ಮುದ್ದೇಬಿಹಾಳ: ಪಟ್ಟಣದ ಮಾರುತಿ ನಗರದಲ್ಲಿ ವಿಪ್ರ ಸಮಾಜದ ಶಿವಚಿದಂಬರ ದೇವಸ್ಥಾನ ಲೋಕಾರ್ಪಣೆ, ಶಿವಚಿದಂಬರೇಶ್ವರ, ಗಜಾನನ, ಆಂಜನೇಯ, ನವಗ್ರಹ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಧರ್ಮಸಭೆ ಸೇರಿ ಹಲವು ಧಾರ್ಮಿಕ ಕಾರ್ಯಗಳು ಜ.18 ರಿಂದ 20 ರವರೆಗೆ ನಡೆಯಲಿವೆ ಎಂದು ತಾಲೂಕು ಬ್ರಾಹ್ಮಣ ಅಭಿವೃದ್ಧಿ ಮಹಾಸಭಾ ಅಧ್ಯಕ್ಷ ಬಿ.ಪಿ.ಕುಲಕರ್ಣಿ, ಸ್ವಾಗತ ಸಮಿತಿ ಅಧ್ಯಕ್ಷ ಪಿ.ಎನ್.ಕುಲಕರ್ಣಿ, ಕಾರ್ಯಾಧ್ಯಕ್ಷ ಬಾಪುರಾಯ ದೇಸಾಯಿ ಹಡಗಲಿ ತಿಳಿಸಿದರು.
ದೇವಸ್ಥಾನದ ಸಭಾಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮೂರು ದಿನಗಳವರೆಗೆ ವಿಶೇಷ ಪೂಜೆ, ಹೋಮ, ಹವನ, ಭಕ್ತರಿಗೆ ಮಹಾಪ್ರಸಾದ ನೆರವೇರಲಿವೆ. ದೇವಾಲಯದ ನಿರ್ಮಾಣಕ್ಕೆ ಸರ್ಕಾರದಿಂದ, ಜನಪ್ರತಿನಿಧಿಗಳಿಂದ ದೇಣಿಗೆ ಪಡೆಯದೆ ಭಕ್ತರೇ ವಿವಿಧ ಮೂಲಗಳಿಂದ ದೇಣಿಗೆ ಸಂಗ್ರಹಿಸಿ ಪುರಸಭೆಯವರು ನೀಡಿರುವ ಜಾಗದಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ. ಇಂಜಿನಿಯರ್ ಅನೀಲ ಕುಲಕರ್ಣಿ ಅವರ ಪರಿಶ್ರಮ ಇದರಲ್ಲಿದೆ ಎಂದರು.
18 ರಂದು ಬೆಳಗ್ಗೆ 9ಕ್ಕೆ ಪಟ್ಟಣದ ಬನಶಂಕರಿದೇವಿ ದೇವಾಲಯದಿಂದ ಶಿವಚಿದಂಬರ ದೇವಾಲಯದವರಗೆ ಸರಸ್ವತಿ ಸಾವಿತ್ರ್ಯಾಂಬ ಸಹಿತ ಚಿದಂಬರ, ಗಜಾನನ, ಆಂಜನೇಯ, ನಂದಿ ನವಗ್ರಹ ಮೂರ್ತಿಗಳ, ಹುಣಶಿಹೂಳೆ ಕಣ್ವಮಠದ ಪೀಠಾಧಿಪತಿ ಶ್ರೀ 1008 ವಿದ್ಯಾಕಣ್ವವಿರಾಜತೀರ್ಥ ಶ್ರೀಪಾದಂಗಳು, ಚಿದಂಬರ ಮೂಲ ಮಹಾಕ್ಷೇತ್ರ ಕೆಂಗೇರಿ ಮುರಗೋಡ ಪೀಠಾಧಿಪತಿ ದಿವಾಕರದೀಕ್ಷಿತ ಶಂಕರದೀಕ್ಷಿತ ಇನಾಮದಾರ ಅವರನ್ನು ಹೊತ್ತ ಭವ್ಯ ಸಾರೋಟದ ಮೆರವಣಿಗೆ ಪುರಪ್ರವೇಶ ನಡೆಯಲಿದೆ. ಸಂಜೆ 6 ರಿಂದ ರಾತ್ರಿ 8ರವರಗೆ ಸುದರ್ಶನ ಹೋಮ, ಪೂರ್ಣಾಹುತಿ, 9 ರಿಂದ 10 ರವರೆಗೆ ಸಂಗೀತ ಸೇವೆ ನೆರವೇರಲಿದೆ.
19 ರಂದು ಕಣ್ವಮಠದ ಪಿಠಾಧಿಪತಿಗಳು, ಕೆಂಗೇರಿ ಮುರಗೋಡದ ಪೀಠಾಧಿಪತಿಗಳು, ಲೋಕಾಪುರ ಜ್ಞಾನೇಶ್ವರ ಮಠದ ಪೀಠಾಧಿಪತಿ ಬ್ರಹ್ಮಾನಂದ ಸ್ವಾಮೀಜಿ, ಆನಂದವನ ಅಗಡಿಯ ಪೀಠಾಧಿಪತಿ ಗುರುದತ್ತ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಿವಚಿದಂಬರ ಮೂರ್ತಿಗೆ ಮಹಿಳೆಯರಿಂದ ಲಕ್ಷ ಪುಷ್ಪಾರ್ಚನೆ, ಗಣಹೋಮ, ವಾಸ್ತುಶಾಂತಿ, ಸಂಜೆ ಧರ್ಮಸಭೆ, ರಾತ್ರಿ ಶಯಾಧಿವಾಸ ನಡೆಯಲಿವೆ. ಶಾಸಕ, ಕೆಎಸ್‌ಡಿ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ದಿಂಡಿ ಪಾದಯಾತ್ರೆ ಸೇವಕರು, ಕಟ್ಟಡ ದಾನಿಗಳು, ಸಾಧಕರನ್ನು ಸನ್ಮಾನಿಸಲಾಗುತ್ತದೆ.
20 ರಂದು ಕಣ್ವಮಠ, ಕೆಂಗೇರಿ ಮುರಗೋಡ, ಜ್ಞಾನೇಶ್ವರ ಮಠದ ಪೀಠಾಧಿಪತಿಗಳು, ಸಿಂದಗಿ ಭೀಮಾಶಂಕರ ಮಠದ ಪಿಠಾಧಿಕಾರಿ ದತ್ತಪ್ಪಯ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಬೆಳಗ್ಗೆ 8ರಿಂದ 10ರವರಗೆ ಜರುಗಲಿದೆ. ಸಂಜೆ ಧರ್ಮಸಭೆ ನಡೆಯಲಿದ್ದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಎರಡೂ ದಿನದ ಧರ್ಮಸಭೆಯಲ್ಲಿ ಹಲವು ಗಣ್ಯರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು.
ವಿಪ್ರ ಸಮಾಜದ ಮಾರ್ಗದರ್ಶಕ ಗುಂಡಭಟ್ ಜೋಷಿ, ಉಪಾಧ್ಯಕ್ಷ ಸರ್ವೋತ್ತಮ ದೇಶಪಾಂಡೆ, ವಿನಾಯಕರಾವ ಕುಲಕರ್ಣಿ, ಎಲ್.ಎಸ್.ದೇಶಪಾಂಡೆ, ಡಿ.ಜಿ.ಕುಲಕರ್ಣಿ, ಪ್ರಮುಖರಾದ ಶೇಷಗಿರಿರಾವ್ ದೇಸಾಯಿ, ಚಂದ್ರಕಾಂತ ಕುಲಕರ್ಣಿ, ಪ್ರದೀಪ ಕುಲಕರ್ಣಿ, ರಮೇಶ ಜೋಷಿ, ದಾಮೋದರ ಕುಲಕರ್ಣಿ, ಪುಟ್ಟು ಕುಲಕರ್ಣಿ, ಗುರುರಾಜ ಕುಲಕರ್ಣಿ, ಆನಂದ ಜಂಬಗಿ, ಶ್ರೀನಿವಾಸ ಸಾಲೋಡಗಿ ಇತರರಿದ್ದರು.