ನವದಹೆಲಿ: ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ(Vinod Kambli) ಅವರ ಸ್ಥಿತಿ ಇತ್ತೀಚಿನ ದಿನಗಳಲ್ಲಿ ತುಂಬಾ ಕೆಟ್ಟದಾಗಿದೆ. ಅವರ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ಅದರಲ್ಲಿ ಅವರು ಇತರರ ಬೆಂಬಲದೊಂದಿಗೆ ನಡೆಯುತ್ತಿರುವುದು ಕಂಡುಬಂದಿದೆ. ಹಲವು ಮಾಜಿ ಕ್ರಿಕೆಟಿಗರು ಕೂಡ ಕಾಂಬ್ಳಿಗೆ ಸಹಾಯ ಮಾಡುವ ಬಗ್ಗೆ ಮಾತನಾಡಿದ್ದರು. ಇದೀಗ ವಿನೋದ್ ಅವರ ಪತ್ನಿ ಆಂಡ್ರಿಯಾ ಹೆವಿಟ್ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.
ವಿನೋದ್ ಕಾಂಬ್ಳಿ ಅವರ ಪತ್ನಿ ಆಂಡ್ರಿಯಾ ಹೆವಿಟ್ ಅವರು 2023ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೀಗ ತನ್ನ ನಿರ್ಧಾರದಿಂದ ಯೂಟರ್ನ್ ತೆಗೆದುಕೊಂಡು ವಿಚ್ಛೇದನ ಹಿಂಪಡೆಯಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ. ವಿನೋದ್ ಕಾಂಬ್ಳಿ ಅವರ ಕ್ರಿಕೆಟ್ ಜೀವನ ಮಾತ್ರವಲ್ಲದೆ ವೈಯಕ್ತಿಕ ಜೀವನವೂ ಏರಿಳಿತಗಳಿಂದ ತುಂಬಿತ್ತು. ವಾಸ್ತವವಾಗಿ ಅವರ ಮೊದಲ ಮದುವೆಯು ಹೋಟೆಲ್ ರಿಸೆಪ್ಷನಿಸ್ಟ್ ನೋಯೆಲ್ಲಾ ಲೂಯಿಸ್ ಅವರೊಂದಿಗೆ ಆಗಿತ್ತು, ಆದರೆ ಸ್ವಲ್ಪ ಸಮಯದ ನಂತರ ಆ ಮದುವೆ ಮುರಿದುಬಿತ್ತು. ನಂತರ ಅವರು ಮಾಡೆಲ್ ಆಂಡ್ರಿಯಾ ಹೆವಿಟ್ ಅವರನ್ನು ವಿವಾಹವಾದರು. ಎರಡನೇ ಪತ್ನಿ ಆಂಡ್ರಿಯಾ ಅವರು ವಿಚ್ಛೇದನ ಪಡೆಯಲು ಮುಂದಾದರು.
ಕಾಂಬ್ಳಿ ಕುಡಿತದ ಚಟ ಹೊಂದಿದ್ದು ಇದರಿಂದ ಅವರ ಸಂಬಂಧಕ್ಕೆ ಸಾಕಷ್ಟು ಧಕ್ಕೆಯಾಗುತಿತ್ತು. ಇದೇ ಕಾರಣಕ್ಕೆ ವಿಚ್ಛೇದನ ಪಡೆಯಲು ಮುಂದಾಗಿದ್ದಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ ಆಂಡ್ರಿಯಾ ಹೇಳಿದ್ದಾರೆ. ಆದರೆ ಕಾಂಬ್ಳಿ ಆರೋಗ್ಯದ ಕಾರಣದಿಂದ ವಿಚ್ಛೇದನದ ನೀಡುವ ನಿರ್ಧಾರವನ್ನು ಬದಲಿಸಿರುವುದಾಗಿ ತಿಳಿಸಿದ್ದಾರೆ.
ನಾನು ಅವನನ್ನು ಬಿಟ್ಟರೆ ಅವನು ಒಂಟಿಯಾಗುತ್ತಾನೆ. ಅವನು ನನಗೆ ಮಗುವಿನಂತೆ ಮತ್ತು ಅದು ನನಗೆ ನೋವುಂಟುಮಾಡುತ್ತದೆ. ಇದು ನನಗೆ ಚಿಂತೆ ಮಾಡುತ್ತದೆ. ನಾನು ನನ್ನ ಸ್ನೇಹಿತನನ್ನು ಬಿಡಲು ಸಹ ಸಾಧ್ಯವಿಲ್ಲ, ಆದರೆ ಅವನು ಅದಕ್ಕಿಂತ ಹೆಚ್ಚು. ನನಗೆ ಗೊತ್ತು ನಾನು ಸುಮ್ಮನೆ ಹೋಗುತ್ತೇನೆ ಆದರೆ ಅವನು ತಿಂದಿದ್ದಾನೋ ಇಲ್ಲವೋ ಎಂದು ನಾನು ಚಿಂತಿಸಲು ಪ್ರಾರಂಭಿಸುತ್ತೇನೆ. ಆಗ ನಾನು ಅವನ ಯೋಗಕ್ಷೇಮದ ಬಗ್ಗೆ ಕೇಳಬೇಕು ಮತ್ತು ಅವನಿಗೆ ನನ್ನ ಅಗತ್ಯವಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದರು.
ಭಾರತ ತಂಡದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಹದಗೆಟ್ಟ ಸ್ಥಿತಿ ಮತ್ತು ಆರ್ಥಿಕ ಅಡಚಣೆಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಅವರು ತಮ್ಮ ಮನೆಗೆ ಮರಳಿದ್ದಾರೆ. ಭಾರತ ಪರ 17 ಟೆಸ್ಟ್ ಹಾಗೂ 104 ಏಕದಿನ ಪಂದ್ಯಗಳನ್ನು ಆಡಿರುವ 52 ವರ್ಷದ ಕಾಂಬ್ಳಿ 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.(ಏಜೆನ್ಸೀಸ್)