ಮೂಲಸೌಲಭ್ಯಕ್ಕಾಗಿ ಶಾಸಕರಿಗೆ ಗ್ರಾಮಸ್ಥರ ಒತ್ತಾಯ

ಬೇಲೂರು: ಸನ್ಯಾಸಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶಾಸಕ ಕೆ.ಎಸ್.ಲಿಂಗೇಶ್ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ತಾಲೂಕಿನ ಸನ್ಯಾಸಿಹಳ್ಳಿ ಸಮುದಾಯ ಭವನಲ್ಲಿ ಗ್ರಾಪಂ ಅಧ್ಯಕ್ಷ ಶಿವೇಗೌಡ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಶಾಸಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಗ್ರಾಮದ ರಂಗಸ್ವಾಮಿ, ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ಕೊರೆಸಿರುವ ಕೊಳವೆ ಬಾವಿಗೆ ವ್ಯಕ್ತಿಯೊಬ್ಬ ಮೋಟರ್ ಮೂಲಕ ಸ್ವಂತಕ್ಕೆ ಉಪಯೋಗಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಇದನ್ನು ಬಿಡಿಸುವಂತೆ ಶಾಸಕರಿಗೆ ಒತ್ತಾಯಿಸಿದರು.

ಗ್ರಾಪಂ ಸದಸ್ಯ ಚಂದನ್ ಮಾತನಾಡಿ, ಕೃಷಿ ಇಲಾಖೆಯಿಂದ ಕೃಷಿ ಹೊಂಡ ಎಲ್ಲೆಲ್ಲಿ ತೆಗೆದಿದ್ದಾರೆ. ಇಲಾಖೆಗೆ ಬರುವ ಸವಲತ್ತುಗಳ ಬಗ್ಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲವಾದ್ದರಿಂದ ಸವಲತ್ತು ಪಡೆಯಲು ಸಾಧ್ಯವಾಗಿಲ್ಲ. ಪ್ರಸಾಧಿಹಳ್ಳಿಯಲ್ಲಿ ಅಂಗನವಾಡಿ ಕಟ್ಟಡದ ಮೇಲೆ ಮರ ಬೀಳುವಂತಿದ್ದು, ಅರಣ್ಯ ಇಲಾಖೆಗೆ ತಿಳಿಸಿದರೂ ತೆರವುಗೊಳಿಸಿಲ್ಲ ಎಂದು ಆರೋಪಿಸಿದರು.

ಸಾರ್ವಜನಿಕರಿಂದ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್, ಸನ್ಯಾಸಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಗಮನಿಸಿದ್ದು, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಕೆರಲೂರು ಗ್ರಾಮದಲ್ಲಿ ವಿದ್ಯುತ್ ಕಂಬಗಳಿಲ್ಲದೆ ಮನೆಗಳ ಮೇಲೆಯೇ ವೈರ್‌ಗಳನ್ನು ಎಳೆಯಲಾಗಿದೆ. ಆದ್ದರಿಂದ ಆ ಗ್ರಾಮಕ್ಕೆ ಕಂಬಗಳನ್ನು ಅಳವಡಿಸುವುದಕ್ಕೆ ಸೆಸ್ಕ್ ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.
ಬಗರ್‌ಹುಕುಂ ಸಾಗುವಳಿ ಅರ್ಜಿ ವಿಲೇವಾರಿ ಸಂಬಂಧ ಹೊಸ ಸಮಿತಿ ಬಂದ ನಂತರ ಅರ್ಜಿಗಳು ವಿಲೇವಾರಿಯಾಗಲಿವೆ. ಬಹರ್‌ಹುಕುಂ ಸಾಗುವಳಿಗಾಗಿ ಫಾರಂ-53ನಲ್ಲಿ ಅರ್ಜಿ ಸಲ್ಲಿಸಿರುವವರು ಮತ್ತೆ ಹೊಸದಾಗಿ ಫಾರಂ-57ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಸರ್ಕಾರಿ ಜಾಗದಲ್ಲಿ ಮನೆಗಳನ್ನು ಕಟ್ಟಿರುವವರು 94/ಸಿ ನಲ್ಲಿ ಅರ್ಜಿ ಸಲ್ಲಿಸಿ ಸಕ್ರಮ ಮಾಡಿಕೊಳ್ಳಬೇಕು. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಬೇಕು. ಈ ಭಾಗದ ಕುಡಿಯುವ ನೀರು ಮತ್ತು ರಸ್ತೆ ಸೇರಿದಂತೆ ಇನ್ನಿತರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲಾಗುವುದು ಎಂದರು.

ತಾಪಂ ಅಧ್ಯಕ್ಷ ಹರೀಶ್ ಮಾತನಾಡಿದರು. ಜಿಪಂ ಸದಸ್ಯೆ ಲತಾ ಮಂಜೇಶ್ವರಿ, ತಾಪಂ ಉಪಾಧ್ಯಕ್ಷೆ ಕಮಲ ಚಿಕ್ಕಣ್ಣ, ಸದಸ್ಯ ಶಶಿಕುಮಾರ್, ಗ್ರಾಪಂ ಅಧ್ಯಕ್ಷ ಶಿವೇಗೌಡ, ಉಪಾಧ್ಯಕ್ಷೆ ಭಾಗ್ಯ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ, ಸನ್ಯಾಸಿಹಳ್ಳಿ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಪಿ.ಎಂ.ದೇವರಾಜ್, ಕೇಶವೇಗೌಡ, ನೋಡಲ್ ಅಧಿಕಾರಿ ಅಸ್ಲಂ ಪಾಷಾ, ಪಿಡಿಒ ನಾಗ ಇನ್ನಿತರರಿದ್ದರು.