ಶಿವಮೊಗ್ಗ: ವಿಪ್ರ ಸಮಾಜವು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಮುನ್ನಡೆಯುವ ಜತೆಗೆ ದೇಶದ ಅಭಿವೃದ್ಧಿಗೂ ತನ್ನದೇಯಾದ ವಿಶಿಷ್ಟ ಕೊಡುಗೆಗಳನ್ನು ನೀಡಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬಣ್ಣಿಸಿದರು.
ಕುವೆಂಪು ರಂಗಮಂದಿರದಲ್ಲಿ ಭಾನುವಾರ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದಿಂದ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ, ಸುವರ್ಣ ದಾಂಪತ್ಯ ಸನ್ಮಾನ, ಸಂಘದ ಹಿರಿಯ ನಿರ್ದೇಶಕರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 50 ವರ್ಷ ದಾಂಪತ್ಯ ಜೀವನ ಪೂರೈಸಿದ ದಂಪತಿಗಳಿಗೆ ಸನ್ಮಾನಿಸುವ ಮೂಲಕ ಯುವಕರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ವಿಶೇಷ ಸಂದೇಶ ನೀಡುತ್ತಿರುವುದು ಶ್ಲಾಘನೀಯ ಎಂದರು.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಐದು ಕೋಟಿ ರೂ. ನೀಡಿದ್ದರು. ಅದೇ ರೀತಿ ಜಿಲ್ಲೆಯ ವಿವಿಧ ದೇವಸ್ಥಾನ, ಸಮುದಾಯ ಭವನಗಳ ಅಭಿವೃದ್ಧಿಗೂ ಸುಮಾರು 10 ಕೋಟಿ ರೂ. ತರಲಾಗಿತ್ತು ಎಂದರು.
ಯುವ ಸಮುದಾಯ ಸ್ವಂತ ಉದ್ಯಮ ಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೌಶಲ್ಯ ತರಬೇತಿ ನೀಡುತ್ತಿದ್ದು ಅದನ್ನು ಬಳಸಿಕೊಂಡು ಉದ್ಯಮ ಮಾಡಲು ಯುವಕರು ಮುಂದಾಗುವಂತೆ ಕರೆ ನೀಡಿದ ಅವರು, ವಿಪ್ರ ನೌಕರರ ಭವನಕ್ಕೆ 25 ಲಕ್ಷ ರೂ. ಮಂಜೂರಾಗಿದ್ದರೂ ಇದುವರೆಗೂ ಬಿಡುಗಡೆಯಾಗಿಲ್ಲ. ಇಂತಹ ಹಲವು ಅನುದಾನಗಳು ರಾಜ್ಯ ಸರ್ಕಾರದಲ್ಲಿ ಬಾಕಿ ಉಳಿದಿದ್ದು, ಬೆಂಗಳೂರಿಗೆ ಹೋಗಿ ಅದನ್ನು ಬಿಡುಗಡೆ ಮಾಡಿಸಿಕೊಂಡು ಬರಬೇಕಿದೆ. ವಿಪ್ರ ನೌಕರರ ಭವನ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಸದರ ನಿಧಿಯಿಂದ 25 ಲಕ್ಷ ರೂ. ನೀಡಲಾಗುವುದು ಎಂದರು.
50 ವರ್ಷ ದಾಂಪತ್ಯ ಪೂರೈಸಿದ ಸಾವಿತ್ರಿ-ವಿ.ಎಸ್.ಚಂದ್ರಶೇಖರ್ ಭಟ್, ಹೇಮ ನಳಿನಿ-ಜಿ.ವಿ.ಕೃಷ್ಣಮೂರ್ತಿ, ವಸಂತಲಕ್ಷ್ಮೀ-ಎಸ್.ಆರ್.ಗೋಪಾಲ್, ಪದ್ಮಾ-ಸಿ.ಎನ್.ಕೇಶವಮೂರ್ತಿ, ಗಾಯತ್ರಿ-ವೆಂಕಟರಾಜು, ಇಂದಿರಾ-ಎಂ.ಎನ್.ಸುಂದರರಾಜ್, ಸುಲೋಚನಾ-ಶ್ರೀನಿವಾಸಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ನಿರ್ದೇಶಕರಾದ ಬಿ.ಎಸ್.ಪದ್ಮಾ, ಜಿ.ಎಸ್.ಅನಂತ, ಶಾಂತಾ, ಬಿ.ಕೆ.ರವೀಂದ್ರನಾಥ್, ಎನ್.ಆರ್.ಮಂಜುನಾಥ್, ಎಚ್.ಮಾರುತಿ ಹಾಗೂ ವಿಶೇಷ ಸಾಧನೆಗಾಗಿ ಅಂಬುಜಾಕ್ಷಿ, ಡಾ. ಎ.ಕೆ.ಶ್ರೀನಿವಾಸಮೂರ್ತಿ, ಎ.ವಿ.ರವಿಕುಮಾರ್ ಅವರನ್ನು ಅಭಿನಂದಿಸಲಾಯಿತು.
ನಿವೃತ್ತ ಉಪನ್ಯಾಸಕ ಜಿ.ನಟೇಶ್ ದಿಕ್ಸೂಚಿ ನುಡಿಗಳನ್ನಾಡಿದರು. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಮ.ಸ.ನಂಜುಂಡಸ್ವಾಮಿ, ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಆರ್.ಅಚ್ಯುತರಾವ್, ಖಜಾಂಚಿ ಯು.ಎಸ್.ಕೇಶವಮೂರ್ತಿ, ವಿ.ವಸುಂದರ, ಎಸ್.ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.
ಸುವರ್ಣ ದಾಂಪತ್ಯ ಯುವಕರಿಗೆ ಮಾದರಿ
ಬೆಳಗ್ಗೆ ಮದುವೆ ಸಂಜೆ ಕೊಲೆ ಮಾಡುವಂತಹ ಘಟನೆಗಳು ಇಂದು ನಡೆಯುತ್ತಿವೆ. ಇದರ ನಡುವೆಯೂ ಸುವರ್ಣ ದಾಂಪತ್ಯ ಪೂರ್ಣಗೊಳಿಸಿರುವುದು ಯುವ ಸಮುದಾಯಕ್ಕೆ ಮಾದರಿಯಾಗಿದೆ. ಇದೊಂದು ಮಾದರಿ ಕಾರ್ಯಕ್ರಮವಾಗಿದೆ ಎಂದು ಸಾಹಿತಿ ಎಂ.ಎನ್.ಸುಂದರರಾಜ್ ಹೇಳಿದರು. ಸುವರ್ಣ ದಾಂಪತ್ಯದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಿರಿಯರು ನಿಶ್ಚಯಿಸಿದ ಮದುವೆ ಸುದೀರ್ಘವಾಗಿರುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ರೀತಿಯ ಸನ್ಮಾನದಿಂದ ಸಾಧನೆಗೆ ಇನ್ನಷ್ಟು ಹುಮ್ಮಸ್ಸು ಬರುತ್ತದೆ. ಪತ್ನಿಯ ಜತೆ ಇಲ್ಲದವನು ಮನುಷ್ಯನಾಗಲು ಸಾಧ್ಯವೇ ಇಲ್ಲ ಎಂಬುದು ಕವಿವಾಣಿಯಾಗಿದೆ. ಹೀಗಾಗಿ ಇಂದಿನ ಯುವ ಸಮೂಹ ತಾಳ್ಮೆಯಿಂದ ಜೀವನ ಸಾಗಿಸುವಂತೆ ಹೇಳಿದರು.