ರಾಜ್ಯಕ್ಕೆ ಅಮೂಲ್ಯ ಮುನ್ನಡೆ

ಬೆಂಗಳೂರು: ಇನಿಂಗ್ಸ್ ಮುನ್ನಡೆಗಾಗಿ ನಡೆದ ರೋಚಕ ಕದನದಲ್ಲಿ ಕಡೆಗೂ ಆತಿಥೇಯ ಕರ್ನಾಟಕ ತಂಡ ಮೇಲುಗೈ ಸಾಧಿಸಿತು. ಈ ಹೋರಾಟಕ್ಕೆ ಹೆಗಲುಕೊಟ್ಟು ಯಶ ಕಂಡವರು ಮಾಜಿ ನಾಯಕ ವಿನಯ್ ಕುಮಾರ್ ಹಾಗೂ ಬಾಲಂಗೋಚಿ ರೋನಿತ್ ಮೋರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 85ನೇ ಆವೃತ್ತಿಯ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ, 2 ಬಾರಿಯ ಚಾಂಪಿಯನ್ ರಾಜಸ್ಥಾನ ವಿರುದ್ಧ ಮೊದಲ ಇನಿಂಗ್ಸ್ ನಲ್ಲಿ 39 ರನ್​ಗಳ ಅಮೂಲ್ಯ ಮುನ್ನಡೆ ಸಾಧಿಸಿತು.

ಸ್ಪಿನ್ನರ್ ರಾಹುಲ್ ಚಹರ್ (93ಕ್ಕೆ 5) ಮಾರಕ ದಾಳಿ ನಡುವೆಯೂ ವಿನಯ್ ಕುಮಾರ್ (83*ರನ್, 144 ಎಸೆತ, 10 ಬೌಂಡರಿ, 2ಸಿಕ್ಸರ್) ಹಾಗೂ ರೋನಿತ್ ಮೋರೆ (10 ರನ್, 59 ಎಸೆತ, 1 ಬೌಂಡರಿ) ಜೋಡಿ 10ನೇ ವಿಕೆಟ್​ಗೆ 97 ರನ್ ಜತೆಯಾಟ ನಡೆಸಿ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡದ ಮೊತ್ತವನ್ನು 263ಕ್ಕೇರಿಸಿ, ಇನಿಂಗ್ಸ್ ಮುನ್ನಡೆ ಕಾಣುವಲ್ಲಿ ಪ್ರಮುಖ ಪಾತ್ರವಹಿಸಿತು. ಬಳಿಕ ದ್ವಿತೀಯ ಸರದಿ ಬ್ಯಾಟಿಂಗ್ ಆರಂಭಿಸಿರುವ ರಾಜಸ್ಥಾನ, 2ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 11 ರನ್​ಗಳಿಸಿದ್ದು, ಆತಿಥೇಯ ತಂಡದ ರನ್ ಚುಕ್ತಾ ಮಾಡಲು ಇನ್ನೂ 28 ರನ್ ಗಳಿಸಬೇಕಿದೆ. ಇನ್ನೂ 3 ದಿನಗಳ ಆಟ ಬಾಕಿ ಉಳಿದಿರುವ ಪಂದ್ಯದಲ್ಲಿ ಸ್ಪಷ್ಟ ಫಲಿತಾಂಶ ಹೊರಹೊಮ್ಮುವ ನಿರೀಕ್ಷೆ ಇದ್ದು, ಒಂದು ವೇಳೆ ಪಂದ್ಯ ಡ್ರಾಗೊಂಡರೆ ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಸೆಮಿಫೈನಲ್​ಗೇರುವ ಅವಕಾಶವಿದೆ.

ಮುನ್ನಡೆ ತಂದುಕೊಟ್ಟ ವಿನಯ್- ರೋನಿತ್

ಪ್ರವಾಸಿ ತಂಡದ ಚಹರ್ ಜೋಡಿ ಹಾಗೂ ತನ್ವೀರ್ ಮಾರಕ ದಾಳಿಯಿಂದಾಗಿ 166 ರನ್​ಗಳಿಗೆ 9 ವಿಕೆಟ್ ಕಳೆದುಕೊಂಡ ಕರ್ನಾಟಕ ಇನಿಂಗ್ಸ್ ಹಿನ್ನಡೆ ಭೀತಿ ಎದುರಿಸಿತು. ಆಗ ವಿನಯ್ ಕುಮಾರ್ ಹಾಗೂ ರೋನಿತ್ ಮೋರೆ ಜೋಡಿ ಪಂದ್ಯದ ದಿಕ್ಕನ್ನೇ ಬದಲಿಸಿತು. ರೋನಿತ್​ರಿಂದ ಅಗತ್ಯ ಸಾಥ್ ಗಿಟ್ಟಿಸಿಕೊಂಡ ವಿನಯ್ ತಂಡಕ್ಕೆ ಇನಿಂಗ್ಸ್ ಮುನ್ನಡೆ ತಂದುಕೊಟ್ಟರು. ಈ ಜೋಡಿಯನ್ನು ಬೇರ್ಪಡಿಸಲು ರಾಜಸ್ಥಾನ ನಾಯಕ ನಡೆಸಿದ ಪ್ರಯೋಗಗಳು ಕೈಗೂಡಲಿಲ್ಲ. ಅರ್ಧಶತಕ ಪೂರೈಸಿದ ಬಳಿಕ ವಿನಯ್ ಬಿರುಸಿನ ಆಟಕ್ಕಿಳಿದರು. ಆದರೆ ರೋನಿತ್, ರಾಹುಲ್ ಚಹರ್ ಎಸೆತದಲ್ಲಿ ಎಲ್​ಬಿ ಆದರು. ಇದರಿಂದ ವಿನಯ್ ಶತಕದ ಕನಸು ಈಡೇರಲಿಲ್ಲ. 136 ನಿಮಿಷಗಳ ಕ್ರೀಸ್​ನಲ್ಲಿ ನಿಂತ ಈ ಜೋಡಿ 187 ಎಸೆತಗಳನ್ನು ಎದುರಿಸಿತು.

ರಾಜ್ಯಕ್ಕೆ ಚಹರ್ ಜೋಡಿ ಪೆಟ್ಟು

ವಿಕೆಟ್ ನಷ್ಟವಿಲ್ಲದೆ 12 ರನ್​ಗಳಿಂದ ಬುಧವಾರ ಆಟ ಆರಂಭಿಸಿದ ಕರ್ನಾಟಕ ತಂಡದ ಆರಂಭ ಉತ್ತಮವಾಗಿರಲಿಲ್ಲ. ನಿಶ್ಚಲ್ ದಿನದ 5ನೇ ಓವರ್​ನಲ್ಲೇ ದೀಪಕ್ ಚಹರ್ ಎಸೆತದಲ್ಲಿ ವಿಕೆಟ್ ಕೀಪರ್ ಚೇತನ್ ಬಿಷ್ಟ್​ಗೆ ಕ್ಯಾಚ್ ನೀಡಿದರು. ಬಳಿಕ ಸಮರ್ಥ್ (32) ಹಾಗೂ ಕೆವಿ ಸಿದ್ಧಾರ್ಥ್ (52) ಜೋಡಿ ನಿಧಾನಗತಿ ಬ್ಯಾಟಿಂಗ್ ಮೂಲಕ ಆಸರೆಯಾಯಿತು. ರಾಜಸ್ಥಾನ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿದ್ದ ಈ ಜೋಡಿಗೆ ರಾಹುಲ್ ಚಹರ್ ಶಾಕ್ ನೀಡಿದರು. 2ನೇ ವಿಕೆಟ್​ಗೆ 44 ರನ್ ಪೇರಿಸಿದ್ದ ವೇಳೆ ಸಮರ್ಥ್ ಅವರನ್ನು ರಾಹುಲ್ ಚಹರ್ ಎಲ್​ಬಿ ಬಲೆಗೆ ಬೀಳಿಸಿದರು. ಬೆನ್ನಲ್ಲೇ ಅನುಭವಿಗಳಾದ ಕರುಣ್ ನಾಯರ್ (4) ಹಾಗೂ ನಾಯಕ ಮನೀಷ್ ಪಾಂಡೆ (7) ತನ್ವೀರ್ ಉಲ್ ಹಕ್​ಗೆ ವಿಕೆಟ್ ಒಪ್ಪಿಸಿದರು. ಈ ಆಘಾತದಿಂದ ತತ್ತರಿಸಿದ ಕರ್ನಾಟಕ ಭೋಜನ ವಿರಾಮಕ್ಕೂ ಮೊದಲೇ 115 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿತು.

ಜಾಫರ್ ಶತಕ, ಮುನ್ನಡೆಯತ್ತ ವಿದರ್ಭ

ವಾಸಿಂ ಜಾಫರ್ (111*) ಹಾಗೂ ಸಂಜಯ್ ರಾಮಸ್ವಾಮಿ (112*) ಶತಕದಿಂದ ವಿದರ್ಭ ತಂಡ (1 ವಿಕೆಟ್​ಗೆ 260) ನಾಗ್ಪುರದಲ್ಲಿ ನಡೆಯುತ್ತಿರುವ 8ರ ಘಟ್ಟದ ಪಂದ್ಯದಲ್ಲಿ ಉತ್ತರಾಖಂಡಕ್ಕೆ (355) ತಿರುಗೇಟು ನೀಡಿದೆ. ಲಖನೌದಲ್ಲಿ ಸೌರಾಷ್ಟ್ರ (170ಕ್ಕೆ 7) ತಂಡ ಉತ್ತರ ಪ್ರದೇಶ (385) ವಿರುದ್ಧ ಹಿನ್ನಡೆ ಭೀತಿಯಲ್ಲಿದೆ. ವಯನಾಡ್​ನಲ್ಲಿ ಗುಜರಾತ್ ತಂಡಕ್ಕೆ ಕೇರಳ 195 ರನ್ ಗೆಲುವಿನ ಗುರಿ ನೀಡಿದೆ.

ಕರ್ನಾಟಕಕ್ಕೆ ಕೈಕೊಟ್ಟ ಮಧ್ಯಮ ಕ್ರಮಾಂಕ

ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಕರ್ನಾಟಕದ ಮಧ್ಯಮ ಕ್ರಮಾಂಕ ಮತ್ತೊಮ್ಮೆ ಕೈಕೊಟ್ಟಿತು. ಭೋಜನ ವಿರಾಮಕ್ಕೂ ಮೊದಲೇ ಅರ್ಧಶತಕ ಪೂರೈಸಿದ್ದ ಸಿದ್ಧಾರ್ಥ್ 2 ಜೀವದಾನ ಪಡೆದರೂ ಲಾಭ ಗಿಟ್ಟಿಸಿಕೊಳ್ಳಲು ವಿಫಲರಾದರು. ಸಿದ್ಧಾರ್ಥ್ ಹಾಗೂ ಬಿಆರ್ ಶರತ್ (4) ಕೇವಲ 5 ರನ್ ಅಂತರದಲ್ಲಿ ಕ್ರಮವಾಗಿ ತನ್ವೀರ್ ಹಾಗೂ ರಾಹುಲ್ ಚಹರ್​ಗೆ ವಿಕೆಟ್ ನೀಡಿದರು. ಬಳಿಕ ಶ್ರೇಯಸ್ ಗೋಪಾಲ್ (25) ಹಾಗೂ ಕೆ.ಗೌತಮ್ (19), ಮಿಥುನ್ (8) ಕೂಡ ವೈಫಲ್ಯ ಅನುಭವಿಸಿದರು.