ದೇಶದಾದ್ಯಂತ ಬಿರುಸಿನಿಂದ ಮತದಾನ: ಕೆಲವೆಡೆ ಸಣ್ಣಪುಟ್ಟ ಹಿಂಸಾಚಾರ, ಬಿಜೆಪಿ ಕಾರ್ಯಕರ್ತನ ಅನುಮಾನಾಸ್ಪದ ಸಾವು

ನವದೆಹಲಿ: ದೇಶದಾದ್ಯಂತ 2ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಗುರುವಾರ ಬಿರುಸಿನ ಮತದಾನ ಸಾಗಿದೆ. ಪಶ್ಚಿಮ ಬಂಗಾಳ, ಛತ್ತೀಸ್​ಗಢ ಸೇರಿ ವಿವಿಧ ರಾಜ್ಯಗಳಲ್ಲಿ ಸಣ್ಣಪುಟ್ಟು ಹಿಂಸಾಚಾರ ಪ್ರಕರಣಗಳು ನಡೆದಿವೆ.

ಪಶ್ಚಿಮ ಬಂಗಾಳದ ಪುರುಲಿಯಾ ಬಳಿಯ ಅರ್ಷದ ಸೇನಾಬಾನಾ ಗ್ರಾಮದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಶಿಶುಪಾಲ್​ ಸಾಹಿಸ್​ (22) ಶವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೇರೆಡೆ ಕೊಲೆ ಮಾಡಿ, ಇಲ್ಲಿ ತಂದು ನೇತುಹಾಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಉತ್ತರ ದಿನಾಜ್​ಪುರದ ಉಪವಿಭಾಗ ಇಸ್ಲಾಮ್​ಪುರದ ಚೋಪ್ರಾ ಬಳಿಯ ಡಿಜಿಪಾರಾ ಮತಗಟ್ಟೆಯಲ್ಲಿ ಮತದಾನ ಮಾಡಲು ಅವಕಾಶ ನೀಡದಿರುವುದನ್ನು ಪ್ರತಿಭಟಿಸಿ ಸ್ಥಳೀಯರು ಎನ್​ಎಚ್​-34ರಲ್ಲಿ ರಸ್ತೆ ತಡೆ ಮಾಡಲು ಮುಂದಾದರು. ಇವರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಆಶ್ರುವಾಯು ಶೆಲ್​ಗಳನ್ನು ಪ್ರಯೋಗಿಸಿದ್ದಲ್ಲದೆ, ಲಾಠಿ ಪ್ರಹಾರ ನಡೆಸಿದರು.

ಇಸ್ಲಾಮ್​ಪುರದಲ್ಲೇ ಮತ್ತೊಂದು ಪ್ರಕರಣದಲ್ಲಿ ತಾವಿದ್ದ ವಾಹನವಲ್ಲದೆ ತಮ್ಮ ಬೆಂಗಾವಲು ವಾಹನಗಳ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದಾಗಿ ಸಿಪಿಐನ ರಾಯ್​ಗಂಜ್​ ಸಂಸದ ಮೊಹಮ್ಮದ್​ ಸಲೀಂ ಆರೋಪಿಸಿದ್ದಾರೆ. ತಾವಿದ್ದ ವಾಹನದ ಮೇಲೆ ಟಿಎಂಸಿ ಪಕ್ಷದ ಕಾರ್ಯಕರ್ತರು ಮೊದಲಿಗೆ ಕಲ್ಲಿನ ದಾಳಿ ನಡೆಸಿದರು. ಬಳಿಕ ಗುಂಡು ಸಿಡಿಸಿ ಜೀವ ಬೆದರಿಕೆ ಹಾಕಿದ್ದಾಗಿ ಆರೋಪಿಸಿದ್ದಾರೆ.

ಡಾರ್ಜಿಲಿಂಗ್​ನಲ್ಲಿ ದುಷ್ಕರ್ಮಿಗಳ ಕಚ್ಚಾ ಬಾಂಬ್​ ದಾಳಿ ವಿಫಲವಾಗಿದೆ. ಆದರೆ, ಮತಗಟ್ಟೆ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಲು ಯತ್ನಿಸಿದರು ಎಂಬ ಕಾರಣಕ್ಕೆ ಕೆಲ ಯುವಕರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಆದರೆ, ಯುವಕರು ಕಲ್ಲಿನ ದಾಳಿ ನಡೆಸಿದ್ದರಿಂದ, ಗಾಳಿಯಲ್ಲಿ ಗುಂಡು ಹಾರಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಛತ್ತೀಸ್​ಗಢದ ರಾಜಾನಂದಗಾಂವ್​ನಲ್ಲಿ ನಕ್ಸಲರು ನಡೆಸಿದ ಸುಧಾರಿತ ಸ್ಫೋಟಕ ದಾಳಿಯಲ್ಲಿ ಐಟಿಬಿಪಿ ಯೋಧರೊಬ್ಬರು ಗಾಯಗೊಂಡಿದ್ದಾರೆ. (ಏಜೆನ್ಸೀಸ್​)