ಆಚಾರ, ಸಂಪ್ರದಾಯಗಳ ಬಗ್ಗೆ ಪ್ರಶ್ನೆ ಕೇಳುವುದು ಸರಿಯಲ್ಲ

ಶೃಂಗೇರಿ: ಸನಾತನ ಧರ್ಮದಲ್ಲಿ ಗಣೇಶನಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಆತ ವಿಘ್ನವನ್ನು ನಾಶಮಾಡುವ ವಿನಾಯಕ ಎಂದು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಹೇಳಿದರು.

ಪಟ್ಟಣದ ಡಾ. ವಿ.ಆರ್.ಗೌರಿಶಂಕರ್ ಸಭಾಂಗಣದಲ್ಲಿ ಸಾರ್ವಜನಿಕ ಶ್ರೀ ಮಹಾಗಣಪತಿ ಸೇವಾ ಸಮಿತಿ ಆಯೋಜಿಸಿದ್ದ 60ನೇ ಸಾರ್ವಜನಿಕ ಗಣೇಶೋತ್ಸವದಲ್ಲಿ ಮಾತನಾಡಿ, ಕಾರ್ಯದಲ್ಲಿ ವಿಘ್ನವಾದಾಗ ವಿನಾಯಕನಿಗೆ ಪ್ರಾರ್ಥನೆ ಸಲ್ಲಿಸಿದರೆ ವಿಶೇಷ ಫಲ ದೊರಕುತ್ತದೆ. ರೈತ ಹೊಲದಲ್ಲಿ ದುಡಿಯುತ್ತಾನೆ. ಆದರೆ ಮಳೆ ಬರುವುದಿಲ್ಲ. ಮುಂದಿನ ವರ್ಷ ಮಳೆ ಬರುತ್ತದೆ. ರೈತನ ಪ್ರಯತ್ನವಿರುವುದಿಲ್ಲ. ಮಳೆ ಬರುವ ಪ್ರಕ್ರಿಯೆಗೆ ದೇವರ ಅನುಗ್ರಹವಿರಬೇಕು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರಯತ್ನದ ಜತೆ ಭಗವಂತನ ಮೇಲೆ ಭಕ್ತಿಯೂ ಮುಖ್ಯ ಎಂದರು.

ಭೂಮಂಡಲದಲ್ಲಿ ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳಿವೆ. ವಿಜ್ಞಾನಿಗಳು ಸೂರ್ಯ ನಮ್ಮಿಂದ ಬಹಳಷ್ಟು ದೂರದಲ್ಲಿದ್ದಾನೆ ಎಂದು ವಿಶ್ಲೇಷಣೆ ನೀಡಿದ್ದಾರೆ. ಆದರೆ ಭೂಮಂಡಲ ಭಗವಂತನನ್ನು ಒಳಗೊಂಡ ಒಂದು ಭಾಗ ಎಂದು ಉಪನಿಷತ್​ನಲ್ಲಿದೆ. ವಿಶ್ವ ಭಗವಂತನ ಸ್ವರೂಪ. ಭಗವಂತ ಸರ್ವಶಕ್ತ ಎಂಬುದನ್ನು ಅರಿತು ಮುನ್ನಡೆದಾಗ ಗುರಿ ತಲುಪಬಹುದು ಎಂದು ಹೇಳಿದರು.

ಸೇವಾ ಸಮಿತಿ ಅಧ್ಯಕ್ಷ ಬಿ.ಶಿವಶಂಕರ್ ಮಾತನಾಡಿ, ಈ ವರ್ಷದ ಗಣೇಶ ವಿಗ್ರಹ ಉಪನಿಷತ್ ಆಧಾರದಲ್ಲಿ ನಿರ್ವಿುತಗೊಂಡಿದೆ. ಎಲ್ಲವೂ ಬ್ರಹ್ಮ ಸ್ವರೂಪಿ. ಇಲ್ಲಿ ಎರಡು ಎಂಬುದಿಲ್ಲ ಎಂಬ ಸಂದೇಶ ಸಾರುವ ಶ್ರೀ ವಿನಾಯಕನ ಕೃಪೆ ಎಲ್ಲರಿಗೂ ಪ್ರಾಪ್ತಿಯಾಗಲಿ ಎಂದರು.

ಸಂಪ್ರದಾಯದ ಬಗ್ಗೆ ಪ್ರಶ್ನೆ ಬೇಡ : 15 ದಿನಗಳಿಗೆ ಒಮ್ಮೆ ಉಪವಾಸ ಮಾಡಿದರೆ ದೇಹಕ್ಕೆ ಉತ್ತಮ ಎಂದು ವಿಜ್ಞಾನಿಗಳು ಹೇಳಿದರೆ ಅದನ್ನು ನಂಬುತ್ತೇವೆ. ಶಾಸ್ತ್ರದಲ್ಲಿ ಒಂದು ತಿಂಗಳಿಗೆ ಎರಡು ಬಾರಿ ಬರುವ ಏಕಾದಶಿ ಉಪವಾಸದ ಬಗ್ಗೆ ಹಲವರು ಪ್ರಶ್ನೆ ಮಾಡುತ್ತಾರೆ. ಆಚಾರ, ಸಂಪ್ರದಾಯಗಳ ಬಗ್ಗೆ ಪ್ರಶ್ನೆ ಕೇಳುವುದು ಸರಿಯಲ್ಲ. ಅದು ಅವಿಚ್ಛಿನ್ನವಾಗಿ ಬಂದಿರುವ ಪರಂಪರೆ. ಶಾಸ್ತ್ರಗಳಲ್ಲಿ, ವೇದಗಳಲ್ಲಿ ಬದ್ಧತೆ ತೋರಿದರೆ ಭಗವಂತ ಮೆಚ್ಚುತ್ತಾನೆ. ನಾವು ಪ್ರತಿ ಕ್ಷಣ ದೇವರನ್ನು ಸ್ಮರಿಸಬೇಕು. ಭಗವತ್​ಸೇವೆ, ಗುರು ಹಾಗೂ ಸಮಾಜ ಸೇವೆಯಿಂದ ಜೀವನದ ಗುರಿ ದಾಟಲು ಸಾಧ್ಯ ಎಂದು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಹೇಳಿದರು.

Leave a Reply

Your email address will not be published. Required fields are marked *