VIDEO | ನಿರಾಸೆಗೊಂಡ ಆರ್​ಸಿಬಿ ಅಭಿಮಾನಿಗಳಿಗೆ ಕೊಹ್ಲಿ ಮತ್ತು ಎಬಿಡಿ ಹೇಳಿದ್ದೇನು ಗೊತ್ತೆ?

ಬೆಂಗಳೂರು: 2019ನೇ ಇಂಡಿಯನ್​​ ಪ್ರೀಮಿಯರ್​​​​​​ ಲೀಗ್​​​ (ಐಪಿಎಲ್​​)ನಲ್ಲಿ ರಾಯಲ್​​​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಉತ್ತಮ ಆಟವಾಡುವಲ್ಲಿ ವಿಫಲವಾಗಿದೆ. ಅದಕ್ಕೆ ಆರ್​ಸಿಬಿ ಅಭಿಮಾನಿಗಳು ಸಾಕಷ್ಟು ನಿರಾಸೆಯಾಗಿದ್ದಾರೆ.

ಅಭಿಮಾನಿಗಳ ನಿರಾಸೆಯ ಬಗ್ಗೆ ಅರಿತ ನಾಯಕ ವಿರಾಟ್​​ ಕೊಹ್ಲಿ ಹಾಗೂ ಮಿ. 360 ಎಬಿ ಡಿವಿಲಿಯರ್ಸ್​ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಅಧಿಕೃತ ಟ್ವಿಟರ್​​ ಖಾತೆಯಲ್ಲಿ ಕ್ಷಮೆಯಾಚಿಸಿದ್ದಾರೆ.

ಪ್ರಸಕ್ತ ಆವೃತ್ತಿಯಲ್ಲಿ ತಂಡಕ್ಕೆ ನೆರವು ಹಾಗೂ ಪ್ರೋತ್ಸಾಹ ನೀಡಿರುವ ಎಲ್ಲ ಅಭಿಮಾನಿಗಳಿಗೂ ಧನ್ಯವಾದಗಳು. ಬೆಂಗಳೂರಿನಲ್ಲಿ ನಡೆದ ಎಲ್ಲ ಪಂದ್ಯಗಳಿಗೂ ನೀವು ಪ್ರೋತ್ಸಾಹ ನೀಡಿದ್ದೀರಿ. ಆದರೆ, ತಂಡ ಈ ಆವೃತ್ತಿಯಲ್ಲಿ ನಿರೀಕ್ಷಿತ ಆಟವಾಡುವಲ್ಲಿ ವಿಫಲವಾಗಿದೆ. ಅದಕ್ಕೆ ನಾವು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇವೆ.

ಕಳೆದ ಎಲ್ಲ ಪಂದ್ಯಗಳಲ್ಲಿ ಏರಿಳಿತ ಪ್ರದರ್ಶನ ನೀಡಿದ್ದರೂ, ನೀವು ಪ್ರೋತ್ಸಾಹ ನೀಡುತ್ತಲೇ ಬಂದಿದ್ದೀರಿ. ಈ ರೀತಿಯ ನೆರವು ಹಾಗೂ ಪ್ರೋತ್ಸಾಹ ಯಾವಾಗಲೂ ತಂಡದ ಮೇಲೆ ಇರಲಿ. ಕ್ರೀಡಾಂಗಣಕ್ಕೆ ಬಂದು ಮೂರು ಗಂಟೆಗಳ ಕಾಲ ಪಂದ್ಯ ವೀಕ್ಷಣೆ ಮಾಡಿರುವುದಕ್ಕೆ ಧನ್ಯವಾದಗಳು. ಮುಂದಿನ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ವಿರಾಟ್​​ ಕೊಹ್ಲಿ ಅಭಿಮಾನಿಗಳಿಗೆ ಸಮಾಧಾನಕರ ಮಾತುಗಳನ್ನು ಆಡಿದ್ದಾರೆ.

ಕಳೆದ ಪಂದ್ಯದ ಬಗ್ಗೆ ಮಾತನಾಡಿದ ಎಬಿಡಿ ಕಳೆದ ಐದು ಓವರ್​ಗಳ ಪಂದ್ಯ ನನ್ನ ಜೀವನದಲ್ಲಿ ಮರೆಯಲು ಸಾಧ್ಯವಾಗದ ಪಂದ್ಯವಾಗಿದೆ ಎಂದು ತಿಳಿಸಿದ್ದಾರೆ.

ಆರ್​ಸಿಬಿ ಆರಂಭದ ಆರು ಪಂದ್ಯಗಳಲ್ಲಿಯೂ ಸತತ ಸೋಲು ಅನುಭವಿಸಿತ್ತು. ಬಳಿಕ ಎಚ್ಚೆತ್ತುಕೊಂಡು ಸತತ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದರೂ ಕೊನೆಗೆ 9 ಅಂಕಗಳೊಂದಿಗೆ ಪ್ಲೇ ಆಫ್​​​​​ ಪ್ರವೇಶಿಸುವಲ್ಲಿ ವಿಫಲವಾಗಿದೆ. ಇಂದು ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್​​ರೈಸರ್ಸ್​ ಹೈದರಾಬಾದ್​ ಎದುರು ಅಂತಿಮ ಪಂದ್ಯ ಆಡಲಿದೆ. (ಏಜನ್ಸೀಸ್​)