ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ: ಬಿಜೆಪಿ ಅಭ್ಯರ್ಥಿಯ ಮೇಲೆ ಹಲ್ಲೆಗೆ ಟಿಎಂಸಿ ಕಾರ್ಯಕರ್ತರ ಯತ್ನ

ಕೋಲ್ಕತ: ಕೊನೆಯ ಮತ್ತು 7ನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿರುವ ಪಶ್ಚಿಮ ಬಂಗಾಳದ ಹಲವೆಡೆ ಹಿಂಸಾಚಾರ ಭುಗಿಲೆದ್ದಿದ್ದು, ಡೈಮಂಡ್‌ ಹಾರ್ಬರ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನೀಲಾಂಜನ್‌ ರಾಯ್‌ ಅವರ ಕಾರಿನ ಗಾಜನ್ನು ಕಿಡಿಗೇಡಿಗಳು ಪುಡಿ ಪುಡಿ ಮಾಡಿದ್ದಾರೆ.

ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಡೈಮಂಡ್‌ ಹಾರ್ಬರ್‌ ಕ್ಷೇತ್ರ ಮತ್ತು ಬಸಿರ್ಹತ್‌ ಕ್ಷೇತ್ರದ ಹಲವೆಡೆ ಜಗಳ ಉಂಟಾಗಿದ್ದು, ಇವಿಎಂ ಅನ್ನು ನಿಯಂತ್ರಿಸಲಾಗುತ್ತಿದೆ ಎಂದು ಟಿಎಂಸಿ ಕಾರ್ಯಕರ್ತರು ದೂರುತ್ತಿದ್ದರೆ, ಮತ್ತೊಂದೆಡೆ ಮತಗಟ್ಟೆಗಳನ್ನು ವಶಕ್ಕೆ ಪಡೆಯಲು ಟಿಎಂಸಿಯ ಗೂಂಡಾಗಳು ಮುಂದಾಗಿದ್ದಾರೆ ಎಂದು ಬಿಜೆಪಿ ದೂರಿದೆ.

ಚುನಾವಣೆಯಲ್ಲಿ ಟಿಎಂಸಿ ಗೂಂಡಾಗಳು ಬಿಜೆಪಿ ಕಾರ್ಯಕರ್ತರನ್ನು ಹೆದರಿಸುತ್ತಿದ್ದಾರೆ. ಮತದಾನ ನಡೆಯುತ್ತಿರುವ ಎಲ್ಲ ಕ್ಷೇತ್ರಗಳಲ್ಲಿಯೂ ಟಿಎಂಸಿ ಜಿಹಾದಿ ಬ್ರಿಗೇಡ್‌ ಸೋಲಿನ ಭಯದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರನ್ನು ಬೆದರಿಸುತ್ತಿದೆ ಎಂದು ಬಿಜೆಪಿ ವಕ್ತಾರ ಗಂಭೀರ ಆರೋಪ ಮಾಡಿದ್ದಾರೆ.
ಕೋಲ್ಕತ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಹುಲ್‌ ಸಿನ್ಹಾ ಅವರು, ಟಿಎಂಸಿಯ ಗೂಂಡಾಗಳು ನನ್ನ ಮೇಲೆ ನಡೆಸಿದ ದಾಳಿ ಯತ್ನದಲ್ಲಿ ಬಿಜೆಪಿ ಕಾರ್ಯಕರ್ತ ಮತ್ತು ಕ್ಯಾಮರಾಮನ್‌ ಗಾಯಗೊಂಡಿದ್ದಾರೆ ಎಂದು ದೂರಿದ್ದಾರೆ.

ವಿಧಾನಸಭೆಯ ಉಪಚುನಾವಣೆ ನಡೆಯುತ್ತಿರುವ ಇಸ್ಲಾಂಪುರ ಕ್ಷೇತ್ರದಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ.

ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಅನುಪಮ್‌ ಹಜ್ರಾ ಜಾದವ್‌ಪುರ ಮಾತನಾಡಿ, ಟಿಎಂಸಿಯ ಗೂಂಡಾಗಳು ಬಿಜೆಪಿ ಮಂಡಲದ ಅಧ್ಯಕ್ಷರನ್ನು ಹೊಡೆದಿದ್ದಾರೆ. ಅವರ ಕಾರು ಮತ್ತು ಚಾಲಕನ ಮೇಲೆ ದಾಳಿ ನಡೆಸಿದ್ದಾರೆ. ನಮ್ಮ ಮೂವರು ಚುನಾವಣೆ ಏಜೆಂಟರನ್ನು ರಕ್ಷಿಸಲಾಗಿದೆ. 52 ಕ್ಷೇತ್ರಗಳಲ್ಲಿಯೂ ಟಿಎಂಸಿ ಗೂಂಡಾಗಳು ತಮ್ಮ ನಿಯಂತ್ರಣ ಸಾಧಿಸಿದ್ದಾರೆ. ಜನರು ಬಿಜೆಪಿಗೆ ಮತ ಚಲಾಯಿಸಲು ಕಾತರರಾಗಿದ್ದಾರೆ. ಆದರೆ, ಅವರು ಜನರನ್ನು ಮತ ಚಲಾಯಿಸಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *