂಕಗಳ ಸಾಧನೆ ಮಾಡಿದ ಬಳಿಕ ಯಾವೊಬ್ಬ ಆಟಗಾರ ಕೂಡ 909 ಅಥವಾ ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿರಲಿಲ್ಲ. 1993ರಲ್ಲಿ ಬ್ರಿಯಾನ್ ಲಾರಾ 908 ಸಾಧನೆ ಮಾಡಿದ್ದರೆ, 2015ರಲ್ಲಿ ಎಬಿ ಡಿವಿಲಿಯರ್ಸ್ 902 ಅಂಕದ ಸಾಧನೆ ಮಾಡಿದ್ದರು.

ಲಾರಾ ದಾಖಲೆಯೂ ಪುಡಿ

ಏಕದಿನದಲ್ಲಿ ಗರಿಷ್ಠ ಅಂಕ ಸಂಪಾದಿಸಿದವರ ಪಟ್ಟಿಯಲ್ಲಿ ಕೊಹ್ಲಿ ದಿಗ್ಗಜ ಬ್ಯಾಟ್ಸ್​ಮನ್ ಬ್ರಿಯಾನ್ ಲಾರಾರನ್ನು ಹಿಂದಿಕ್ಕಿ 7ನೇ ಸ್ಥಾನ ಪಡೆದಿದ್ದಾರೆ. 6ನೇ ಸ್ಥಾನದಲ್ಲಿರುವ ಪಾಕಿಸ್ತಾನ ಮಾಜಿ ಬ್ಯಾಟ್ಸ್​ಮನ್ ಜಾವೆದ್ ಮಿಯಂದಾದ್​ಗಿಂತ ಕೇವಲ 1 ಅಂಕದ ಹಿನ್ನಡೆಯಲ್ಲಿ ಕೊಹ್ಲಿ ಇದ್ದಾರೆ. ಕೊಹ್ಲಿ ಇನ್ನು 26 ಅಂಕ ಸಂಪಾದಿಸಿದಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ಅಂಕ ಸಾಧನೆ ಮಾಡಿದ ವಿವಿಯನ್ ರಿಚರ್ಡ್ಸ್ (935 ಅಂಕ) ವಿಶ್ವದಾಖಲೆಯನ್ನು ಸರಿಗಟ್ಟಲಿದ್ದಾರೆ.

ಶಿಖರ್ ಧವನ್ ನಂ.10

ಸರಣಿಯಲ್ಲಿ 323 ರನ್ ಸಿಡಿಸಿದ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಪ್ರಗತಿ ಸಾಧಿಸಿದ್ದು, 10ನೇ ಸ್ಥಾನ ಪಡೆದಿದ್ದಾರೆ. ಬೌಲರ್​ಗಳ ರ್ಯಾಂಕಿಂಗ್​ನಲ್ಲಿ ಬುಮ್ರಾ ಜತೆ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್ ಕೂಡ ಏರಿಕೆ ಕಂಡಿದ್ದಾರೆ. ಲೆಗ್​ಸ್ಪಿನ್ನರ್ ಚಾಹಲ್ 8 ಸ್ಥಾನದ ಪ್ರಗತಿಯೊಂದಿಗೆ 21ನೇ ಸ್ಥಾನ ಪಡೆದಿದ್ದರೆ, ಚೈನಾಮನ್ ಬೌಲರ್ ಕುಲದೀಪ್ ಯಾದವ್ 15 ಸ್ಥಾನ ಏರಿಕೆಯೊಂದಿಗೆ 47ನೇ ಸ್ಥಾನದಲ್ಲಿದ್ದಾರೆ. ಸರಣಿಯಲ್ಲಿ ಎಂಟು ವಿಕೆಟ್ ಸಾಧನೆ ಮಾಡಿದ ಬುಮ್ರಾ, 787 ಅಂಕದೊಂದಿಗೆ ಅಫ್ಘಾನಿಸ್ತಾನದ ಲೆಗ್​ಸ್ಪಿನ್ನರ್ ರಶೀದ್ ಖಾನ್ ಜತೆ ಜಂಟಿ ಅಗ್ರಸ್ಥಾನ ಗಳಿಸಿದ್ದಾರೆ.

ಮುಷ್ತಾಕ್ ದಾಖಲೆ ಮುರಿದ ರಶೀದ್!

ಅಫ್ಘಾನಿಸ್ತಾನದ ರಶೀದ್ ಖಾನ್ ಯಾವುದೇ ಮಾದರಿಯ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಸಂಪಾದಿಸಿದ ವಿಶ್ವದ ಅತ್ಯಂತ ಕಿರಿಯ ಕ್ರಿಕೆಟಿಗ ಎನಿಸಿದ್ದಾರೆ. ರಶೀದ್ 7,092ನೇ ದಿನದಲ್ಲಿ (19 ವರ್ಷ, 153 ದಿನ) ನಂ.1 ಸ್ಥಾನ ಸಂಪಾದಿಸುವ ಮೂಲಕ 7683ನೇ ದಿನದಲ್ಲಿ ಈ ಪಟ್ಟಕ್ಕೇರಿದ ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್​ರ ದಾಖಲೆಯನ್ನು 2ನೇ ಸ್ಥಾನಕ್ಕೆ ತಳ್ಳಿದರು. ಸಚಿನ್ ತೆಂಡುಲ್ಕರ್ 1994ರಲ್ಲಿ 7,878 ದಿನಗಳಲ್ಲಿ ಬ್ಯಾಟಿಂಗ್​ನಲ್ಲಿ ನಂ. 1 ಪಟ್ಟವೇರಿದ ದಾಖಲೆ 3ನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್​ನ ಮಹಿಳಾ ಕ್ರಿಕೆಟರ್ ಸ್ಟಿಫಾನಿ ಟೇಲರ್ 2010ರಲ್ಲಿ 6,907 ದಿನಗಳಲ್ಲೇ ನಂ. 1 ಆಗಿದ್ದು ಒಟ್ಟಾರೆ ಕ್ರಿಕೆಟ್ ದಾಖಲೆಯಾಗಿದೆ.

Leave a Reply

Your email address will not be published. Required fields are marked *