ಮೈತ್ರಿಕೂಟದ ಅಭ್ಯರ್ಥಿ ಗೆಲ್ಲುವ ವಿಶ್ವಾಸ


ವಿರಾಜಪೇಟೆ: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಗೆಲುವಿಗೆ ಸಂಸದ ಪ್ರತಾಪ್ ಸಿಂಹ ಅವರ ವೈಫಲ್ಯತೆಯೇ ವರದಾನವಾಗಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಹೇಳಿದರು.

ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಚುನಾವಣಾ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಾರಿ ದೇಶದಲ್ಲಿ ಕಾಂಗ್ರೆಸ್ ಅಲೆ ಇದೆ. ಕಾರ್ಯಕರ್ತರು ಬೂತ್ ಮಟ್ಟದಿಂದಲೇ ಕಾರ್ಯ ನಿರ್ವಹಿಸಬೇಕಿದ್ದು, ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಕೆಪಿಸಿಸಿ ಸದಸ್ಯ ವೆಂಕಪ್ಪಗೌಡ ಮಾತನಾಡಿ, ಎರಡು ದೇಹ ಒಂದು ಮನಸ್ಸು ಎಂಬಂತೆ ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮ ಸರ್ಕಾರ ಇದ್ದಾಗ ಲೋಕಪಾಲ್ ಮಸೂದೆಯನ್ನು ಜಾರಿಗೆ ತಂದರೂ ಅನುಷ್ಠಾನಗೊಳಿಸಲು ಮೀನಮೇಷ ಎಣಿಸಿ ಚುನಾವಣೆ ಬಂದಿರುವುದರಿಂದ ಮಖ್ಯಸ್ಥರನ್ನು ನೇಮಕ ಮಾಡಲಾಗಿದೆ ಎಂದ ಅವರು, ಪುಲ್ವಾಮಾ ದಾಳಿ ಕೇಂದ್ರ ಸರ್ಕಾರದ ನಿರ್ಲಕ್ಷೃದಿಂದ ನಡೆದಿದೆ ಎಂದು ದೂರಿದರು.

ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್, ಕೆಪಿಸಿಸಿ ಸದಸ್ಯರಾದ ತಾರಾ ಅಯ್ಯಮ್ಮ, ಸರಾ ಚಂಗಪ್ಪ, ಟಿ.ಪಿ. ರಮೇಶ್, ಸೇವಾದಳದ ಜಿಲ್ಲಾಧ್ಯಕ್ಷ ಚಿಲ್ಲವಂಡ ಕಾವೇರಪ್ಪ, ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ ಸತೀಶ್‌ಕುಮಾರ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ, ಜಾನ್‌ಸನ್ ಹಾಜರಿದ್ದರು.